Wednesday, January 26, 2022

ಕಾರು- ಲಾರಿ ನಡುವೆ ಮುಖಾಮುಖಿ ಡಿಕ್ಕಿ ಇಬ್ಬರು ಸ್ಥಳದಲ್ಲೇ ಸಾವು

 

ಭದ್ರಾವತಿ: ನಗರದ ಜೇಡಿಕಟ್ಟೆ ಸಮೀಪ  ಗುರುವಾರ ಬೆಳಗ್ಗೆ ಕಾರು ಮತ್ತು ಲಾರಿ  ನಡುವೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

    ಕಾಗದ ನಗರದ ನಿವಾಸಿ ಬಿಜೆಪಿ ಮುಖಂಡ ಷಣ್ಮುಖ ಮತ್ತು ಬೀಡಾ ಸ್ಟಾಲ್ ಮಾಲೀಕ ರಾಮಚಂದ್ರ ಮತಪಟ್ಟಿದ್ದಾರೆ. 

      ಅಪಘಾತ ಬೆಳಗ್ಗೆ ಸುಮಾರು 6.30 ರ ಸಮಯದಲ್ಲಿ ನಡೆದಿದ್ದು  ಶಿವಮೊಗ್ಗ ಕಡೆಯಿಂದ ಭದ್ರಾವತಿ ಮಾರ್ಗವಾಗಿ ಬರುತ್ತಿದ್ದ ಲಾರಿ ಹಾಗೂ ಭದ್ರಾವತಿಯಿಂದ ಶಿವಮೊಗ್ಗ ಮಾರ್ಗವಾಗಿ ಚಲಿಸುತ್ತಿದ್ದ ಕಾರು ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

     ಅಪಘಾತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.



ಷಣ್ಮುಖ


ರಾಮಚಂದ್ರ

      ಷಣ್ಮುಖ ರವರು ಕಾಗದ ನಗರ ಎಂಪಿಎಂ ಇಎಸ್ ಕಾಲೇಜಿನ ಉಪನ್ಯಾಸಕಿ ಪರಿಮಳ ಅವರ ಪತ್ನಿಯಾಗಿದ್ದು, ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. 

   ರಾಮಚಂದ್ರ ಅವರು ಕಾಗದ ನಗರದಲ್ಲಿ ಹಲವಾರು ವರ್ಷಗಳಿಂದ ಸಣ್ಣ ಪ್ರಮಾಣದಲ್ಲಿ ಬೀಡಾ ಸ್ಟಾಲ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು.

     ಮೃತರ ನಿಧನಕ್ಕೆ ಬಿಜೆಪಿ ಪಕ್ಷದ ಮುಖಂಡರು,  ಕಾರ್ಯಕರ್ತರು, ಸ್ಥಳೀಯರು ಸಂತಾಪ ಸೂಚಿಸಿದ್ದಾರೆ. 


      


ವಿಐಎಸ್‌ಎಲ್ ರೈಲ್ವೆ ಉತ್ಪಾದನಾ ಸರಪಳಿಯ ಭಾಗವಾಗಿ ಗುರುತಿಸಿಕೊಂಡಿದೆ : ಸುರಜಿತ್ ಮಿಶ್ರ


ಭದ್ರಾವತಿ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೭೩ನೇ ಗಣರಾಜ್ಯೋತ್ಸವದಲ್ಲಿ ವಿಐಎಸ್‌ಎಲ್ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
    ಭದ್ರಾವತಿ, ಜ. ೨೬: ಭಾರತೀಯ ರೈಲ್ವೆಗೆ ಸರಬರಾಜು ಮಾಡುವ ಉತ್ಪಾದನಾ ಸರಪಳಿಯ ಭಾಗವಾಗಿ ಪ್ರಸ್ತುತ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗುರುತಿಸಿಕೊಂಡಿದೆ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರ ಹೇಳಿದರು.
    ಅವರು ಬುಧವಾರ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೭೩ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ವಿಶೇಷ ಸಾಧನೆ ಮಾಡಿರುವವರಿಗೆ ಬಹುಮಾನ ವಿತರಿಸಿ ಮಾತನಾಡಿದರು.
    ಕಾರ್ಖಾನೆಯಲ್ಲಿ ಎಲ್‌ಎಚ್‌ಬಿ ಆಕ್ಸಲ್‌ಗಳ ಫೋರ್ಜಿಂಗ್ ಉತ್ಪಾದಿಸಲಾಗುತ್ತಿದ್ದು, ಇದೀಗ ಕಾರ್ಖಾನೆ ಭಾರತೀಯ ರೈಲ್ವೆಗೆ ಸರಬರಾಜು ಮಾಡುವ ಉತ್ಪಾದನಾ ಸರಪಳಿಯ ಭಾಗವಾಗಿದೆ. ಉಕ್ಕು ಪ್ರಾಧಿಕಾರ ರೈಲ್ವೆಯಿಂದ ೧೨,೦೦೦ ಎಲ್‌ಎಚ್‌ಬಿ ಆಕ್ಸಲ್‌ಗಳ ಫೋರ್ಜಿಂಗ್ ಸರಬರಾಜು ಮಾಡಲು ಬೇಡಿಕೆ ಪಡೆದುಕೊಂಡಿದೆ. ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಆಕ್ಸಲ್‌ಗಳನ್ನು ಫೋರ್ಜ್ ಮಾಡಿ ಡಿಎಸ್‌ಪಿ, ದುರ್ಗಾಪುರಕ್ಕೆ ಸರಬರಾಜು ಮಾಡಲಾಗುತ್ತಿದೆ. ದೇಶದಲ್ಲಿ ಎಲ್ಲಿಯೂ ಉತ್ಪಾದಿಸಲಾಗದ ಉತ್ಪನ್ನಗಳನ್ನು ಕಾರ್ಖಾನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ ಎಂದರು.
    ಕಾರ್ಖಾನೆಯ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಮಿಕ ಹಾಗು ಅಧಿಕಾರಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸಹಾಯಕ ಮಹಾಪ್ರಬಂಧಕರಾದ ಎಲ್. ಕುತಲನಾಥನ್ ಮತ್ತು ಕೆ.ಎಸ್ ಶೋಭಾ ಕಾರ್ಯಕ್ರಮ ನಿರೂಪಿಸಿದರು. ಸಾರ್ವಜನಿಕ ಸಂಪರ್ಕ ಹಾಗುನಗರಾಡಳಿತ ಮತ್ತು ಭದ್ರತಾ ಇಲಾಖೆಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

೭೩ನೇ ಗಣ ರಾಜ್ಯೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ಸನ್ಮಾನ

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ೭೩ನೇ ಗಣ ರಾಜ್ಯೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಜ. ೨೬: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ೭೩ನೇ ಗಣ ರಾಜ್ಯೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಉಪತಹಸೀಲ್ದಾರ್‌ಗಳಾದ ಅರಸು, ನಾರಾಯಣಗೌಡ, ನಗರಸಭೆ ಕಂದಾಯಾಧಿಕಾರಿ ರಾಜ್‌ಕುಮಾರ್, ಜಾನಪದ ಹಾಗು ರಂಗಕಲಾವಿದ ಜಿ. ದಿವಾಕರ್, ಕ್ಷೇತ್ರ ಶಿಕ್ಷಣ ಸಂಯೋಜಕ ಎಸ್.ಕೆ ರವಿಕುಮಾರ್, ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಅರವಳಿಕೆ ತಜ್ಞೆ ಡಾ. ಜೆ.ಎಂ ಪ್ರೀತಿ, ಹೆರಿಗೆ ಹಾಗು ಸ್ತ್ರೀ ರೋಗ ತಜ್ಞೆ ಡಾ. ಎಚ್.ಎಲ್ ಹರ್ಷ, ಸೀನಿಯರ್ ಗ್ರೇಡ್ ನರ್ಸ್ ಪೋಲೆನ್ ಸುನೀತ, ಹಿಂದೂಸ್ತಾನಿ ಗಾಯಕ ಹಾಗು ಕೀರ್ತನಕಾರ ಸಿ. ಶಿವರಾಜು, ಭಾಷಾ ಶಿಕ್ಷಕ ಜಿ. ಉಮಾಪತಿ, ರಂಗಕಲಾವಿದ ಹೊಸಹಳ್ಳಿ ದಾಳೇಗೌಡ, ಮಕ್ಕಳ ಸಹಾಯವಾಣಿ ಕೇಂದ್ರದ ಕೋ ಆರ್ಡಿನೇಟರ್ ಸುಮಿತ್ರ, ದೈಹಿಕ ಶಿಕ್ಷಕಿ ಎನ್. ಬನಶಂಕರಮ್ಮ, ಶಿಕ್ಷಕ ರೇಣುಕಪ್ಪ ಎನ್. ಮಡಿವಾಳರ, ಮುಖ್ಯೋಪಾಧ್ಯಾಯರಾದ ಸಿಸ್ಟರ್ ತೇರೆಸಾ, ಗಿರೀಶ್, ಗುಮಾಸ್ತ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ರಹಮತುಲ್ಲಾ, ಜೆ. ಬಸವರಾಜು, ದೈಹಿಕ ಶಿಕ್ಷಕ ಆರ್. ರವಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಶಾಸಕ ಬಿ.ಕೆ ಸಂಗಮೇಶ್ವರ್, ತಹಸೀಲ್ದಾರ್ ಪ್ರದೀಪ್ ಆರ್. ನಿಕ್ಕಮ್, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀಪ್‌ಕುಮಾರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸತೀಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಬಸಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಸೋಮಶೇಖರಯ್ಯ, ನಗರಸಭೆ ಸದಸ್ಯರು, ಸರ್ಕಾರದ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ೭೩ನೇ ಗಣ ರಾಜ್ಯೋತ್ಸವ

ಭದ್ರಾವತಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ೭೩ನೇ ಗಣ ರಾಜ್ಯೋತ್ಸವದಲ್ಲಿ ತಹಸೀಲ್ದಾರ್ ಪ್ರದೀಪ್ ಆರ್ ನಿಕ್ಕಮ್ ಧ್ವಜಾರೋಹಣ ನೆರವೇರಿಸಿದರು.
    ಭದ್ರಾವತಿ, ಜ. ೨೬: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ೭೩ನೇ ಗಣ ರಾಜ್ಯೋತ್ಸವದಲ್ಲಿ ತಹಸೀಲ್ದಾರ್ ಪ್ರದೀಪ್ ಆರ್ ನಿಕ್ಕಮ್ ಧ್ವಜಾರೋಹಣ ನೆರವೇರಿಸಿದರು.
    ಧ್ವಜಾರೋಹಣಕ್ಕೂ ಮೊದಲು ರಾಷ್ಟ್ರಪಿತ ಮಹಾತ್ಮಗಾಂಧಿ ಹಾಗು ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
    ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀಪ್‌ಕುಮಾರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸತೀಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಬಸಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಸೋಮಶೇಖರಯ್ಯ, ನಗರಸಭೆ ಸದಸ್ಯರು, ಸರ್ಕಾರದ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾಸಿ ಗೌರವಿಸಲಾಯಿತು.

ನಿಯಮಾನುಸಾರ ‘ಶಿಕ್ಷಣ ನಿಖಾಯ ಹುದ್ದೆ’(ಡೀನ್)ಗೆ ಅರ್ಹರನ್ನು ನಾಮನಿರ್ದೇನಗೊಳಿಸದೆ ವಿಳಂಬ ಧೋರಣೆ

ಕುವೆಂಪು ವಿ.ವಿ ವಿರುದ್ಧ ವಿದ್ಯಾರ್ಥಿ ಪರಿಷತ್ ಹೋರಾಟದ ಎಚ್ಚರಿಕೆ

ಕುವೆಂಪು ವಿವಿ
ಭದ್ರಾವತಿ, ಜ. ೨೬: ಕುವೆಂಪು ವಿಶ್ವವಿದ್ಯಾನಿಲಯದಲ್ಲಿ 'ಶಿಕ್ಷಣ ನಿಖಾಯ ಹುದ್ದೆ'(ಡೀನ್) ತೆರವುಗೊಂಡಿದ್ದರೂ ಸಹ ಇದುವರೆಗೂ ಈ ಹುದ್ದೆಯನ್ನು ಭರ್ತಿ ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
    ೨ ವರ್ಷಗಳ ಅವಧಿಗೆ ಸೀಮಿತವಾದ ಹುದ್ದೆಗೆ ಜೇಷ್ಠತೆ ಆಧಾರದ ಮೇಲೆ ಅರ್ಹತೆ ಹೊಂದಿದ್ದವರು ಇದ್ದರೂ ಸಹ ಈ ಹುದ್ದೆಯನ್ನು ಭರ್ತಿ ಮಾಡದೆ ಮೀನಾಮೇಷ ಮಾಡಲಾಗುತ್ತಿದೆ. ಹುದ್ದೆಯನ್ನು ಭರ್ತಿಗೊಳಿಸದಿರುವುದಕ್ಕೆ ನಿಖರವಾದ ಮಾಹಿತಿಯನ್ನು ಸಂಬಂಧಪಟ್ಟವರು ಸ್ಪಷ್ಟಪಡಿಸಿಲ್ಲ.  ಇದರಿಂದಾಗಿ ಒಂದೆಡೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
    ಈಗಾಗಲೇ ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿರುವ ವಿಶ್ವವಿದ್ಯಾನಿಲಯ ಇದೀಗ ಮತ್ತೊಂದು ಆರೋಪಕ್ಕೆ ಗುರಿಯಾಗುವ ಲಕ್ಷಣಗಳು ಕಂಡು ಬರುತ್ತಿವೆ.  'ಶಿಕ್ಷಣ ನಿಖಾಯ ಹುದ್ದೆ'(ಡೀನ್)ಗೆ ಸಂಬಂಧಿಸಿದಂತೆ ಅರ್ಹರಿಗೆ ಅನ್ಯಾಯ ಮಾಡಲಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬರುತ್ತಿವೆ.
    'ಶಿಕ್ಷಣ ನಿಖಾಯ ಹುದ್ದೆ'(ಡೀನ್)ಗೆ ವಿಶ್ವವಿದ್ಯಾನಿಲಯದ ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಜಗನ್ನಾಥ ಕೆ. ಡಾಂಗೆ ಅವರು ಜೇಷ್ಠತೆ ಆಧಾರದ ಮೇಲೆ ಅರ್ಹತೆ ಹೊಂದಿದ್ದಾರೆ. ನಿಯಮಾನುಸಾರ ಕುಲಸಚಿವರು ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಕಾಯ್ದೆ ಪ್ರಕಾರ ೨ ವರ್ಷಗಳಿಗೆ ನಾಮನಿರ್ದೇಶನಗೊಳಿಸಿ ಆದೇಶ ಹೊರಡಿಸಬೇಕಾಗಿದೆ. ವಿವೇಚನೆ ಮೇರೆಗೆ ಅಥವಾ ಬೇರೆ ಯಾವುದೇ ರೀತಿಯಲ್ಲಿ ಈ ಹುದ್ದೆಯನ್ನು ಭರ್ತಿ ಮಾಡುವ ಅಧಿಕಾರ ಕುಲಸಚಿವರು ಹೊಂದಿಲ್ಲ ಎನ್ನಲಾಗಿದೆ.  ಈ ನಡುವೆ  ಡಾ. ಜಗನ್ನಾಥ ಕೆ. ಡಾಂಗೆ ಅವರು ಸುಮಾರು ೨ ತಿಂಗಳ ಹಿಂದೆಯೇ ತೆರವಾಗಿರುವ ಹುದ್ದೆಯನ್ನು ಭರ್ತಿಗೊಳಿಸುವಂತೆ ಕುಲಸಚಿವರಿಗೆ ಅರ್ಜಿ ಸಲ್ಲಿಸಿದ್ದಾರೆ.
    ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ  ಕರ್ನಾಟಕ ರಾಜ್ಯ ಎಸ್.ಸಿ/ಎಸ್.ಟಿ ಅಭಿವೃದ್ಧಿ ಒಕ್ಕೂಟ ಸಹ ರಾಜ್ಯಪಾಲರಿಗೆ ಹಾಗು ಉನ್ನತ ಶಿಕ್ಷಣ ಸಚಿವರಿಗೆ ಸಹ ದೂರು ಸಲ್ಲಿಸಿದೆ.
    ಈ ನಡುವೆ ದಲಿತ ವಿದ್ಯಾರ್ಥಿ ಪರಿಷತ್ ಡಾ. ಜಗನ್ನಾಥ ಕೆ. ಡಾಂಗೆ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದು, 'ಶಿಕ್ಷಣ ನಿಖಾಯ ಹುದ್ದೆ'(ಡೀನ್)ಗೆ ಹುದ್ದೆಯನ್ನು ತಕ್ಷಣ ಭರ್ತಿಗೊಳಿಸಬೇಕು. ಜೇಷ್ಠತೆ ಹಾಗು ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಕಾಯ್ದೆ ಪ್ರಕಾರ ಡಾ. ಜಗನ್ನಾಥ ಕೆ. ಡಾಂಗೆ ಅವರನ್ನು ಕುಲಸಚಿವರು ೨ ವರ್ಷಗಳ ಅವಧಿಗೆ ನಾಮನಿರ್ದೇಶನಗೊಳಿಸಬೇಕು. ಇಲ್ಲವಾದಲ್ಲಿ ದಲಿತ ಸಂಘಟನೆಗಳು ಜಿಲ್ಲೆ ಹಾಗು ರಾಜ್ಯಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಂದು ಪರಿಷತ್ ಜಿಲ್ಲಾಧ್ಯಕ್ಷ ಸಿ. ಪ್ರಭಾಕರ್ ಪತ್ರಿಕಾ ಹೇಳಿಕೆಯನ್ನು ನೀಡಿದ್ದಾರೆ.