ಮಂಗಳವಾರ, ಜುಲೈ 26, 2022

ನೀರು ಮಿತವಾಗಿ ಸದ್ಬಳಕೆ ಮಾಡಿಕೊಂಡಲ್ಲಿ ೨ ಬೆಳೆ ಬೆಳೆಯಲು ಸಾಧ್ಯ

ಭದ್ರೆಗೆ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಎಚ್.ಆರ್ ಬಸವರಾಜಪ್ಪ

ಭದ್ರಾವತಿ ತಾಲೂಕಿನ ಬಿಆರ್‌ಪಿ ಭದ್ರಾ ಜಲಾಶಯದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್.ಆರ್ ಬಸವರಾಜಪ್ಪ ಸೇರಿದಂತೆ ರೈತರು ಭದ್ರೆಗೆ ಬಾಗಿನ ಸಮರ್ಪಿಸಿದರು. 
    ಭದ್ರಾವತಿ, ಜು. ೨೬: ಭದ್ರಾ ಜಲಾಶಯದ ನೀರು ಮಿತವಾಗಿ ಸಮರ್ಪಕವಾಗಿ ಬಳಕೆ ಮಾಡಿಕೊಂಡಲ್ಲಿ ರೈತರು ವಾರ್ಷಿಕ ೨ ಬೆಳೆಗಳನ್ನು ಬೆಳೆಯಲು ಸಾಧ್ಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್.ಆರ್ ಬಸವರಾಜಪ್ಪ ಹೇಳಿದರು.
    ಅವರು ಮಂಗಳವಾರ ತಾಲೂಕಿನ ಬಿಆರ್‌ಪಿ ಭದ್ರಾ ಜಲಾಶಯದಲ್ಲಿ ಭದ್ರೆಗೆ ಬಾಗಿನ ಸಮರ್ಪಿಸಿ ಮಾತನಾಡಿದರು. ಕೆಲವು ವರ್ಷಗಳಿಂದ ಜಲಾಶಯ ಪೂರ್ಣಪ್ರಮಾಣದಲ್ಲಿ ಭರ್ತಿಯಾಗುತ್ತಿದ್ದು, ಈ ಬಾರಿ ಇನ್ನೂ ಬೇಗನೆ ಪೂರ್ಣಗೊಂಡಿದೆ. ರೈತರು ಕಳೆದ ಬಾರಿ ೨ ಬೆಳೆಗಳನ್ನು ಬೆಳೆದಿದ್ದರು. ಈ ಬಾರಿ ಸಹ ನೀರನ್ನು ಮಿತವಾಗಿ ಬಳಸಿಕೊಂಡಲ್ಲಿ ೨ ಬೆಳೆಗಳನ್ನು ಬೆಳೆಯಲು ಸಾಧ್ಯ ಎಂದರು.
    ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಗೊಳಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಇದಕ್ಕೆ ಯಾವುದೇ ವಿರೋಧವಿಲ್ಲ. ಆದರೆ ಇನ್ನೂ ಮುಖ್ಯ ಕಾಲುವೆಗಳ ಆಧುನೀಕರಣ ಪೂರ್ಣಗೊಂಡಿಲ್ಲ.  ಉಪಕಾಲುವೆಗಳನ್ನು ನಿರ್ಮಾಣ ಮಾಡಿಲ್ಲ. ಇದರಿಂದಾಗಿ ನೀರು ವ್ಯರ್ಥವಾಗುತ್ತಿದೆ. ಈ ಹಿನ್ನಲೆಯಲ್ಲಿ ಸರ್ಕಾರ ತಕ್ಷಣ ಗಮನ ಹರಿಸಿ ಹೊಸದಾಗಿ ಕ್ರಿಯಾಯೋಜನೆ ರೂಪುರೇಷೆ ಸಿದ್ದಗೊಳಿಸಬೇಕೆಂದು ಆಗ್ರಹಿಸಿದರು.
    ಪ್ರಸ್ತುತ ನೀರು ವ್ಯರ್ಥವಾಗುತ್ತಿರುವ ಹಿನ್ನಲೆಯಲ್ಲಿ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯಲ್ಲಿನ ರೈತರು ಸಂಕಷ್ಟ ಎದುರಿಸುವಂತಾಗುತ್ತಿದೆ. ಈ ಹಿನ್ನಲೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ೧೨.೫ ಟಿ.ಎಂ.ಸಿ ನೀರನ್ನು ತುಂಗಾ ನದಿ ಜಲಾಶಯದಿಂದಿ ಬಳಸಿಕೊಳ್ಳಲು ಹೊಸದಾಗಿ ಕ್ರಿಯಾಯೋಜನೆ ಸಿದ್ದಪಡಿಸಬೇಕೆಂದು ಒತ್ತಾಯಿಸಿದರು.
    ಚಂದ್ರಪ್ಪ, ಈಶಣ್ಣ, ಇ.ಬಿ ಜಗದೀಶ್, ಎಸ್. ಶಿವಮೂರ್ತಿ, ರಾಘವೇಂದ್ರ, ಎಂ. ಮಹೇಶ್ವರಪ್ಪ, ನಾಗರಾಜ್, ಸಿ. ಚಂದ್ರಪ್ಪ ಮತ್ತು ಪಂಚಾಕ್ಷರಿ ಸೇರಿದಂತೆ ಇನ್ನಿತರ ರೈತ ಮುಖಂಡರು, ರೈತರು ಸೇರಿದಂತೆ ವಿವಿದ ಸಂಘ-ಸಂಸ್ಥೆಗಳ ಪ್ರಮುಖರು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.


ನಗರಸಭೆ ಮಾಜಿ ಉಪಾಧ್ಯಕ್ಷೆ ಕೆ.ಬಿ ಶ್ರೀಲಕ್ಷ್ಮಿಗೆ ಪುತ್ರ ವಿಯೋಗ

ಬಿ.ಕೆ ಅನಿಲ್‌ಕುಮಾರ್  
ಭದ್ರಾವತಿ, ಜು. ೨೬ : ನಗರಸಭೆ ಮಾಜಿ ಉಪಾಧ್ಯಕ್ಷೆ ಕೆ.ಬಿ ಶ್ರೀಲಕ್ಷ್ಮಿ ಅವರ ಪುತ್ರ ಬೊಮ್ಮನಕಟ್ಟೆ ನಿವಾಸಿ ಬಿ.ಕೆ ಅನಿಲ್‌ಕುಮಾರ್(೫೧) ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು.
ಎಂಪಿಎಂ ಕಾರ್ಮಿಕ ಮುಖಂಡ, ತಂದೆ ಬಿ.ಎನ್ ಕೃಷ್ಣಮೂರ್ತಿ, ತಾಯಿ ಕೆ.ಬಿ ಶ್ರೀಲಕ್ಷ್ಮಿ, ಪತ್ನಿ, ಇಬ್ಬರು ಪುತ್ರಿಯರು ಇದ್ದರು. ಮೃತರ ನಿಧನಕ್ಕೆ ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸದಸ್ಯ ಬಿ.ಕೆ ಮೋಹನ್, ಮಾಜಿ ಸದಸ್ಯರಾದ ವೆಂಕಟಯ್ಯ, ರಾಜು, ಪುಟ್ಟೇಗೌಡ, ಕುರುಹಿನಶೆಟ್ಟಿ ಸಮಾಜ, ದೇವಾಂಗ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.


ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ : ನಿಷೇಧಿತ ಪ್ಲಾಸ್ಟಿಕ್ ವಶ

ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸಿರುವ ಘಟನೆ ನಡೆದಿದೆ.
    ಭದ್ರಾವತಿ, ಜು. ೨೬: ನಗರಸಭೆ ವ್ಯಾಪ್ತಿಯಲ್ಲಿ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸಿರುವ ಘಟನೆ ನಡೆದಿದೆ.
    ಶಿವಮೊಗ್ಗ ಪರಿಸರ ಇಲಾಖೆ ಅಧಿಕಾರಿಗಳೊಂದಿಗೆ ಮಂಗಳವಾರ ನಗರದ ಸಿ.ಎನ್ ರಸ್ತೆ, ಭೂತನಗುಡಿ ವ್ಯಾಪ್ತಿಯಲ್ಲಿ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಲಾಯಿತು.
    ನಗರಸಭೆ ಪರಿಸರ ಅಭಿಯಂತರ ಪ್ರಭಾಕರ್, ಹಿರಿಯ ಆರೋಗ್ಯ ನಿರೀಕ್ಷಕರಾದ ಆರ್.ಬಿ ಸತೀಶ್, ಆಶಾಲತಾ ಸೇರಿದಂತೆ ಇನ್ನಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸರ್ಕಾರ ಜು.೧ರಿಂದ ರಾಜ್ಯಾದ್ಯಂತ ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದು, ನಗರಸಭೆ ಅಧಿಕಾರಿಗಳು ಪ್ರತಿದಿನ ದಾಳಿ ಕಾರ್ಯಾಚರಣೆ ಕೈಗೊಳ್ಳುತ್ತಿದ್ದಾರೆ. ಆದರೂ ಸಹ ಪ್ಲಾಸ್ಟಿಕ್ ಬಳಕೆ ಮುಂದುವರೆದಿದೆ.