Tuesday, June 8, 2021

ಜಿಲ್ಲೆಯಲ್ಲಿಯೇ ಮೊದಲ ಪ್ರಯತ್ನ : ಚುನಾಯಿತ ಪ್ರತಿನಿಧಿಗಳಿಗೆ ಲಸಿಕೆ ಅಭಿಯಾನ

ಭದ್ರಾವತಿ ತಾಲೂಕು ಕಚೇರಿ ರಸ್ತೆಯಲ್ಲಿರುವ ಶ್ರೀ ವೀರಶೈವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿರುವ ಗ್ರಾಮ ಪಂಚಾಯಿತಿ ಮತ್ತು ನಗರಸಭೆ ಸದಸ್ಯರು ಹಾಗು ಸಿಬ್ಬಂದಿಗಳಿಗೆ ಕೊರೊನಾ ಲಸಿಕೆ ಅಭಿಯಾನಕ್ಕೆ ಮಂಗಳವಾರ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
      ಭದ್ರಾವತಿ, ಜೂ. ೮: ಸದಾ ಕಾಲ ಜನರ ಮಧ್ಯೆ ಬೆರೆಯುವ ಚುನಾಯಿತ ಪ್ರತಿನಿಧಿಗಳಿಗೆ ಕೊರೋನಾ ಲಸಿಕೆ ಅತ್ಯವಶ್ಯಕವಾಗಿದ್ದು, ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿಯೇ ಮೊದಲ ಪ್ರಯತ್ನವಾಗಿ ಚುನಾಯಿತ ಪ್ರತಿನಿಧಿಗಳ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದರು.
   ಅವರು ಮಂಗಳವಾರ ತಾಲೂಕು ಕಚೇರಿ ರಸ್ತೆಯಲ್ಲಿರುವ ಶ್ರೀ ವೀರಶೈವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿರುವ ಗ್ರಾಮ ಪಂಚಾಯಿತಿ ಮತ್ತು ನಗರಸಭೆ ಸದಸ್ಯರು ಹಾಗು ಸಿಬ್ಬಂದಿಗಳಿಗೆ ಕೊರೊನಾ ಲಸಿಕೆ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
   ಜನರ ಮಧ್ಯೆ ಬೆರೆಯುವ ಚುನಾಯಿತ ಪ್ರತಿನಿಧಿಗಳಿಗೆ ಸೋಂಕು ವೇಗವಾಗಿ ಹಬ್ಬುತ್ತಿದೆ. ಈ ಹಿನ್ನಲೆಯಲ್ಲಿ ಲಸಿಕೆ ಅಗತ್ಯವಾಗಿದ್ದು,  ನಗರಸಭೆ ೩೫ ವಾರ್ಡ್‌ಗಳ ಸದಸ್ಯರು, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ೨೨ ಗ್ರಾಮ ಪಂಚಾಯಿತಿಗಳ ಸದಸ್ಯರು ಹಾಗು ಸಿಬ್ಬಂದಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಶೀಘ್ರದಲ್ಲಿಯೇ ಕ್ಷೇತ್ರದ ಪ್ರತಿಯೊಬ್ಬರಿಗೂ ಲಸಿಕೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
   ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕ್ಷುಲ್ಲಕ ಕಾರಣಕ್ಕೆ ಹತ್ಯೆಯಾದ ಗುತ್ತಿಗೆ ಪೌರ ನೌಕರ ಸುನಿಲ್ ನಿವಾಸಕ್ಕೆ ಎಚ್. ಹನುಮಂತಪ್ಪ ಭೇಟಿ

ಕುಟುಂಬ ವರ್ಗಕ್ಕೆ ಸಾಂತ್ವಾನ, ೫೦ ಸಾವಿರ ರು. ಚೆಕ್ ವಿತರಣೆ, ಕಾಯಂ ಉದ್ಯೋಗ ಭರವಸೆ

ಇತ್ತೀಚೆಗೆ ಕ್ಷುಲ್ಲಕ ಕಾರಣದಿಂದ ಹತ್ಯೆಯಾದ ಭದ್ರಾವತಿ ಜೈಭೀಮಾ ನಗರದ ನಿವಾಸಿ, ಗುತ್ತಿಗೆ ಪೌರ ನೌಕರ ಸುನಿಲ್ ನಿವಾಸಕ್ಕೆ ಮಂಗಳವಾರ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಎಚ್. ಹನುಮಂತಪ್ಪ ಭೇಟಿ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು.
     ಭದ್ರಾವತಿ, ಜೂ. ೮: ಇತ್ತೀಚೆಗೆ ಕ್ಷುಲ್ಲಕ ಕಾರಣದಿಂದ ಹತ್ಯೆಯಾದ ಜೈಭೀಮಾ ನಗರದ ನಿವಾಸಿ, ಗುತ್ತಿಗೆ ಪೌರ ನೌಕರ ಸುನಿಲ್ ನಿವಾಸಕ್ಕೆ ಮಂಗಳವಾರ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಎಚ್. ಹನುಮಂತಪ್ಪ ಭೇಟಿ ನೀಡಿ ೫೦ ಸಾವಿರ ರು. ಪರಿಹಾರದ ಚೆಕ್ ವಿತರಿಸುವ ಜೊತೆಗೆ ಕುಟುಂಬ ವರ್ಗದವರು ಸ್ವಯಂ ಉದ್ಯೋಗ ಆರಂಭಿಸಲು ನಿಗಮದಿಂದ ಶೂನ್ಯ ಬಡ್ಡಿ ದರದಲ್ಲಿ ೩ ಲಕ್ಷ ರು. ಸಾಲ ಸೌಲಭ್ಯ ಕಲ್ಪಿಸಿಕೊಡುವುದಾಗಿ ಭರವಸೆ ನೀಡುವ ಮೂಲಕ ಸಾಂತ್ವಾನ ತಿಳಿಸಿದರು.
    ಗಾಂಜಾ ಮತ್ತಿನಲ್ಲಿದ್ದ ಯುವಕರು ಸುನಿಲ್ ಹತ್ಯೆ ಮಾಡಿರುವುದು ವಿಷಾದನೀಯ ಘಟನೆಯಾಗಿದ್ದು, ಈ ರೀತಿಯ ಘಟನೆಗಳು ಮರುಕಳುಹಿಸಬಾರದು. ಸುನಿಲ್ ಪತ್ನಿ ಸೆಲ್ವಿ ಅವರಿಗೆ ನಗರಸಭೆಯಲ್ಲಿ ಕಾಯಂ ಉದ್ಯೋಗ ನೀಡುವ ಪ್ರಕ್ರಿಯೆ ಜಾಲ್ತಿಯಲ್ಲಿದೆ. ಜೊತೆಗೆ ಇನ್ನೂ ೫೦ ಸಾವಿರ ರು. ಪರಿಹಾರ ನಿಗಮದಿಂದ ನೀಡಲಾಗುವುದು. ಅಲ್ಲದೆ ನಿಗಮದಿಂದ ಲಭಿಸಬಹುದಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.
      ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿ :
     ಹನುಮಂತಪ್ಪ ಅವರನ್ನು ಭೇಟಿ ಮಾಡಿದ ಬಿಜೆಪಿ ಪಕ್ಷದ ಸ್ಥಳೀಯ ಮುಖಂಡರು, ಸುನಿಲ್ ಹತ್ಯೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸುನಿಲ್ ಪತ್ನಿಗೆ ಕಾಯಂ ಉದ್ಯೋಗ ನೀಡಬೇಕು. ಹೆಣ್ಣು ಮಗುವಿಗೆ ಉಚಿತ ಶಿಕ್ಷಣ ನೀಡಬೇಕೆಂದು ಆಗ್ರಹಿಸಿದರು.
     ಡಿಎಸ್‌ಎಸ್ ಮುಖಂಡರಾದ ಸತ್ಯ ಭದ್ರಾವತಿ, ಸಫಾಯಿ ಕರ್ಮಚಾರಿ ಆಯೋಗದ ಜಿಲ್ಲಾ ಸದಸ್ಯ ಚಿನ್ನಯ್ಯ, ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ಮುಖಂಡರಾದ ಮಂಗೋಟೆ ರುದ್ರೇಶ್, ನಗರಸಭಾ ಸದಸ್ಯೆ ಅನಿತಾ ಮಲ್ಲೇಶ್, ಚಂದ್ರು ನರಸೀಪುರ ಹಾಗು ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.