Wednesday, April 14, 2021

ನಗರಸಭೆ ಚುನಾವಣೆ : ಏ.೧೫ ನಾಮಪತ್ರ ಸಲ್ಲಿಕೆ ಕೊನೆಯ ದಿನ

೮ ದಿನಗಳ ಅವಧಿಯಲ್ಲಿ ಕೇವಲ ೪ ದಿನ ಅವಕಾಶ, ಚುನಾವಣಾ ಆಯೋಗದ ವಿರುದ್ಧ ಅಸಮಾಧಾನ
ಭದ್ರಾವತಿ, ಏ. ೧೪: ಇಲ್ಲಿನ ನಗರಸಭೆ ೩೫ ವಾರ್ಡ್‌ಗಳಿಗೆ ಸುಮಾರು ೨ ವರ್ಷಗಳ ನಂತರ ಎದುರಾಗಿರುವ ಚುನಾವಣೆ ಒಂದೆಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಮತ್ತೊಂದೆಡೆ ನಾಮಪತ್ರ ಸಲ್ಲಿಕೆಗೆ ನಿಗದಿಪಡಿಸಿರುವ ಕಾಲಾವಕಾಶಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ವಿರುದ್ಧ ಅಸಮಾಧಾನ ಸಹ ವ್ಯಕ್ತವಾಗುತ್ತಿದೆ.
ಚುನಾವಣಾ ಆಯೋಗ ಏ.೮ ರಿಂದ ಏ.೧೫ರ ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಿದೆ. ಆದರೆ ಸುಮಾರು ೮ ದಿನಗಳ ಅವಧಿಯಲ್ಲಿ ಕೇವಲ ೪ ದಿನ ಮಾತ್ರ ನಾಮಪತ್ರ ಸಲ್ಲಿಕೆಗೆ ಅವಕಾಶ ಲಭಿಸಿದೆ. ಉಳಿದ ೪ ದಿನ ಸರ್ಕಾರಿ ರಜಾದಿನಗಳಾಗಿವೆ. ಇದರಿಂದಾಗಿ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವ ಆಕಾಂಕ್ಷಿಗಳಿಗೆ ತೊಂದರೆಯಾಗಿದೆ. ಕಡಿಮೆ ಅವಧಿಯಲ್ಲಿ ನಾಮಪತ್ರ ಸಲ್ಲಿಸಲು ಸಾಧ್ಯವಾಗದೆ ಚುನಾವಣಾ ಸ್ಪರ್ಧೆಯಿಂದ ವಂಚಿತರಾಗುವಂತಾಗಿದೆ. ಈ ಹಿನ್ನಲೆಯಲ್ಲಿ ನಾಮಪತ್ರ ಸಲ್ಲಿಸುವ ಅವಧಿ ವಿಸ್ತರಿಸುವಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗು ಆಕಾಂಕ್ಷಿಗಳು ಮನವಿ ಮಾಡಿದ್ದಾರೆ.

ಆರ್‌ಎಫ್‌ಓ ವಿರುದ್ಧದ ಅಕ್ರಮ ಚಟುವಟಿಕೆಗಳ ತನಿಖೆಗೆ ಸೂಚನೆ

ಭದ್ರಾವತಿ ಅರಣ್ಯ ವಿಭಾಗದ ಶಾಂತಿಸಾಗರ(ಮಾವಿನಕಟ್ಟೆ) ವಲಯದ ವಲಯ ಅರಣ್ಯಾಧಿಕಾರಿ ಮಾವಿನಹೊಳಿಯಪ್ಪನವರ ವಿರುದ್ಧದ ಅಕ್ರಮ ಚಟುವಟಿಕೆಗಳ ದೂರಿನ ತನಿಖೆ ನಡೆಸಲು ಸೂಚಿಸಿರುವುದು.
   ಭದ್ರಾವತಿ, ಏ. ೧೪: ಅರಣ್ಯ ಇಲಾಖೆಯ ತಾಲೂಕಿನ ಶಾಂತಿ ಸಾಗರ ವಲಯದ ವಲಯ ಅರಣ್ಯಾಧಿಕಾರಿ ಮಾವಿನಹೊಳಿಯಪ್ಪನವರ ವಿರುದ್ಧ ದಾಖಲಾಗಿರುವ ದೂರಿನ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಶಿವಮೊಗ್ಗ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.
    ತಾಲೂಕಿನ ಅಂತರಗಂಗೆಯ ಸಾಮಾಜಿಕ ಹೋರಾಟಗಾರ ಶಿವಕುಮಾರ್‌ರವರು ಭದ್ರಾವತಿ ಅರಣ್ಯ ವಿಭಾಗದ ಶಾಂತಿಸಾಗರ(ಮಾವಿನಕಟ್ಟೆ) ವಲಯದ ವಲಯ ಅರಣ್ಯಾಧಿಕಾರಿ ಮಾವಿನಹೊಳಿಯಪ್ಪನವರ ವಿರುದ್ಧ ಅರಣ್ಯ ಭೂಮಿ ಒತ್ತುವರಿ, ಅಕ್ರಮವಾಗಿ ಕೆಮ್ಮಣ್ಣು ಸಾಗಾಣಿಕೆ ಸೇರಿದಂತೆ ಒಟ್ಟು ೭ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಆದರೆ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಈ ದೂರಿನ ತನಿಖೆಯನ್ನು ಸರಿಯಾಗಿ ಕೈಗೊಳ್ಳದೆ ಕೇವಲ ಒಂದೆರಡು ಸಣ್ಣಪುಟ್ಟ ಪ್ರಕರಣ ದಾಖಲಿಸಿಕೊಂಡು ನಿರ್ಲಕ್ಷ್ಯತನ ವಹಿಸಿದ್ದರು.
    ಈ ಹಿನ್ನಲೆಯಲ್ಲಿ ಶಿವಕುಮಾರ್‌ರವರು ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ವಿರುದ್ಧ ಅಕ್ರಮ ಚಟುವಟಿಕೆಗಳಿಗೆ ಸಹಕರಿಸುತ್ತಿದ್ದಾರೆಂದು ಆರೋಪಿಸಿ ಶಿವಮೊಗ್ಗ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಈ ಬೆಳವಣಿಗೆಯಿಂದಾಗಿ ಇದೀಗ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ವಿವಿಧೆಡೆ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೦ನೇ ಜನ್ಮ ದಿನ

ಭದ್ರಾವತಿ, ಏ. ೧೪: ಕೊರೋನಾ ನಡುವೆಯೂ ನಗರದ ವಿವಿಧೆಡೆ ಬುಧವಾರ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೦ನೇ ಜನ್ಮ ದಿನ ಅದ್ದೂರಿಯಾಗಿ ಆಚರಿಸಲಾಯಿತು.
ಮಕ್ಕಳನ್ನು ವಿದ್ಯಾವಂತರನ್ನಾಗಿಸಿ :
    ನಗರದ ರಂಗಪ್ಪವೃತ್ತ ಸಮೀಪ ಜೈಭೀಮಾ ನಗರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೦ನೇ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಮಾತನಾಡಿ, ದಲಿತರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಿದಾಗ ಮಾತ್ರ ಅಂಬೇಡ್ಕರ್‌ರವರ ಆಶಯ ಈಡೇರಿದಂತಾಗುತ್ತದೆ. ಪ್ರತಿಯೊಬ್ಬರು ಅಂಬೇಡ್ಕರ್‌ರವರ  ಆಶಯದಂತೆ ನಡೆದುಕೊಳ್ಳಬೇಕೆಂದರು.


   ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ಡಿ. ಲಕ್ಷ್ಮೀದೇವಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಾಗರಾಜ್, ಕಾರ್ಯನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ನಗರಸಭೆ ಪೌರಾಯುಕ್ತ ಮನೋಹರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್. ಕೃಷ್ಣಪ್ಪ, ಕಂದಾಯಾಧಿಕಾರಿ ಪ್ರಶಾಂತ್, ಮಾರುತಿ ಮೆಡಿಕಲ್ ಆನಂದ್, ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ, ತಾಲೂಕು ಸಂಚಾಲಕ ರಂಗನಾಥ್, ನೌಕರರ ಒಕ್ಕೂಟದ ಸಿ. ಜಯಪ್ಪ, ಎಸ್. ಉಮಾ, ನಗರಸಭೆ ಎನ್. ಗೋವಿಂದ, ನವೀನ್, ಹರೀಶ್, ಮಂಜು, ಶಂಕರ್, ಶಶಿ, ಕಿರಣ್, ನಾಗರಾಜ್, ಮಂಜುನಾಥ್, ಎಂ. ಕೃಷ್ಣ, ಗಂಗಾಧರ್, ಕೇಶವ, ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

  
       ನಿಗರ್ತಿಕರು, ಅಂಗವಿಕಲರಿಗೆ ಉಚಿತ ಕ್ಷೌರ  :
       ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೦ನೇ ಜನ್ಮದಿನದ ಅಂಗವಾಗಿ ತಾಲೂಕು ಸವಿತಾ ಸಮಾಜ ಹಾಗು ನ್ಯೂಟೌನ್ ದಯಾಸಾಗರ್ ಟ್ರಸ್ಟ್ ವತಿಯಿಂದ ನಿಗರ್ತಿಕರು, ಅಂಗವಿಕಲರಿಗೆ ಉಚಿತವಾಗಿ ಕ್ಷೌರ ಮಾಡಲಾಯಿತು.
   ದಾನಿ ಮಾರುತಿ ಮೆಡಿಕಲ್ಸ್ ಆನಂದ್, ತಾಲೂಕು ಸವಿತಾ ಸಮಾಜ ಅಧ್ಯಕ್ಷ ವಿಶ್ವನಾಥ್, ಪ್ರಮುಖರಾದ ಮಹೇಶ್, ಗೋಪಿ, ಕರಾವೇ ತಾಲೂಕು ಅಧ್ಯಕ್ಷ ಎಂ. ಪರಮೇಶ್ ಹಾಗು ದಯಾಸಾಗರ್ ಟ್ರಸ್ಟ್‌ನ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


        ಅಂಬೇಡ್ಕರ್ ಭವನ ಮುಂಭಾಗ :
   ನಗರದ ಹೃದಯ ಭಾಗದಲ್ಲಿ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗದಲ್ಲಿ ಮುಕ್ತಾಯದ ಹಂತದಲ್ಲಿರುವ ಅಂಬೇಡ್ಕರ್ ಭವನದ ಮುಂಭಾಗ ಈ ಬಾರಿ ವಿಶೇಷವಾಗಿ ಅಂಬೇಡ್ಕರ್ ಭವನ ಹೋರಾಟ ಸಮಿತಿ ವತಿಯಿಂದ ಅಂಬೇಡ್ಕರ್ ಜನ್ಮ ದಿನ ಆಚರಿಸಲಾಯಿತು.
   ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸುವ ಮೂಲಕ ಸಿಹಿ ಹಂಚಲಾಯಿತು. ಹೋರಾಟ ಸಮಿತಿಯ ಪ್ರಮುಖರಾದ ವಿಜಿಯಮ್ಮ, ಬಿ.ಎನ್ ರಾಜು, ಚಂದ್ರಶೇಖರ್, ಸುಬ್ಬೇಗೌಡ, ಬ್ರಹ್ಮಲಿಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



        ಅಖಿಲ ಭಾರತ ವಿದ್ಯಾರ್ಥಿ ಪರಿಷತ್ :
    ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಅಂಬೇಡ್ಕರ್ ಜನ್ಮದಿನಾಚರಣೆ ಅಂಗವಾಗಿ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾರ್ಲಾಪಣೆ ಮಾಡಲಾಯಿತು. ಆಕಾಶ್, ಮನು, ಅಖಿಲೇಶ್, ಅಶ್ರಿತ, ಸ್ಪೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
 

        ಛಲವಾದಿ ಸಮಾಜ(ಪರಿಶಿಷ್ಟ ಜಾತಿ):
    ನಗರದ ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದಲ್ಲಿರುವ ತಾಲೂಕು ಛಲವಾದಿ ಸಮಾಜದ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೦ನೇ ಜನ್ಮದಿನ ಆಚರಿಸಲಾಯಿತು.
ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಲಾಯಿತು. ಸಮಾಜದ ಅಧ್ಯಕ್ಷ ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಎಚ್.ಎಂ ಮಹಾದೇವಯ್ಯ, ಎಸ್.ಎಸ್ ಭೈರಪ್ಪ, ಡಿ. ನರಸಿಂಹಮೂರ್ತಿ, ಲೋಕೇಶ್ ಮಾಳೇನಹಳ್ಳಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
 


         ಆಮ್ ಆದ್ಮಿ ಪಾರ್ಟಿ :
    ಆಮ್ ಆದ್ಮಿ ಪಾರ್ಟಿ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೦ನೇ ಜನ್ಮದಿನ ಆಚರಿಸಲಾಯಿತು. ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾರ್ಲಾಪಣೆ ಮಾಡಲಾಯಿತು.
     ಪಕ್ಷದ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ಪರಮೇಶ್ವರಚಾರ್, ಎನ್.ಪಿ ಜೋಸೆಫ್, ಇಬ್ರಾಹಿಂ ಖಾನ್, ಗೀತಾ, ಬಸವಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
  

       ಛಲವಾದಿ ಮಹಾಸಭಾ:
   ತಾಲೂಕು ಛಲವಾದಿ ಮಹಾಸಭಾ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೦ನೇ ಜನ್ಮದಿನ ಆಚರಿಸಲಾಯಿತು. ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾರ್ಲಾಪಣೆ ಮಾಡಲಾಯಿತು.
   ಮಹಾಸಭಾ ತಾಲೂಕು ಅಧ್ಯಕ್ಷ ಸುರೇಶ್, ಮುಖಂಡರಾದ ಜಯರಾಜ್, ಈ.ಪಿ ಬಸವರಾಜ್, ಜಗದೀಶ್, ಆದಿತ್ಯಶಾಮ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
      

       ಬಂಜಾರ ಯುವಕರ ಸಂಘ :
    ತಾಲೂಕು ಬಂಜಾರ ಯುವಕರ ಸಂಘದ ವತಿಯಿಂದ ಸಿರಿಯೂರು ಗ್ರಾಮದಲ್ಲಿ  ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೦ನೇ ಜನ್ಮದಿನ ಆಚರಿಸಲಾಯಿತು.
  ಸಿರಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ್, ಪ್ರಮುಖರಾದ ಶೋಭಾಬಾಯಿ, ಅರುಣ್‌ನಾಯ್ಕ, ಕೃಷ್ಣನಾಯ್ಕ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


       ಬಿಜೆಪಿ ನಗರಸಭೆ ೧೦ನೇ ವಾರ್ಡ್ :
  ಭಾರತೀಯ ಜನತಾ ಪಕ್ಷ ನಗರಸಭೆ ೧೦ನೇ ವಾರ್ಡ್‌ನ ಪ್ರಮುಖರು ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೦ನೇ ಜನ್ಮದಿನದ ಅಂಗವಾಗಿ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
     ಕರ್ನಾಟಕ ರಾಜ್ಯ ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿ ಸದಸ್ಯ ಮಂಗೋಟೆ ರುದ್ರೇಶ್, ಮಲ್ಲೇಶ್, ಸುನಿಲ್ ಗಾಯಕ್‌ವಾಡ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.


       ವಿಶ್ವೇಶ್ವರಾಯ ವಿದ್ಯಾಸಂಸ್ಥೆ :
   ನಗರದ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೦ನೇ ಜನ್ಮದಿನ ಆಚರಿಸಲಾಯಿತು.
    ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಲ್ ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪದನಿಮಿತ್ತ ಅಧ್ಯಕ್ಷ ಎನ್. ಕೃಷ್ಣಪ್ಪ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
    ಪ್ರಾಧ್ಯಾಪಕ ಡಾ. ಧನಂಜಯ, ಎಂ.ಎಸ್ ಬಸವರಾಜ್, ಕೆ. ನಿಂಗಪ್ಪ, ಶಿವಲಿಂಗೇಗೌಡ, ಎ.ಎಚ್ ಶಕುಂತಲಾ, ಎಂ. ಹೇಮಾವತಿ, ಜೆಸಿಂತಾ ಕೆ. ಚೈತ್ರ, ಕವಿತಾ, ಆರ್. ರವಿ, ಶಿಲ್ಪ, ಎನ್. ರೇಣುಕಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಬಾಬಾ ಸಾಹೇಬ್ ಅಂಬೇಡ್ಕರ್ ಹೋರಾಟದ ಜಾಗೃತಿ ಸಂಕೇತ : ಡಾ. ಬಿ.ಜಿ ಧನಂಜಯ

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಆರ್ ಅಂಬೇಡ್ಕರ್‌ರವರ ೧೩೦ನೇ ಜನ್ಮದಿನ ಕಾರ್ಯಕ್ರಮದಲ್ಲಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯರನ್ನು ಸನ್ಮಾನಿಸಲಾಯಿತು.
   ಭದ್ರಾವತಿ, ಏ. ೧೪: ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಸಾಮಾಜಿಕ ಹೋರಾಟದ ಜಾಗೃತಿ ಸಂಕೇತವಾಗಿದ್ದು, ಅವರ ಆಶಯದಂತೆ ನಾವೆಲ್ಲರೂ ಮುನ್ನಡೆಯಬೇಕಾಗಿದೆ ಎಂದು ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ತಿಳಿಸಿದರು.
   ಅವರು ಬುಧವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಆರ್ ಅಂಬೇಡ್ಕರ್‌ರವರ ೧೩೦ನೇ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
   ದೇಶದಲ್ಲಿ ಚಳುವಳಿಗಳನ್ನು ಹುಟ್ಟು ಹಾಕುವ ಮೂಲಕ ಚಳುವಳಿಗಳಿಗೆ ಒಂದು ರೂಪುರೇಷೆ ಕೊಟ್ಟವರು ಅಂಬೇಡ್ಕರ್. ಅವರು ಚಳುವಳಿಗಳು ಯಾವ ದಿಕ್ಕಿನಲ್ಲಿ ಸಾಗಬೇಕೆಂಬುದನ್ನು ತೋರಿಸಿಕೊಟ್ಟಿದ್ದರು. ಆದರೆ ಇಂದು ಚಳುವಳಿಗಳು ಯಾವ ದಿಕ್ಕಿನಲ್ಲಿ ಸಾಗಬೇಕೆಂಬುದು ತಿಳಿಯದೆ ಗೊಂದಲದ ಗೂಡಾಗಿ ಪರಿಣಮಿಸುತ್ತಿವೆ. ಚಳುವಳಿಗಳು ತಮ್ಮ ಮಹತ್ವ ಕಳೆದುಕೊಳ್ಳುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
   ಅಂಬೇಡ್ಕರ್‌ರವರು ಮನುಕುಲದ ಮಹಾನ್ ನಾಯಕರಾಗಿದ್ದು, ಅವರ ವಿಚಾರಧಾರೆಗಳು ಅಪರೂಪದಲ್ಲಿ ಅಪರೂಪ. ಶೋಷಣೆ ಮುಕ್ತ, ಸರ್ವ ಸಮಾನತೆ ಸಮಾಜ ನಿರ್ಮಾಣ ಇವರ ಆಶಯವಾಗಿತ್ತು.  ದೇಶದಲ್ಲಿ ಸಾಮಾಜಿಕ ಸಮಾನತೆ ಜೊತೆಗೆ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗಗಳ ಮೂಲಕ ಉತ್ತಮ ಆಡಳಿತ ವ್ಯವಸ್ಥೆಯ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣ ಇವರ ಬಹುದೊಡ್ಡ ಕೊಡುಗೆಯಾಗಿದೆ ಎಂದರು.
    ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ಡಿ. ಲಕ್ಷ್ಮೀದೇವಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಾಗರಾಜ್, ಕಾರ್ಯನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ನಗರಸಭೆ ಪೌರಾಯುಕ್ತ ಮಹೋಹರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್. ಕೃಷ್ಣಪ್ಪ, ತಹಸೀಲ್ದಾರ್ ಗ್ರೇಡ್-೨ ರಂಗಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.