ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮಾಹಿತಿ
![](https://blogger.googleusercontent.com/img/a/AVvXsEhQ_jiO5EqurudFdRcAwTgcgUEtE8WMTM5KddybOlAhwzu0WBrWh3gfthjXUnV1ClEpTULFHDqkl0YudMuONh3ot5Sn6k16NtkwpEyL_-z7IDDKuNEgJAfs751oQ82LIvH7LPEfM-toPI59E4lJexKslhm4hcheFg-r4VN9wZeX2dTXNsEHMr1eg7NKMw=w400-h297-rw)
ಭದ್ರಾವತಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಶಿಕ್ಷಣ ಇಲಾಖೆಯ ಪ್ರಸಕ್ತ ಶೈಕ್ಷಣಿಕ ಸಾಲಿನ ಮಾಗದರ್ಶಿ ಬಿಡುಗಡೆಗೊಳಿಸಿದರು.
ಭದ್ರಾವತಿ, ಮೇ. ೨೭ : ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಈ ಬಾರಿ ಪ್ರಸಕ್ತ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ ಮೇ.೩೧ರಂದು ಹಬ್ಬದ ರೀತಿಯಲ್ಲಿ ಆಚರಿಸಲು ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಹೇಳಿದರು.
ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಣ ಇಲಾಖೆಯ ಪ್ರಸಕ್ತ ಶೈಕ್ಷಣಿಕ ಸಾಲಿನ ಮಾಗದರ್ಶಿ ಬಿಡುಗಡೆಗೊಳಿಸಿ ಮಾತನಾಡಿದರು. ಮೇ.೨೯ ಮತ್ತು ೩೦ ಎರಡು ದಿನ ಶಾಲಾ ಕೊಠಡಿ, ಆವರಣದ ಪರಿಸರ ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳ ವ್ಯವಸ್ಥೆ ಕೈಗೊಳ್ಳುವುದು ಹಾಗು ಮಕ್ಕಳಿಗೆ ಪಠ್ಯ ಪುಸ್ತಕ, ಸಮವಸ್ತ್ರ ಸೇರಿದಂತೆ ಸರ್ಕಾರದ ಉಚಿತ ಸೌಲಭ್ಯಗಳ ವಿತರಣೆ ನಡೆಯಲಿದೆ ಎಂದರು.
ಮೇ.೩೧ರಂದು ಪ್ರಾರಂಭೋತ್ಸವ ನಡೆಯಲಿದ್ದು, ಆಯಾ ಶಾಲೆಗಳ ಶಾಲಾಭಿವೃದ್ಧಿ ಸಮಿತಿ ವತಿಯಿಂದ ಮಕ್ಕಳನ್ನು ಆಕರ್ಷಿಸಲು ತಳಿರು ತೋರಣಗಳಿಂದ ಅಲಂಕರಿಸಿ ಹಬ್ಬದ ರೀತಿಯ ವಾತಾವರಣ ರೂಪಿಸಲಾಗುವುದು. ಈಗಾಗಲೇ ಪೋಷಕರು, ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಕರ ಪೂರ್ವಭಾವಿ ಸಭೆ ನಡೆಸಲಾಗಿದೆ. ಅಂದು ನಗರ ಭಾಗದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಬೆಳಿಗ್ಗೆ ೧೦.೩೦ಕ್ಕೆ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಆ.೩, ೨೦೨೨ರ ಮಾಹಿತಿಯಂತೆ ೧೯,೧೧೫ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಗ್ರಾಮೀಣ ಭಾಗದಲ್ಲಿ ೯೭ ಕಿರಿಯ ಪ್ರಾಥಮಿಕ, ೧೧೨ ಹಿರಿಯ ಪ್ರಾಥಮಿಕ, ೧೬ ಪ್ರೌಢ ಶಾಲೆಗಳು, ಒಟ್ಟು ೨೨೫ ಹಾಗು ನಗರ ಭಾಗದಲ್ಲಿ ೧೮ ಕಿರಿಯ ಪ್ರಾಥಮಿಕ, ೩೬ ಹಿರಿಯ ಪ್ರಾಥಮಿಕ ಮತ್ತು ೮ ಪ್ರೌಢಶಾಲೆಗಳು, ಒಟ್ಟು ೬೨ ಸೇರಿದಂತೆ ತಾಲೂಕಿನಲ್ಲಿ ೨೮೭ ಸರ್ಕಾರಿ ಶಾಲೆಗಳಿವೆ. ೫೬ ಪ್ರಾಥಮಿಕ ಹಾಗು ೧೬ ಪ್ರೌಢಶಾಲೆ ಅತಿಥಿ ಶಿಕ್ಷಕರನ್ನು ನೇಮಕಗೊಳಿಸಲಾಗಿದೆ. ತಾಲೂಕಿನಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಒಟ್ಟು ೧೦೬೭ ಹುದ್ದೆಗಳಿದ್ದು, ಈ ಪೈಕಿ ೩೦ ಮುಖ್ಯ ಶಿಕ್ಷಕರು, ೧೩೧ ಸಹಾಯಕ ಶಿಕ್ಷಕರು ಹಾಗು ೧೧ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು ಸೇರಿದಂತೆ ಒಟ್ಟು ೧೭೨ ಹುದ್ದೆಗಳು ಖಾಲಿ ಉಳಿದಿವೆ. ಇದೆ ರೀತಿ ಪ್ರೌಢಶಾಲಾ ವಿಭಾಗದಲ್ಲಿ ಒಟ್ಟು ೨೫೭ ಹುದ್ದೆಗಳಿದ್ದು, ಈ ಪೈಕಿ ೨೨೭ ಹುದ್ದೆಗಳು ಭರ್ತಿಯಾಗಿ ೩೦ ಹುದ್ದೆಗಳು ಖಾಲಿ ಉಳಿದಿವೆ ಎಂದರು.
ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಮಕ್ಕಳ ಸಂಖ್ಯೆ ಹೆಚ್ಚಿಸಲು ಆಯಾ ಶಾಲೆಗಳ ವ್ಯಾಪ್ತಿಯಲ್ಲಿ ಇಲಾಖೆಯ ಸಿಬ್ಬಂದಿಗಳು ಪೋಷಕರನ್ನು ಬಳಸಿಕೊಂಡು ಶಾಲಾ ದಾಖಲಾತಿ ಅಂದೋಲನ ಕೈಗೊಳ್ಳಲಾಗುತ್ತಿದೆ. ಅಲ್ಲದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಈ ಬಾರಿ ಹೆಚ್ಚಿನ ಗಮನ ಹರಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಭು, ಶಿಕ್ಷಣ ಸಂಯೋಜಕ ರವಿಕುಮಾರ್, ಸಿಆರ್‌ಪಿ ಸಿ. ಚನ್ನಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.