ಭದ್ರಾವತಿ: ಹಾಡುಹಗಲೇ ಮನೆಯ ಬೀಗ ಮುರಿದು ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಹಾಗು ನಗದು ಕಳ್ಳತನ ಮಾಡಿರುವ ಘಟನೆ ನಗರದ ಬಿ.ಎಚ್ ರಸ್ತೆ, ಜೇಡಿಕಟ್ಟೆಯಲ್ಲಿ ನಡೆದಿದೆ.
ಜೇಡಿಕಟ್ಟೆ ವೇಬ್ರಿಡ್ಜ್ ಜಂಡಾಕಟ್ಟೆ ಸಮೀಪದ ಪೆಟ್ರೋಲ್ ಟ್ಯಾಂಕರ್ ಚಾಲಕ ತಾಜುದ್ದೀನ್ ಎಂಬುವರ ಮನೆಯ ಬಾಗಿಲಿನ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ತಾಜುದ್ದೀನ್ ಕೆಲಸದ ನಿಮಿತ್ತ ಹೊರಹೋಗಿದ್ದು, ಉಳಿದಂತೆ ಇವರ ಪುತ್ರಿ ಶಾಲೆಗೆ ಹೋಗಿದ್ದು, ಮನೆಯ ಒಡತಿ ಅಮೀನಾ ಬುಧವಾರ ಮಧ್ಯಾಹ್ನ ೧೨.೩೦ರ ಸಮಯದಲ್ಲಿ ಮನೆಗೆ ಬೀಗ ಹಾಕಿಕೊಂಡು ಪೇಟೆಗೆ ಹೋಗಿದ್ದರು. ಸಂಜೆ ಮನೆಗೆ ವಾಪಸ್ ಬಂದಾಗ ಗೇಟ್‌ಗೆ ಹಾಕಿದ್ದ ಬೀಗ ಹಾಗೇ ಇದೆ. ಒಳ ಪ್ರವೇಶಿಸಿದಾಗ ಮುಂಬಾಗಿಲ ಬೀಗವನ್ನು ಒಡೆದು ಹಾಕಿ ಕಳ್ಳತನ ಮಾಡಿರುವುದು ಕಂಡು ಬಂದಿದೆ.
ಸುಮಾರು ೫೪ ಗ್ರಾಂ ತೂಕದ ನಕ್ಲೇಸ್, ಲಾಂಗ್ ಚೈನ್, ಜುಮ್ಕಿ ಮತ್ತು ಕಿವಿ ಓಲೆ ಸೇರಿದಂತೆ ಚಿನ್ನದ ಆಭರಣಗಳು ಮತ್ತು ಸುಮಾರು ೮೦ ಗ್ರಾಂ. ತೂಕದ ಬೆಳ್ಳಿಯ ಆಭರಣಗಳು ಹಾಗೂ ೮೦ ಸಾವಿರ ನಗದು ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದೆ.
ಸ್ಥಳಕ್ಕೆ ಶ್ವಾನದಳ ಹಾಗು ಬೆರಚ್ಚು ತಜ್ಞರು ತೆರಳಿ ತಪಾಸಣೆ ನಡೆಸಿದ್ದು, ನಗರದ ವೃತ್ತ ನಿರೀಕ್ಷಕ ಶ್ರೀಶೈಲಕುಮಾರ್ ಮತ್ತು ನ್ಯೂಟೌನ್ ಠಾಣೆ ಉಪ ನಿರೀಕ್ಷಕ ರಮೇಶ್ ಪರಿಶೀಲನೆ ನಡೆಸಿದರು. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.