Sunday, July 17, 2022

ಭದ್ರಾ ನದಿಯಲ್ಲಿ ತಗ್ಗಿದ್ದ ಪ್ರವಾಹ : ೩ ದಿನಗಳಿಂದ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ಥರು

ವಿವಿಧ ಸೇವಾ ಕಾರ್ಯಗಳ ಮೂಲಕ ಮಾನವೀಯತೆ ಮೆರೆದ ರಾಜಕೀಯ ಪಕ್ಷಗಳು, ವಿವಿಧ ಸಂಘ-ಸಂಸ್ಥೆಗಳು, ದಾನಿಗಳು

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ವತಿಯಿಂದ ಸುಮಾರು ೩೫೦ ನೆರೆ ಸಂತ್ರಸ್ಥರಿಗೆ ಒಂದು ವಾರದವರೆಗೆ ಉಚಿತವಾಗಿ ಮಧ್ಯಾಹ್ನದ ಊಟದ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಡಿ. ಪ್ರಭಾಕರ ಬೀರಯ್ಯ ಸೇವಾ ಕಾರ್ಯಕ್ಕೆ ಚಾಲನೆ ನೀಡಿದರು.
    ಭದ್ರಾವತಿ, ಜು. ೧೭ : ನಗರದ ಹೃದಯ ಭಾಗದಲ್ಲಿ ಕಳೆದ ೨ ದಿನಗಳಿಂದ ಭದ್ರಾ ನದಿಯಿಂದ ಉಂಟಾಗಿರುವ ಪ್ರವಾಹ ಭಾನವಾರ ಸ್ವಲ್ಪಮಟ್ಟಿಗೆ ತಗ್ಗಿದ್ದು, ಪ್ರವಾಹ ಸಂಪೂರ್ಣವಾಗಿ ಉಳಿಮುಖವಾಗುವವರೆಗೂ ಸಂತ್ರಸ್ಥರು ಕಾಳಜಿ ಕೇಂದ್ರಗಳಲ್ಲಿಯೇ ಉಳಿದು ಕೊಳ್ಳುವಂತಾಗಿದೆ. ಈ ನಡುವೆ ವಿವಿಧ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು, ದಾನಿಗಳು ಸಂತ್ರಸ್ಥರ ನೆರವಿಗೆ ಮುಂದಾಗುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
      ತಾಲೂಕಿನಲ್ಲಿ ಒಟ್ಟು ೪ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಒಟ್ಟು ೬೪೪ ಮಂದಿ ಆಶ್ರಯ ಪಡೆದುಕೊಂಡಿದ್ದಾರೆ. ೪ ಕಾಳಜಿ ಕೇಂದ್ರಗಳ ಪೈಕಿ ೩ ನಗರಸಭೆ ವ್ಯಾಪ್ತಿಯಲ್ಲಿದ್ದು, ೫೩೪ ಮಂದಿ ಆಶ್ರಯ ಪಡೆದುಕೊಂಡಿದ್ದಾರೆ. ನಗರಸಭೆ, ತಾಲೂಕು ಪಂಚಾಯಿತಿ ಮತ್ತು ತಾಲೂಕು ಆಡಳಿತದಿಂದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
      ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ವತಿಯಿಂದ ಉಚಿತವಾಗಿ ಮಧ್ಯಾಹ್ನದ ಊಟದ ವ್ಯವಸ್ಥೆ:
      ಹಲವಾರು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ವತಿಯಿಂದ ಸುಮಾರು ೩೫೦ ನೆರೆ ಸಂತ್ರಸ್ಥರಿಗೆ ಒಂದು ವಾರದವರೆಗೆ ಉಚಿತವಾಗಿ ಮಧ್ಯಾಹ್ನದ ಊಟದ ವ್ಯವಸ್ಥೆ ಕೈಗೊಳ್ಳಲಾಗಿದೆ.
      ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ ಭಾನುವಾರ ಸಂತ್ರಸ್ಥರಿಗೆ ಊಟ ಬಡಿಸುವ ಮೂಲಕ ಸೇವಾ ಕಾರ್ಯಕ್ಕೆ ಚಾಲನೆ ನೀಡಿದರು.
      ನಗರಸಭೆ ಪೌರಾಯುಕ್ತ ಮನುಕುಮಾರ್, ಪರಿಸರ ಅಭಿಯಂತರ ಪ್ರಭಾಕರ್, ಕಂದಾಯಾಧಿಕಾರಿ ಎಂ.ಎಸ್ ರಾಜ್‌ಕುಮಾರ್ ಸೇರಿದಂತೆ ನಗರಸಭೆ ಸಿಬ್ಬಂದಿಗಳು, ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್‌ನ ಪರಮೇಶ್ವರಪ್ಪ ಸೇರಿದಂತೆ ಸೇವಾಕರ್ತರು ಉಪಸ್ಥಿತರಿದ್ದರು.  


ಬಿಜೆಪಿ ಪಕ್ಷದ ವತಿಯಿಂದ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿರುವ ನೆರೆ ಸಂತ್ರಸ್ಥರಿಗೆ ಉಚಿತವಾಗಿ ಮಲಗುವ ಹೊದಿಕೆ, ಬಿಸ್ಕೆಟ್, ಬ್ರೆಡ್ ಮತ್ತು ಹಣ್ಣು ವಿತರಿಸಲಾಯಿತು.  
      ಬಿಜೆಪಿ ಪಕ್ಷದ ವತಿಯಿಂದ ಹೊದಿಕೆ, ಬಿಸ್ಕೆಟ್, ಬ್ರೆಡ್, ಹಣ್ಣು ವಿತರಣೆ:
      ಬಿಜೆಪಿ ಪಕ್ಷದ ವತಿಯಿಂದ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿರುವ ನೆರೆ ಸಂತ್ರಸ್ಥರಿಗೆ ಉಚಿತವಾಗಿ ಮಲಗುವ ಹೊದಿಕೆ, ಬಿಸ್ಕೆಟ್, ಬ್ರೆಡ್ ಮತ್ತು ಹಣ್ಣು ವಿತರಿಸಲಾಯಿತು.  
      ಪಕ್ಷದ ಪ್ರಮುಖರಾದ ಎಸ್. ಕುಮಾರ್, ವಿ. ಕದಿರೇಶ್, ಎಂ. ಪ್ರಭಾಕರ್, ಚನ್ನೇಶ್, ಕೆ. ಮಂಜುನಾಥ್, ಕರಿಗೌಡ್ರು, ವಿಜಯ್, ಮಂಜುನಾಥ್, ಸತೀಶ್, ರಾಮನಾಥ್ ಬರ್ಗೆ, ರಾಘವೇಂದ್ರ, ಮಂಜುಳಾ, ಕೃಷ್ಣಮೂರ್ತಿ, ಉಮಾ, ಲತಾ, ಪ್ರಭಾಕರ್, ದೇವು, ಅಪ್ಪು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಜೆಡಿಎಸ್ ಪಕ್ಷದ ವತಿಯಿಂದ ಉಚಿತವಾಗಿ ಸ್ವೆಟರ್ ಸೇರಿದಂತೆ ಬೆಚ್ಚನೆ ಹೊದಿಕೆಗಳನ್ನು ವಿತರಿಸಲಾಯಿತು.
            ಜೆಡಿಎಸ್ ಪಕ್ಷದ ವತಿಯಿಂದ ಸ್ಟೆಟ್ಟರ್ ಸೇರಿದಂತೆ ಬೆಚ್ಚನೆ ಹೊದಿಕೆಗಳ ವಿತರಣೆ:
      ಕಾಳಜಿ ಕೇಂದ್ರಗಳಲ್ಲಿ ಉಳಿದುಕೊಂಡಿರುವ ನೆರೆ ಸಂತ್ರಸ್ಥರಿಗೆ ಜೆಡಿಎಸ್ ಪಕ್ಷದ ವತಿಯಿಂದ ಉಚಿತವಾಗಿ ಸ್ವೆಟರ್ ಸೇರಿದಂತೆ ಬೆಚ್ಚನೆ ಹೊದಿಕೆಗಳನ್ನು ವಿತರಿಸಲಾಯಿತು.
      ಸಂತ್ರಸ್ಥರಿಗೆ ಪಕ್ಷದ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡವುದಾಗಿ ಭರವಸೆ ನೀಡಲಾಯಿತು. ಪಕ್ಷದ ಪ್ರಮುಖರಾದ ಶಾರದ ಅಪ್ಪಾಜಿ, ಆರ್. ಕರುಣಾಮೂರ್ತಿ, ಡಿ.ಟಿ ಶ್ರೀಧರ್, ಮಧುಕುಮಾರ್, ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ತುಂಬಿ ಹರಿಯುತ್ತಿರುವ ಭದ್ರೆಗೆ ಬಾಗಿನ ಸಮರ್ಪಣೆ

ಕಳೆದ ೨ ದಿನಗಳಿಂದ ಭದ್ರಾವತಿ ನಗರದ ಹೃದಯ ಭಾಗದಲ್ಲಿ ಭದ್ರಾ ನದಿಯಿಂದ ಉಂಟಾಗಿದ್ದ  ಪ್ರವಾಹ ಸ್ವಲ್ಪಮಟ್ಟಿಗೆ ತಗ್ಗಿದ್ದು, ಈ ನಡುವೆ ಭಾನುವಾರ ಪತಂಜಲಿ ಯೋಗ ಸಂಸ್ಥೆ ಹಾಗು ಪದ್ಮಾಂಭ ಸ್ವಯಂ ಸೇವಾ ಸಂಸ್ಥೆಯ ಮಹಿಳೆಯರಿಂದ ಬಾಗಿನ ಸಮರ್ಪಿಸಲಾಯಿತು.
ಭದ್ರಾವತಿ, ಜು. ೧೭: ಕಳೆದ ೨ ದಿನಗಳಿಂದ ನಗರದ ಹೃದಯ ಭಾಗದಲ್ಲಿ ಭದ್ರಾ ನದಿಯಿಂದ ಉಂಟಾಗಿದ್ದ  ಪ್ರವಾಹ ಸ್ವಲ್ಪಮಟ್ಟಿಗೆ ತಗ್ಗಿದ್ದು, ಈ ನಡುವೆ ಭಾನುವಾರ ಪತಂಜಲಿ ಯೋಗ ಸಂಸ್ಥೆ ಹಾಗು ಪದ್ಮಾಂಭ ಸ್ವಯಂ ಸೇವಾ ಸಂಸ್ಥೆಯ ಮಹಿಳೆಯರಿಂದ ಬಾಗಿನ ಸಮರ್ಪಿಸಲಾಯಿತು.
      ಧಾರ್ಮಿಕ ಆಚರಣೆಗಳನ್ನು ನೆರವೇರಿಸಿ ನಂತರ ಬಾಗಿನ ಸಮರ್ಪಿಸುವ ಮೂಲಕ ರೈತರು, ಕಾರ್ಮಿಕರು ಸೇರಿದಂತೆ ಎಲ್ಲರಿಗೂ ಭದ್ರೆ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸಲಾಯಿತು.


      ಪದ್ಮಾಂಭ ಸ್ವಯಂ ಸೇವಾ ಸಂಸ್ಥೆ ಅಧ್ಯಕ್ಷೆ ಅನ್ನಪೂರ್ಣ ಸತೀಶ್, ಗೌರಮ್ಮ, ಸರ್ವೇಶ್ವರಿ, ಕೋಕಿಲಾ, ವಾಣಿಶ್ರೀ, ಶೋಭಾ, ಅನಿತಾ, ಉಷಾ, ಶೋಭಾ, ಪ್ರತಿಭಾ, ಪ್ರೀತಿ, ಸುಶೀಲಾ, ಅಶ್ವಿನಿ, ಮೋಹನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕುರುಬರ ಸಂಘದ ಚುನಾವಣೆ ಬಿರುಸಿನ ಮತದಾನ : ಎರಡು ಬಣಗಳ ನಡುವೆ ತೀವ್ರ ಪೈಪೋಟಿ

ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಶ್ರೀ ಕನಕ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ತಾಲೂಕು ಕುರುಬರ ಸಂಘದ ಚುನಾವಣೆ ನಡೆಯಿತು. ಎರಡು ಬಣಗಳ ನಡುವಿನ ಅಭ್ಯರ್ಥಿಗಳು ಮತಯಾಚನೆ ನಡೆಸಿದರು.
    ಭದ್ರಾವತಿ, ಜು. ೧೭: ತಾಲೂಕು ಕುರುಬರ ಸಂಘದ ಚುನಾವಣೆ ಭಾನುವಾರ ಹಳೇನಗರದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಶ್ರೀ ಕನಕ ವಿದ್ಯಾಸಂಸ್ಥೆ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.
       ಒಟ್ಟು ೧೫ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ೨,೧೦೦ಕ್ಕೂ ಹೆಚ್ಚು ಮಂದಿ ಮತದಾನದ ಹಕ್ಕು ಹೊಂದಿದ್ದರು. ಬೆಳಿಗ್ಗೆ ೯ ಗಂಟೆಯಿಂದ ಮತದಾನ ಆರಂಭಗೊಂಡಿತು. ಮಳೆ ಇರದ ಕಾರಣ ಮಧ್ಯಾಹ್ನ ೧೨ ಗಂಟೆವರೆಗೆ ಬಿರುಸಿನ ಮತದಾನ ನಡೆಯಿತು.
      ಹಾಲಿ ಅಧ್ಯಕ್ಷ ಬಿ.ಎಂ ಸಂತೋಷ್ ನೇತೃತ್ವದ ತಂಡ ಪುನಃ ಚುಕ್ಕಾಣಿ ಹಿಡಿಯಲು ೧೨ ಜನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಮಾಲಿ ಸಂಘದ ಅಧ್ಯಕ್ಷ, ಬಿಜೆಪಿ ಮುಖಂಡ ಬಿ.ಎಸ್ ನಾರಾಯಣಪ್ಪ ನೇತೃತ್ವದ ತಂಡ ಈ ಬಾರಿ ಚುಕ್ಕಾಣಿ ಹಿಡಿಯಲು  ೧೫ ಜನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ತೀವ್ರ ಪೈಪೋಟಿಗೆ ಮುಂದಾಗಿರುವುದು ಕಂಡು ಬಂದಿತು.


      ಮತದಾನ ಕೇಂದ್ರದ ಬಳಿ ಎರಡು ತಂಡಗಳ ಬೆಂಬಲಿಗರಿಂದ ಭರ್ಜರಿಯಾಗಿ ಮತಯಾಚನೆ ನಡೆಯಿತು. ಮತದಾನ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.