Monday, May 23, 2022

೪ನೇ ನ್ಯಾಷನಲ್ ಮಾಸ್ಟರ್ ಗೇಮ್ಸ್ ಪಂದ್ಯಾವಳಿಯಲ್ಲಿ ಬಿ. ನಂಜೇಗೌಡರಿಗೆ ಕಂಚಿನ ಪದಕ


೪ನೇ ನ್ಯಾಷನಲ್ ಮಾಸ್ಟರ್ ಗೇಮ್ಸ್ ಪಂದ್ಯಾವಳಿಯಲ್ಲಿ ಭದ್ರಾವತಿಯ ಹಿರಿಯ ಕ್ರೀಡಾಪಟು ಬಿ. ನಂಜೇಗೌಡರವರು ಭಾಗವಹಿಸಿ ತೃತೀಯ ಬಹುಮಾನ ಕಂಚಿನ ಪದಕ ಪಡೆದುಕೊಂಡಿದ್ದಾರೆ.
    ಭದ್ರಾವತಿ, ಮೇ. ೨೩: ಮಾಸ್ಟರ್ ಗೇಮ್ಸ್ ಫೆಡರೇಷನ್(ಇಂಡಿಯಾ) ವತಿಯಿಂದ ಕೇರಳದ ತಿರುವನಂತಪುರಂನಲ್ಲಿ ಆಯೋಜಿಸಲಾಗಿದ್ದ ೪ನೇ ನ್ಯಾಷನಲ್ ಮಾಸ್ಟರ್ ಗೇಮ್ಸ್ ಪಂದ್ಯಾವಳಿಯಲ್ಲಿ ನಗರದ ಹಿರಿಯ ಕ್ರೀಡಾಪಟು ಬಿ. ನಂಜೇಗೌಡರವರು ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.
    ೭೦ ವರ್ಷ ಮೇಲ್ಪಟ್ಟವರ ವಯೋಮಾನದ ವಿಭಾಗದಲ್ಲಿ ರಾಜ್ಯದಿಂದ ಪ್ರತಿನಿಧಿಸಿ ೩೦೦ ಮೀಟರ್ ಹರ್ಡಲ್ಸ್‌ನಲ್ಲಿ ತೃತೀಯ ಬಹುಮಾನದೊಂದಿಗೆ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.
    ನಂಜೇಗೌಡರವರು ಮಾರ್ಚ್‌ನಲ್ಲಿ ಉಡುಪಿಯಲ್ಲಿ ನಡೆದ ೩ನೇ ನ್ಯಾಷನಲ್ ಮಾಸ್ಟರ್ ಗೇಮ್ಸ್ ಪಂದ್ಯಾವಳಿಯಲ್ಲಿ ೨ ಚಿನ್ನ ಹಾಗು ೧ ಬೆಳ್ಳಿ ಪದಕ ಪಡೆದುಕೊಂಡಿದ್ದರು.
    ಪೊಲೀಸ್ ಇಲಾಖೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ೭೫ರ ವಯೋಮಾನದ ನಂಜೇಗೌಡರವರು ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, ರಾಷ್ಟ್ರೀಯ, ಅಂತರಾಷ್ಟ್ರೀಯ, ರಾಜ್ಯ ಹಾಗು ಜಿಲ್ಲಾಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಇದುವರೆಗೂ ಸುಮಾರು ೩೧ಕ್ಕೂ ಹೆಚ್ಚು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಯುವ ಕ್ರೀಡಾಪಟುಗಳಿಗೆ ಮಾದರಿಯಾಗಿದ್ದಾರೆ. ಇವರ ಸಾಧನೆಗೆ ನಗರದ ಗಣ್ಯರು, ಕ್ರೀಡಾಭಿಮಾನಿಗಳು ಅಭಿನಂದಿಸಿದ್ದಾರೆ.


ವಿವಿಧ ಬೇಡಿಕೆಗಳ ಕುರಿತು ಮೇ.೩೦ರ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಿ

ಪೌರಾಯುಕ್ತ ಎಚ್.ಎಂ ಮನುಕುಮಾರ್‌ಗೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಮನವಿ


ಭದ್ರಾವತಿ ನಗರಸಭೆ ವ್ಯಾಪ್ತಿಯ ವಿವಿಧ ಬೇಡಿಕೆಗಳ ಕುರಿತು ಮೇ.೩೦ರಂದು ನಡೆಯಲಿರುವ ಸಾಮಾನ್ಯಸಭೆಯಲ್ಲಿ ಪ್ರಸ್ತಾಪಿಸುವ ಮೂಲಕ ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಹಾಗು ಸುವರ್ಣ ಮಹಿಳಾ ವೇದಿಕೆ ವತಿಯಿಂದ ನಗರಸಭೆ ಪೌರಾಯುಕ್ತ ಎಚ್.ಎಂ ಮನುಕುಮಾರ್‌ಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಮೇ. ೨೩: ನಗರಸಭೆ ವ್ಯಾಪ್ತಿಯ ವಿವಿಧ ಬೇಡಿಕೆಗಳ ಕುರಿತು ಮೇ.೩೦ರಂದು ನಡೆಯಲಿರುವ ಸಾಮಾನ್ಯಸಭೆಯಲ್ಲಿ ಪ್ರಸ್ತಾಪಿಸುವ ಮೂಲಕ ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಹಾಗು ಸುವರ್ಣ ಮಹಿಳಾ ವೇದಿಕೆ ವತಿಯಿಂದ ನಗರಸಭೆ ಪೌರಾಯುಕ್ತ ಎಚ್.ಎಂ ಮನುಕುಮಾರ್‌ಗೆ ಮನವಿ ಸಲ್ಲಿಸಲಾಯಿತು.
    ಜನ್ನಾಪುರ ಸರ್ವೆ ನಂ.೭೦ರ ಸುಮಾರು ೪೫ ಎಕರೆ ೨೦ ಗುಂಟೆ ವಿಸ್ತೀರ್ಣವುಳ್ಳ ಕೆರೆಗೆ ಸಮೀಪದ ಜನ ವಸತಿ ಪ್ರದೇಶಗಳಿಂದ ಕಲ್ಮಶಗೊಂಡ ನೀರು ಬಂದು ಸೇರುತ್ತಿದ್ದು, ಇದನ್ನು ತಡೆಯಲು ಸುಮಾರು ೩ ಕೋ. ರು. ವೆಚ್ಚದಲ್ಲಿ ರಾಜಕಾಲುವೆ ನಿರ್ಮಾಣ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡುವ ಕುರಿತು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದು.
    ಕೇಂದ್ರ ಸರ್ಕಾರದ ಕ್ಯಾಚ್ ದ ರೈನ್ (ಮಳೆ ನೀರು ಹಿಡಿಯಿರಿ) ಯೋಜನೆಗೆ ಹಿಂಬುಕೊಡಲು ನಗರಸಭೆ ವ್ಯಾಪ್ತಿಯಲ್ಲಿರುವ ಸುಮಾರು ೭೦ ಕೆರೆಗಳ ಬೌಂಡರಿ ನಿಗದಿಪಡಿಸಿ ಬಸಿ ಕಾಲುವೆ (ಟ್ರಂಚ್) ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಗರಸಭೆಗೆ ೫ ಕೋ. ರು. ವಿಶೇಷ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಕುರಿತು ಚರ್ಚಿಸುವುದು.
    ನಟ, ಸಮಾಜ ಸೇವಕ, ಕರ್ನಾಟಕ ರತ್ನ, ಡಾ. ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ವಾರ್ಡ್ ನಂ.೧೫ರ ಸುಮಾರು ೮೦೦ ವರ್ಷಗಳ ಇತಿಹಾಸವಿರುವ ೫೦ ಎಕರೆ ೨೦ ಗುಂಟೆ ವಿಸ್ತೀರ್ಣವುಳ್ಳ ಹೊಸಮನೆ ಸರ್ಕಾರಿ ಹಿರೇಕೆರೆಗೆ ಅವರ ಹೆಸರನ್ನು ನಾಮಕರಣಗೊಳಿಸಿ ಆಕರ್ಷಕ ಪ್ರವಾಸಿ ತಾಣವನ್ನಾಗಿಸುವ ಸಂಬಂಧ ಹಾಗು ಜನ್ನಾಪುರ ಸರ್ವೆ ನಂ.೭೦ರ ಸುಮಾರು ೪೫ ಎಕರೆ ೨೦ ಗುಂಟೆ ವಿಸ್ತೀರ್ಣವುಳ್ಳ ಕೆರೆಗೆ ನಗರದ ಅನ್ನದಾತ, ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಅವರ ಹೆಸರನ್ನು ನಾಮಕರಣಗೊಳಿಸುವ ಸಂಬಂಧ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದು ಸೇರಿದಂತೆ ಇತ್ಯಾದಿ ಬೇಡಿಕೆಗಳ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚಿಸುವಂತೆ ಮನವಿ ಮಾಡಲಾಗಿದೆ.
    ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಹಾಗು ಸುವರ್ಣ ಮಹಿಳಾ ವೇದಿಕೆ ಛೇರ್‍ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಮನವಿ ಸಲ್ಲಿಸಿದರು. ಕಂದಾಯಾಧಿಕಾರಿ ರಾಜ್‌ಕುಮಾರ್ ಉಪಸ್ಥಿತರಿದ್ದರು.

ಶ್ರೀರಾಮಾನುಜಾಚಾರ್ಯರ ೧೦೦೫ನೇ ಜಯಂತೋತ್ಸವ : ವಿಜೃಂಭಣೆಯಿಂದ ಜರುಗಿದ ಸಾಮೂಹಿಕ ಉಪನಯನ, ಸಮಾಶ್ರಯಣ

ಭದ್ರಾವತಿ ತಾಲೂಕು ವೈಷ್ಣವ ಪರಿಷತ್ ಹಾಗೂ ಹೊಳೆಹೊನ್ನೂರು ಹೋಬಳಿ ಹಾಗೂ ಸಿದ್ಲಿಪುರದ ಶ್ರೀವೈಷ್ಣವ ಸೇವಾ ಸಮಿತಿ ಸಹಯೋಗದೊಂದಿಗೆ ಜಗದ್ಗುರು ಶ್ರೀ ಭಗವದ್ ಶ್ರೀರಾಮಾನುಜಾಚಾರ್ಯರ ೧೦೦೫ನೇ ಜಯಂತೋತ್ಸವ ಅಂಗವಾಗಿ ಸೋಮವಾರ ಕಾಗದನಗರದ ೭ನೇ ವಾರ್ಡ್‌ನ ಶ್ರೀಕ್ಷೇತ್ರ ನಾಗರಕಟ್ಟೆಯಲ್ಲಿ ಸಾಮೂಹಿಕ ಉಪನಯನ ಮತ್ತು  ಸಮಾಶ್ರಯಣ (ಮುದ್ರಾಧಾರಣೆ) ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ. ಮೇ. ೧೮; ತಾಲೂಕು ವೈಷ್ಣವ ಪರಿಷತ್ ಹಾಗೂ ಹೊಳೆಹೊನ್ನೂರು ಹೋಬಳಿ ಹಾಗೂ ಸಿದ್ಲಿಪುರದ ಶ್ರೀವೈಷ್ಣವ ಸೇವಾ ಸಮಿತಿ ಸಹಯೋಗದೊಂದಿಗೆ ಜಗದ್ಗುರು ಶ್ರೀ ಭಗವದ್ ಶ್ರೀರಾಮಾನುಜಾಚಾರ್ಯರ ೧೦೦೫ನೇ ಜಯಂತೋತ್ಸವ ಅಂಗವಾಗಿ ಸೋಮವಾರ ಕಾಗದನಗರದ ೭ನೇ ವಾರ್ಡ್‌ನ ಶ್ರೀಕ್ಷೇತ್ರ ನಾಗರಕಟ್ಟೆಯಲ್ಲಿ ಸಾಮೂಹಿಕ ಉಪನಯನ ಮತ್ತು  ಸಮಾಶ್ರಯಣ (ಮುದ್ರಾಧಾರಣೆ) ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
    ಮೇಲುಕೋಟೆ ಯತೀರಾಜ ಮಠದ ಯಾದಗಿರಿ ಯತೀರಾಜ ನಾರಾಯಣ ಜೀಯರ್ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಸುಮಾರು ೪೦ಕ್ಕೂ ಹೆಚ್ಚು ವಟುಗಳಿಗೆ ಸಮಾಶ್ರಯಣ ನಡೆಯಿತು. ದಾನಿಗಳು, ಸೇವಾಕರ್ತರಾದ ಹೊನ್ನಟ್ಟಿ ಹೊಸೂರಿನ ಉಷಾ ಸತೀಶ್‌ಗೌಡ ದಂಪತಿಯನ್ನು ಶ್ರೀಗಳು ಅಭಿನಂದಿಸಿ ಆಶೀರ್ವದಿಸಿದರು.
    ವೈಷ್ಣವ ಪರಿಷತ್ ಅಧ್ಯಕ್ಷ ದೊಡ್ಡಯ್ಯ, ಶ್ರೀ ಕ್ಷೇತ್ರ ನಾಗರಕಟ್ಟೆ ಪ್ರಧಾನ ಅರ್ಚಕ ರಮೇಶ್ ಭಟ್ ಅರಳೀಮಠ್, ಜಿ.ವಿ ಅಶ್ವತ್ ನಾರಾಯಣ್, ಎಸ್.ಕೆ ಸುರೇಂದ್ರ, ವೆಂಕಟೇಶ್ ಕನಸಿನಕಟ್ಟೆ, ಚಿನ್ಮಯ, ಮಧುಸೂದನ್ ಹಾಗು ಯುವ ಪುರೋಹಿತರನ್ನು ಶ್ರೀಗಳು ಗೌರವಿಸಿದರು.
    ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಂ.ಎಸ್ ಜನಾರ್ಧನ ಅಯ್ಯಂಗಾರ್, ವೈಷ್ಣವ ಸಮಾಜದ ಪ್ರಮುಖರಾದ ಕೃಷ್ಣಸ್ವಾಮಿ, ಅರಹತೊಳಲು ಕೃಷ್ಣಮೂರ್ತಿ, ಕೇಶವಮೂರ್ತಿ, ಕಡದಕಟ್ಟೆ ಮಾದೂರಾವ್, ಹನಗವಾಡಿ ಹನುಮಂತಯ್ಯ, ದೇವರ ಹೊನ್ನಾಳಿ ಗೋಪಾಲಯ್ಯ, ದೇವರಹಳ್ಳಿ ಕೇಶವಯ್ಯ, ಎಸ್.ಪಿ ಅಶ್ವತ್‌ನಾರಾಯಣ್, ಪತ್ರಕರ್ತ ಎಸ್.ಕೆ ಗಜೇಂದ್ರಸ್ವಾಮಿ, ಬಿ. ರಮೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.