Tuesday, February 22, 2022

ಕುವೆಂಪು ವಿ.ವಿ ಭ್ರಷ್ಟಾಚಾರ ಕುರಿತು ಸಿಂಡಿಕೇಟ್ ಸದಸ್ಯರಿಂದ ರಾಜ್ಯಪಾಲರಿಗೆ ದೂರು

ಕುವೆಂಪು ವಿಶ್ವ ವಿದ್ಯಾನಿಲಯದ ಆಡಳಿತ ಮತ್ತು ಹಣಕಾಸು ಕಾರ್ಯಗಳ ನಿರ್ವಹಣೆ ಹಾಗು ಇನ್ನಿತರ ಭ್ರಷ್ಟಾಚಾರಗಳ ಕುರಿತು ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಂಗಳವಾರ ಸಚಿವ ಕೆ.ಎಸ್ ಈಶ್ವರಪ್ಪ ನೇತೃತ್ವದಲ್ಲಿ ಸಿಂಡಿಕೇಟ್ ಸದಸ್ಯರು ವಿಶ್ವ ವಿದ್ಯಾನಿಲಯದ ಕುಲಾಧಿಪತಿಗಳಾದ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.
    ಭದ್ರಾವತಿ, ಫೆ. ೨೨: ಕುವೆಂಪು ವಿಶ್ವ ವಿದ್ಯಾನಿಲಯದ ಆಡಳಿತ ಮತ್ತು ಹಣಕಾಸು ಕಾರ್ಯಗಳ ನಿರ್ವಹಣೆ ಹಾಗು ಇನ್ನಿತರ ಭ್ರಷ್ಟಾಚಾರಗಳ ಕುರಿತು ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಂಗಳವಾರ ಸಚಿವ ಕೆ.ಎಸ್ ಈಶ್ವರಪ್ಪ ನೇತೃತ್ವದಲ್ಲಿ ಸಿಂಡಿಕೇಟ್ ಸದಸ್ಯರು ವಿಶ್ವ ವಿದ್ಯಾನಿಲಯದ ಕುಲಾಧಿಪತಿಗಳಾದ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.
    ವಿಶ್ವ ವಿದ್ಯಾನಿಲಯದಲ್ಲಿ ಕಳೆದ ೨ ವರ್ಷಗಳ ಆಡಳಿತ ಮತ್ತು ಹಣಕಾಸು ಕಾರ್ಯಗಳ ನಿರ್ವಹಣೆಯಲ್ಲಿ ಸಾಕಷ್ಟು ಭ್ರಷ್ಟಾಚಾರಗಳು ನಡೆದಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಈ ಹಿನ್ನಲೆಯಲ್ಲಿ ದೂರ ಶಿಕ್ಷಣ ಪರಿಷತ್ ಪರೀಕ್ಷೆಗಳನ್ನು ನಡೆಸದೆ ಫಲಿತಾಂಶ ಪ್ರಕಟಿಸಿರುವ ಅಕ್ರಮದ ಬಗ್ಗೆ, ಅಧ್ಯಯನ ಕೇಂದ್ರಗಳಿಂದ ಕೋಟ್ಯಾಂತರ ರು. ಬಾಕಿ ಉಳಿಸಿಕೊಂಡು ವಿಶ್ವ ವಿದ್ಯಾನಿಲಯಕ್ಕೆ ನಷ್ಟ ಉಂಟು ಮಾಡಿರುವ ಅವ್ಯವಹಾರ ಕುರಿತು ಹಾಗು ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಮೇ. ೧೫, ೨೦೧೯ರಂದು(ಜೇಷ್ಠತೆ ಮತ್ತು ಬಡ್ತಿ ಸಂಬಂಧಿತ) ಮತ್ತು ಜ. ೨೧, ೨೦೨೧ರಂದು ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ ನಡಾವಳಿಗಳನ್ನು ಹಾಗು ಸಿಂಡಿಕೇಟ್ ನಿರ್ಣಯಗಳನ್ನು ಜಾರಿಯಾಗದಂತೆ ತಡೆದು ಅವುಗಳ ಉಲ್ಲಂಘನೆ ಮಾಡಿರುವ ಬಗ್ಗೆ ಮತ್ತು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಕುಲಪತಿಗಳ ಅವಧಿಯಲ್ಲಿನ ಆಡಳಿತ ಮತ್ತು ಹಣಕಾಸಿನ ಎಲ್ಲಾ ಕಾರ್ಯ ನಿರ್ವಹಣೆಗಳ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಲಾಗಿದೆ.
    ಜಿ. ಧರ್ಮಪ್ರಸಾದ್, ಬಳ್ಳೇಕೆರೆ ಸಂತೋಷ್, ಎಚ್.ಬಿ ರಮೇಶ್ ಬಾಬು, ಎಚ್. ರಾಮಲಿಂಗಪ್ಪ ಸೇರಿದಂತೆ ಇನ್ನಿತರ ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ, ಸಾಧಿಸುವ ಛಲ, ಮುಂದೆ ಬರಬೇಕೆಂಬ ಮನೋಭಾವ ಮುಖ್ಯ : ಸುರಜಿತ್ ಮಿಶ್ರಾ

ಭಾರತೀಯ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಸಿಎಸ್‌ಆರ್ ಅಡಿಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕೆಗೆ ಅಗತ್ಯವಿರುವ ಕಲಿಕಾ ಸಾಮಾಗ್ರಿಗಳನ್ನು  ವಿತರಿಸಲಾಯಿತು.
    ಭದ್ರಾವತಿ, ಫೆ. ೨೨: ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ, ಜೀವನದಲ್ಲಿ ಮುಂದೆ ಬರಬೇಕೆಂಬ ಮನೋಭಾವ ಮತ್ತು ಸಾಧಿಸುವ ಛಲ ಮುಖ್ಯವಾಗಿದೆ ಎಂದು ಭಾರತೀಯ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರಾ ಹೇಳಿದರು.
    ಅವರು ಕಾರ್ಖಾನೆ ವತಿಯಿಂದ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ (ಸಿಎಸ್‌ಆರ್) ಅಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕೆಗೆ ಅಗತ್ಯವಿರುವ ಸಾಮಾಗ್ರಿಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿದರು.
    ಸರ್ಕಾರಿ ಶಾಲೆಗಳಲ್ಲಿ ಓದಿರುವ ಬಹಳಷ್ಟು ವಿದ್ಯಾರ್ಥಿಗಳು ಜೀವನದಲ್ಲಿ ಮುಂದೆ ಬಂದಿದ್ದು, ಪ್ರಪಂಚದಾದ್ಯಂತ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಶಾಲೆಗಳಿಗೆ ಮೂಲ ಸೌಕರ್ಯಗಳಿಗಿಂತ ಕಲಿಕೆಯ ಆಸಕ್ತಿ, ಜೀವನದಲ್ಲಿ ಮುಂದೆ ಬರಬೇಕೆಂಬ ಮನೋಭಾವ ಮತ್ತು ಸಾಧಿಸುವ ಛಲ ಮುಖ್ಯವಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ನಡುವೆ ಸೈಲ್-ವಿಐಎಸ್‌ಎಲ್ ಸಾಮಾಜಿಕವಾಗಿ ಪ್ರಜ್ಞೆಯುಳ್ಳ ಕಾರ್ಪೊರೇಟ್ ಸಂಸ್ಥೆಯಾಗಿ ಸಾಮಾಜಿಕ ಅಭಿವೃದ್ದಿಗೆ ತನ್ನ ಸಾಮಾಜಿಕ ಬದ್ಧತೆಯನ್ನು ಪೂರೈಸಲು ಶ್ರಮಿಸುತ್ತಿದೆ ಎಂದರು.
    ಹುತ್ತಾಕಾಲೋನಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಜಿ.ಸಿ ಗೀತಾಂಜಲಿ ಮಾತನಾಡಿ, ಶಿಕ್ಷಣದಲ್ಲಿ ಬಡತನವಿಲ್ಲ. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಕಲಿತು ಮುಂದೆ ಬರಬೇಕೆಂಬ ತುಡಿತದಿಂದ ಶ್ರೀಮಂತರಾಗಬೇಕು. ಕಾರ್ಖಾನೆ ವತಿಯಿಂದ ನೀಡಲಾಗಿರುವ ಕಲಿಕಾ ಸಾಮಾಗ್ರಿಗಳನ್ನು ತಮ್ಮ ಜ್ಞಾನ ಮತ್ತು ಶೈಕ್ಷಣಿಕ ಅಡಿಪಾಯ ಹೆಚ್ಚಿಸಿಕೊಳ್ಳಲು ಸದುಪಯೋಗಪಡಿಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಸಹ ತಾವು ಆಯ್ಕೆ ಮಾಡಿಕೊಂಡಿರುವ ಯಾವುದೇ ಕ್ಷೇತ್ರದಲ್ಲಿ ಉನ್ನತ ಸ್ಥಾನ ಪಡೆದು ಸರ್.ಎಂ. ವಿಶ್ವೇಶ್ವರಯ್ಯ, ಡಾ. ಬಿ.ಆರ್. ಅಂಬೇಡ್ಕರ್, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸೇರಿದಂತೆ ಮಹಾನ್ ನಾಯಕರ ಆದರ್ಶ ಗುಣಗಳನ್ನು ಅಳವಡಿಸಿಕೊಂಡು ಭ್ರಷ್ಟಾಚಾರ ಮುಕ್ತರಾಗಿ ದೇಶದ ಜವಾಬ್ದಾರಿಯುತ ನಾಗರೀಕರಾಗಿ ಬೆಳೆಯಬೇಕೆಂದು ಆಶಿಸಿದರು.
    ಕಾರ್ಖಾನೆಯ ಸಹಾಯಕ ಪ್ರಬಂಧಕಿ (ಸಿಬ್ಬಂದಿ) ಕೆ.ಎಸ್. ಶೋಭಾ ಮಾತನಾಡಿ, ಸಿಎಸ್‌ಆರ್ ಅಡಿಯಲ್ಲಿ ಕೈಗೊಂಡಿರುವ ವಿವಿಧ ಚಟುವಟಿಕೆಗಳು ಮತ್ತು ಪ್ರಸಕ್ತ ಸಾಲಿನಲ್ಲಿ ಶಿಕ್ಷಣ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರಗಳಿಗೆ ಒತ್ತು ನೀಡಲಾಗಿರುವ ಚಟುವಟಿಕೆಗಳ ಕುರಿತು ಸಂಕ್ಷಿಪ್ತವಾಗಿ ತಿಳಿಸಿದರು.
    ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಕಾರ್ಖಾನೆವತಿಯಿಂದ ಸಿಎಸ್‌ಆರ್ ಅಡಿಯಲ್ಲಿ ನಗರದ ಎರಡು ಸರ್ಕಾರಿ ಶಾಲೆಗಳಿಗೆ ಗ್ಲೋಬ್ಸ್, ರೋಲಿಂಗ್ ಬ್ಲ್ಯಾಕ್ ಬೋರ್ಡ್‌ಗಳು ಮತ್ತು ೧೦೯ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್‌ಗಳು, ಬರವಣೆಗೆ ನೋಟ್ ಪುಸ್ತಕಗಳು ಸೇರಿದಂತೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಯಿತು.  
    ಕಾರ್ಖಾನೆ ವತಿಯಿಂದ ಸಿಎಸ್‌ಆರ್ ಅಡಿಯಲ್ಲಿ ವಿವಿಧ ಸಾಮಾಜಿಕ ಅಭಿವೃದ್ಧಿ ಚಟುವಟಿಕೆಗಳನ್ನು ನಗರ ಹಾಗು ಗ್ರಾಮಾಂತರ ಭಾಗಗಳಲ್ಲಿ ಕೈಗೊಳ್ಳಲಾಗುತ್ತಿದೆ. ಅದರಲ್ಲೂ ಗ್ರಾಮಾಂತರ ಭಾಗದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಗ್ರಾಮಗಳ ಅಭಿವೃದ್ಧಿ ಜೊತೆಗೆ ಶೈಕ್ಷಣಿಕ ಮೂಲಸೌಕರ್ಯಗಳನ್ನು ಸುಧಾರಿಸುವುದಕ್ಕೆ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬೆಂಬಲವನ್ನು ಒದಗಿಸುವುದಕ್ಕೆ ಒತ್ತು ನೀಡಲಾಗುತ್ತಿದೆ. ಅಲ್ಲದೆ  ಕ್ರೀಡಾ ಚಟುವಟಿಕೆಗಳು ಮತ್ತು ನಗರಾಡಳಿತ ವ್ಯಾಪ್ತಿಯಲ್ಲಿ ಮನರಂಜನಾ ಸೌಲಭ್ಯಗಳನ್ನು ಉತ್ತೇಜಿಸಲು ಕ್ರೀಡಾಂಗಣ, ಜಿಮ್ನಾಷಿಯಂ ಮತ್ತು ಉದ್ಯಾನವನಗಳಂತಹ ವಿವಿಧ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಹೆಚ್ಚಿನ ಗಮನ ನೀಡಲಾಗಿದೆ.  
     ಪ್ರಭಾರ ಮಹಾಪ್ರಬಂಧಕ(ಸಿಬ್ಬಂದಿ ಮತ್ತು ಆಡಳಿತ) ಪಿ.ಪಿ. ಚಕ್ರಬರ್ತಿ,  ಮಹಾಪ್ರಬಂಧಕ(ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್,  ಉಪ ಮಹಾಪ್ರಬಂಧಕಿ(ಸಿಬ್ಬಂದಿ) ವಿ. ಧನಲಕ್ಷ್ಮಿ, ಸಹಾಯಕ ಮಹಾಪ್ರಬಂಧಕ(ನಗರಾಡಳಿತ) ಉಮೇಶ್ ಮಧುಕರ್ ಉಕೆ ಮತ್ತು ಸಹಾಯಕ ಪ್ರಬಂಧಕ(ಹಣಕಾಸು) ಅಮುಲ್ ಸುರೇಖ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ದಿವ್ಯಶ್ರೀ, ದುರ್ಗಾಶ್ರೀ ಮತ್ತು ಆಶಾ ಸುಶ್ರಾವ್ಯ ಪ್ರಾರ್ಥಿಸಿದರು. ಸಹಾಯಕ ಶಿಕ್ಷಕಿಯರಾದ ಹೇಮಾಮಾಲಿನಿ ಸ್ವಾಗತಿಸಿ, ಎಸ್.ವೀಣಾ ವಂದಿಸಿ, ಎಂ. ಸುಮಾ ನಿರೂಪಿಸಿದರು.

ಫೆ.೨೩ರಂದು ಅಸಂಘಟಿತ ಕಾರ್ಮಿಕರಿಗೆ ಇ-ಶ್ರಮ್ ಕಾರ್ಡ್ ವಿತರಣೆ

    ಭದ್ರಾವತಿ, ಫೆ. ೨೨: ಶ್ರಮ ಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ಫೆ.೨೩ರಂದು ಬೆಳಿಗ್ಗೆ ೧೦.೩೫ಕ್ಕೆ ಗಾಂಧಿನಗರದ ಆಗಮುಡಿ(ಮೊದಲಿಯಾರ್) ಸಮುದಾಯ ಭವನದಲ್ಲಿ ಇ-ಶ್ರಮ್ ಕಾರ್ಡ್ ವಿತರಣೆ ಹಾಗು ಕಾರ್ಮಿಕ ಇಲಾಖೆಯಿಂದ ಕಿಟ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಸಂಸದ ಬಿ.ವೈ ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಮುಖರಾದ ಬಿ.ಕೆ ಶ್ರೀನಾಥ್, ಶಿವಕುಮಾರ್, ಕೆ. ಮಂಜುನಾಥ್, ಮಾದಣ್ಣ, ಬಿ.ಕೆ ಮೋಹನ್, ಜಾರ್ಜ್, ಮಣಿ, ಜಿ. ಸುರೇಶ್‌ಕುಮಾರ್, ರಾಜೇಶ್ವರಿ, ಶಾರದಮ್ಮ, ಸಿ.ಬಿ ರಂಗಯ್ಯ, ಮುಮ್ತಾಜ್ ಬೇಗಂ, ಡಾ. ಎಂ.ವಿ ಅಶೋಕ್, ವಸಂತ, ಎಂ. ಭೂಪಾಲ್, ಕಣ್ಣಪ್ಪ, ಕೆ.ಎಸ್ ಸುಬ್ರಹ್ಮಣಿ, ದುಗ್ಗೇಶ್ ತೇಲ್ಕರ್, ಅರುಣ್‌ಕುಮಾರ್, ಚಂದ್ರಶೇಖರ್, ಬಾಬು, ಲಕ್ಷ್ಮಣ, ವಿಶ್ವನಾಥ್, ಸತೀಶ್‌ಗೌಡ, ಚಂದ್ರಕಲಾ, ಸುಂದರ್, ಜಯಂತಿ, ಕೃಷ್ಣಮೂರ್ತಿ, ಸಚಿನ್, ಸಮಿವುಲ್ಲಾ, ಹಫೀಜ್, ಮುರುಗನ್, ಶ್ರೀನಿವಾಸ್, ಸುರೇಶ್, ವಸಂತಿ, ಅರುಣ್, ಸಂಜಯ್‌ಕುಮಾರ್, ಮಣಿಕಂಠ, ಆರ್‍ಮುಗಂ, ತರಕಾರಿ ಮಂಜಣ್ಣ, ಮಂಜು, ಹೇಮಾವತಿ ಮತ್ತು ಪುಷ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಅಸಂಘಟಿತ ಕಾರ್ಮಿಕರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸುವಂತೆ ಕೆ.ಸಿ.ಡಬ್ಲ್ಯೂಸಿಯು ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು, ತಾಲೂಕು ಕಾರ್ಯಾಧ್ಯಕ್ಷ ಅಭಿಲಾಷ್ ಮತ್ತು ಯುವ ಮುಖಂಡ ವಿಜಯ್ ಸಿದ್ದಾರ್ಥ್ ಕೋರಿದ್ದಾರೆ.  

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ಲೋಕಾರ್ಪಣೆ

ಭದ್ರಾವತಿ ಚನ್ನಗಿರಿ ರಸ್ತೆಯಲ್ಲಿರುವ ಶ್ರೀ ಗಂಗಾಪರಮೇಶ್ವರಿ ಸಮುದಾಯ ಭವನದ ಕಟ್ಟಡದಲ್ಲಿ ತೆರೆಯಲಾಗಿರುವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ಲೋಕಾರ್ಪಣೆಯನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ನೆರವೇರಿಸಿದರು.
    ಭದ್ರಾವತಿ, ಫೆ. ೨೨: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ಲೋಕಾರ್ಪಣೆಯನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ನೆರವೇರಿಸಿದರು.
    ನಗರದ ಚನ್ನಗಿರಿ ರಸ್ತೆಯಲ್ಲಿರುವ ಶ್ರೀ ಗಂಗಾಪರಮೇಶ್ವರಿ ಸಮುದಾಯ ಭವನದ ಕಟ್ಟಡದಲ್ಲಿ ತೆರೆಯಲಾಗಿರುವ ಒಕ್ಕೂಟದ ಕೇಂದ್ರದ ಸಮಿತಿಯ ನೂತನ ಕಾರ್ಯಾಲಯಕ್ಕೆ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ ಚಾಲನೆ ನೀಡಿದರು. ನಾಮಫಲಕ ಉದ್ಘಾಟನೆಯನ್ನು ಗಂಗಾಮತಸ್ಥರ ಸಂಘದ ತಾಲೂಕು ಅಧ್ಯಕ್ಷ ಎಚ್.ಎ ಪರಮೇಶ್ವರಪ್ಪ ನೆರವೇರಿಸಿದರು.
ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ರಾಜ್ಯಾಧ್ಯಕ್ಷ ವಿ. ವಿನೋದ್ ವಹಿಸಿದ್ದರು. ನಗರಸಭೆ ಸದಸ್ಯ ಬಿ.ಕೆ ಸಂಗಮೇಶ್ವರ್ ಸಮಾರಂಭ ಉದ್ಘಾಟಿಸಿದರು.
    ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಸದಸ್ಯ ಮಣಿ ಎಎನ್‌ಎಸ್, ಗಂಗಾಮತಸ್ಥರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಬಿ.ಆರ್ ಯಲ್ಲಪ್ಪ, ಡಿಎಸ್‌ಎಸ್ ಜಿಲ್ಲಾ ಸಮಿತಿ ಸದಸ್ಯ ಡಿ. ಏಳುಮಲೈ, ನಾಗರತ್ನ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಶಶಿಕುಮಾರ್, ಎನ್. ವೆಂಕಟೇಶ್, ಬಿ. ರಾಜಾಚಾರಿ, ಪ್ರಧಾನ ಕಾರ್ಯದರ್ಶಿ ಎಂ. ಕಂದನ್, ಕಾರ್ಯದರ್ಶಿ ಎಸ್. ಕುಮಾರ್, ಸಹ ಕಾರ್ಯದರ್ಶಿಗಳಾದ ಬಿ.ಎಸ್. ಸುಶೀಲ, ಎಸ್. ವೆಂಕಟೇಶ್, ಖಜಾಂಚಿ ಚೆಲುವರಾಜ್, ನಿರ್ದೇಶಕರಾದ ಪಿ. ಏಳುಮಲೈ, ಬಿ.ಆರ್ ಯಲ್ಲಪ್ಪ, ಸುಬ್ರಮಣಿ, ಎನ್. ವಸಂತಕುಮಾರ್, ಎ. ಶಶಿಕುಮಾರ್, ವಿ. ಅರವಿಂದ್, ಕಾರ್ಯಕಾರಿ ಸಮಿತಿ ಸದಸ್ಯರಾದ ಪಿ. ದೊರೈ, ಶ್ರೀನಿವಾಸ್, ಎಚ್. ನಿಂಗರಾಜ್, ಎಂ. ಪವಿತ್ರ, ಜಿಲ್ಲಾ ಸಮಿತಿ ಅಧ್ಯಕ್ಷ ಎಂ. ಅರುಳ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸಂಧ್ಯಾ, ಡಿ.ಜಿ. ಭಾಷಾ, ಎಂ. ರೇಖಾ, ಎಲ್. ಮಂಜುಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.