Thursday, November 5, 2020

ಶ್ರೀ ಯಲ್ಲಮ್ಮ ದೇವಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ

     ಭದ್ರಾವತಿ, ಅ. ೫: ಹಳೆನಗರದ ಶ್ರೀ ಯಲ್ಲಮ್ಮದೇವಿ ದೇವಸ್ಥಾನ ಸಮುದಾಯ ಭವನ ನಿರ್ಮಾಣಕ್ಕೆ ಗುರುವಾರ ಶಾಸಕ ಬಿ ಕೆ ಸಂಗಮೇಶ್ವರ ಭೂಮಿಪೂಜೆ ನೆರವೇರಿಸಿದರು.
     ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ನೆರವು ನೀಡುವುದಾಗಿ ಭರವಸೆ ನೀಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷರಾದ ಸೀತಾರಾಮಪ್ಪ, ಪ್ರಮುಖರಾದ ಈಶ್ವರಪ್ಪ, ಎಂ.ಆರ್ ಅಶೋಕ್ ಕುಮಾರ್, ನಾರಾಯಣಪ್ಪ ಇತರರು ಉಪಸ್ಥಿತರಿದ್ದರು.   

ಟಿಎಪಿಸಿಎಂಎಸ್ ಚುನಾವಣೆ : ೭ ಸ್ಥಾನಗಳಿಗೆ ಶಾಸಕರ ಬೆಂಬಲಿಗರು ಆಯ್ಕೆ

ಸಂಗಮೇಶ್ವರ್ ಜೊತೆ ಸಂಭ್ರಮ ಹಂಚಿಕೊಂಡ ಬೆಂಬಲಿಗರು, ಕಾರ್ಯಕರ್ತರು

ಭದ್ರಾವತಿ ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸೊಸೈಟಿ (ಟಿಎಪಿಸಿಎಂಎಸ್)ಗೆ ನಡೆದ ಚುನಾವಣೆಯಲ್ಲಿ ಹೆಚ್ಚಿನ ಮತಗಳೊಂದಿಗೆ ಜಯಶೀಲರಾದ ಬೆಂಬಲಿಗರನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಅಭಿನಂದಿಸಿದರು.
ಭದ್ರಾವತಿ: ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸೊಸೈಟಿ (ಟಿಎಪಿಸಿಎಂಎಸ್)ಗೆ ನಡೆದ ಚುನಾವಣೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಬೆಂಬಲಿಗರು ಹೆಚ್ಚಿನ ಮತಗಳೊಂದಿಗೆ ಜಯಗಳಿಸಿದ್ದಾರೆ.
    ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷೆ ಕೆ.ಎಂ ಕಾವೇರಮ್ಮ, ನಗರಸಭೆ ಮಾಜಿ ಅಧ್ಯಕ್ಷ ಬಿ.ಟಿ.ನಾಗರಾಜ್, ಅತ್ತಿಗುಂದ ಆರ್. ಶ್ರೀನಿವಾಸ್, ಓ.ಎನ್ ರತ್ನಮ್ಮ, ಡಿ.ಬಿ ಹಳ್ಳಿ ಬಸವರಾಜ್, ಎಚ್.ಲೋಕೇಶಪ್ಪ, ಮತ್ತು ನಂಜಪ್ಪ ಆಯ್ಕೆಯಾಗಿದ್ದಾರೆ.
ಬೆಂಬಲಿಗರು ಚುನಾವಣೆಯಲ್ಲಿ ಜಯಶೀಲರಾದ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಶಾಸಕರು ಬೆಂಬಲಿಗರನ್ನು ಅಭಿನಂದಿಸುವ ಮೂಲಕ ರೈತರಿಗೆ ಇನ್ನೂ ಹೆಚ್ಚಿನ ನೆರವಾಗುವ ರೀತಿಯಲ್ಲಿ ನೂತನ ಆಡಳಿತ ಮಂಡಳಿ ಮುನ್ನಡೆಸುವಂತೆಕೊಂಡು ಕರೆ ನೀಡಿದರು.
   ಶಾಸಕರೊಂದಿಗೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಚುನಾವಣೆಯಲ್ಲಿ ಜಯಶೀಲರಾದ ಬೆಂಬಲಿಗರು ಕಾಂಗ್ರೆಸ್ ಬಾವುಟ ಹಿಡಿದು ಜೈಕಾರ ಹಾಕುವ ಮೂಲಕ ಸಂಭ್ರಮ ಹಂಚಿಕೊಂಡರು.
    ಶಶಿಧರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಬ್ಲಾಕ್ ಕಾಂಗ್ರೆಸ್ ಸಮಿತಿ ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಮುಖಂಡರಾದ ಟಿ. ಜನಾರ್ಧನ, ಅಣ್ಣೋಜಿರಾವ್, ಎಂ. ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಅರ್ನಬ್ ಗೋಸ್ವಾಮಿ ಬಂಧನ : ಮಹಾರಾಷ್ಟ್ರ ಸರ್ಕಾರ ವಜಾಗೊಳಿಸಲು ಆಗ್ರಹ

ಪಬ್ಲಿಕ್ ಖಾಸಗಿ ಟಿವಿ ವಾಹಿನಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿಯವರನ್ನು ಮಹಾರಾಷ್ಟ್ರ ಸರ್ಕಾರ ನಿರಾಧಾರ ಕೇಸಿನಲ್ಲಿ ಬಂಧಿಸಿದೆ ಎಂದು ಆರೋಪಿಸಿರುವ ಬಿಜೆಪಿ ಯುವ ಮೋರ್ಚಾ ತಕ್ಷಣ ಮಹಾರಾಷ್ಟ್ರ ಸರ್ಕಾರವನ್ನು ವಜಾಮಾಡಬೇಕೆಂದು ಆಗ್ರಹಿಸಿ ಗುರುವಾರ ಭದ್ರಾವತಿ ರಂಗಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ಭದ್ರಾವತಿ, ನ. ೫: ರಿಪಬ್ಲಿಕ್ ಖಾಸಗಿ ಟಿವಿ ವಾಹಿನಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿಯವರನ್ನು ಮಹಾರಾಷ್ಟ್ರ ಸರ್ಕಾರ ನಿರಾಧಾರ ಕೇಸಿನಲ್ಲಿ ಬಂಧಿಸಿದೆ ಎಂದು ಆರೋಪಿಸಿರುವ ಬಿಜೆಪಿ ಯುವ ಮೋರ್ಚಾ ತಕ್ಷಣ ಮಹಾರಾಷ್ಟ್ರ ಸರ್ಕಾರವನ್ನು ವಜಾಮಾಡಬೇಕೆಂದು ಆಗ್ರಹಿಸಿ ಗುರುವಾರ ನಗರದ ರಂಗಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
      ಯುವ ಮೋರ್ಚಾ ಪ್ರಮುಖರು ಮಾತನಾಡಿ, ರಾಷ್ಟ್ರೀಯವಾದಿ ಸಂತರ ಹತ್ಯೆ, ಡ್ರಗ್ಸ್ ಮಾಫಿಯಾ ವಿರುದ್ಧ ಧ್ವನಿ ಎತ್ತಿರುವ ಹಿನ್ನಲೆಯಲ್ಲಿ ಗೋಸ್ವಾಮಿಯವರನ್ನು ಬಂಧಿಸಲಾಗಿದೆ. ಮಹಾರಾಷ್ಟ್ರ ಸರ್ಕಾರ ಆಡಳಿತ ನಡೆಸುವಲ್ಲಿ ವಿಫಲವಾಗಿದ್ದು, ಈ ಹಿನ್ನಲೆಯಲ್ಲಿ ಸರ್ಕಾರ ವಜಾಗೊಳಿಸಬೇಕೆಂದು ಆಗ್ರಹಿಸಿದರು.
    ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಕಾರ್ಯದರ್ಶಿ ಚಂದ್ರು, ಯುವ ಮೋರ್ಚಾ ಅಧ್ಯಕ್ಷ ವಿಜಯ್, ಉಪಾಧ್ಯಕ್ಷ ಯೋಗೇಶ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಧನುಷ್ ಬೋಸ್ಲೆ, ಎನ್. ಗೋಕುಲ ಕೃಷ್ಣನ್, ಸಚಿನ್, ದೇವರಾಜ್, ಹೇಮಂತ್, ಆಕಾಶ್, ವಿಜಯ್, ಗೋಪಿನಾಥ್, ಕೃಷ್ಣ, ಲಕ್ಷ್ಮಣ್, ಧನ್ಯಕುಮಾರ್, ಜಾನು ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಗೃಹರಕ್ಷಕ ಅಧಿಕಾರಿಗಳ ತರಬೇತಿ ಜೆ. ಹೇಮಂತರಾಮನ್‌ಗೆ ಚಿನ್ನದ ಪದಕ

ಪ್ರಶಸ್ತಿ ಪತ್ರ, ಪದಕದೊಂದಿಗೆ ಜೆ. ಹೇಮಂತರಾಮನ್
ಭದ್ರಾವತಿ, ನ. ೫: ಬೆಂಗಳೂರಿನ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಅಕಾಡೆಮಿಯಲ್ಲಿ ಅ.೧೦ರಿಂದ ನ.೪ರವರೆಗೆ ನಡೆದ "ಗೃಹರಕ್ಷಕರ ಅಧಿಕಾರಿಗಳ ತರಬೇತಿ"ಯಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಪ್ರತಿನಿಧಿಸಿದ್ದ ಭದ್ರಾವತಿ ಘಟಕದ ಗೃಹರಕ್ಷಕ ಜೆ. ಹೇಮಂತರಾಮನ್ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
      ಹೇಮಂತರಾಮನ್ ಈ ಹಿಂದೆ ಸಹ ಹಲವಾರು ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಗೃಹರಕ್ಷಕ ದಳ ಜಿಲ್ಲಾ ಸಮಾದೇಷ್ಟ ಎಸ್. ಶಿವಕುಮಾರ್, ಜಿಲ್ಲಾ ಸಹಾಯಕ ಬೋಧಕ ಎಚ್. ದಿನೇಶ್, ಭದ್ರಾವತಿ ಪ್ರಭಾರ ಘಟಕಾಧಿಕಾರಿ ಜಗದೀಶ್, ಎನ್.ಸಿ.ಓ ಅಧಿಕಾರಿಗಳು, ಘಟಕದ ಎಲ್ಲಾ ಗೃಹರಕ್ಷಕ ಸದಸ್ಯರುಗಳು ಅಭಿನಂದಿಸಿದ್ದಾರೆ.