Sunday, February 26, 2023

ಬ್ಯಾರಿಕೇಡ್ ಕಿತ್ತು ಹಾಕಿ ಮುನ್ನುಗ್ಗಿದ ಗುತ್ತಿಗೆ ಕಾರ್ಮಿಕರು : ಶಾಸಕರ ನೇತೃತ್ವದಲ್ಲಿ ಪಾದಯಾತ್ರೆ

 


ಭದ್ರಾವತಿ, ಫೆ. 27:  ಪೊಲೀಸರು ಗುತ್ತಿಗೆ ಕಾರ್ಮಿಕರ ಹೋರಾಟವನ್ನು ಆರಂಭಿಕ ಹಂತದಲ್ಲಿ ತಡೆಯಲು ಸಾಕಷ್ಟು ಪ್ರಯತ್ನಿಸಿದರು. ಆದರೆ ಪೊಲೀಸರನ್ನು ಮುನ್ನುಗ್ಗಿದ  ಗುತ್ತಿಗೆ ಕಾರ್ಮಿಕರು ಶಾಸಕ ಬಿ.ಕೆ ಸಂಗಮೇಶ್ವರ ನೇತೃತ್ವದಲ್ಲಿ  ಪಾದಯಾತ್ರೆ ಆರಂಭಿಸಿದರು.
    ಇದಕ್ಕೂ ಮೊದಲು ಮಾತನಾಡಿದ ಶಾಸಕರು ಹಾಗೂ ಕಾರ್ಮಿಕ ಮುಖಂಡರು, ಹೋರಾಟವನ್ನು ತಡೆಯಲು ಬಿಜೆಪಿ ನಾಯಕರು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ಸಂಘಟನೆಯಾಗಿದೆ. ಕಾರ್ಮಿಕ ನಾಯಕರನ್ನು ಬಂಧಿಸಿರುವುದು ವಿಪರ್ಯಾಸದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
        ಶಾಂತಿಯುತವಾಗಿ ಹೋರಾಟ ನಡೆಸಲು ಮುಂದಾಗಿರುವ ಕಾರ್ಮಿಕರನ್ನು ಪೊಲೀಸರ ಮೂಲಕ ತಡೆಯಲು ಯತ್ನಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳಿಗೆ ಧಿಕ್ಕಾರ ಎಂದು ಘೋಷಣೆಗಳನ್ನು ಹಾಕಿದರು.  ಕಾರ್ಖಾನೆ ಮುಂಭಾಗದಿಂದ ಡಬ್ಬಲ್ ರಸ್ತೆಯಲ್ಲಿ ಸಾಗಿದ ಗುತ್ತಿಗೆ ಕಾರ್ಮಿಕರನ್ನು ಅಲ್ಲಿಯೇ ತಡೆಯಲು ಪೊಲೀಸರು ಸಾಕಷ್ಟು ಪ್ರಯತ್ನಿಸಿದ್ದು. ಆದರೆ ಸಾಧ್ಯವಾಗಲಿಲ್ಲ. 
      ನಂತರ ಮುನ್ನುಗ್ಗಿದ ಗುತ್ತಿಗೆ ಕಾರ್ಮಿಕರೊಂದಿಗೆ ಶಾಸಕ ಬಿ ಕೆ ಸಂಗಮೇಶ್ವರ್ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆ ಆರಂಭಿಸಿದರು.  

ಗುತ್ತಿಗೆ ಕಾರ್ಮಿಕರಿಂದ ಪಾದಯಾತ್ರೆಗೆ ಸಿದ್ಧತೆ: ವಶಕ್ಕೆ ಪಡೆಯಲು ಮುಂದಾಗಿರುವ ಪೊಲೀಸರು

   ಭದ್ರಾವತಿ, ಫೆ. 27: ನಗರದ  ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ  ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರ ಸೋಮವಾರ ಸಹ ಮುಂದುವರೆದಿದೆ. 
   ಗುತ್ತಿಗೆ ಕಾರ್ಮಿಕರ ಹೋರಾಟ ನಿಯಂತ್ರಿಸಲು ಪೊಲೀಸರು ಭಾನುವಾರ ರಾತ್ರಿಯಿಂದಲೇ ಕಾರ್ಯಚರಣೆಕ್ಕೆ ನಡೆಸಿದ್ದು, ಕಾರ್ಖಾನೆ ಮುಂಭಾಗ ಹೆಚ್ಚಿನ ಪೋಲಿಸ್ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. 
   ಶಿವಮೊಗ್ಗ ಸೋಗನೆಯಲ್ಲಿ ನೂತನ ವಿಮಾನ ನಿಲ್ದಾಣ ಉದ್ಘಾಟನೆ ಸ್ಥಳಕ್ಕೆ ಪಾದಯಾತ್ರೆ ಮೂಲಕ ತೆರಳಲು ಗುತ್ತಿಗೆ ಕಾರ್ಮಿಕರು  ಸಿದ್ಧತೆ ನಡೆಸುತ್ತಿದ್ದು, ಪೊಲೀಸರು ಕಾರ್ಮಿಕರನ್ನು ವಶಕ್ಕೆ ಪಡೆಯಲು  ಮುಂದಾಗಿದ್ದಾರೆ.  ಈ ನಡುವೆ ಹೋರಾಟ ಬೆಂಬಲಿಸಲು ವಿವಿಧ ಸಂಘಟನೆಗಳು ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ. ಬೆಳಿಗ್ಗೆಯಿಂದ ಕಾರ್ಖಾನೆ ಮುಂಭಾಗ ಬಿಗುವಿನ ಪರಿಸ್ಥಿತಿ ನಿರ್ಮಾಣಗೊಂಡಿದೆ.




ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮ : ಶೂನ್ಯ ಸಂಚಾರ, ಪರ್ಯಾಯ ಮಾರ್ಗ ಅಧಿಸೂಚನೆ



    ಭದ್ರಾವತಿ, ಫೆ. ೨೬:  ಶಿವಮೊಗ್ಗ ಸೋಗಾನೆಯಲ್ಲಿ ನಿರ್ಮಿಸಲಾಗಿರುವ ನೂತನ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭಕ್ಕೆ ಫೆ. ೨೭ ರಂದು ಸೋಮವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸುಗಮ ಸಂಚಾರದ ದೃಷ್ಟಿಯಿಂದ ಶೂನ್ಯ ಸಂಚಾರ ಮತ್ತು ಪರ್ಯಾಯ ಮಾರ್ಗಗಳನ್ನು ಗುರುತಿಸಿ ತಾತ್ಕಾಲಿಕ ಅಧಿಸೂಚನೆ ಹೊರಡಿಸಲಾಗಿದೆ.
    ಶೂನ್ಯ ಸಂಚಾರ ರಸ್ತೆ ಮಾರ್ಗ :
    ಫೆ. ೨೬ ಮತ್ತು ೨೭ರಂದು ಬೆಳಿಗ್ಗೆ ೬-೦೦ ಗಂಟೆಯಿಂದ ಸಂಜೆ ೬-೦೦ ಗಂಟೆಯವರೆಗೆ ಎಂ.ಆರ್.ಎಸ್ ಸರ್ಕಲ್ ನಿಂದ ಎನ್.ಆರ್ ಪುರ ರಸ್ತೆ ಲಕ್ಕಿನಕೊಪ್ಪ ಸರ್ಕಲ್ ವರೆಗೆ. ಹಾಗು ಮತ್ತೂರು-ಮಂಡೇನಕೊಪ್ಪ-ಸೋಗಾನೆ ವಿಮಾನ ನಿಲ್ದಾಣದವರೆಗೆ ಮಾರ್ಗಗಳಲ್ಲಿ ಶೂನ್ಯ ಸಂಚಾರ ರಸ್ತೆ ಎಂದು ಅಧಿಸೂಚನೆ ಹೊರಡಿಸಿದೆ.
    ಫೆ. ೨೭ರಂದು ಸಾರ್ವಜನಿಕ ವಾಹನಗಳ ಮಾರ್ಗ ಬದಲಾವಣೆ :
    ಎನ್.ಆರ್ ಪುರದಿಂದ ಭದ್ರಾವತಿ ಕಡೆಗೆ ಹೋಗುವ ವಾಹನಗಳು ಉಂಬ್ಳೆಬೈಲ್-ಹುಣಸೆಕಟ್ಟೆ - ಜಂಕ್ಷನ್ ಮೂಲಕ ಭದ್ರಾವತಿಗೆ ಹೋಗುವುದು.
    ಶಿಕಾರಿಪುರ-ಹೊನ್ನಾಳಿ-ದಾವಣಗೆರೆ ಕಡೆಯಿಂದ ಎನ್.ಆರ್ ಪುರಕ್ಕೆ ಹೋಗುವ ವಾಹನಗಳು ಶಿವಮೊಗ್ಗ ನಗರಕ್ಕೆ ಬಂದು ತೀರ್ಥಹಳ್ಳಿ ರಸ್ತೆ(ಎನ್.ಟಿ ರಸ್ತೆ) ಮೂಲಕ ಎನ್.ಆರ್ ಪುರಕ್ಕೆ ಹೋಗುವುದು.
    ತೀರ್ಥಹಳ್ಳಿ ರಸ್ತೆ ಕಡೆಯಿಂದ ಸಾಗರ ರಸ್ತೆ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು ನ್ಯೂ ಮಂಡ್ಲಿ ಸರ್ಕಲ್-ಗೋಪಾಳ-ಸರ್ಕಲ್-ಆಲ್ಕೊಳ ಸರ್ಕಲ್ ಮಾರ್ಗವಾಗಿ ಸಾಗರ ರಸ್ತೆಗೆ ಬಂದು ಸೇರುವುದು.
    ಸಾಗರ ರಸ್ತೆ ಕಡೆಯಿಂದ ತೀರ್ಥಹಳ್ಳಿ ರಸ್ತೆ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು ಆಲ್ಕೊಳ ಸರ್ಕಲ್-ಗೋಪಾಳ ಸರ್ಕಲ್ -ನ್ಯೂಮಂಡ್ಲಿ ಸರ್ಕಲ್ ಮಾರ್ಗವಾಗಿ ತೀರ್ಥಹಳ್ಳಿ ರಸ್ತೆಗೆ ಸೇರುವುದು.
    ಫೆ. ೨೭ರಂದು ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳ ಮಾರ್ಗ :
    ಕಾರ್ಯಕ್ರಮಕ್ಕೆ ಆಗಮಿಸುವ ವಿವಿಐಪಿ ಪಾಸ್ ಹೊಂದಿರುವಂತಹ ಗಣ್ಯರು ಶಿವಮೊಗ್ಗ ನಗರದಿಂದ ಬೈಪಾಸ್-ಊರಗಡೂರು ಸರ್ಕಲ್ -ಸೂಳೆಬೈಲು-ಮತ್ತೂರು ರಸ್ತೆ ಎಡಭಾಗಕ್ಕೆ ತಿರುವು ಪಡೆದುಕೊಂಡು-ಮಂಡೇನಕೊಪ್ಪ ಮುಖಾಂತರ ಸೋಗಾನೆ ವಿಮಾನ ನಿಲ್ದಾಣಕ್ಕೆ ತಲುಪುವುದು.
    ತೀರ್ಥಹಳ್ಳಿ ಕೊಪ್ಪ, ಶೃಂಗೇರಿ, ಎನ್.ಆರ್ ಪುರ ಭಾಗದಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ತೀರ್ಥಹಳ್ಳಿ ರಸ್ತೆ-ಮುಡುಬ ಬಲಕ್ಕೆ ತಿರುಗಿ ಶಂಕರಪುರ-ಉಂಬ್ಳೆಬೈಲು ಮುಖಾಂತರ ಲಕ್ಕಿನಕೊಪ್ಪ ಸರ್ಕಲ್‌ಗೆ ಬಂದು ಸೇರುವುದು. ನಂತರ ಲಕ್ಕಿನಕೊಪ್ಪ ಮತ್ತು ಸೋಗಾನೆ ಏರ್ ಪೋರ್ಟ್ ನಡುವಿನ ಗುರುತಿಸಿದ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕಿಂಗ್ ಮಾಡುವುದು.
    ಸಾಗರ, ಶಿಕಾರಿಪುರ, ಸೊರಬ,ಹೊಸನಗರ ದಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ಶಿವಮೊಗ್ಗ ನಗರದಿಂದ ಅಶೋಕ ಸರ್ಕಲ್-ಬಿ.ಹೆಚ್ ರಸ್ತೆ-ಎ.ಎ ಸರ್ಕಲ್-ಶಂಕರ ಮಠ ಸರ್ಕಲ್-ಹೊಳೆಹೊನ್ನೂರು ಸರ್ಕಲ್-ಎಂ.ಆರ್.ಎಸ್ ಸರ್ಕಲ್ ಗೆ ಬಂದು ಬಲಕ್ಕೆ ತಿರುಗಿ ಸಂತೇಕಡೂರು ಸೋಗಾನ ಏರ್ ಪೋರ್ಟ್ ನಡುವೆ ಗುರುತಿಸಿದ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕಿಂಗ್ ಮಾಡುವುದು.
    ಶಿಕಾರಿಪುರ, ಹೊನ್ನಾಳಿ,ದಾವಣಗೆರೆ ಕಡೆಯಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ಎಂ.ಆರ್.ಎಸ್. ಸರ್ಕಲ್ ಗೆ ಬಂದು ಬಲಕ್ಕೆ ತಿರುಗಿ ಸಂತೇಕಡೂರು ಸೋಗಾನೆ ಏರ್ ಪೋರ್ಟ್ ನಡುವೆ ಗುರುತಿಸಿದ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕಿಂಗ್ ಮಾಡುವುದು.
    ಶಿವಮೊಗ್ಗ ನಗರದಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ಎಂ.ಆರ್.ಎಸ್ ಸರ್ಕಲ್‌ಗೆ ಬಂದು ಬಲಕ್ಕೆ ತಿರುಗಿ ಸಂತೇಕಡೂರು ಸೋಗಾನೆ ಏರ್ ಪೋರ್ಟ್ ನಡುವೆ ಗುರುತಿಸಿದ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕಿಂಗ್ ಮಾಡುವುದು.
    ತರಿಕೆರೆ, ಭದ್ರಾವತಿ, ಕಡೂರು, ಚಿಕ್ಕಮಗಳೂರು, ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ಭದ್ರಾವತಿ ನಗರದ ಕೃಷ್ಣಪ್ಪ ಸರ್ಕಲ್ ನಿಂದ ಎಡಕ್ಕೆ ತಿರುಗಿ-ಹಿರಿಯೂರು ಸರ್ಕಲ್-ತಾರೀಕಟ್ಟೆ ಸರ್ಕಲ್, ಹೆಚ್.ಕೆ ಜಂಕ್ಷನ್-ಲಕ್ಕಿನಕೊಪ್ಪ ಸರ್ಕಲ್‌ಗೆ ಬಂದು ಸೇರುವುದು. ನಂತರ ಲಕ್ಕಿನಕೊಪ್ಪ ಮತ್ತು ಸೋಗಾನೆ ಏರ್ ಪೋರ್ಟ್ ನಡುವಿನ ಗುರುತಿಸಿದ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕಿಂಗ್ ಮಾಡುವುದು.
    ಶೂನ್ಯ ಸಂಚಾರ ಮತ್ತು ಪರ್ಯಾಯ ಮಾರ್ಗಗಳಿಗೆ ತಾತ್ಕಾಲಿಕ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಸಾರ್ವಜನಿಕರು ಸಹಕರಿಸಲು ಕೋರಿದೆ.

ಪ್ರಧಾನಿ ಮೋದಿ ಗಮನ ಸೆಳೆಯಲು ಗುತ್ತಿಗೆ ಕಾರ್ಮಿಕರಿಂದ ಪಾದಯಾತ್ರೆ

ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿವಿಗಾಗಿ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರು ಫೆ.೨೭ರಂದು ಪ್ರಧಾನಿ ಮೋದಿಯವರ ಗಮನ ಸೆಳೆಯಲು ಕುಟುಂಬ ಸಮೇತ ಪಾದಯಾತ್ರೆ ನಡೆಸಲು ಸಿದ್ದತೆ ಕೈಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಕಾರ್ಖಾನೆ ಮುಂಭಾಗ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
    ಭದ್ರಾವತಿ, ಫೆ. ೨೬: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿವಿಗಾಗಿ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರು ಫೆ.೨೭ರಂದು ಪ್ರಧಾನಿ ಮೋದಿಯವರ ಗಮನ ಸೆಳೆಯಲು ಕುಟುಂಬ ಸಮೇತ ಪಾದಯಾತ್ರೆ ನಡೆಸಲು ಸಿದ್ದತೆ ಕೈಗೊಂಡಿದ್ದಾರೆ.
    ಬೆಳಿಗ್ಗೆ ೬.೩೦ಕ್ಕೆ ಕಾರ್ಖಾನೆ ಮುಂಭಾಗದಿಂದ ಪಾದಯಾತ್ರೆ ಆರಂಭಿಸುತ್ತಿದ್ದು, ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ವಿವಿಧ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
    ಈಗಾಗಲೇ ಫೆ.೨೪ರಂದು ಕರೆ ನೀಡಲಾಗಿದ್ದ ಭದ್ರಾವತಿ ಬಂದ್ ಯಶಸ್ವಿಯಾಗಿರುವ ಹಿನ್ನಲೆಯಲ್ಲಿ ಪಾದಯಾತ್ರೆ ಸಹ ಯಶಸ್ವಿಯಾಗುವ ಹುಮ್ಮಸ್ಸು ಗುತ್ತಿಗೆ ಕಾರ್ಮಿಕರು ಹೊಂದಿದ್ದಾರೆ.
    ಈ ಹಿಂದೆ ಗುತ್ತಿಗೆ ಕಾರ್ಮಿಕರು ಖುದ್ದಾಗಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನಲೆಯಲ್ಲಿ ಬೈಕ್ ರ‍್ಯಾಲಿ ಬದಲಿಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆ. ಗುತ್ತಿಗೆ ಕಾರ್ಮಿಕರು ಪಾದಯಾತ್ರೆ ನಡೆಸಲು ನಿರ್ಧಸಿರುವುದರಿಂದ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ಸುಮಾರು ೨೫ ಸಾವಿರ ಮಂದಿ

೧೮೦ಕ್ಕೂ ಹೆಚ್ಚು ಬಸ್ಸು, ೩೦೦೦ಕ್ಕೂ ಹೆಚ್ಚು ಬೈಕ್ : ಜಿ. ಧರ್ಮಪ್ರಸಾದ್

ಜಿ. ಧರ್ಮಪ್ರಸಾದ್ 
    ಭದ್ರಾವತಿ, ಫೆ. ೨೬ : ನಗರದಲ್ಲಿ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಕಳೆದ ಸುಮಾರು ೪೦ ದಿನಗಳಿಂದ ನಿರಂತರವಾಗಿ ಹೋರಾಟಗಳು ನಡೆಯುತ್ತಿವೆ. ಈ ನಡುವೆ ಫೆ. ೨೭ರಂದು ನೂತನ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಲಿರುವ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುಮಾರು ೨೫ ಸಾವಿರ ಮಂದಿ ತೆರಳಲಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ತಿಳಿಸಿದ್ದಾರೆ.
    ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿ, ಸುಮಾರು ೧೮೦ಕ್ಕೂ ಹೆಚ್ಚು ಬಸ್ಸು, ಸುಮಾರು ೩೦೦೦ಕ್ಕೂ ಹೆಚ್ಚು ಬೈಕ್ ಹಾಗು ಉಳಿದಂತೆ ಮ್ಯಾಕ್ಸಿಕ್ಯಾಬ್ ವ್ಯವಸ್ಥೆ ಕೈಗೊಳ್ಳಲಾಗಿದೆ. ಪಕ್ಷದ ಜಿಲ್ಲಾ ಮುಖಂಡರ ಮಾರ್ಗದರ್ಶನದಲ್ಲಿ ಆಯಾ ಬೂತ್‌ಗಳ ಅಧ್ಯಕ್ಷರು, ಪದಾಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ.
    ಆಯಾ ಭಾಗದ ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಶ್ರಮವಹಿಸುವ ಮೂಲಕ ಯಶಸ್ವಿಗೆ ಸಹಕರಿಸಬೇಕು. ಬೆಳಿಗ್ಗೆ ೭ ಗಂಟೆಗೆ ಜನರನ್ನು ಕರೆದೊಯ್ಯುವ ಮೂಲಕ ೮.೩೦ರೊಳಗಾಗಿ ವಿಮಾನ ನಿಲ್ದಾಣ ತಲುಪುವಂತೆ ಕೋರಲಾಗಿದೆ ಎಂದರು.  

೫ ದಶಕಗಳ ಹಿಂದೆಯೇ ಸಣ್ಣ ಮಾದರಿ ವಿಮಾನಗಳ ಹಾರಾಟ

ಭದ್ರಾವತಿಯಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ೭೦ರ ದಶಕದಲ್ಲಿ ಸಣ್ಣ ಮಾದರಿಯ ವಿಮಾನಗಳು ಬಂದಿಳಿಯಲು ನಿರ್ಮಿಸಲಾಗಿದ್ದ ಮಣ್ಣಿನ ರನ್‌ವೇ ಕುರುಹು ಇಂದಿಗೂ ಕಂಡು ಬರುತ್ತಿದೆ.
    ಭದ್ರಾವತಿ, ಫೆ. ೨೬: ಇದೀಗ ಜಿಲ್ಲೆಯಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣಗೊಂಡಿದೆ. ಇಲ್ಲಿನ ಜನರು ಕಳೆದ ೧ ವಾರದಿಂದ ವಿಮಾನಗಳ ಹಾರಾಟ ಕಂಡು ಸಂಭ್ರಮಿಸುತ್ತಿದ್ದಾರೆ. ನೂತನ ವಿಮಾನ ನಿಲ್ದಾಣಕ್ಕೆ ಇದುವರೆಗೂ ೨ ವಿಮಾನಗಳು ಬಂದಿಳಿದಿವೆ. ಆದರೆ ೫ ದಶಕ ಹಿಂದೆಯೇ ಇಲ್ಲಿ ವಿಮಾನಗಳ ಹಾರಾಟ ಕಂಡು ಬರುತ್ತಿದ್ದವು. ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ಸಣ್ಣ ಮಾದರಿ ವಿಮಾನಗಳು ಬಂದಿಳಿಯಲು ಸುಮಾರು ೧ ಕಿ.ಮೀ ಉದ್ದದ ರನ್‌ವೇ ಬೊಮ್ಮನಕಟ್ಟೆ-ಹೊಸನಂಜಾಪುರ ಮಾರ್ಗದಲ್ಲಿ ನಿರ್ಮಿಸಲಾಗಿತ್ತು. 
    ಹಳ್ಳದಿಂದ ಕೂಡಿದ್ದ ಜಾಗವನ್ನು ಅಂದಿನ ಕಾಲದಲ್ಲಿಯೇ ಕೋಟ್ಯಾಂತರ ವೆಚ್ಚದಲ್ಲಿ ಸಮತಟ್ಟು ಮಾಡಿ ಮಣ್ಣಿನ ಗಟ್ಟಿಮುಟ್ಟಾದ ರನ್‌ವೇ ನಿರ್ಮಿಸಲಾಗಿತ್ತು. ೧೯೭೦ರ ಅವಧಿಯಲ್ಲಿ ಕಾರ್ಖಾನೆ ಕೈಗೊಂಡಿದ್ದ ಹಲವು ಯೋಜನೆಗಳಲ್ಲಿ ಇದು ಸಹ ಒಂದಾಗಿತ್ತು.
    ಇದನ್ನು ಏರ್‌ಪೋರ್ಟ್ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿತ್ತು. ದೇಶ ವಿದೇಶಗಳಿಂದ ಕಾರ್ಖಾನೆಗೆ ಇಂಜಿನಿಯರ್‌ಗಳು, ಅಧಿಕಾರಿಗಳು ಬಂದು ಹೋಗುತ್ತಿದ್ದರು. ಅಂದು ವಿಮಾನಗಳ ಹಾರಾಟ ಕಂಡಿರುವ ಬಹಳಷ್ಟು ನಿವೃತ್ತ ಕಾರ್ಮಿಕರು ಇಂದಿಗೂ ಹಳೇಯ ದಿನಗಳನ್ನು ನೆನಪಿಸಿಕೊಂಡು ಸಂಭ್ರಮಿಸುತ್ತಾರೆ.      ಈ ಹಿಂದೆ ಕೇಂದ್ರ ಸರ್ಕಾರದಲ್ಲಿ ಕೇಂದ್ರ ವಿಮಾನ ಖಾತೆ ಸಚಿವರಾಗಿದ್ದ ದಿವಂಗತ ಅನಂತಕುಮಾರ್‌ರವರು ಇದೆ ರನ್‌ವೇ ಬಳಸಿಕೊಂಡು ನೂತನ ವಿಮಾನ ನಿಲ್ದಾಣ ನಿರ್ಮಿಸಲು ಮುಂದಾಗಿದ್ದರು. ಆದರೆ ಹಲವಾರು ಕಾರಣಗಳಿಂದ ಇದು ಸಾಧ್ಯವಾಗಲಿಲ್ಲ. ಈ ರನ್‌ವೇ ಕುರುಹುಗಳು ಇಂದಿಗೂ ಉಳಿದುಕೊಂಡಿದ್ದು, ಈ ನಡುವೆ ಈ ಜಾಗದ ಸ್ವಲ್ಪ ಭಾಗ ನಿವೇಶನಗಳಾಗಿ ಬದಲಾಗಿದೆ. ಕೆಲವು ವಸತಿಗಳು ನಿರ್ಮಾಣಗೊಂಡಿದ್ದು, ಇನ್ನೂ ಸ್ವಲ್ಪ ಭಾಗ ಅರಣ್ಯ ಇಲಾಖೆಗೆ ಬಿಟ್ಟು ಕೊಡಲಾಗಿದೆ. ಈ ಭಾಗದಲ್ಲಿ ಟೀ ಪಾರ್ಕ್ ನಿರ್ಮಾಣಗೊಂಡಿದೆ. ಮತ್ತೊಂದೆಡೆ ಸರ್.ಎಂ ವಿಶೇಶ್ವರಾಯ ವಿಜ್ಞಾನ ಕಾಲೇಜು ವಿಸ್ತರಿಸಿಕೊಂಡಿದೆ