ಭದ್ರಾವತಿ, ಜ. ೯: ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಹಿಂಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದನ್ನು ಖಂಡಿಸಿ ಹಾಗು ಬಗರ್ ಹುಕುಂ ರೈತರ ಮತ್ತು ನಿವೇಶನ ರಹಿತ ಬಡವರ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಮಾನವ ಹಕ್ಕುಗಳ ಹೋರಟ ಸಮಿತಿ ವತಿಯಿಂದ ಜ.೧೧ರಂದು ಬೆಳಿಗ್ಗೆ ೧೧ ಗಂಟೆಗೆ ತಾಲೂಕು ಕಛೇರಿ ಮುಂಭಾಗ ಪ್ರತಿಭಟನಾ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
೨೦೧೭ರಲ್ಲಿ ಆರಂಭಗೊಂಡಿರುವ ಅಂಬೇಡ್ಕರ್ ಭವನ ಕಾಮಗಾರಿ ಇಂದಿಗೂ ಮುಕ್ತಾಯಗೊಂಡಿಲ್ಲ. ತಕ್ಷಣ ಸರ್ಕಾರ ೫.೫೦ ಕೋ.ರು. ಹಣ ಬಿಡುಗಡೆಗೊಳಿಸಿ ಕಾಮಗಾರಿಯನ್ನು ಶೀಘ್ರವಾಗಿ ಮುಕ್ತಾಯಗೊಳಿಸುವಂತೆ ಹಾಗು ತಾಲೂಕಿನಲ್ಲಿ ಬಗರ್ ಹುಕುಂ ರೈತರು, ನಿವೇಶನ ರಹಿತ ಬಡವರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದು, ಈ ಸಂಬಂಧ ಹಲವಾರು ಬಾರಿ ಹೋರಾಟ ನಡೆಸಿ ಮನವಿ ಸಹ ಸಲ್ಲಿಸಲಾಗಿದೆ. ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಪ್ರತಿಭಟನಾ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ವಿವಿಧ ಸಂಘ-ಸಂಸ್ಥೆಗಳು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಕೋರಿದ್ದಾರೆ.