Saturday, October 15, 2022

ವರ್ಷಪೂರ್ತಿ ಕ್ರಿಕೆಟ್ ತರಬೇತಿಗೆ ಅ.೧೬ರಂದು ಚಾಲನೆ

    ಭದ್ರಾವತಿ, ಅ. ೧೫ : ದಿ ವಾಲ್ ಕ್ರಿಕೆಟ್ ಕ್ಲಬ್ ವತಿಯಿಂದ ನಗರದ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಪುಲ್ ಟೈಮ್ ಕ್ರಿಕೆಟ್ ಕೋಚಿಂಗ್ ಕ್ಯಾಂಪ್ ಹಮ್ಮಿಕೊಳ್ಳಲಾಗಿದೆ.
    ೮ ರಿಂದ ೨೫ ವರ್ಷದೊಳಗಿನ ಬಾಲಕ-ಬಾಲಕಿಯರು ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. ವರ್ಷಪೂರ್ತಿ ತರಬೇತಿ ನಡೆಯಲಿದ್ದು, ವೃತ್ತಿ ಪರಿಣಿತರಿಂದ ತರಬೇತಿ ನಡೆಯಲಿದೆ. ಮಹಿಳಾ ತರಬೇತಿದಾರರು ಸಹ ಶಿಬಿರದಲ್ಲಿದ್ದು, ಬೆಳವಣಿಗೆಗೆ ಪೂರಕವಾದ ಎಲ್ಲಾ ರೀತಿಯ ತರಬೇತಿ ಸಹ ನಡೆಯಲಿದೆ.
    ಅ.೧೬ರಿಂದ ಆರಂಭ :
    ಶಿಬಿರವನ್ನು ಅ.೧೬ರಂದು ಬಿ.ಎಲ್ ವೆಂಕಟೇಶ್ ಮತ್ತು ಕೆ.ಎಲ್ ಪ್ರಭು ಉದ್ಘಾಟಿಸಲಿದ್ದು, ವಿಐಎಸ್‌ಎಲ್ ಕ್ರೀಡಾಂಗಣದ ವ್ಯವಸ್ಥಾಪಕ ಮೋಹನ್ ರಾಜ್ ಶೆಟ್ಟಿ, ಕೆಎಸ್‌ಸಿಎ ಶಿವಮೊಗ್ಗ ವಲಯ ಸಂಚಾಲಕ ಡಿ.ಎಸ್ ಅರುಣ್, ವಲಯಾಧ್ಯಕ್ಷ ರಾಜೇಂದ್ರ ಕಾಮತ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಹೆಚ್ಚಿನ ಮಾಹಿತಿಗೆ ತರಬೇತಿದಾರರಾದ ಎಸ್. ಮುಬಾರಕ್, ಮೊ: ೯೯೦೦೨೬೩೫೨೪ ಅಥವಾ ಎಂ. ವಾಸು, ಮೊ: ೭೪೮೩೫೭೩೬೩೦ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಸೇತುವೆ ಕುಸಿದು ೧೫ ದಿನ ಕಳೆದರೂ ಗಮನಹರಿಸದ ಅಧಿಕಾರಿಗಳು

ದಾನವಾಡಿ, ಅರಕೆರೆ ಗ್ರಾಮಸ್ಥರ ಸಂಚಾರಕ್ಕೆ ತೊಂದರೆ

ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿ ದಾನವಾಡಿ ಗ್ರಾಮದ ಮೂಲಕ ಹಾದು ಹೋಗಿರುವ ಭದ್ರಾ ಬಲದಂಡೆ ನಾಲೆ ಸೇತುವೆ ಕಳೆದ ಸುಮಾರು ೧೫ ದಿನಗಳ ಹಿಂದೆ ಮಧ್ಯದಲ್ಲಿ ಕುಸಿದಿದ್ದು, ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಲಾಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.
    ಭದ್ರಾವತಿ, ಅ. ೧೫: ತಾಲೂಕಿನ ಹೊಳೆಹೊನ್ನೂರು ಹೋಬಳಿ ದಾನವಾಡಿ ಗ್ರಾಮದ ಮೂಲಕ ಹಾದು ಹೋಗಿರುವ ಭದ್ರಾ ಬಲದಂಡೆ ನಾಲೆ ಸೇತುವೆ ಕಳೆದ ಸುಮಾರು ೧೫ ದಿನಗಳ ಹಿಂದೆ ಮಧ್ಯದಲ್ಲಿ ಕುಸಿದಿದ್ದು, ಸಂಬಂಧಪಟ್ಟ ಇಲಾಖೆಯವರು ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಲಾಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.
    ಚನ್ನಗಿರಿ ಮತ್ತು ಭದ್ರಾವತಿ ಮಾರ್ಗಕ್ಕೆ ಸಂಪರ್ಕಗೊಂಡಿರುವ ಈ ಸೇತುವೆ ದಾನವಾಡಿ ಮತ್ತು ಅರಕೆರೆ ಗ್ರಾಮಸ್ಥರಿಗೆ ಹೆಚ್ಚಿನ ನೆರವಾಗಿದ್ದು, ಸೇತುವೆ ಕುಸಿದಿರುವ ಹಿನ್ನಲೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿದೆ.  ಸೇತುವೆ ಕುಸಿದಿರುವ ಮಾಹಿತಿ ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯತನದಿಂದ ವರ್ತಿಸುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ.


    ಸೇತುವೆ ಸಂಪೂರ್ಣವಾಗಿ ಕುಸಿದು ಅವಘಡಗಳು ಸಂಭವಿಸುವ ಮೊದಲು ಎಚ್ಚೆತ್ತುಕೊಂಡು ದುರಸ್ತಿ ಕಾರ್ಯ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅಲ್ಲದೆ  ದುರಸ್ತಿ ಕಾರ್ಯ ಕೈಗೊಳ್ಳುವವರೆಗೂ ಯಾವುದೇ ದುರ್ಘಟನೆಗಳು ನಡೆಯದಂತೆ ತಕ್ಷಣ ಮುಂಜಾಗ್ರತೆವಹಿಸುವಂತೆ ಮನವಿ ಮಾಡಿದ್ದಾರೆ.

ಅಪಘಾತ : ಸಯ್ಯದ್ ಇರ್ಫಾನ್ ಖಾದ್ರಿ ಮೃತ

 ಸಯ್ಯದ್ ಇರ್ಫಾನ್ ಖಾದ್ರಿ
    ಭದ್ರಾವತಿ, ಅ. ೧೫: ರಸ್ತೆ ಅಪಘಾತದಲ್ಲಿ ಹಳೇನಗರದ ಕೋಟೆ ಏರಿಯಾ ಖಾಜಿಮೊಹಲ್ಲಾ ನಿವಾಸಿ ಸಯ್ಯದ್ ಇರ್ಫಾನ್ ಖಾದ್ರಿ(೪೮) ಮೃತಪಟ್ಟಿದ್ದಾರೆ.
    ದ್ವಿಚಕ್ರ ವಾಹನದಲ್ಲಿ ಶಿವಮೊಗ್ಗ ನಗರಕ್ಕೆ ತೆರಳುತ್ತಿದ್ದಾಗ ಹರಿಗೆ ಬಳಿ ಅಪಘಾತ ಸಂಭವಿಸಿದ್ದು, ತೀವ್ರ ಗಾಯಗೊಂಡಿದ್ದ ಇವರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ನಿಧನಕ್ಕೆ ನಗರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.


ಭಾರತ್ ಜೋಡೋ ಯಾತ್ರೆಯಲ್ಲಿ ಎಂಪಿಎಂ, ವಿಐಎಸ್‌ಎಲ್ ಕಾರ್ಖಾನೆಗಳ ಅಭಿವೃದ್ಧಿಗೆ ಆಗ್ರಹ


ಕಳೆದ ಕೆಲವು ವರ್ಷಗಳಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿರುವ ಭದ್ರಾವತಿ ಎಂಪಿಎಂ ಕಾರ್ಖಾನೆ ಪುನಃ ಆರಂಭಿಸಬೇಕು. ವಿಐಎಸ್‌ಎಲ್ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಬೇಕೆಂದು ಬಳ್ಳಾರಿ ಬಿಷಪ್ ಹೌಸ್ ಮುಂಭಾಗದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕಥ್ರುಫಲಕಗಳನ್ನು ಪ್ರದರ್ಶಿಸಿ ಆಗ್ರಹಿಸಲಾಯಿತು.
    ಭದ್ರಾವತಿ, ಅ. ೧೫ : ಬಳ್ಳಾರಿಯಲ್ಲಿ ಒಂದೆಡೆ ರಾಹುಲ್‌ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದು, ಮತ್ತೊಂದೆಡೆ ಯಾತ್ರೆಯಲ್ಲಿ ಪಾಲ್ಗೊಂಡಿರುವ ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ಹಾಗು ಕೇಂದ್ರ ಉಕ್ಕು ಪ್ರಾಧಿಕಾರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಅಭಿವೃದ್ಧಿಪಡಿಸುವಂತೆ ಆಗ್ರಹಿಸಿದ್ದಾರೆ.
    ಕಳೆದ ಕೆಲವು ವರ್ಷಗಳಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿರುವ ಎಂಪಿಎಂ ಕಾರ್ಖಾನೆ ಪುನಃ ಆರಂಭಿಸಬೇಕು. ವಿಐಎಸ್‌ಎಲ್ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಬೇಕೆಂದು ಬಳ್ಳಾರಿ ಬಿಷಪ್ ಹೌಸ್ ಮುಂಭಾಗದಲ್ಲಿ ಫಲಕಗಳನ್ನು ಪ್ರದರ್ಶಿಸಿ ಆಗ್ರಹಿಸಲಾಯಿತು.
    ವಿಧಾನಪರಿಷತ್ ಮಾಜಿ ಸದಸ್ಯ ಐವಾನ್ ಡಿಸೋಜಾ,  ರಾಜ್ಯ ಯುವ ಕಾಂಗ್ರೆಸ್ ಸಮಿತಿ ವಕ್ತಾರ ಅಮೋಸ್, ಹಿಂದುಳಿದ ವರ್ಗದಗಳ ಘಟಕದ ನಗರ ಅಧ್ಯಕ್ಷ ಬಿ. ಗಂಗಾಧರ್, ಅಸಂಘಟಿತ ಗ್ರಾಮಾಂತರ ಘಟಕದ ಅಧ್ಯಕ್ಷ ಕೃಷ್ಣನಾಯ್ಕ, ದಲಿತ ಮುಖಂಡ ನರಸಿಂಹ ಮೂರ್ತಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸತೀಶ್, ಹಿಂದುಳಿದ ವರ್ಗಗಳ ಘಟಕದ ಪದಾಧಿಕಾರಿಗಳಾದ ಜಗದೀಶ್, ಹರ್ಷ, ಹರೀಶ್, ಸಂತೋಷ್, ಕುಪೇಂದ್ರ, .ಗಣೇಶ್ ಮುಂತಾದವರು ಉಪಸ್ಥಿತರಿದ್ದರು.