Saturday, May 23, 2020

ರಂಜಾನ್ : ಶಾಂತಿ ಸಭೆ

ರಂಜಾನ್ ಹಬ್ಬದ ಹಿನ್ನಲೆಯಲ್ಲಿ ನಗರದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಿಕೊಳ್ಳಲು ಶನಿವಾರ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು. 
ಭದ್ರಾವತಿ, ಮೇ. ೨೩: ರಂಜಾನ್ ಹಬ್ಬದ ಹಿನ್ನಲೆಯಲ್ಲಿ ನಗರದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಿಕೊಳ್ಳಲು ಶನಿವಾರ ಹಳೇನಗರ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು.
ಈ ಬಾರಿ ದೇಶಾದ್ಯಂತ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ  ಮುಸ್ಲಿಂ ಸಮುದಾಯದ ಪ್ರತಿಯೊಬ್ಬರು ರಂಜಾನ್ ಹಬ್ಬವನ್ನು ಮನೆಯಲ್ಲಿಯೇ ಇದ್ದು ಸರಳವಾಗಿ ಆಚರಿಸುವ ಮೂಲಕ ಕೊರೋನಾ ವೈರಸ್ ನಿಯಂತ್ರಣಕ್ಕೆ ಸಹಕರಿಸಬೇಕೆಂದು ಮನವಿ ಮಾಡಲಾಯಿತು.
ಹಳೇನಗರ ಪೊಲೀಸ್ ಠಾಣಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಯಿತು. ಮುಸ್ಲಿಂ ಸಮುದಾಯದ ಪ್ರಮುಖರಾದ ಸಿ.ಎಂ ಖಾದರ್, ಜಹೀರ್‌ಜಾನ್, ಜೆಬಿಟಿ ಬಾಬು, ಹಫೀಜ್ ಉರ್ ರಹಮಾನ್, ಮುರ್ತುಜಾ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಎಪಿಎಂಸಿ : ಮೇ.೨೪ರಂದು ವ್ಯಾಪಾರ, ವಹಿವಾಟು ಸ್ಥಗಿತ

ಭದ್ರಾವತಿ, ಮೇ. ೨೩: ಸರ್ಕಾರದ ಮಾರ್ಗಸೂಚಿಗಳ ಅನ್ವಯ ಮೇ.೩೧ರ ವರೆಗೆ ಲಾಕ್‌ಡೌನ್ ಜಾರಿಯಲ್ಲಿದ್ದು, ಭಾನುವಾರ ಸಂಪೂರ್ಣ ಲಾಕ್‌ಡೌನ್ ಘೋಷಿಸಿರುವ ಹಿನ್ನಲೆಯಲ್ಲಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಯಾವುದೇ ವ್ಯಾಪಾರ, ವಹಿವಾಟು ಇರುವುದಿಲ್ಲ.
ಕೋವಿಡ್-೧೯ ಸೋಂಕು ಹರಡದಂತೆ ತಡೆಗಟ್ಟುವ ಉದ್ದೇಶದಿಂದ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ. ಈ ಹಿನ್ನಲೆಯಲ್ಲಿ ರೈತರು, ಸಾರ್ವಜನಿಕರು ಸಹಕರಿಸುವಂತೆ ಸಮಿತಿ ಕಾರ್ಯದರ್ಶಿ ಕೋರಿದ್ದಾರೆ.

ಏಕಾಏಕಿ ಕ್ವಾರಂಟೈನ್ ನಿರ್ಮಾಣ ಸ್ಥಳೀಯರ ವಿರೋಧ : ಪ್ರತಿಭಟನೆ

ಮಹಾರಾಷ್ಟ್ರದಿಂದ ಬಂದ ೧೮ ಜನ : ಕೊರೋನಾ ವೈರಸ್ ಭೀತಿ 

ಭದ್ರಾವತಿ ತಾಲೂಕಿನ ಹುಣಸೆಕಟ್ಟೆ ಜಂಕ್ಷನ್ ಸಮೀಪದಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ  ಏಕಾಏಕಿ ಕ್ವಾರಂಟೈನ್ ನಿರ್ಮಾಣ ಮಾಡಿರುವುದನ್ನು ವಿರೋಧಿಸಿ ಗ್ರಾಮಸ್ಥರು ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಿದರು.
ಭದ್ರಾವತಿ, ಮೇ. ೨೩: ತಾಲೂಕಿನ ಹುಣಸೆಕಟ್ಟೆ ಜಂಕ್ಷನ್ ಸಮೀಪದಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ  ಏಕಾಏಕಿ ಕ್ವಾರಂಟೈನ್ ನಿರ್ಮಾಣ ಮಾಡಿರುವುದನ್ನು ವಿರೋಧಿಸಿ ಗ್ರಾಮಸ್ಥರು ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ಸ್ಥಳೀಯರ ಗಮನಕ್ಕೆ ಬಾರದಂತೆ ಕ್ವಾರಂಟೈನ್ ನಿರ್ಮಾಣ ಮಾಡುವ ಮೂಲಕ ಮಹಾರಾಷ್ಟ್ರದಿಂದ ಬಂದಿರುವ ೧೮ ಜನರನ್ನು ನಿಗಾದಲ್ಲಿರಿಸಲು ಕರೆ ತರಲಾಯಿತು. ಈ ವಿಚಾರ ತಿಳಿದ ಗ್ರಾಮಸ್ಥರು ಕ್ಯಾರಂಟೈನ್ ಮುಂಭಾಗ ದಿಢೀರನೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ತಹಸೀಲ್ದಾರ್ ಶಿವಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ, ನಗರಸಭೆ ಪೌರಾಯುಕ್ತ ಮನೋಹರ್, ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾದರು.