Sunday, April 11, 2021

ಕೋವಿಡ್ ೨ನೇ ಅಲೆ ನಡುವೆಯೂ ಮಕ್ಕಳ ಶಿಕ್ಷಣ ಮುಂದುವರಿಕೆಗೆ ವಿನೋತನ ಪ್ರಯತ್ನ

ಸರ್ಕಾರಿ ಶಾಲೆ ಮುಖ್ಯ ಶಿಕ್ಷಕರೊಬ್ಬರಿಂದ ಪೋಷಕರಿಗೆ ಮನವಿ ವಿಡಿಯೋ ಬಿಡುಗಡೆ

ಭದ್ರಾವತಿ ತಾಲೂಕಿನ ಕಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವಿ. ಹಿರೇಮಠ್, ದ್ವಿಪಾತ್ರದ ಮೂಲಕ ಕೋವಿಡ್-೧೯ರ ಸಂದರ್ಭದಲ್ಲಿ ಮಕ್ಕಳ ಶಿಕ್ಷಣಕ್ಕೆ ಪೋಷಕರು ನೆರವಾಗುವಂತೆ ಕೋರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವ್ಯಾಪಕವಾಗಿ ಪ್ರಚಾರಗೊಳ್ಳುತ್ತಿದೆ.
    ಭದ್ರಾವತಿ, ಏ. ೧೧: ಕೋವಿಡ್-೧೯ರ ಪರಿಣಾಮ ಕಳೆದ ಸುಮಾರು ೧೫ ತಿಂಗಳಿನಿಂದ ಮಕ್ಕಳ ಶಿಕ್ಷಣಕ್ಕೆ ಸಾಕಷ್ಟು ತೊಂದರೆಯಾಗುತ್ತಿದ್ದು, ಈ ನಡುವೆಯೂ  ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಹಲವು ರೀತಿಯಲ್ಲಿ ಕಲಿಕೆಯನ್ನು ಮುಂದುವರೆಸಿಕೊಂಡು ಹೋಗುತ್ತಿದೆ. ಅಲ್ಲದೆ ಒಂದು ಹಂತದ ಶೈಕ್ಷಣಿಕ ಅವಧಿಯನ್ನೂ ಸಹ ಯಶಸ್ವಿಯಾಗಿ ಮುಕ್ತಾಯಗೊಳಿಸಿದೆ. ಇದೀಗ ಕೋವಿಡ್-೧೯ರ ೨ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಸರ್ಕಾರ ಪುನಃ ಶಾಲಾ-ಕಾಲೇಜುಗಳನ್ನು ಸಂಪೂರ್ಣವಾಗಿ ಬಂದ್ ಮಾಡುವಂತೆ ಸೂಚಿಸಿದೆ.
    ಶಾಲಾ-ಕಾಲೇಜುಗಳನ್ನು ಸಂಪೂರ್ಣವಾಗಿ ಬಂದ್ ಮಾಡಿರುವ ಹಿನ್ನಲೆಯಲ್ಲಿ ಉಂಟಾಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಂಗ ಕಲಾವಿದರಾಗಿರುವ ಮುಖ್ಯ ಶಿಕ್ಷಕರೊಬ್ಬರು ವಿನೂತನ ಪ್ರಯತ್ನಕ್ಕೆ  ಮುಂದಾಗಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿನೂತನ ವಿಡಿಯೋ ಇದೀಗ ವ್ಯಾಪಕವಾಗಿ ಪ್ರಚಾರಗೊಳ್ಳುತ್ತಿದೆ.
    ತಾಲೂಕಿನ ಕಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವಿ. ಹಿರೇಮಠ್, ದ್ವಿಪಾತ್ರದ ಮೂಲಕ ಕೋವಿಡ್-೧೯ರ ಸಂದರ್ಭದಲ್ಲಿ ಮಕ್ಕಳ ಶಿಕ್ಷಣಕ್ಕೆ ಪೋಷಕರು ನೆರವಾಗುವಂತೆ ಕೋರಿದ್ದಾರೆ. ಸರ್ಕಾರದ ಆದೇಶದಂತೆ ಮಕ್ಕಳು ಶಾಲೆಗಳಿಗೆ ಬರುವ ಆಗಿಲ್ಲ. ಈ ಹಿನ್ನಲೆಯಲ್ಲಿ ಮಕ್ಕಳು ಮನೆಯಲ್ಲಿಯೇ ಇದ್ದು ಕಲಿಕೆಯನ್ನು ಮುಂದುವರೆಸಿಕೊಂಡು ಹೋಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಪೋಷಕರದ್ದಾಗಿದ್ದು, ಮಕ್ಕಳಿಗೆ ಶಾಲೆಯ ಶಿಕ್ಷಕರು ನೀಡುವ ಹೋಮ್ ವರ್ಕ್ ಹಾಗು ಕಲಿಕೆಯ ವಿಧಾನಗಳನ್ನು ಪುಸ್ತಕಗಳಲ್ಲಿ ದಾಖಲಿಸಿ ಕೊಡಲಾಗುವುದು. ಹೋಮ್ ವರ್ಕ್ ಪುಸ್ತಕಗಳನ್ನು ಮಕ್ಕಳ ಬದಲಿಗೆ ಪೋಷಕರು ತಮ್ಮ ಬಿಡುವಿನ ಸಮಯದಲ್ಲಿ ಶಾಲಾ ಅವಧಿಯಲ್ಲಿ ಶಾಲೆಗೆ ಬಂದು ಪಡೆದುಕೊಂಡು ಹೋಗಬಹುದಾಗಿದೆ. ಈ ರೀತಿಯ ವಿಧಾನದಿಂದ ಮಕ್ಕಳಿಗೆ ಯಾವುದೇ ರೀತಿ ಸಮಸ್ಯೆ ಎದುರಾಗುವುದಿಲ್ಲ. ಈ ಹಿನ್ನಲೆಯಲ್ಲಿ ಪೋಷಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.
     ದ್ವಿಪಾತ್ರದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಚಾರಗೊಳ್ಳುತ್ತಿದ್ದು, ವಿನೂತನ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂಬುದು ಪ್ರಜ್ಞಾವಂತ ನಾಗರೀಕರ ಆಶಯವಾಗಿದೆ.

ಕೊರೋನಾ ಲಸಿಕೆ ಪಡೆದು ಜಾಗೃತಿ ಮೂಡಿಸಿದ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್

ಭದ್ರಾವತಿ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಜನ್ನಾಪುರ ನಗರ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಕೊರೋನಾ ಲಸಿಕೆ ಪಡೆಯುವ ಮೂಲಕ ಜಾಗೃತಿ ಮೂಡಿಸಿದರು.
   ಭದ್ರಾವತಿ, ಏ. ೧೧: ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಈ ನಡುವೆ ಲಸಿಕೆ ಪಡೆಯುವವರ ಸಂಖ್ಯೆ ಸಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ಹೋರಾಟಗಾರ ಆರ್. ವೇಣುಗೋಪಾಲ್ ಭಾನುವಾರ ಲಸಿಕೆ ಪಡೆಯುವ ಮೂಲಕ ಇತರರಿಗೆ ಜಾಗೃತಿ ಮೂಡಿಸಿದರು.
    ಸರ್ಕಾರ ೪೫ ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಲಸಿಕೆ ಉಚಿತವಾಗಿ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವ ಮೂಲಕ ಸೋಂಕು ಹರಡದಂತೆ ಮುನ್ನಚ್ಚರಿಕೆ ಕ್ರಮಗಳನ್ನು ವಹಿಸಬೇಕೆಂದರು.
   ಜನ್ನಾಪುರ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಆರ್. ಕವಿತಾ , ಕಿರಣ್ ಕುಮಾರ್, ದೇವರಾಜ್, ಮಂಗಳ, ಉಷಾ ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಗೊಂದಿ ಸಾಧಕ ಆಶ್ರಮದ ಶ್ರೀಗಳು ನಿಧನ

ಶ್ರೀ ನಾಮದೇವಾನಂದ ಭಾರತಿ ಸ್ವಾಮೀಜಿ
    ಭದ್ರಾವತಿ, ಏ. ೧೧: ತಾಲೂಕಿನ ಗೊಂದಿ ಸಾಧಕ ಆಶ್ರಮದ ಶ್ರೀ ನಾಮದೇವಾನಂದ ಭಾರತಿ ಸ್ವಾಮೀಜಿ(೭೪) ಭಾನುವಾರ ಬೆಳಿಗ್ಗೆ ನಿಧನ ಹೊಂದಿದರು.
   ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ ಸ್ವಾಮೀಜಿಯವರು ಅನಾರೋಗ್ಯಕ್ಕೆ ಒಳಗಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿದಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.  ಸ್ವಾಮೀಜಿಯವರ ಪಾರ್ಥಿವ ಶರೀರವನ್ನು ಮಧ್ಯಾಹ್ನ ಗೊಂದಿ ಸಾಧಕ ಆಶ್ರಮಕ್ಕೆ ತರಲಾಯಿತು.
   ೧೯೮೮ರಲ್ಲಿ ಶಿವಮೊಗ್ಗ ಚಿಕ್ಕದಾಳು ಸಿದ್ದಾರೂಢ ಆಶ್ರಮದ ಶ್ರೀ ಬಸವರಾಜ ದೇಶಿಕೇಂದ್ರ ಸ್ವಾಮೀಜಿಯವರಿಂದ ದೀಕ್ಷೆ ಪಡೆದುಕೊಂಡಿದ್ದರು. ಪಂಡರಿ ಸಂಪ್ರದಾಯ ರೂಢಿಸಿಕೊಂಡಿದ್ದ ಶ್ರೀಗಳು ನಂತರ ತಾಲೂಕಿನ ಗೊಂದಿ ಗ್ರಾಮಕ್ಕೆ ಆಗಮಿಸಿ ಸಾಧಕ ಆಶ್ರಮ ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದರು.  ಶ್ರೀಗಳು ಹಿರಿಯ ಆಧ್ಯಾತ್ಮಿಕ ಮಾರ್ಗದರ್ಶಕರು, ಚಿಂತಕರು, ಧ್ಯಾನ್ಯಾಸಕ್ತರಾಗಿದ್ದರು. ತಮ್ಮದೇ ಆದ ಭಕ್ತರ ವೃಂದವನ್ನು ಹೊಂದಿದ್ದರು.
    ಆಶ್ರಮದ ಪೀಠಾಧ್ಯಕ್ಷರಾದ ನಂತರ ಹಲವಾರು ಸಾಮಾಜಿಕ ಹಾಗು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗಮನ ಸೆಳೆದಿದ್ದರು. ಶ್ರೀಗಳ ನಿಧನಕ್ಕೆ ವಿವಿಧ ಮಠಾಧೀಶರು, ಗಣ್ಯರು, ಜನಪ್ರತಿನಿಧಿಗಳು ಸಂತಾಪ ಸೂಚಿಸಿದ್ದಾರೆ.