Sunday, January 9, 2022

ಶಾಲೆಯಿಂದ ಹೊರಗುಳಿದ ಹೆಣ್ಣು ಮಕ್ಕಳಿಗಾಗಿ ಉಚಿತ ಡೇಟಾ ಎಂಟ್ರಿ, ಬ್ಯೂಟಿಷಿಯನ್ ತರಬೇತಿಗೆ ಚಾಲನೆ

ಹೆಣ್ಣು ಮಕ್ಕಳಿಗೆ ಕೌಶಲ್ಯಾಧಾರಿತ ಉಚಿತ ಡೇಟಾ ಎಂಟ್ರಿ ಮತ್ತು ಬ್ಯೂಟಿಷಿಯನ್ ತರಬೇತಿಗೆ ಭದ್ರಾವತಿ ನ್ಯೂಟೌನ್ ಸರ್ಕಾರಿ ಬಾಲಿಕಾ ಪ್ರೌಢಶಾಲೆಯಲ್ಲಿ ಚಾಲನೆ ನೀಡಲಾಯಿತು.
    ಭದ್ರಾವತಿ, ಜ. ೯: ಹೆಣ್ಣು ಮಕ್ಕಳಿಗೆ ಕೌಶಲ್ಯಾಧಾರಿತ ಉಚಿತ ಡೇಟಾ ಎಂಟ್ರಿ ಮತ್ತು ಬ್ಯೂಟಿಷಿಯನ್ ತರಬೇತಿಗೆ ನಗರದ ನ್ಯೂಟೌನ್ ಸರ್ಕಾರಿ ಬಾಲಿಕಾ ಪ್ರೌಢಶಾಲೆಯಲ್ಲಿ ಚಾಲನೆ ನೀಡಲಾಯಿತು.
    ಸರ್ವ ಶಿಕ್ಷಣ ಕರ್ನಾಟಕ(ಎಸ್‌ಎಸ್‌ಕೆ) ಡಿವೈಪಿಸಿಗಳಾದ ಗಣಪತಿ ಮತ್ತು ಉಮಾಮಹೇಶ್ವರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ೧೬ ರಿಂದ ೨೯ ವರ್ಷದೊಳಗಿನ ಶಾಲೆಯಿಂದ ಹೊರಗುಳಿದ ಹಾಗು ಶಿಕ್ಷಣವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿರುವ ಹೆಣ್ಣು ಮಕ್ಕಳು ಈ ತರಬೇತಿ ಪಡೆಯಬಹುದಾಗಿದೆ.
    ತರಬೇತಿ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರ ವಿತರಿಸಲಾಗುವುದು. ಇದರಿಂದ ಬ್ಯೂಟಿ ಪಾರ್ಲರ್‌ಗಳಲ್ಲಿ ಮತ್ತು ಐಟಿ ಹಬ್‌ಗಳಲ್ಲಿ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೆ ಸ್ವಾವಲಂಬಿಗಳಾಗಿ ಬದುಕು ರೂಪಿಸಿಕೊಳ್ಳಲು ಸಹ ಸಹಕಾರಿಯಾಗಲಿದೆ ಎಂದರು.  ಉದ್ಘಾಟಿಸಲಾಯಿತು
    ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ಶಾಲೆಯ ಉಪಪ್ರಾಚಾರ್ಯರಾದ ಟಿ.ಎಸ್ ಸುಮನ ಅಧ್ಯಕ್ಷತೆ ವಹಿಸಿದ್ದರು.

ಇಂದಿನ ಯುವ ಜನತೆ ಪದವಿ ಜೊತೆಗೆ ನೈಪುಣ್ಯತೆ ಹಾಗು ಕೌಶಲ್ಯತೆ ಹೊಂದಿರಲಿ : ಡಾ. ಬಿ.ಜಿ ಧನಂಜಯ

ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಉದ್ಘಾಟಿಸಿದರು.
    ಭದ್ರಾವತಿ, ಜ. ೯: ಇಂದಿನ ಯುವ ಜನತೆ ಪದವಿ ಜೊತೆಗೆ ನೈಪುಣ್ಯತೆ ಹಾಗು ಕೌಶಲ್ಯತೆ ಹೊಂದಿರಬೇಕು ಎಂದು ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಹೇಳಿದರು.
    ಅವರು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಅಧ್ಯಯನದ ಜೊತೆಗೆ ಉದ್ಯೋಗದ ಬಗ್ಗೆ ಮಾಹಿತಿ ಅಗತ್ಯವಾಗಿದೆ. ಅಲ್ಲದೆ ವಿದ್ಯಾವಂತ ಯುವ ಸಮೂಹಕ್ಕೆ ಆರ್ಥಿಕ ನೆರವಿನ ಅಗತ್ಯವಿದೆ.  ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಿ,  ಈ ಮೂಲಕ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಬದ್ಧತೆ ಹಾಗು ಕ್ರಿಯಾಶೀಲತೆ ಬೆಳೆಸಿಕೊಳ್ಳಬೇಕೆಂದರು.
    ಉದ್ಯೋಗ ಅಧಿಕಾರಿ ಮಂಜುನಾಥ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾಹಿತಿ ನೀಡಿದರು. ಉಪನ್ಯಾಸಕ ಡಾ. ಬಸವರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ಬೋಧಕ ಹಾಗು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರ ಅಭಿಪ್ರಾಯಗಳನ್ನು ಪಡೆಯಲಾಯಿತು.

ಕಲ್ಯಾಣ ಮಂಟಪ ನಿರ್ಮಾಣ ಕಟ್ಟಡ ಕಾರ್ಮಿಕರಿಗೆ ಪ್ರತಿರಕ್ಷಣಾ ಕಿಟ್ ವಿತರಣೆ

ಭದ್ರಾವತಿ ತರೀಕೆರೆ ರಸ್ತೆಯಲ್ಲಿ ಬೃಹತ್ ಕಲ್ಯಾಣ ಮಂಟಪ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕಟ್ಟಡ ಕಾರ್ಮಿಕರಿಗೆ ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ಕಾರ್ಮಿಕ ಇಲಾಖೆವತಿಯಿಂದ ನೀಡಲಾಗುವ ಪ್ರತಿರಕ್ಷಣಾ ಕಿಟ್‌ಗಳನ್ನು ವಿತರಿಸಲಾಯಿತು.  
    ಭದ್ರಾವತಿ, ಜ. ೯: ನಗರದ ತರೀಕೆರೆ ರಸ್ತೆಯಲ್ಲಿ ಬೃಹತ್ ಕಲ್ಯಾಣ ಮಂಟಪ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕಟ್ಟಡ ಕಾರ್ಮಿಕರಿಗೆ ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ಕಾರ್ಮಿಕ ಇಲಾಖೆವತಿಯಿಂದ ನೀಡಲಾಗುವ ಪ್ರತಿರಕ್ಷಣಾ ಕಿಟ್‌ಗಳನ್ನು ವಿತರಿಸಲಾಯಿತು.
    ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಆರೋಗ್ಯ, ಶೈಕ್ಷಣಿಕ ಮತ್ತು ಆರ್ಥಿಕ ಸೌಲಭ್ಯ ಸೇರಿದಂತೆ ವಿವಿಧ ಸೌಲಭ್ಯಗಳ ಕುರಿತು ಸಮಗ್ರ ಮಾಹಿತಿ ನೀಡಲಾಯಿತು. ಕಟ್ಟಡ ಕಾರ್ಮಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಕೋರಲಾಯಿತು.
    ಕಲ್ಯಾಣ ಮಂಟಪ ಮಾಲೀಕರಾದ ಸೈಯದ್ ಹಿಸಾರ್, ಸಿವಿಲ್ ಎಂಜಿನಿಯರ್ ಲಕ್ಷ್ಮಣ್ ಪರುಶುರಾಮ್, ಯೂನಿಯನ್ ತಾಲೂಕು ಅಧ್ಯಕ್ಷ, ಮೇಸ್ತ್ರಿ ಚಂದ್ರಶೇಖರ್, ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು, ತಾಂತ್ರಿಕ ಸಲಹೆಗಾರ ಮನೋಹರ್ ಗೌಡ,  ತಾಲ್ಲೂಕು ಕಾರ್ಯಾಧ್ಯಕ್ಷ ಅಭಿಲಾಷ್, ಉಪಾಧ್ಯಕ್ಷ ನಾಗೇಂದ್ರರೆಡ್ಡಿ, ಸಂಘಟನಾ ಕಾರ್ಯದರ್ಶಿ ಕುಮಾರ್, ತಾಲ್ಲೂಕು ಸಂಚಾಲಕರಾದ ಮಂಜುನಾಥ್, ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.