ಗಣಪತಿ ಹಬ್ಬ ಯಾರಿಗೂ ಸೀಮಿತ ಅಲ್ಲ, ಎಲ್ಲರೂ ಸೇರಿ ಆಚರಿಸುವ ಹಬ್ಬ
ಭದ್ರಾವತಿಯಲ್ಲಿ ಶನಿವಾರ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಪಿ.ವಿ ಶ್ರೀನಿವಾಸ್ ಪಾಲ್ಗೊಂಡಿದ್ದರು.
ಭದ್ರಾವತಿ, ಸೆ. ೧೮: ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಾಗಿದ್ದ ವಿನಾಯಕ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಪಾಲ್ಗೊಂಡಿದ್ದರು.
ಮೂಲತಃ ನಗರದವರೇ ಆದ ಪಿ.ವಿ ಶ್ರೀನಿವಾಸ್ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು.
ಪತ್ರಿಕೆಯೊಂದಿಗೆ ಮಾತನಾಡಿದ ಪಿ.ವಿ ಶ್ರೀನಿವಾಸ್, ರಾಷ್ಟ್ರೀಯ ಅಧ್ಯಕ್ಷರಾಗಿ ಮೊದಲ ಬಾರಿಗೆ ಪಾಲ್ಗೊಂಡಿದ್ದೇನೆ. ಈ ಹಿಂದೆ ಪ್ರತಿ ವರ್ಷ ನಗರದಲ್ಲಿ ಎಲ್ಲಾ ಗಣಪತಿಗಳ ವಿಸರ್ಜನೆ ಸಂಧರ್ಭದಲ್ಲಿ ಪಾಲ್ಗೊಳ್ಳುತ್ತಿದ್ದೆನು. ಈ ಬಾರಿ ಕೋವಿಡ್ ಹಿನ್ನಲೆಯಲ್ಲಿ ರಾಜಬೀದಿ ಉತ್ಸವ ರದ್ದು ಮಾಡಿರುವುದು ಬೇಸರ ತಂದಿದೆ. ಸಾವಿರಾರು ಜನರು ಒಂದೆಡೆ ಸಂಭ್ರಮಿಸುವ ಕ್ಷಣ ಕಣ್ಮರೆಯಾಗಿರುವುದು ನೋವುಂಟು ಮಾಡಿದೆ ಎಂದರು.
ಗಣಪತಿ ಹಬ್ಬ ಯಾರಿಗೂ ಸೀಮಿತವಾಗಿಲ್ಲ. ಎಲ್ಲರೂ ಸೇರಿ ಆಚರಿಸುವಂತದ್ದಾಗಿದೆ. ಆದರೆ ಕೆಲವು ಸಂಘಟನೆಗಳು ನಮಗೆ ಮಾತ್ರ ಸೀಮಿತ ಎಂಬ ಭಾವನೆ ಮೂಡಿಸುತ್ತಿರುವುದು ಸರಿಯಲ್ಲ. ದೇಶದಲ್ಲಿರುವ ಎಲ್ಲರೂ ಗಣಪತಿ ಹಬ್ಬ ಆಚರಿಸಬೇಕು. ಯುವ ಕಾಂಗ್ರೆಸ್ ವತಿಯಿಂದ ಪ್ರತಿ ವರ್ಷ ಗಣಪತಿ ಪ್ರತಿಷ್ಠಾಪಿಸಲಾಗುತ್ತಿದೆ. ಈ ಮೂಲಕ ಎಲ್ಲರಲ್ಲೂ ಒಗ್ಗಟ್ಟನ್ನು ಮೂಡಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಯುವ ಮುಖಂಡ ಬಿ.ಎಸ್ ಗಣೇಶ್, ಸ್ಥಳೀಯ ಯುವ ಕಾಂಗ್ರೆಸ್ ಪದಾಧಿಕಾರಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.