Wednesday, June 10, 2020

ಭದ್ರಾ ಕಾಸ್ಟ್ ಅಲೈ ಕಾರ್ಖಾನೆ ಬೆಂಕಿ ಅವಘಡ : ಕಾರ್ಮಿಕರ ರಕ್ಷಣೆ

ಅಣಕು ಪ್ರದರ್ಶನದಲ್ಲಿ ರೋಚಕ ಕಾರ್ಯಾಚರಣೆ 

 ಭದ್ರಾವತಿ ಅಪ್ಪರ್ ಹುತ್ತಾ ಸಮೀಪದ ಕಿರು ಕೈಗಾರಿಕಾ ಪ್ರದೇಶದಲ್ಲಿರುವ ಭದ್ರಾ ಕಾಸ್ಟ್ ಅಲೈ ಘಟಕದಲ್ಲಿ ಅಗ್ನಿಶಾಮಕ ಇಲಾಖೆವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೆಂಕಿ ಅವಘಡ ಅಣಕು ಪ್ರದರ್ಶನದ ಪ್ರಾತ್ಯಕ್ಷಿತೆಯಲ್ಲಿ ಕಾರ್ಮಿಕರನ್ನು ರಕ್ಷಿಸುತ್ತಿರುವುದು. 
ಭದ್ರಾವತಿ, ಜೂ. ೧೦: ನಗರದ ಅಪ್ಪರ್ ಹುತ್ತಾ ಸಮೀಪದಲ್ಲಿರುವ ಕಿರು ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ಕಾರ್ಖಾನೆಯೊಂದರಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕಾರ್ಖಾನೆ ಒಳ ಭಾಗದಲ್ಲಿ ಸಿಲುಕಿಕೊಂಡ ಕಾರ್ಮಿಕರನ್ನು ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಪಾರು ಮಾಡಿದ ದೃಶ್ಯ ರೋಚಕವಾಗಿ ಕಂಡು ಬಂದಿತು. ಆದರೆ ಇದು ಸ್ವಾಭಾವಿಕ ಘಟನೆ ಅಲ್ಲ ಕೃತಕ ಘಟನೆ ಎಂಬುದು ಆ ನಂತರ ತಿಳಿದು ಬಂದಿತು. 
ಆಕಸ್ಮಿಕವಾಗಿ ಬೆಂಕಿ ಅವಘಡಗಳು ಸಂಭವಿಸಿದಾಗ ಆತಂಕಕ್ಕೆ ಒಳಗಾಗದೆ ಸುರಕ್ಷಿತ ವಿಧಾನಗಳೊಂದಿಗೆ ಧೈರ್ಯವಾಗಿ ಕಾರ್ಯಾಚರಣೆಗೆ ಇಳಿದಾಗ ಮುಂದೆ ಸಂಭವಿಸಬಹುದಾದ ದೊಡ್ಡ ಪ್ರಮಾಣದ ಹಾನಿ ತಪ್ಪಿಸಲು ಸಾಧ್ಯ ಎಂಬುದನ್ನು ನಗರದ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಅಣಕು ಪ್ರದರ್ಶನದ ಮೂಲಕ ತೋರಿಸಿಕೊಟ್ಟರು. 
      ನಗರದ ಅಗ್ನಿಶಾಮಕ ಇಲಾಖೆ ಠಾಣಾಧಿಕಾರಿ ವಸಂತಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳು ಕಿರು ಕೈಗರಿಕಾ ಪ್ರದೇಶದಲ್ಲಿರುವ ಭದ್ರಾ ಕಾಸ್ಟ್ ಅಲೈ ಘಟಕದ ಕಾರ್ಮಿಕರಿಗೆ ಬೆಂಕಿ ಅವಘಡ ಸಂದರ್ಭಗಳಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು, ಪ್ರಥಮ ಚಿಕಿತ್ಸೆ ವಿಧಾನಗಳು, ಬೆಂಕಿ ನಂದಿಸುವ ಬಗೆ ಪ್ರಾತ್ಯಕ್ಷಿತೆ ಮೂಲಕ ತೋರಿಸಿಕೊಟ್ಟರು. 
  ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳಾದ ಅಶೋಕ್, ಸುರೇಶ್,  ಕುಮಾರ್, ಬಾಬುಗೌಡ, ಕರಿಯಣ್ಣ, ಮಹೇಂದ್ರ, ರಾಜಾನಾಯ್ಕ ಅಣಕು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಭದ್ರಾಕಾಸ್ಟ್‌ಅಲೈ ಘಟಕದ ನಿರ್ದೇಶಕ ರಾಮಾಚಾರ್, ವ್ಯವಸ್ಥಾಪಕ ಹರೀಶ್, ಶ್ರೀಧರ್, ಚಂದ್ರಶೇಖರ್ ಸೇರಿದಂತೆ ಕಾರ್ಮಿಕರು ಉಪಸ್ಥಿತರಿದ್ದರು.

ಎರಡು ದಿನ ರೈತರಿಗೆ ಆನ್‌ಲೈನ್ ಮೂಲಕ ತರಬೇತಿ

ಭದ್ರಾವತಿ, ಜೂ. ೧೦: ತಾಲೂಕಿನ ಹಳ್ಳಿಕೆರೆಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಪುರುಷ ಮತ್ತು ಮಹಿಳಾ ರೈತರಿಗೆ ಜೂಮ್ ಆಪ್ ಬಳಸಿ ಆನ್‌ಲೈನ್ ಮೂಲಕ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಮುಸುಕಿನ ಜೋಳದಲ್ಲಿ ಸುಧಾರಿತ ಬೇಸಾಯ ಕ್ರಮಗಳು ಕುರಿತು ಜೂ.೧೧ರಂದು ಬೆಳಿಗ್ಗೆ ೧೧.೩೦ ರಿಂದ ೧೨.೧೫ರ ವರೆಗೆ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾಲಯದ ಬೇಸಾಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನಾರಾಯಣ ಮಾವರ್‌ಕರ್ ಮಾಹಿತಿ ನೀಡಲಿದ್ದು, ಅಡಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ನಾಗರಾಜಪ್ಪ ಅಡಿವಪ್ಪನವರ್ ಜೂ.೧೨ರಂದು ಮಧ್ಯಾಹ್ನ ೩.೩೦ ರಿಂದ ೪.೧೫ರ ವರೆಗೆ ಅಡಕೆ ಮುಂಗಾರು ಹಂಗಾಮಿನಲ್ಲಿ ಕೈಗೊಳ್ಳಬೇಕಾದ ಬೇಸಾಯ ಕ್ರಮಗಳು ಕುರಿತು ಮಾಹಿತಿ ನೀಡಲಿದ್ದಾರೆ. ಹೆಚ್ಚಿನ ಮಾಹಿತಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಎಂಪಿಎಂ ಸಕ್ಕರೆ ಘಟಕ ಗುತ್ತಿಗೆ ಪಡೆಯಲು ನಿರಾಣಿಗೆ ಮನವಿ

ಆರ್. ವೇಣುಗೋಪಾಲ್ 
ಭದ್ರಾವತಿ:  ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ(ಪಿಎಸ್‌ಎಸ್‌ಕೆ)ಯನ್ನು ೪೦ ವರ್ಷ ಅವಧಿಗೆ ಗುತ್ತಿಗೆ ಪಡೆದಿರುವಂತೆ ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ಸಕ್ಕರೆ ಘಟಕವನ್ನು ಸಹ ಗುತ್ತಿಗೆ ಪಡೆದು ಅಭಿವೃದ್ಧಿಪಡಿಸಿ ನಿರುದ್ಯೋಗ ಸಮಸ್ಯೆ ಬಗೆಹರಿಸುವಂತೆ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ಛೇರ‍್ಮನ್ ಆರ್. ವೇಣುಗೋಪಾಲ್ ಮಾಜಿ ಸಚಿವ, ನಿರಾಣಿ ಗ್ರೂಪ್ ಆಫ್ ಕಂಪನಿ ಅಧ್ಯಕ್ಷ ಮುರುಗೇಶ್ ನಿರಾಣಿಯವರಿಗೆ ಒತ್ತಾಯಿಸಿದ್ದಾರೆ. 
ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದು ರೈತರ ಹಿತಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಹೆಮ್ಮೆಯ ವಿಚಾರವಾಗಿದೆ. ನಗರದ ಮೈಸೂರು ಕಾಗದ ಕಾರ್ಖಾನೆಯ ಸಕ್ಕರೆ ಘಟಕ ಕಳೆದ ೫ ವರ್ಷಗಳಿಂದ ಸ್ಥಗಿತಗೊಂಡಿದ್ದು, ಇದರಿಂದಾಗಿ ಕ್ಷೇತ್ರದ ರೈತರು, ನಾಗರೀಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕ್ಷೇತ್ರದ ಆರ್ಥಿಕ ಬೆಳವಣಿಗೆ ಕುಂಠಿತಗೊಂಡಿದೆ. 
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ  ಪ್ರಸ್ತುತ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಮುಂದಾಗಿದ್ದು, ಈ ಹಿನ್ನಲೆಯಲ್ಲಿ ಕಾರ್ಖಾನೆಗೆ  ಒಮ್ಮೆ ಭೇಟಿ ನೀಡಿ ವೀಕ್ಷಣೆ ನಡೆಸುವ ಜೊತೆಗೆ ಈ ಭಾಗದ ರೈತರೊಂದಿಗೆ ಸಭೆ ನಡೆಸಿ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಮುಖ್ಯಮಂತ್ರಿಗಳು ಈ ಸಂಬಂಧ ಜಾಗತಿಕ ಮಟ್ಟದಲ್ಲಿ ಟೆಂಡರ್ ಕರೆಯುವಂತೆ ಆಗ್ರಹಿಸಿದ್ದಾರೆ. 

ಜೂ.೧೧ರಂದು ವಿದ್ಯುತ್ ವ್ಯತ್ಯಯ

ಭದ್ರಾವತಿ, ಜೂ. ೧೦: ತಾಲೂಕಿನ ಕೂಡ್ಲಿಗೆರೆ ೬೬/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಜೂ.೧೧ರ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೬ ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಬದನೆಹಾಳ್, ಬೆಳ್ಳಿಗೆರೆ, ಬಂಡಿಗುಡ್ಡ, ಹೊಸಹಳ್ಳಿ, ಕಲ್ಪನಹಳ್ಳಿ, ಕೂಡ್ಲಿಗೆರೆ, ಅರಳಿಹಳ್ಳಿ, ಗುಡ್ಡದನೇರಳೆಕೆರೆ, ಕಲ್ಲಾಪುರ, ದಾನವಾಡಿ, ಡಿ.ಬಿ ಹಳ್ಳಿ, ಅರಕೆರೆ, ಮಾರಶೆಟ್ಟಿಹಳ್ಳಿ, ಕಲ್ಲಿಹಾಳ್, ಅರಕೆರೆ, ಅರಬಿಳಚಿ, ತಿಮ್ಲಾಪುರ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

ಶತಾಯುಷಿ ಸರಸ್ವತಮ್ಮ ನಿಧನ

ಶತಾಯುಷಿ ಸರಸ್ವತಮ್ಮ 
ಭದ್ರಾವತಿ:  ಪತ್ರಕರ್ತ ಎನ್. ಬಾಬುರವರ ಮಾತೃಶ್ರೀ ಸರಸ್ವತಮ್ಮ ನಾರಾಯಣಮೂರ್ತಿ( ೧೦೩) ಮಂಗಳವಾರ ಸಂಜೆ ನಿಧನರಾದರು.
    ಎರಡು ಗಂಡು, ಎರಡು ಹೆಣ್ಣು, ಮೊಮ್ಮಕ್ಕಳು, ಸೊಸೆಯಂದಿರು ಸೇರಿದಂತೆ ಬಂಧು-ಬಳಗ ಬಿಟ್ಟಗಲಿದ್ದಾರೆ. ಹುತ್ತಾ ಕಾಲೋನಿ  ನಿವಾಸದಲ್ಲಿ  ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹುತ್ತಾ ಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ಬುಧವಾರ ಅಂತ್ಯಸಂಸ್ಕಾರ ನೆರವೇರಿಸಲಾಯಿತು 
    ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪತ್ರಿಕಾ ಭವನ ಟ್ರಸ್ಟ್  ಸೇರಿದಂತೆ ಇನ್ನಿತರೆ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.