Monday, July 20, 2020

ಜಿಲ್ಲೆಯಲ್ಲಿಯೇ ಅತಿಹೆಚ್ಚು ಸೋಂಕು ಉಕ್ಕಿನ ನಗರದಲ್ಲಿ ಪತ್ತೆ : ಒಂದೇ ದಿನ ೭ ಸೋಂಕು

ಭದ್ರಾವತಿ, ಜು. ೨೦: ಉಕ್ಕಿನ ನಗರದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೋಮವಾರ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸೋಂಕು ನಗರದಲ್ಲಿ ಪತ್ತೆಯಾಗಿದೆ. 
ಜಿಲ್ಲಾ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಒಟ್ಟು ೬ ಸೋಂಕು ಪತ್ತೆಯಾಗಿದ್ದು, ಆದರೆ ತಾಲೂಕು ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ೭ ಸೋಂಕು ಪತ್ತೆಯಾಗಿವೆ. ಇದೆ ಮೊದಲ ಬಾರಿಗೆ ಜುಲೈ ತಿಂಗಳಿನಲ್ಲಿ ೫ಕ್ಕೂ ಹೆಚ್ಚು ಸೋಂಕು ಪತ್ತೆಯಾಗಿದ್ದು, ಕಾಗದನಗರದಲ್ಲಿ ೫೪ ವರ್ಷದ ವ್ಯಕ್ತಿಗೆ, ಹುತ್ತಾಕಾಲೋನಿ ೩೬ ವರ್ಷ ವಯಸ್ಸಿನ ವಿಐಎಸ್‌ಎಲ್ ಕಾರ್ಖಾನೆ ಉದ್ಯೋಗಿಗೆ, ಗೋಲ್ಡನ್ ಜ್ಯೂಬಿಲಿಯಲ್ಲಿ ೪೨ ವರ್ಷದ ಮಹಿಳೆಗೆ, ಶಿವರಾಮನಗರದಲ್ಲಿ ೪೨ ವರ್ಷದ ವ್ಯಕ್ತಿಗೆ, ಶ್ರೀರಾಮನಗರದ ೫೫ ವರ್ಷದ ಮಹಿಳೆಗೆ, ಸಿರಿಯೂರು ತಾಂಡದಲ್ಲಿ ೫ ವರ್ಷದ ಮಗುವಿಗೆ ಮತ್ತು ಕೆಂಚೇನಹಳ್ಳಿ ಗ್ರಾಮದಲ್ಲಿ ೨೦ ವರ್ಷದ ಯುವತಿಗೆ ಸೋಂಕು ತಗುಲಿದೆ. 
೭ ಪ್ರಕರಣಗಳ ಪೈಕಿ ೫ ನಗರಸಭೆ ವ್ಯಾಪ್ತಿಯಲ್ಲಿದ್ದು, ಇದರಿಂದಾಗಿ ನಗರದ ನಾಗರೀಕರಲ್ಲಿ ಆತಂಕ ಹೆಚ್ಚಾಗಿದೆ. ಜೂನ್ ಅಂತ್ಯದಲ್ಲಿ ಒಂದೇ ದಿನ ೭ ಸೋಂಕು ಪತ್ತೆಯಾಗಿತ್ತು. ಆನಂತರ ಸೋಂಕಿನ ಪ್ರಮಾಣದಲ್ಲಿ ಏರಿಳಿತ ಕಂಡು ಬಂದಿತ್ತು. 
ನಗರಸಭೆ, ಆರೋಗ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಸೋಂಕು ಪತ್ತೆಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,  ಸ್ಯಾನಿಟೈಜರ್ ಕೈಗೊಂಡು ೧೦೦ ಹಾಗೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯವನ್ನಾಗಿಸಿದ್ದಾರೆ. 

ಖಾಸಗಿ ಶಾಲೆ ವಿರುದ್ಧ ಬಲವಂತದಿಂದ ಶುಲ್ಕ ವಸೂಲಾತಿ ಆರೋಪ

ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೊಂದ ಪೋಷಕರಿಂದ ದೂರು 

ಭದ್ರಾವತಿ ನ್ಯೂಟೌನ್ ಭಾಗದ ಖಾಸಗಿ ಶಾಲೆಯೊಂದರ ಆಡಳಿತ ಮಂಡಳಿ ಪೋಷಕರಿಗೆ ಬಲವಂತವಾಗಿ ಶುಲ್ಕ ಪಾವತಿಸುವಂತೆ ಒತ್ತಾಯಿಸುತ್ತಿದ್ದು, ಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಂಯುಕ್ತ ಜನಾತದಳ ರಾಜ್ಯ ಯುವ ಮುಖಂಡ ಶಶಿಕುಮಾರ್ ಎಸ್. ಗೌಡ ನೇತೃತ್ವದಲ್ಲಿ ನೊಂದ ಪೋಷಕರಿಂದ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 
ಭದ್ರಾವತಿ, ಜು. ೨೦: ನಗರದ ನ್ಯೂಟೌನ್ ಭಾಗದ ಖಾಸಗಿ ಶಾಲೆಯೊಂದರ ಆಡಳಿತ ಮಂಡಳಿ ಪೋಷಕರಿಗೆ ಬಲವಂತವಾಗಿ ಶುಲ್ಕ ಪಾವತಿಸುವಂತೆ ಒತ್ತಾಯಿಸುತ್ತಿದ್ದು, ಪ್ರಸ್ತುತ ಎದುರಾಗಿರುವ ಸಂದಿಗ್ದ ಪರಿಸ್ಥಿತಿಯಲ್ಲಿ ಬಲವಂತವಾಗಿ ಶುಲ್ಕ ವಸೂಲಾತಿ ಮಾಡುವುದು ಸರಿಯಲ್ಲ. ಈ ಸಂಬಂಧ ಸರ್ಕಾರ ಸಹ ಆದೇಶ ಹೊರಡಿಸಿದ್ದು, ಈ ಹಿನ್ನಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಂಯುಕ್ತ ಜನಾತದಳ ರಾಜ್ಯ ಯುವ ಮುಖಂಡ ಶಶಿಕುಮಾರ್ ಎಸ್. ಗೌಡ ನೇತೃತ್ವದಲ್ಲಿ ನೊಂದ ಪೋಷಕರಿಂದ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 
ಪ್ರಸ್ತುತ ವಿಶ್ವದೆಲ್ಲೆಡೆ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಲಾಕ್‌ಡೌನ್ ಪರಿಣಾಮ ಯಾವುದೇ ಉದ್ಯೋಗ, ವಹಿವಾಟು ಇಲ್ಲದೆ ಆರ್ಥಿಕ ಸಂಕಷ್ಟ ಎದುರಾಗಿದೆ. ಶ್ರೀಸಾಮಾನ್ಯರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ನ್ಯೂಟೌನ್ ಸೆಂಟ್‌ಚಾರ್ಲ್ಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಪೋಷಕರಿಗೆ ಕರೆ ಮಾಡಿ ಶುಲ್ಕ ಪಾವತಿಸುವಂತೆ ಒತ್ತಾಯಿಸುತ್ತಿದೆ ಎಂದು ಆರೋಪಿಸಲಾಯಿತು. 
ಈ ಹಿಂದೆ ನಗರದಲ್ಲಿ ಖಾಸಗಿ ಶಾಲೆಗಳು ಬಲವಂತದಿಂದ ಶುಲ್ಕ ವಸೂಲಾತಿ ಮಾಡದಿರುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಸಹ ಖಾಸಗಿ ಶಾಲೆಗಳು ಶುಲ್ಕ ವಸೂಲಾತಿ ಮಾಡುತ್ತಿವೆ. ತಕ್ಷಣ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಜು.೨೭ರಿಂದು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಲಾಯಿತು. 
ನೊಂದ ಪೋಷಕರಾದ ಡಿ. ಮಂಜುನಾಥ್, ನಾಗರಾಜು, ಮಧುಸೂದನ್, ಶಿವಕುಮಾರ್ ಮತ್ತು ಸತೀಶ್, ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೋವಿಡ್-೧೯ರ ನಗರ ಟಾಕ್ಸ್ ಫೋರ್ಸ್ ಕಾರ್ಯಪಡೆ ಸದಸ್ಯರಿಗೆ ಕಾರ್ಯಾಗಾರ

ಭದ್ರಾವತಿ ನಗರಸಭೆ ವತಿಯಿಂದ ಕೋವಿಡ್-೧೯ರ ನಗರ ಟಾಕ್ಸ್ ಫೋರ್ಸ್ ಕಾರ್ಯಪಡೆ ಸದಸ್ಯರಿಗೆ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಆನ್‌ಲೈನ್ ತರಬೇತಿ ಕಾರ್ಯಾಗಾರವನ್ನು ಶಿವಮೊಗ್ಗ ಅಭಿವೃದ್ಧಿ ಯೋಜನಾ ನಿರ್ದೇಶಕ ನಾಗೇಂದ್ರ ಹೊನ್ನಾಳಿ ಉದ್ಘಾಟಿಸಿದರು.
ಭದ್ರಾವತಿ, ಜು. ೨೦: ನಗರಸಭೆ ವತಿಯಿಂದ ಕೋವಿಡ್-೧೯ರ ನಗರ ಟಾಕ್ಸ್ ಫೋರ್ಸ್ ಕಾರ್ಯಪಡೆ ಸದಸ್ಯರಿಗೆ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಆನ್‌ಲೈನ್ ತರಬೇತಿ ಕಾರ್ಯಾಗಾರವನ್ನು ಶಿವಮೊಗ್ಗ ಅಭಿವೃದ್ಧಿ ಯೋಜನಾ ನಿರ್ದೇಶಕ ನಾಗೇಂದ್ರ ಹೊನ್ನಾಳಿ ಉದ್ಘಾಟಿಸಿದರು.
ಹಳೇನಗರದ ವೀರಭದ್ರೇಶ್ವರ ಚಿತ್ರ ಮಂದಿರ, ನಗರಸಭೆ ಸರ್.ಎಂ ವಿಶ್ವೇಶ್ವರಯ್ಯ ಸಭಾಂಗಣ ಹಾಗೂ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಭದ್ರಾವತಿ ನಗರಸಭೆ ವತಿಯಿಂದ ಕೋವಿಡ್-೧೯ರ ನಗರ ಟಾಕ್ಸ್ ಫೋರ್ಸ್ ಕಾರ್ಯಪಡೆ ಸದಸ್ಯರಿಗೆ ಸೋಮವಾರ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಆನ್‌ಲೈನ್ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಸಮುದಾಯದಲ್ಲಿ ಕೋವಿಡ್-೧೯ ಯಶಸ್ವಿಯಾಗಿ ನಿರ್ವಹಿಸಲು ಅನುಸರಿಸಬೇಕಾದ ಪ್ರಮುಖ ಕ್ರಮಗಳು, ಸೋಂಕಿಗೆ ಒಳಗಾದವರನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸುವುದು. ಸೋಂಕು ಹರಡದಂತೆ ಮುನ್ನಚ್ಚರಿಕೆ ವಹಿಸುವುದು. ಸಾರ್ವಜನಿಕ ಸ್ಥಳಗಳಲ್ಲಿ ವಹಿಸಬೇಕಾದ ಅಗತ್ಯ ಕ್ರಮಗಳು ಹಾಗೂ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಇತ್ಯಾದಿ ವಿಷಯಗಳನ್ನು ಕಾರ್ಯಾಗಾರದಲ್ಲಿ ಆನ್‌ಲೈನ್ ಮೂಲಕ ತಿಳಿಸಿಕೊಡಲಾಯಿತು.
ಭದ್ರಾವತಿ ನಗರಸಭೆ ವತಿಯಿಂದ ಕೋವಿಡ್-೧೯ರ ನಗರ ಟಾಕ್ಸ್ ಫೋರ್ಸ್ ಕಾರ್ಯಪಡೆ ಸದಸ್ಯರಿಗೆ ಸೋಮವಾರ ನಗರಸಭೆ ಸರ್.ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆನ್‌ಲೈನ್ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ ಮತ್ತು ಕಂದಾಯಾಧಿಕಾರಿ ರಾಜ್‌ಕುಮಾರ್ ನೇತೃತ್ವದಲ್ಲಿ ೩ ಕಡೆ ಕಾರ್ಯಾಗಾರ ಯಶಸ್ವಿಯಾಗಿ ಜರುಗಿತು. ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಟಾಕ್ಸ್ ಫೋರ್ಸ್ ಕಾರ್ಯಪಡೆ ಸದಸ್ಯರು ಪಾಲ್ಗೊಂಡಿದ್ದರು.