ದ್ವಿಚಕ್ರ ವಾಹನದಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಕರೆದೊಯ್ಯುವ ಸಂಬಂಧ ಭದ್ರಾವತಿ ನ್ಯೂಟೌನ್ ಸೆಂಟ್ ಚಾರ್ಲ್ಸ್ ಕಿಂಡರ್ ಗಾರ್ಡನ್ ಶಾಲೆಯಲ್ಲಿ ಶಾಲೆಯ ಶಿಕ್ಷಕರು ಮತ್ತು ಮಕ್ಕಳಿಗೆ ಠಾಣೆ ಉಪ ನಿರೀಕ್ಷಕಿ ಶಾಂತಲ ಜಾಗೃತಿ ಮೂಡಿಸಿದರು.
ಭದ್ರಾವತಿ : ಇತ್ತೀಚೆಗೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಅಪಘಾತದಲ್ಲಿ ತೀವ್ರ ಗಾಯಗೊಂಡು ಸಾವನ್ನಪ್ಪಿತ್ತಿರುವವರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಅದರಲ್ಲೂ ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಅಪಘಾತಗಳು ಸಂಭವಿಸಿ ಹೆಚ್ಚಾಗಿ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಇದನ್ನು ತಪ್ಪಿಸಲು ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಸಂಚಾರಿ ಠಾಣೆ ಉಪ ನಿರೀಕ್ಷಕಿ ಶಾಂತಲ ಮನವಿ ಮಾಡಿದ್ದಾರೆ.
ಅವರು ನಗರದ ನ್ಯೂಟೌನ್ ಸೆಂಟ್ ಚಾರ್ಲ್ಸ್ ಕಿಂಡರ್ ಗಾರ್ಡನ್ ಶಾಲೆಯಲ್ಲಿ ಈ ಕುರಿತು ಶಾಲೆಯ ಶಿಕ್ಷಕರು ಮತ್ತು ಮಕ್ಕಳಿಗೆ ಜಾಗೃತಿ ಮೂಡಿಸಿದರು. ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಬಳಸುವಂತೆ ಕಾನೂನು ರೂಪಿಸಲಾಗಿದೆ. ಈ ನಡುವೆ ಮಕ್ಕಳ ಸುರಕ್ಷತೆ ಸಹ ಬಹಳ ಮುಖ್ಯವಾಗಿದ್ದು, ೯ ತಿಂಗಳಿನಿಂದ ೪ ವರ್ಷದೊಳಗಿನ ಮಕ್ಕಳಿಗೂ ಸಹ ಕಡ್ಡಾಯವಾಗಿ ಹೆಲ್ಮೆಟ್ ಬಳಸಬೇಕು. ಜೊತೆಗೆ ದೊಡ್ಡವರು ಮಕ್ಕಳನ್ನು ಸುತ್ತಿಕೊಂಡು ಕಟ್ಟಿಕೊಳ್ಳುವ ಸುರಕ್ಷತಾ ವಿಧಾನ (ಸೇಫ್ಟಿ ಹಾರ್ನೆಸ್) ಬಳಸಬೇಕು. ಇದರಿಂದ ಅಪಘಾತ ಪ್ರಕರಣಗಳಲ್ಲಿ ಮಕ್ಕಳು ಸಾವನ್ನಪ್ಪುವುದು ಕಡಿಮೆಯಾಗಲಿದೆ ಎಂದರು.
ದ್ವಿಚಕ್ರ ವಾಹನದಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಕರೆದೊಯ್ಯುವ ಸಂಬಂಧ ಇಲಾಖೆಗೆ ಮಾರ್ಗದರ್ಶಿ ಸೂಚಿ ಬಂದಿದ್ದು, ಅದರಂತೆ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಈ ಮಾರ್ಗಸೂಚಿಯಂತೆ ನಡೆದುಕೊಳ್ಳುವ ಮೂಲಕ ಅಪಘಾತ ಪ್ರಕರಣಗಳನ್ನು ನಿಯಂತ್ರಿಸುವ ಕಾರ್ಯದಲ್ಲಿ ಕೈಜೋಡಿಸುವಂತೆ ಕೋರಿದ್ದಾರೆ.
No comments:
Post a Comment