Wednesday, February 1, 2023

ಕೇಂದ್ರ ಬಜೆಟ್ : ಗಣ್ಯರ ಮೆಚ್ಚುಗೆ

ಜಿ. ಧರ್ಮಪ್ರಸಾದ್-ಲೆಕ್ಕ ಪರಿಶೋಧಕರು, ಭದ್ರಾವತಿ.
    ಭದ್ರಾವತಿ, ಫೆ. ೧: ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ರವರು ಬುಧವಾರ ಮಂಡಿಸಿರುವ ಬಜೆಟ್ ಮಂಡನೆ ನಗರದ ಪ್ರಮುಖ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
    ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನೆಮ್ಮದಿಯ ಬದುಕು ನೀಡುವ ಬಜೆಟ್ :
    ಕೋವಿಡ್ ಸಂಕಷ್ಟದಲ್ಲಿ ಇಡೀ ಜಗತ್ತೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಈ ಸಂದರ್ಭದಲ್ಲಿ ೨೦೨೩-೨೪ನೇ ಸಾಲಿಗೆ ಸಂಬಂಧಿಸಿದಂತೆ ಮಂಡಿಸಿರುವ ಕೇಂದ್ರ ಬಜೆಟ್ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳುವ ಅವಕಾಶ ಕಲ್ಪಿಸಿದೆ.
    ರೈತರ ಬಾಳನ್ನು ಹಸನು ಮಾಡುವ ಕೃಷಿ ಆಧಾರಿತ ಸ್ಟಾರ್ಟಪ್‌ಗಳಿಗೆ ಉತ್ತೇಜನ, ಶಿಕ್ಷಣ ಕ್ಷೇತ್ರಕ್ಕೆ ಶೇಕಡ ೧೩ರಷ್ಟು ಹೆಚ್ಚಿನ ಅನುದಾನ ನಿಗದಿಪಡಿಸಿರುವುದು, ಬಂಡವಾಳ ವೆಚ್ಚ ಕ್ಯಾಪಿಟಲ್ ಎಕ್ಸ್ಪೆಂಡಿಚರ್ ಶೇ. ೩೩ರಷ್ಟು ಹೆಚ್ಚಿಸಿರುವ ಪರಿಣಾಮ ಸುಮಾರು ೧೦ ಲಕ್ಷ ಕೋಟಿ ವೆಚ್ಚ ಮಾಡುವ ಯೋಜನೆ ಭಾರತದಲ್ಲಿ ಬೃಹತ್ ಪ್ರಮಾಣದಲ್ಲಿ ಉದ್ಯೋಗಾವಕಾಶವನ್ನು ಸೃಷ್ಟಿಸುತ್ತದೆ. ಬಂಡವಾಳ ಹೂಡಿಕೆದಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಐವತ್ತಕ್ಕೂ ಹೆಚ್ಚು ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತಿರುವುದು ಉದ್ಯೋಗಾವಕಾಶದ ಆಶಯಕ್ಕೆ ಪೂರಕವಾದ ಅಂಶವಾಗಿರುತ್ತದೆ. ಆದಾಯ ತೆರಿಗೆಯಲ್ಲಿ ಸಾಮಾನ್ಯ ವೇತನದಾರರಿಗೆ ಆರ್ಥಿಕ ಉತ್ತೇಜನ ನೀಡಿದ ಆಶಾದಾಯಕ ಬಜೆಟ್. ವಿಶ್ವದ ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಈ ಸನ್ನಿವೇಶದಲ್ಲಿ  ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಅತ್ಯಂತ ಶ್ಲಾಘನೀಯ ಮತ್ತು ದೂರ ದೃಷ್ಟಿ ಹೊಂದಿರುವ ಬಜೆಟ್ ಆಗಿದೆ ಎಂದು ನಗರದ ಲೆಕ್ಕ ಪರಿಶೋಧಕ ಜಿ. ಧರ್ಮಪ್ರಸಾದ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


ಡಾ. ಬಿ.ಜಿ ಧನಂಜಯ
ಪ್ರಾಂಶುಪಾಲರು, ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಭದ್ರಾವತಿ.

    ಎಲ್ಲಾ ವರ್ಗದ ಜನರಿಗೂ ಪೂರಕವಾದ ಜನಪರ ಬಜೆಟ್ :
    ಸಂಪನ್ಮೂಲ ಕ್ರೋಢೀಕರಣಕ್ಕೆ ವಿಶೇಷ ಆದ್ಯತೆ ನೀಡಿರುವುದು ಆರ್ಥಿಕತೆ ಸದೃಢಗೊಳ್ಳಲಿದೆ. ರಫ್ತಿಗೆ ಉತ್ತೇಜನ ನೀಡಿರುವುದು ಸಹ ಒಳ್ಳೆಯ ಬೆಳವಣಿಗೆಯಾಗಿದೆ. ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡುತ್ತಿರುವುದು ಒಕ್ಕೂಟ ವ್ಯವಸ್ಥೆಯಲ್ಲಿ ಸಣ್ಣ ರಾಜ್ಯಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ರಕ್ಷಣಾ ಕ್ಷೇತ್ರದಲ್ಲಿ ಆತ್ಮ ನಿರ್ಭರತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬುತ್ತದೆ. ತೆರಿಗೆ ವಂಚನೆ ವಿರುದ್ಧ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಒಟ್ಟಾರೆ ಭವಿಷ್ಯದಲ್ಲಿ ದೇಶ ಆರ್ಥಿಕವಾಗಿ ಸದೃಢಗೊಳ್ಳಲು ಅಗತ್ಯವಿರುವ ಎಲ್ಲಾ ವರ್ಗದ, ಎಲ್ಲಾ ಸಮಾಜದ ಜನಪರ ಬಜೆಟ್ ಆಗಿದೆ ಎಂದು ನಗರದ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಫೆ.೫ರಂದು ಬೌದ್ಧ ವಿಹಾರ ಲೋಕಾರ್ಪಣೆ ಸಮಾರಂಭ

ಭದ್ರಾವತಿಯಲ್ಲಿ ಮೊಟ್ಟಮೊದಲ ಭಗವಾನ್ ಬುದ್ಧವಿಹಾರ ನಿರ್ಮಿಸಲಾಗಿದೆ. ಫೆ.೫ರಂದು ಇದರ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಬುದ್ಧ ಧಮ್ಮಾಂಕುರ ಟ್ರಸ್ಟ್ ಅಧ್ಯಕ್ಷ ಪ್ರೊ. ರಾಚಪ್ಪ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
    ಭದ್ರಾವತಿ, ಫೆ. ೧:  ಭಗವಾನ್ ಬುದ್ಧ ಏಷ್ಯಾ ಖಂಡದ ಬೆಳಕು ಮಾತ್ರವಲ್ಲ ಜಗತ್ತಿನ ಬೆಳಕು, ಶಾಂತಿಯ ದೂತ ಹಾಗೂ ಭಾರತದ ಸಾಂಸ್ಕೃತಿಕ ರಾಯಭಾರಿ, ಇವರ ಬೋಧನೆಗಳಾದ ಪ್ರೀತಿ, ಕರುಣೆ, ಮೈತ್ರಿ, ಸಹೋದರತ್ವ ಹಾಗೂ ಸತ್ಯ, ಅಹಿಂಸೆ, ಸಮಾನತೆ ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ. ಮಾನವನ ನೆಮ್ಮದಿಗೆ ತಿಸರಣ, ಪಂಚಶೀಲ ಮತ್ತು ಅಷ್ಟಾಂಗ ಮಾರ್ಗಗಳನ್ನು ಸಮಾಜಕ್ಕೆ ಪ್ರಚುರಪಡಿಸಬೇಕಾಗಿದೆ. ಈ ಉದ್ದೇಶವನ್ನಿಟ್ಟುಕೊಂಡು ನಗರದಲ್ಲಿ ಮೊಟ್ಟಮೊದಲ ಭಗವಾನ್ ಬುದ್ಧವಿಹಾರ ನಿರ್ಮಿಸಲಾಗಿದೆ. ಫೆ.೫ರಂದು ಇದರ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಬುದ್ಧ ಧಮ್ಮಾಂಕುರ ಟ್ರಸ್ಟ್ ಅಧ್ಯಕ್ಷ ಪ್ರೊ. ರಾಚಪ್ಪ ತಿಳಿಸಿದರು.
  ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಟ್ರಸ್ಟ್ ಕಾರ್ಯದರ್ಶಿ ಶ್ರೀನಿವಾಸ್‌ರವರು ಹೊಸನಂಜಾಪುರದಲ್ಲಿ ತಮ್ಮ ಸ್ವಂತ ೨ ಎಕರೆ ಜಮೀನು ಬೌದ್ಧ ವಿಹಾರಕ್ಕೆ ದಾನವಾಗಿ ನೀಡಿದ್ದಾರೆ. ಈ ಜಮೀನಿನಲ್ಲಿ ಸರ್ಕಾರ ಹಾಗು ಸಾರ್ವಜನಿಕರಿಂದ ಯಾವುದೇ ದೇಣಿಗೆ ಸ್ವೀಕರಿಸದೆ ಟ್ರಸ್ಟ್ ವತಿಯಿಂದ ೧೫ ಲಕ್ಷ ರು. ವೆಚ್ಚದಲ್ಲಿ ಬೌದ್ಧ ವಿಹಾರ ನಿರ್ಮಿಸಲಾಗಿದೆ. ೩ ಅಡಿ ಎತ್ತರದ ಭಗವಾನ್ ಬುದ್ಧ ಪ್ರತಿಮೆ ಪ್ರತಿಷ್ಠಾಪಿಸಲಾಗಿದ್ದು, ಈ ವಿಹಾರ ಧ್ಯಾನ, ಪ್ರಾರ್ಥನೆ ಸೇರಿದಂತೆ ಜ್ಞಾನಾರ್ಜನೆಗೆ ಪೂರಕವಾದ ಸಾಮಾಜಿಕ ಕಾರ್ಯಗಳಿಗೆ ಸದ್ಬಳಕೆಯಾಗಬೇಕೆಂಬುದು ಟ್ರಸ್ಟ್ ಉದ್ದೇಶವಾಗಿದೆ ಎಂದರು.
    ಅಂದು ಬೆಳಿಗ್ಗೆ ೧೦.೩೦ಕ್ಕೆ ಶಾಸಕ ಬಿ.ಕೆ  ಸಂಗಮೇಶ್ವರ್ ವಿಹಾರ ಲೋಕಾರ್ಪಣೆಗೊಳಿಸಲಿದ್ದು, ಚೇತವನ ಬುದ್ಧವಿಹಾರ, ಕೊಳ್ಳೇಗಾಲದ ಭಂತೆ ಸುಗತ ಪಾಲರವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಲಿವೆ.   ಈ ಕಾರ್ಯಕ್ರಮದಲ್ಲಿ ರಾಜ್ಯ, ಜಿಲ್ಲೆ ಹಾಗೂ ತಾಲೂಕಿನ ಜನಪ್ರತಿನಿಧಿಗಳು, ವಿವಿಧ ಸಮಾಜದ ಮುಖಂಡರು ಹಾಗೂ ದಲಿತ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.  ಬೌದ್ದ ದಮ್ಮದಲ್ಲಿ ಅಸಕ್ತಿಯಿರುವವರೆಲ್ಲರೂ ಭಾಗವಹಿಸುವಂತೆ ಕೋರಿದರು.
    ಟ್ರಸ್ಟ್ ಕಾರ್ಯಕಾರಿ ಮಂಡಳಿ ಪ್ರಮುಖರಾದ ಲಕ್ಷ್ಮಣ್, ಸುರೇಶ್, ಡಿ. ನರಸಿಂಹಮೂರ್ತಿ, ಎ. ತಿಪ್ಪೇಸ್ವಾಮಿ, ಕೃಷ್ಣ ಛಲವಾದಿ ಮತ್ತು ಧರ್ಮರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಐಎಸ್‌ಎಲ್ ಹೋರಾಟಕ್ಕೆ ಜೆಡಿಯು ಸಂಪೂರ್ಣ ಬೆಂಬಲ : ಮಹಿಮಾ ಜೆ. ಪಟೇಲ್

ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಬುಧವಾರ ೧೪ನೇ ದಿನ ಪೂರೈಸಿತು. ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್‌ರವರಿಗೆ ಗುತ್ತಿಗೆ ಕಾರ್ಮಿಕರು ಮನವಿ ಸಲ್ಲಿಸಿದರು.
    ಭದ್ರಾವತಿ, ಫೆ. ೧ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ಜನತಾದಳ(ಸಂಯುಕ್ತ) ಪಕ್ಷ ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ದವಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್ ಹೇಳಿದರು.
    ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಬುಧವಾರ ೧೪ನೇ ದಿನ ಪೂರೈಸಿತು. ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, ನಮ್ಮ ಪಕ್ಷದ ವತಿಯಿಂದ ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಈ ಸಂಬಂಧ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಸಹ ಆಯೋಜಿಸಲಾಗುವುದು. ಅಲ್ಲದೆ ಬಿಹಾರ ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದು, ಅಲ್ಲಿನ ಮುಖ್ಯಮಂತ್ರಿಗಳು, ಪಕ್ಷದ ಪ್ರಮುಖರಾದ ನಿತೀಶ್‌ಕುಮಾರ್‌ರವರ ನೇತೃತ್ವದಲ್ಲಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.
    ನಮ್ಮ ತಂದೆಯವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಂದು ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಹಿನ್ನಲೆಯಲ್ಲಿ ಈ ಕಾರ್ಖಾನೆಯನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸುವ ತೀರ್ಮಾನ ಕೈಗೊಳ್ಳಲಾಯಿತು. ನಂತರ ಕೇಂದ್ರ ಸರ್ಕಾರದ ಉಕ್ಕು ಪ್ರಾಧಿಕಾರಕ್ಕೆ ವಹಿಸಿಕೊಟ್ಟರೂ ಸಹ ಕಾರ್ಖಾನೆ ಅಭಿವೃದ್ಧಿ ಕಾಣದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಪ್ರಸ್ತುತ ಕಾರ್ಖಾನೆ ಮುಚ್ಚುವ ಹಂತಕ್ಕೆ ತಲುಪಿರುವುದು ವಿಷಾದನೀಯ ಬೆಳವಣಿಯಾಗಿದೆ. ಕಾರ್ಮಿಕರು ಯಾವುದೇ ಕಾರಣಕ್ಕೂ ವಿಚಲಿತರಾಗಬಾರದು. ತಮ್ಮಲ್ಲಿರುವ ಕೌಶಲ್ಯಗಳಿಗೆ ತಕ್ಕಂತೆ ಬದುಕಿಗೆ ಪೂರಕವಾದ ಉದ್ಯೋಗಗಳನ್ನು ಸೃಷ್ಟಿಸಿಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕೆಂದರು.  
    ಬೃಹತ್ ಕಾರ್ಖಾನೆಗಳ ಆರಂಭದಲ್ಲಿಯೇ ಇವುಗಳು ಒಂದಲ್ಲ ಒಂದು ದಿನ ಅವನತಿ ದಾರಿ ಹಿಡಿಯುತ್ತವೆ ಎಂಬುದನ್ನು ನಮ್ಮ ಪೂರ್ವಿಕರಿಗೆ ಮನವರಿಕೆಯಾಗಿತ್ತು. ಈ ಹಿನ್ನಲೆಯಲ್ಲಿಯೇ ಮಹಾತ್ಮಗಾಂಧಿಯವರು ದೇಶದಲ್ಲಿ ಗುಡಿ ಕೈಗಾರಿಕೆಗಳು, ಸಣ್ಣ ಕೈಗಾರಿಕೆಗಳು ಹೆಚ್ಚು ಹೆಚ್ಚು ಆರಂಭಗೊಳ್ಳಬೇಕೆಂದಿದ್ದರು. ಇದೀಗ ಅವರ ಮಾತು ಸತ್ಯವಾಗಿ ಕಾಣುತ್ತಿದೆ ಎಂದರು.
    ಪಕ್ಷದ ಪ್ರಮುಖರಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜ್, ವಕ್ತಾರ ಬಿ.ಟಿ ರಮೇಶ್‌ಗೌಡ, ರಾಜ್ಯ ಕಾರ್ಯದರ್ಶಿಗಳಾದ ಶಶಿಕುಮಾರ್ ಗೌಡ, ಕಲ್ಪನ ಗೌಡ, ರೈತ ಘಟಕದ ಅಧ್ಯಕ್ಷರಾದ ಲಕ್ಷ್ಮೀ, ಕಲಾವತಿ, ಶ್ರೀನಿವಾಸ್,  ಸೇರಿದಂತೆ ಇನ್ನಿತರರು ಮಾತನಾಡಿದರು. ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಬುದೀಪಕ್‌ಕುಮಾರ್, ಜಿಲ್ಲಾ ಸಂಚಾಲಕ ದೇವರಾಜ್ ಶಿಂಧೆ, ತಾಲೂಕು ಅಧ್ಯಕ್ಷ ರಘು ಸಂಕ್ಲಿಪುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಯಂತ್ರಣ ಮಂಡಳಿ ಬೆಂಬಲ ಸೂಚಿಸಿದೆ. ಮಂಡಳಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಿ.ಜೆ ಪ್ರಭು ಮಾತನಾಡಿದರು.

    ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಯಂತ್ರಣ ಮಂಡಳಿ ಬೆಂಬಲ:

    ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಯಂತ್ರಣ ಮಂಡಳಿ ಬೆಂಬಲ ಸೂಚಿಸಿದೆ. ಮಂಡಳಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಿ.ಜೆ ಪ್ರಭು ಮಾತನಾಡಿ, ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ಹೂಡುವ ಮೂಲಕ ಪುನಶ್ಚೇತನ ಕೈಗೊಳ್ಳಲು ಇಚ್ಛಾಶಕ್ತಿ ಇಲ್ಲದ ಸರ್ಕಾರ ಹಾಗು ಜನಪ್ರತಿನಿಧಿಗಳ ವಿರುದ್ಧ ಕಾರ್ಮಿಕರು ಸೂಕ್ತ ನಿರ್ಣಯ ಕೈಗೊಳ್ಳುವವರೆಗೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಈಗಲಾದರೂ ಕಾರ್ಮಿಕರು ಎಚ್ಚೆತ್ತುಕೊಂಡು ತಮ್ಮ ಹೋರಾಟ ನಡೆಸಬೇಕೆಂದರು.  ಮಂಡಳಿ ತಾಲೂಕು ಅಧ್ಯಕ್ಷ ಸಂತೋಷ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.