Saturday, May 9, 2020

ಮಾಸ್ಕ್ ಧರಿಸದೆ ಸರ್ಕಾರಿ ಆಸ್ಪತ್ರೆ ಪ್ರವೇಶಿದರೆ ದಂಡ..!

ಭದ್ರಾವತಿ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ಮಾಸ್ಕ್ ಧರಿಸದೆ ಆಸ್ಪತ್ರೆ ಪ್ರವೇಶಿಸಿದವರಿಗೆ ದಂಡ ವಿಧಿಸಲಾಯಿತು. 
ಭದ್ರಾವತಿ, ಮೇ. ೯: ಇನ್ನು ಮುಂದೆ ಯಾರಾದರೂ ಮಾಸ್ಕ್ ಧರಿಸದೆ ಸಾರ್ವಜನಿಕ ಆಸ್ಪತ್ರೆ ಪ್ರವೇಶಿಸಿದರೆ ದಂಡ ಕಟ್ಟಬೇಕಾಗುತ್ತದೆ. ಮಾಸ್ಕ್ ಧರಿಸದವರ ವಿರುದ್ಧ ದಂಡ ಹಾಕುವ ಅಧಿಕಾರ ಆರೋಗ್ಯ ಇಲಾಖೆಗೂ ಇದೆ.
ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರದಿಂದ ಮಾಸ್ಕ್ ಧರಿಸದೆ ಆಸ್ಪತ್ರೆಗೆ ಬರುವವರಿಗೆ ೫೦ ರು. ದಂಡ ವಿಧಿಸಲಾಗುತ್ತಿದೆ. ಒಟ್ಟು ೧೦ ಮಂದಿಗೆ ಮಂದಿಗೆ ದಂಡ ವಿಧಿಸಲಾಗಿದ್ದು, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್, ಡಿ. ದರ್ಜೆ ನೌಕರರಾದ ಮುನಿರಾಜ್, ಪ್ರವೀಣ್, ಸೋಮು ಹಾಗೂ ಪೊಲೀಸ್ ಇಲಾಖೆ ವಾಹನ ಚಾಲಕ ಪ್ರಶಾಂತ್ ಪಾಲ್ಗೊಂಡಿದ್ದರು.



೨,೨೦೦ ರು. ಮೌಲ್ಯದ ಅಕ್ರಮ ಮದ್ಯ ವಶ

ಭದ್ರಾವತಿ: ತಾಲೂಕಿನ ಅರಳಿಕೊಪ್ಪ ಗ್ರಾಮದ ಕಿರಣಿ ಅಂಗಡಿಯೊಂದರಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಪ್ರಕರಣ ಶುಕ್ರವಾರ ಬೆಳಕಿಗೆ ಬಂದಿದೆ.
ಕಿರಣಿ ಅಂಗಡಿ ಮಾಲೀಕ ಮಹಾದೇವಪ್ಪ ಎಂಬುವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಕುರಿತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗ್ರಾಮಾಂತರ ಠಾಣೆ ಪೊಲೀಸರು ವಿಂಡ್‌ಸರ್ ೧೧ ಪೌಚ್, ಚಾಯ್ಸ್ ೧೧ ಪೌಚ್, ಓರಿಜಿನಲ್ ಚಾಯ್ಸ್ ೫೧ ಪೌಚ್ ಸೇರಿದಂತೆ ಒಟ್ಟು ೨,೨೦೦ ರು. ಮೌಲ್ಯದ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಾದೇವಪ್ಪ ತಲೆ ಮರೆಸಿಕೊಂಡಿದ್ದು, ಮುಂದಿನ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಕೋಟ್ಬಾ ಕಾಯ್ದೆಯಡಿ ದಾಳಿ : ೨,೮೦೦ ರು. ವಶ

ಭದ್ರಾವತಿ ತಾಲೂಕಿನ ಮೈದೊಳಲು, ಆನವೇರಿ, ಮಲ್ಲಾಪುರ ಗ್ರಾಮಗಳಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.  ಎಂ.ಆರ್. ಗಾಯತ್ರಿ ನೇತೃತ್ವದಲ್ಲಿ ಅಂಗಡಿ ಮುಂಗಟ್ಟುಗಳ ಮೇಲೆ ಕೋಟ್ಬಾ ಕಾಯ್ದೆಯಡಿ ದಾಳಿ ಶನಿವಾರ ನಡೆಸಲಾಯಿತು.  
ಭದ್ರಾವತಿ, ಮೇ. ೯: ಕೋಟ್ಬಾ ಕಾಯ್ದೆಯಡಿ ತಾಲೂಕಿನ ಗ್ರಾಮೀಣ ಪ್ರದೇಶದ ಅಂಗಡಿ ಮುಂಗಟ್ಟುಗಳ ಮೇಲೆ ಶನಿವಾರ ದಾಳಿ ನಡೆಸಿ ಒಟ್ಟು ೧೬ ಪ್ರಕರಣಗಳನ್ನು ದಾಖಲಿಸಿಕೊಂಡು ೨,೮೦೦ ರು. ದಂಡ ವಸೂಲಾತಿ ಮಾಡಲಾಗಿದೆ. 
ತಾಲೂಕಿನ ಮೈದೊಳಲು, ಆನವೇರಿ, ಮಲ್ಲಾಪುರ ಗ್ರಾಮಗಳಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.  ಎಂ.ಆರ್. ಗಾಯತ್ರಿ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಹಿರಿಯ ಆರೋಗ್ಯ ಸಹಾಯಕ ನೀಲೇಶ್ ರಾಜ್, ಕಿರಿಯ ಆರೋಗ್ಯ ಸಹಾಯಕರಾದ ಆನಂದಮೂರ್ತಿ, ಉಮೇಶ್ ಹಾಗೂ ಹೊಳೆಹೊನ್ನೂರು ಪೊಲೀಸ್ ಠಾಣೆ ಸಹಾಯಕ ಠಾಣಾಧಿಕಾರಿ, ಕೃಷ್ಣ ನಾಯ್ಕ,  ತಂಬಾಕು ನಿಯಂತ್ರಣ ವಿಭಾಗ ಹೇಮಂತ್‌ರಾಜ್ ಅರಸ್, ಚಾಲಕರಾದ ಪ್ರಶಾಂತ್ ಮತ್ತು ಭರತ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ದುಷ್ಟರಿಣಾಮಗಳು ಹಾಗೂ ಕೋಟ್ಪಾ ಕಾಯ್ದೆ ಕುರಿತು ಸಾರ್ವಜನಿಕರು ಹಾಗೂ ತಂಬಾಕು ಮಾರಾಟಗಾರರಿಗೆ ಅರಿವು ಮೂಡಿಸಲಾಯಿತು.

ಉಳ್ಳವರು ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಮುಂದಾಗಿ : ಎಂ.ಜೆ ಅಪ್ಪಾಜಿ

ಭದ್ರಾವತಿ  ನ್ಯೂಟೌನ್ ತಾಲೂಕು ಛಲವಾದಿಗಳ(ಪ.ಜಾ) ಸಮಾಜದಲ್ಲಿ ಕಡು ಬಡವರಿಗೆ ಶನಿವಾರ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ದಿನಸಿ ಸಾಮಗ್ರಿ ವಿತರಿಸಿದರು. 
ಭದ್ರಾವತಿ: ಕೊರೋನಾ ವೈರಸ್ ಹಿನ್ನಲೆಯಲ್ಲಿ ದೇಶಾದ್ಯಂತ ಶ್ರೀಸಾಮಾನ್ಯರು ಸೇರಿದಂತೆ ಎಲ್ಲರೂ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಂದಿಗ್ದ ಪರಿಸ್ಥಿತಿಯಲ್ಲಿ ಉಳ್ಳವರು ತಮ್ಮ ಕೈಲಾದಷ್ಟು ನೆರವು ನೀಡಲು ಮುಂದಾಗಬೇಕೆಂದು ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಮನವಿ ಮಾಡಿದರು.
ಅವರು ಶನಿವಾರ ನ್ಯೂಟೌನ್ ತಾಲೂಕು ಛಲವಾದಿಗಳ(ಪ.ಜಾ) ಸಮಾಜದಲ್ಲಿ ಕಡು ಬಡವರಿಗೆ ದಿನಸಿ ಸಾಮಗ್ರಿ ವಿತರಿಸಿ ಮಾತನಾಡಿದರು.
ಎಲ್ಲವನ್ನು ಸರ್ಕಾರ ಮಾಡಲು ಸಾಧ್ಯವಿಲ್ಲ. ತಮ್ಮ ಸುತ್ತಮುತ್ತಲ ಪರಿಸರದಲ್ಲಿ ತಮ್ಮೊಂದಿಗೆ ಬದುಕುತ್ತಿರುವ ಸಾಕಷ್ಟು ಮಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇವರ ನೆರವಿಗೆ ಮುಂದಾಗುವುದು ಉಳ್ಳವರ ಕರ್ತವ್ಯವಾಗಿದೆ. ಕೈಲಾದಷ್ಟು ನೆರವು ನೀಡುವ ಮೂಲಕ ಸಂದಿಗ್ದ ಪರಿಸ್ಥಿತಿಯನ್ನು ಎದುರಿಸಲು ಮುಂದಾಗಬೇಕೆಂದರು.
ಪ್ರಸ್ತುತ ರಾಜ್ಯದಲ್ಲಿ ತುರ್ತಾಗಿ ಮದ್ಯದಂಗಡಿಗಳನ್ನು ತೆರೆಯುವ ಅಗತ್ಯವಿರಲಿಲ್ಲ. ಸುಮಾರು ೪೦ ದಿನಗಳಿಂದ ಮದ್ಯವಿಲ್ಲದೆ ಜನರು ಬದುಕಿದ್ದರು. ಮುಂದೆ ಸಹ ಮದ್ಯವಿಲ್ಲದೆ ಬದುಕುತ್ತಿದ್ದರು. ರಾಜ್ಯ ಸರ್ಕಾರ ಹಣದ ಆಸೆಗಾಗಿ ಜನರ ಬದುಕನ್ನು ಬಲಿ ಕೊಡಲು ಮುಂದಾಗಿದೆ ಎಂದು ಆರೋಪಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್, ಮುಖಂಡರಾದ ಡಿ. ನರಸಿಂಹಮೂರ್ತಿ, ಎಸ್.ಎಸ್ ಭೈರಪ್ಪ, ಬದರಿನಾರಾಯಣ, ಎಚ್.ಎಂ ಮಹಾದೇವಯ್ಯ, ಎ. ತಿಪ್ಪೇಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಛಲವಾದಿ ಸಮಾಜದ ಅಧ್ಯಕ್ಷ ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು.  ಕಾರ್ಯದರ್ಶಿ ಲೋಕೇಶ್(ಕೆಇಬಿ) ವಂದಿಸಿದರು.