Thursday, January 12, 2023

ಜ.೧೫ರಂದು ಗೆಳೆಯರ ಬಳಗ ಟ್ರಸ್ಟ್ ವತಿಯಿಂದ ಸಂಕ್ರಾಂತಿ ಸಂಭ್ರಮ

    ಭದ್ರಾವತಿ, ಜ. ೧೨ : ನಗರದ ಅಪ್ಪರ್ ಹುತ್ತಾ ಗೆಳೆಯರ ಬಳಗ ಟ್ರಸ್ಟ್ ವತಿಯಿಂದ ಈ ಬಾರಿ ವಿಶೇಷವಾಗಿ ಜ.೧೫ರಂದು ಸಂಕ್ರಾಂತಿ ಸಂಭ್ರಮ ಹಮ್ಮಿಕೊಳ್ಳಲಾಗಿದೆ. ಶ್ರೀ ನಂದಿ ದೇವಸ್ಥಾನದ ಮುಂಭಾಗ ಬೆಳಿಗ್ಗೆ ೬ಗಂಟೆಗೆ ವಿಶೇಷ ಆಕರ್ಷಣೆಯಾಗಿ ಹೋರಿಗಳ ಕಿಚ್ಚಾಯಿಸುವ ಕಾರ್ಯಕ್ರಮ ನಡೆಯಲಿದ್ದು, ೬.೩೦ಕ್ಕೆ ಪೊಂಗಲ್ ಪೂಜೆ, ೯ ಗಂಟೆಗೆ ಗೋವಿನ ಪೂಜೆ, ೧೦ಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.
    ನಂತರ ಹೊಳೆಹೊನ್ನೂರು ಸರ್ಕಾರಿ ಪ್ರೌಢಶಾಲೆಯ ರವಿಕಿರಣ್ ಅವರಿಂದ ದೈವ ನೃತ್ಯರೂಪಕ, ಚೌಡೇಶ್ವರಿ ಮಹಿಳಾ ಮಂಡಳಿಯಿಂದ ಕೋಲಾಟ, ದಿವಾಕರ ಮತ್ತು ತಂಡದಿಂದ ಹಾಗು ವೀರಾಂಜನೇಯ ಭಜನಾ ಮಂಡಳಿ ವತಿಯಿಂದ ಜಾನಪದ ಗೀತೆ, ಹೊಳೆಗಂಗೂರು ಸರ್ಕಾರಿ ಪ್ರೌಢ ಶಾಲೆ ವತಿಯಿಂದ ಕೋಲಾಟ ಹಾಗು ಸೋಂಪಾನಾಯ್ಕ ಮತ್ತು ತಂಡದವರಿಂದ ಬಣಜಾರ್ ಶೈಲಿಯ ಕೋಲಾಟ ಸೇರಿದಂತೆ ಜಾನಪದ ಕಾರ್ಯಕ್ರಮಗಳು ನಡೆಯಲಿವೆ.
    ಗ್ರಾಮೀಣ ಕ್ರೀಡಾಕೂಟ :
    ಸಂಕ್ರಾಂತಿ ಸಂಭಮದ ಅಂಗವಾಗಿ ಜ.೧೪ರಂದು ಬೆಳಿಗ್ಗೆ ೧೧ ಗಂಟೆಗೆ ಗೋಲ್ಡನ್ ಜ್ಯೂಬಿಲಿ ಫೀಲ್ಡ್‌ನಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪುರುಷರ ವಿಭಾಗದಲ್ಲಿ ಹಗ್ಗ ಜಗ್ಗಾಟ, ಲಗೋರಿ ಹಾಗು ಮಹಿಳೆಯರ ವಿಭಾಗದಲ್ಲಿ ನೀರು ತುಂಬಿಸುವ ಆಟ ಮತ್ತು ಎಷ್ಟಪ್ಪ ಎಷ್ಟು ಸ್ಪರ್ಧೆಗಳು ಹಾಗು ಮಕ್ಕಳ ವಿಭಾಗದಲ್ಲಿ ಗೋಣಿ ಚೀಲದ ಆಟ, ಕುಂಟೆ ಬಿಲ್ಲೆ ಸ್ಪರ್ಧೆಗಳು ನಡೆಯಲಿವೆ. ವಿಶೇಷವಾಗಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಜ.೧೩ರ ಸಂಜೆ ೬ ಗಂಟೆಯೊಳಗಾಗಿ ಮೊ: ೯೭೩೧೩೧೬೪೦೦ ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳತಕ್ಕದ್ದು.

ಇ-ಆಸ್ತಿ ತಂತ್ರಾಂಶ ಸರಳೀಕರಣಗೊಳಿಸಲು ಮಾಹಿತಿ ನೀಡಿ ಸಹಕರಿಸಿ

    ಭದ್ರಾವತಿ, ಜ. ೧೨: ನಗರಸಭೆ ವತಿಯಿಂದ ಇ-ಆಸ್ತಿ ತಂತ್ರಾಂಶ ಮತ್ತಷ್ಟು ಸರಳೀಕರಣಗೊಳಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದ್ದು, ಈ ಕಾರ್ಯವನ್ನು ಫೆಬ್ರವರಿ ಅಂತ್ಯದೊಳಗೆ ಮುಕ್ತಾಯಗೊಳಿಸಲಾಗುವುದು. ಈ ಹಿನ್ನಲೆಯಲ್ಲಿ ಅಗತ್ಯವಿರುವ ಮಾಹಿತಿ ನೀಡಿ ಸಹಕರಿಸುವಂತೆ ಪೌರಾಯುಕ್ತ ಎಚ್.ಎಂ ಮನುಕುಮಾರ್ ಮನವಿ ಮಾಡಿದ್ದಾರೆ.
    ಕೆ.ಎಂ.ಎಫ್-೨೪ ಗಣಕೀಕರಣ ಕಾರ್ಯ ಪೂರ್ಣಗೊಳಿಸಲು ನಗರಸಭೆ ಸಿಬ್ಬಂದಿಗಳು ಮನೆಗಳಿಗೆ ಭೇಟಿ ನೀಡಿ ಸರ್ವೇ ನಡೆಸಲಿದ್ದು, ಈ ಸಂದರ್ಭದಲ್ಲಿ ಮನೆ ಮಾಲೀಕರ ಮತ್ತು ಸ್ವತ್ತಿನ ಭಾವಚಿತ್ರ, ಗುರುತಿನ ದಾಖಲೆ, ಆಸ್ತಿ, ನೀರಿನ ತೆರಿಗೆ ಪಾವತಿಸಿರುವ ರಶೀದಿ, ಮಾಲೀಕತ್ವದ ದಾಖಲಾತಿ, ಕಟ್ಟಡ ಪರವಾನಿಗೆ ಪ್ರತಿ ಹಾಗು ಆಸ್ತಿ ಮಾಲೀಕರು ದಾಖಲೆಗಳ ನಕಲು ಪ್ರತಿಗಳನ್ನು ನೀಡಿ ಸಹಕರಿಸಲು ಕೋರಲಾಗಿದೆ.

ಕುವೆಂಪು ವಿ.ವಿ ವಿದ್ಯಾರ್ಥಿಗಳಿಂದ ಸ್ವಾಮಿ ವಿವೇಕಾನಂದರ ಜಯಂತಿ

ಭದ್ರಾವತಿ ತಾಲೂಕಿನ ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಗುರುವಾರ ತತ್ತ್ವಜ್ಞಾನಿ, ಯುವ ಸಮುದಾಯ ಚೈತನ್ಯದ ಶಕ್ತಿ ಸ್ವಾಮಿ ವಿವೇಕಾನಂದರ ಜನ್ಮದಿನ ಆಚರಿಸಿದರು.
    ಭದ್ರಾವತಿ, ಜ. ೧೨: ತಾಲೂಕಿನ ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಗುರುವಾರ ತತ್ತ್ವಜ್ಞಾನಿ, ಯುವ ಸಮುದಾಯ ಚೈತನ್ಯದ ಶಕ್ತಿ ಸ್ವಾಮಿ ವಿವೇಕಾನಂದರ ಜನ್ಮದಿನ ಆಚರಿಸಿದರು.
    ವಿಶ್ವವಿದ್ಯಾಲಯದ ಮುಂಭಾಗ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಘೋಷಣೆಗಳ ಮೂಲಕ ಸಂಭ್ರಮಿಸಿದರು. ಎನ್‌ಎಸ್‌ಯುಐ ತಾಲೂಕು ಅಧ್ಯಕ್ಷರಾದ ಮುಸ್ವೀರ್ ಬಾಷ ಮತ್ತು ಧವನ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
    ವಿದ್ಯಾರ್ಥಿ ಪ್ರಮುಖರಾದ ಮುರುಗೇಶ್, ಇಮ್ರಾನ್, ಕೀರ್ತಿ, ವೇಲು, ಹರೀಶ್, ನೂತನ್, ರಾಜೇಶ್, ನಾಗರಾಜ್, ಮದನ್, ಮೋಹನ್, ಶೈಲೂ, ಶ್ರೇಯಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.