ಅಣಕು ಪ್ರದರ್ಶನದಲ್ಲಿ ರೋಚಕ ಕಾರ್ಯಾಚರಣೆ
ಭದ್ರಾವತಿ ಅಪ್ಪರ್ ಹುತ್ತಾ ಸಮೀಪದ ಕಿರು ಕೈಗಾರಿಕಾ ಪ್ರದೇಶದಲ್ಲಿರುವ ಭದ್ರಾ ಕಾಸ್ಟ್ ಅಲೈ ಘಟಕದಲ್ಲಿ ಅಗ್ನಿಶಾಮಕ ಇಲಾಖೆವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೆಂಕಿ ಅವಘಡ ಅಣಕು ಪ್ರದರ್ಶನದ ಪ್ರಾತ್ಯಕ್ಷಿತೆಯಲ್ಲಿ ಕಾರ್ಮಿಕರನ್ನು ರಕ್ಷಿಸುತ್ತಿರುವುದು.
ಭದ್ರಾವತಿ, ಜೂ. ೧೦: ನಗರದ ಅಪ್ಪರ್ ಹುತ್ತಾ ಸಮೀಪದಲ್ಲಿರುವ ಕಿರು ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ಕಾರ್ಖಾನೆಯೊಂದರಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕಾರ್ಖಾನೆ ಒಳ ಭಾಗದಲ್ಲಿ ಸಿಲುಕಿಕೊಂಡ ಕಾರ್ಮಿಕರನ್ನು ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಪಾರು ಮಾಡಿದ ದೃಶ್ಯ ರೋಚಕವಾಗಿ ಕಂಡು ಬಂದಿತು. ಆದರೆ ಇದು ಸ್ವಾಭಾವಿಕ ಘಟನೆ ಅಲ್ಲ ಕೃತಕ ಘಟನೆ ಎಂಬುದು ಆ ನಂತರ ತಿಳಿದು ಬಂದಿತು.
ಆಕಸ್ಮಿಕವಾಗಿ ಬೆಂಕಿ ಅವಘಡಗಳು ಸಂಭವಿಸಿದಾಗ ಆತಂಕಕ್ಕೆ ಒಳಗಾಗದೆ ಸುರಕ್ಷಿತ ವಿಧಾನಗಳೊಂದಿಗೆ ಧೈರ್ಯವಾಗಿ ಕಾರ್ಯಾಚರಣೆಗೆ ಇಳಿದಾಗ ಮುಂದೆ ಸಂಭವಿಸಬಹುದಾದ ದೊಡ್ಡ ಪ್ರಮಾಣದ ಹಾನಿ ತಪ್ಪಿಸಲು ಸಾಧ್ಯ ಎಂಬುದನ್ನು ನಗರದ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಅಣಕು ಪ್ರದರ್ಶನದ ಮೂಲಕ ತೋರಿಸಿಕೊಟ್ಟರು.
ನಗರದ ಅಗ್ನಿಶಾಮಕ ಇಲಾಖೆ ಠಾಣಾಧಿಕಾರಿ ವಸಂತಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳು ಕಿರು ಕೈಗರಿಕಾ ಪ್ರದೇಶದಲ್ಲಿರುವ ಭದ್ರಾ ಕಾಸ್ಟ್ ಅಲೈ ಘಟಕದ ಕಾರ್ಮಿಕರಿಗೆ ಬೆಂಕಿ ಅವಘಡ ಸಂದರ್ಭಗಳಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು, ಪ್ರಥಮ ಚಿಕಿತ್ಸೆ ವಿಧಾನಗಳು, ಬೆಂಕಿ ನಂದಿಸುವ ಬಗೆ ಪ್ರಾತ್ಯಕ್ಷಿತೆ ಮೂಲಕ ತೋರಿಸಿಕೊಟ್ಟರು.
ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳಾದ ಅಶೋಕ್, ಸುರೇಶ್, ಕುಮಾರ್, ಬಾಬುಗೌಡ, ಕರಿಯಣ್ಣ, ಮಹೇಂದ್ರ, ರಾಜಾನಾಯ್ಕ ಅಣಕು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಭದ್ರಾಕಾಸ್ಟ್‌ಅಲೈ ಘಟಕದ ನಿರ್ದೇಶಕ ರಾಮಾಚಾರ್, ವ್ಯವಸ್ಥಾಪಕ ಹರೀಶ್, ಶ್ರೀಧರ್, ಚಂದ್ರಶೇಖರ್ ಸೇರಿದಂತೆ ಕಾರ್ಮಿಕರು ಉಪಸ್ಥಿತರಿದ್ದರು.
No comments:
Post a Comment