ತಕ್ಷಣ ಮರಾಠಿ ಅಭಿವೃದ್ದಿ ಪ್ರಾಧಿಕಾರ ರದ್ದುಗೊಳಿಸಲು ಆಗ್ರಹ
ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ನೇತೃತ್ವದಲ್ಲಿ ಭದ್ರಾವತಿಯಲ್ಲಿ ವಿವಿಧ ಸಂಘಟನೆಗಳು ಶನಿವಾರ ಕರ್ನಾಟಕ ಬಂದ್ ಬೆಂಬಲಿಸುವ ಮೂಲಕ ರಾಜ್ಯ ಸರ್ಕಾರದ ಕನ್ನಡ ವಿರೋಧಿ ಧೋರಣೆಗಳನ್ನು ಖಂಡಿಸಿದವು.
ಭದ್ರಾವತಿ, ಡಿ. ೫: ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ನೇತೃತ್ವದಲ್ಲಿ ನಗರದ ವಿವಿಧ ಸಂಘಟನೆಗಳು ಶನಿವಾರ ಕರ್ನಾಟಕ ಬಂದ್ ಬೆಂಬಲಿಸುವ ಮೂಲಕ ರಾಜ್ಯ ಸರ್ಕಾರದ ಕನ್ನಡ ವಿರೋಧಿ ಧೋರಣೆಗಳನ್ನು ಖಂಡಿಸಿದವು.
ಕನ್ನಡ ನೆಲದಲ್ಲಿ ಎಲ್ಲರೂ ಒಗ್ಗಟ್ಟಾಗಿ ಸಹಬಾಳ್ವೆಯಿಂದ ಬದುಕುತ್ತಿದ್ದು, ಎಲ್ಲಾ ಧರ್ಮ, ಎಲ್ಲಾ ಜನಾಂಗದವರನ್ನು ಕನ್ನಡಿಗರಾಗಿ ಗುರುತಿಸಿ ಅವರ ಅಭಿವೃದ್ಧಿಗೆ ಸರ್ಕಾರ ಯೋಜನೆಗಳನ್ನು ರೂಪಿಸುವ ಬದಲು ಮರಾಠ ಜನಾಂಗದ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮೂಲಕ ಭಾಷಾವಾರು ವಿಭಜನೆಗೆ ಮುಂದಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ತಕ್ಷಣ ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದು ಪಡಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಎಂ. ಪರಮೆಶ್ವರ್ ಆಗ್ರಹಿಸಿದರು.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದು, ನಾಡು, ನೆಲ, ಜಲ, ಭಾಷೆ ಸೇರಿದಂತೆ ಸೂಕ್ಷ್ಮ ವಿಚಾರಗಳಲ್ಲಿ ಕನ್ನಡಪರ ಸಂಘಟನೆಗಳ ಜೊತೆ ಮಾತುಕತೆ ನಡೆಸದೆ ಏಕಾಏಕಿ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ. ಅಲ್ಲದೆ ಸರ್ಕಾರದ ಶಾಸಕರು, ಕಾರ್ಯಕರ್ತರು ಕನ್ನಡಪರ ಸಂಘಟನೆಗಳ ವಿರುದ್ಧ ಬಾಯಿ ಹರಿಬಿಡುತ್ತಿದ್ದಾರೆ. ಆದರೂ ಸಹ ಮುಖ್ಯಮಂತ್ರಿಗಳು ಮೌನಕ್ಕೆ ಶರಣಾಗಿರುವುದು ಒಳ್ಳೆಯ ಬೆಳೆವಣಿಗೆಯಲ್ಲ. ತಕ್ಷಣ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಕೈಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ಎಚ್ಚರಿಸಿದರು.
ಪ್ರಗತಿಪರ ಸಂಘಟನೆಗಳು ಹಾಗು ದಲಿತ ಸಂಘರ್ಷ ಸಮಿತಿ ಮುಖಂಡರು ಮಾತನಾಡಿ, ಸರ್ಕಾರ ಪ್ರತಿಯೊಂದು ಜಾತಿಗಳಿಗೂ ಪ್ರಾಧಿಕಾರ ರಚನೆ ಮಾಡುತ್ತಾ ಹೋದರೆ ಸುಮಾರು ೩೦೦ಕ್ಕೂ ಹೆಚ್ಚು ಪ್ರಾಧಿಕಾರ ರಚನೆ ಮಾಡಿ ಅವುಗಳಿಗೆ ಕೋಟ್ಯಾಂತರ ರು. ನೀಡುವ ಬದಲು ಎಲ್ಲಾ ಜಾತಿಯ, ಎಲ್ಲಾ ಭಾಷೆಯ, ಎಲ್ಲಾ ಧರ್ಮದ ಬಡವರಿಗಾಗಿ ಪ್ರಾಧಿಕಾರ ರಚಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಆರ್. ದಿಲೀಪ್, ತರುಣ, ಎನ್. ರಮೇಶ್, ಲೋಕೇಶ್, ಅಣ್ಣಪ್ಪ, ರಾಜು, ಮಹಿಳಾ ಘಟಕದ ಜಿಲ್ಲಾಪ್ರಧಾನ ಕಾರ್ಯದರ್ಶಿ ಶಾರದ, ಉಪಾಧ್ಯಕ್ಷೆ ಅನಿತಾ, ತಾಲೂಕು ಅಧ್ಯಕ್ಷೆ ಮಹೇಶ್ವರಿ, ಉಪಾಧ್ಯಕ್ಷೆ ಸುಮಿತ್ರ, ಸಂಘಟನಾ ಕಾರ್ಯದರ್ಶಿ ಗೀತಾ, ರಾದ, ಜಯಂತಿ, ಹೇಮಾ, ಜಾನಕಿ, ಪದ್ಮಮ್ಮ, ಶಾಂತ, ನಾಗರತ್ನಮ್ಮ, ಪ್ರಗತಿಪರ ಸಂಘಟನೆಗಳ ಪ್ರಮುಖರಾದ ಸುರೇಶ್, ಜಯರಾಜ್, ಈ.ಬಿ ಬಸವರಾಜ್, ಜೆಬಿಟಿ ಬಾಬು, ಜಿ. ರಾಜು, ಪ್ರಾನ್ಸಿಸ್, ಮುಸ್ವೀರ್‌ಪಾಷ, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ, ಅಂಗವಿಕಲರ ವಿಭಾಗದ ಜಿಲ್ಲಾಧ್ಯಕ್ಷ ಕಾಣಿಕ್‌ರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ನೇತೃತ್ವದಲ್ಲಿ ಭದ್ರಾವತಿಯಲ್ಲಿ ವಿವಿಧ ಸಂಘಟನೆಗಳು ಶನಿವಾರ ಕರ್ನಾಟಕ ಬಂದ್ ಬೆಂಬಲಿಸುವ ಮೂಲಕ ರಾಜ್ಯ ಸರ್ಕಾರದ ತಕ್ಷಣ ಮರಾಠಿ ಅಭಿವೃದ್ಧಿ ಪ್ರಾಧಿಕಾರ ರದ್ದುಗೊಳಿಸಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮನವಿ ಸಲ್ಲಿಸಿದವು.