Tuesday, January 26, 2021

ವಿಐಎಸ್‌ಎಲ್, ಗೃಹ ರಕ್ಷಕದಳ ಸೇರಿದಂತೆ ವಿವಿಧೆಡೆ ಗಣರಾಜ್ಯೋತ್ಸವ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ನ್ಯೂಟೌನ್ ಸಿಲ್ವರ್ ಜ್ಯೂಬಿಲಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೭೨ನೇ ಗಣರಾಜ್ಯೋತ್ಸವದಲ್ಲಿ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರಾ ಧ್ವಜಾರೋಹಣ ನೆರವೇರಿಸಿದರು.

ಭದ್ರಾವತಿ ನ್ಯೂಟೌನ್‌ನಲ್ಲಿರುವ ಗೃಹ ರಕ್ಷಕದಳದ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ೭೨ನೇ ವರ್ಷದ ಗಣ ರಾಜ್ಯೋತ್ಸವದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಆಂಗ್ಲ ಪ್ರಬಂಧ ಸ್ಪರ್ಧೆಯಲ್ಲಿ ತಾಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಭದ್ರಾವತಿ ಪೇಪರ್‌ಟೌನ್ ಆಂಗ್ಲ ಶಾಲೆಯ ವಿದ್ಯಾರ್ಥಿನಿ ಭೂಮಿಕಾ ರವರಿಗೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವತಿಯಿಂದ ಭದ್ರಾವತಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಿಂದ ಶಿವಮೊಗ್ಗಕ್ಕೆ ಟ್ರ್ಯಾಕ್ಟರ್ ರ್‍ಯಾಲಿ ನಡೆಸಲಾಯಿತು.

ಭದ್ರಾವತಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ೭೨ನೇ ಗಣರಾಜ್ಯೋತ್ಸವ ಕೇರಳ ಸಮಾಜಂ ಕಛೇರಿಯಲ್ಲಿ ಆಚರಿಸಲಾಯಿತು.

   ಭದ್ರಾವತಿ, ಜ. ೨೬: ನಗರದ ವಿವಿಧೆಡೆ ಸರ್ಕಾರಿ ಕಛೇರಿಗಳು, ಶಾಲಾ-ಕಾಲೇಜು, ವಿವಿಧ ಸಂಘ-ಸಂಸ್ಥೆಗಳಲ್ಲಿ ೭೨ನೇ ವರ್ಷದ ಗಣ ರಾಜ್ಯೋತ್ಸವ ಆಚರಿಸಲಾಯಿತು.
     ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ಗಣರಾಜ್ಯೋತ್ಸವ:
   ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ನ್ಯೂಟೌನ್ ಸಿಲ್ವರ್ ಜ್ಯೂಬಿಲಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೭೨ನೇ ಗಣರಾಜ್ಯೋತ್ಸವದಲ್ಲಿ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರಾ ಧ್ವಜಾರೋಹಣ ನೆರವೇರಿಸಿದರು.
     ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾರ್ಖಾನೆಯಲ್ಲಿ ಹಲವಾರು ಗುಣಾತ್ಮಕ ಕ್ರಮಗಳ ಮೂಲಕ ವೆಚ್ಚ ಕಡಿಮೆ ಮಾಡಿ ಉತ್ಪಾದನೆಯಲ್ಲಿ ಗಣನೀಯವಾಗಿ ಸುಧಾರಣೆ ಕಂಡು ಕೊಳ್ಳಲಾಗಿದೆ. ಇದರ ಪರಿಣಾಮ ೨೦೨೦ರ ಸಾಲಿನಲ್ಲಿ ೮೪ ಲಕ್ಷ ರು. ಲಾಭ ಗಳಿಸಿದೆ. ಮುಂದಿನ ಇನ್ನೂ ಹೆಚ್ಚಿನ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳುವ ಮೂಲಕ ಗತವೈಭವ ಮರಳಿ ಪಡೆಯಲು ಪ್ರಯತ್ನಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
   ಕಾರ್ಯಕ್ರಮದಲ್ಲಿ ೨೦೨೦ರಲ್ಲಿ ಕಾರ್ಖಾನೆಯಲ್ಲಿ ಶ್ರೇಷ್ಠ ಸಾಧನೆ ಮಾಡಿರುವವರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಅಭಿನಂದಿಸಲಾಯಿತು. ಅಧಿಕಾರಿಗಳ ಹಾಗು ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್‌ಕುಮಾರ್ ನಿರೂಪಿಸಿದರು.
     ಗೃಹ ರಕ್ಷಕದಳದಿಂದ ಗಣ ರಾಜ್ಯೋತ್ಸವ :
    ನಗರದ ನ್ಯೂಟೌನ್‌ನಲ್ಲಿರುವ ಗೃಹ ರಕ್ಷಕದಳದ ಕಛೇರಿಯಲ್ಲಿ ೭೨ನೇ ವರ್ಷದ ಗಣ ರಾಜ್ಯೋತ್ಸವ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಪೌರಾಯುಕ್ತ ಮನೋಹರ್, ಘಟಕಾಧಿಕಾರಿ ಜಗದೀಶ್, ಹಿರಿಯ ವೈದ್ಯಾಧಿಕಾರಿ ಡಾ. ರವೀಂದ್ರನಾಥ ಕೋಠಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
      ಪೇಪರ್‌ಟೌನ್ ಆಂಗ್ಲ ಶಾಲೆ ಗಣ ರಾಜ್ಯೋತ್ಸವ:
     ಕಾಗದನಗರದ ಪೇಪರ್ ಆಂಗ್ಲ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ೭೨ನೇ ಗಣ ರಾಜ್ಯೋತ್ಸವದಲ್ಲಿ ಎಂಪಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ದತ್ತಾತ್ರೇಯ ಭಾರದ್ವಾಜ್ ಧ್ವಜಾರೋಹಣ ನೆರವೇರಿಸಿದರು.
   ಶಾಲೆಯ ಪ್ರಾಂಶುಪಾಲ ಆರ್. ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಚುನಾವಣಾ ಆಯೋಗ ಆಯೋಜಿಸಿದ್ದ ಆಂಗ್ಲ ಪ್ರಬಂಧ ಸ್ಪರ್ಧೆಯಲ್ಲಿ ತಾಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿ ಭೂಮಿಕಾ ರವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
      ಟ್ರ್ಯಾಕ್ಟರ್ ರ್‍ಯಾಲಿಗೆ ಬೆಂಬಲ:
    ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವತಿಯಿಂದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಿಂದ ಶಿವಮೊಗ್ಗಕ್ಕೆ ಟ್ರ್ಯಾಕ್ಟರ್ ರ್‍ಯಾಲಿ ನಡೆಸಲಾಯಿತು.
ಟ್ರ್ಯಾಕ್ಟರ್ ರ್‍ಯಾಲಿ ಮಧ್ಯಾಹ್ನ ೧೨.೩೦ಕ್ಕೆ ಆರಂಭಗೊಂಡು ನಗರದ ಸಿ.ಎನ್ ರಸ್ತೆ, ಬಿ.ಎಚ್ ರಸ್ತೆ ಮೂಲಕ ಶಿವಮೊಗ್ಗ ತಲುಪಿತು. ಹಿರಿಯ ರೈತ ಮುಖಂಡ ಯಶವಂತರಾವ್ ಘೋರ್ಪಡೆ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ ವೀರೇಶ್, ಪ್ರಮುಖರಾದ ರಾಮಚಂದ್ರರಾವ್, ಮೋಹನ್, ಶರತ್ಚಂದ್ರ, ವೀರೇಶ್, ಮಂಜುನಾಥ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಸುಮಾರು ೪೦ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳು ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದವು.
     ಕೇರಳ ಸಮಾಜಂ ವತಿದಿಂದ ಗಣರಾಜ್ಯೋತ್ಸವ :
     ಪ್ರತಿ ವರ್ಷದಂತೆ ಈ ಬಾರಿ ಸಹ ೭೨ನೇ ಗಣರಾಜ್ಯೋತ್ಸವ ನಗರದ ಕೇರಳ ಸಮಾಜಂ ಕಛೇರಿಯಲ್ಲಿ ಆಚರಿಸಲಾಯಿತು.
ಸಮಾಜಂ ಅಧ್ಯಕ್ಷ ಗಂಗಾಧರ್, ಪ್ರಧಾನ ಕಾರ್ಯದರ್ಶಿ ಜಿ. ಸುರೇಶ್, ಉಪಾಧ್ಯಕ್ಷರಾದ ವಿ.ಕೆ ಮೊಹಿನ್, ಖಜಾಂಚಿ ಎ. ಚಂದ್ರಶೇಖರ್, ಮಹಿಳಾ ವಿಭಾಗಂ ಕಾರ್ಯದರ್ಶಿ ಎಸ್.ಎಚ್. ಕಲ್ಯಾಣಿ ಶಶಿಧರನ್, ಸಹಕಾರ್ಯದರ್ಶಿ ರೇಖಾಚಂದ್ರನ್ ಮತ್ತು ಸದಸ್ಯರಾದ ಎಸ್. ಕುಮಾರ್, ಶಶಿಕಲಾ ಸುರೇಶ್, ಶೈಲಜಾ ಸುರೇಶ್, ಪ್ರೇಮ ವೇಲಾಯುದನ್, ಕೆ.ಎಸ್ ಯಶೋಧ, ಶಾಂತಮ್ಮ ಅನಿತ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಜ.೨೮ರಂದು ತೈಪೂಸಂ ಜಾತ್ರೋತ್ಸವ

ಭದ್ರಾವತಿ, ಜ. ೨೬:  ಇಲ್ಲಿಗೆ ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಜ.೨೮ರಂದು ತೈಪೂಸಂ ಜಾತ್ರೋತ್ಸವ ನಡೆಯಲಿದೆ.
     ಕೊರೋನಾ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವ ಸರಳವಾಗಿ ನಡೆಯುತ್ತಿದ್ದು, ಭಕ್ತಾದಿಗಳು ಸಹಕರಿಸುವಂತೆ ಆಡಳಿತ ಮಂಡಳಿ ಕೋರಿದೆ.

ಜಗತ್ತಿನಲ್ಲಿಯೇ ನಮ್ಮದ್ದು ವಿಶಿಷ್ಟವಾದ ಶ್ರೇಷ್ಠ ಸಂವಿಧಾನ : ಜಿ. ಸಂತೋಷ್‌ಕುಮಾರ್

ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೭೨ನೇ ಗಣರಾಜ್ಯೋತ್ಸವದಲ್ಲಿ ತಹಸೀಲ್ದಾರ್ ಜಿ. ಸಂತೋಷ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು.  
    ಭದ್ರಾವತಿ, ಜ. ೨೬: ಭಾರತೀಯ ಸಂವಿಧಾನ ಜಗತ್ತಿನಲ್ಲಿಯೇ ಶ್ರೇಷ್ಠವಾದ ಸಂವಿಧಾನವಾಗಿದ್ದು, ವಿಶಿಷ್ಟತೆಯಿಂದ ಕೂಡಿದೆ ಎಂದು ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಹೇಳಿದರು.
    ಅವರು ಮಂಗಳವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೭೨ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಸಂದರ್ಭದಲ್ಲಿ ಹರಿದು ಹಂಚಿ ಹೋಗಿದ್ದ ಪ್ರಾಂತ್ಯಗಳನ್ನು ಸರ್ದಾರ್ ವಲ್ಲಭಬಾಯಿ ಪಟೇಲ್‌ರವರ ಪರಿಶ್ರಮದಿಂದಾಗಿ ಒಗ್ಗೂಡಿಸಲಾಯಿತು. ಆ ನಂತರ ಸಂವಿಧಾನ ರಚನೆ ಮೂಲಕ ದೇಶದಲ್ಲಿ ಏಕತೆ, ಸಮಾನತೆ ಪರಿಕಲ್ಪನೆಯನ್ನು ಕಂಡುಕೊಳ್ಳುವ ಪ್ರಜಾಪ್ರಭುತ್ವ ವ್ಯವಸ್ಥೆ ರೂಪಿಸಲಾಯಿತು. ಸಂವಿಧಾನ ರಚನೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಪರಿಶ್ರಮ ಹೆಚ್ಚಿನದ್ದಾಗಿದೆ. ನಮ್ಮದು ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನವಾಗಿದ್ದು, ಪ್ರತಿಯೊಬ್ಬರು ಈ ಸಂವಿಧಾನವನ್ನು ಗೌರವಿಸಬೇಕು. ಸಂವಿಧಾನದ ಆಶಯಗಳನ್ನು ಅರಿತು ಮುನ್ನಡೆಬೇಕೆಂದರು.
    ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಅಹಿಂಸೆ, ತ್ಯಾಗ, ಬಲಿದಾನಗಳ ಮೂಲಕ ಮಹಾತ್ಮಗಾಂಧಿಯವರು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ನಂತರ ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಸರ್ವರನ್ನು ಸಮಾನತೆಯಿಂದ ಕಾಣುವ ವಿಶಿಷ್ಟವಾದ ಸಂವಿಧಾನವನ್ನು ರಚನೆ ಮಾಡಿದ ಪರಿಣಾಮ ವಿಶಿಷ್ಟವಾದ ಪ್ರಜಾಪ್ರಭುತ್ವ ವ್ಯವಸ್ಥೆ ರೂಪುಗೊಂಡು ದೇಶ ಸರ್ವತೋಮುಖವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಯಿತು. ಈ ಹಿನ್ನಲೆಯಲ್ಲಿ ನಾವೆಲ್ಲರೂ ಇಂದು ನೆಮ್ಮದಿಯಾಗಿ ಬದುಕಲು ಸಾಧ್ಯವಾಗಿದೆ ಎಂದರು.
    ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಡಿ. ಲಕ್ಷ್ಮೀದೇವಿ, ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ, ಸದಸ್ಯರಾದ ಕೆ.ವಿ ರುದ್ರಪ್ಪ, ಆರ್. ತಿಪ್ಪೇಶ್‌ರಾವ್, ಎ.ಎನ್ ಉಷಾಕಿರಣ, ಯಶೋದಮ್ಮ, ಆಶಾ ಶ್ರೀಧರ್, ನಗರಸಭೆ ಪೌರಾಯುಕ್ತ ಮನೋಹರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಲವೇಶ್‌ಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್ ಬಸವರಾಜ್, ಪ್ರೌಢಶಾಲಾ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಸಿದ್ದಬಸಪ್ಪ, ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ, ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿ, ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ಮುಖಂಡರಾದ ಲೋಕೇಶ್, ಅಣ್ಣೋಜಿರಾವ್, ಮಂಜುಳರಾಮಚಂದ್ರ, ರಾಘವೇಂದ್ರ ಸರಾಟೆ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಸುಮಂತಿ ಕಾರಂತ್ ತಂಡದವರು ಪ್ರಾರ್ಥಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಸ್ವಾಗತಿಸಿದರು. ಅಪೇಕ್ಷ ಮಂಜುನಾಥ್ ನಿರೂಪಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು ಹಾಗು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಂಬೇಡ್ಕರ್‌ರವರು ನೀಡಿರುವ ಮತದಾನದ ಹಕ್ಕು ಮಾರಿಕೊಳ್ಳದಿರಿ : ಪೊಲೀಸ್ ಉಮೇಶ್

ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೫ರ ಹೊಸಬುಳ್ಳಾಪುರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೭೧ನೇ ಸಂವಿಧಾನ ದಿನಾಚರಣೆ ಹಾಗು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಮಹಾನಾಯಕ ಕಾರ್ಯಕ್ರಮವನ್ನು ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್ ಉದ್ಘಾಟಿಸಿದರು.
    ಭದ್ರಾವತಿ, ಜ. ೨೬: ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್‌ರವರು ಸಂವಿಧಾನದ ಮೂಲಕ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ನೀಡಿದ್ದು, ಪ್ರತಿಯೊಬ್ಬರು ತಮ್ಮ ಹಕ್ಕನ್ನು ಯಾವುದೇ ಅಮಿಷಕ್ಕೆ ಬಲಿಯಾಗಿ ಮಾರಿಕೊಳ್ಳದೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಜ್ಞಾನವಂತರು, ಸಮರ್ಥರು ಹಾಗು ಜನರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವವರನ್ನು ಆಯ್ಕೆ ಮಾಡಬೇಕೆಂದು ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್ ಮನವಿ ಮಾಡಿದರು.
      ಅವರು ಮಂಗಳವಾರ ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೫ರ ಹೊಸಬುಳ್ಳಾಪುರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೭೧ನೇ ಸಂವಿಧಾನ ದಿನಾಚರಣೆ ಹಾಗು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಮಹಾನಾಯಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
      ಅಂಬೇಡ್ಕರ್‌ರವರು ಜಾತಿ, ಮತ, ಧರ್ಮ, ಶ್ರೀಮಂತ, ಬಡವ, ಅಕ್ಷರಸ್ಥ, ಅನಕ್ಷರಸ್ಥ ಎಂಬ ಯಾವುದೇ ಅಸಮಾನತೆ ಇಲ್ಲದೆ ದೇಶದ ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ನೀಡಿದ್ದಾರೆ. ಇದರ ಮಹತ್ವ ಪ್ರತಿಯೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕೆಂದರು.
     ಬುದ್ಧರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮಾತನಾಡಿ, ಪ್ರತಿಯೊಬ್ಬರು ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಈ ದೇಶಕ್ಕೆ ನೀಡಿರುವ ಸಂವಿಧಾನವನ್ನು ಗೌರವಿಸಬೇಕು. ಸಂವಿಧಾನದ ಆಶಯಗಳನ್ನು ಅರಿತು ಮುನ್ನಡೆಬೇಕೆಂದರು.
     ಪ್ರೊ. ಬಿ. ಕೃಷ್ಣಪ್ಪರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಅಂಬೇಡ್ಕರ್‌ರವರು ಈ ದೇಶಕ್ಕೆ ಮಾತ್ರ ಮಹಾನಾಯಕರಾಗಿ ಸೀಮಿತವಾಗಿಲ್ಲ. ಇಡೀ ಜಗತ್ತಿಗೆ ಮಹಾನಾಯಕರಾಗಿದ್ದು, ಈ ಹಿನ್ನಲೆಯಲ್ಲಿ ಅವರಿಗೆ ವಿಶ್ವಜ್ಞಾನಿ ಎಂಬ ಬಿರುದನ್ನು ನೀಡಲಾಗಿದೆ. ಹಲವು ಸಂಕಷ್ಟಗಳ ನಡುವೆ ತಮ್ಮಲ್ಲಿನ ಅಪಾರ ಜ್ಞಾನದ ಮೂಲಕ ವಿದ್ಯಾರ್ಜನೆ ಪಡೆದು ಉನ್ನತ ಮಟ್ಟಕ್ಕೆ ಏರಿದರು. ಅವರ ಆಶಯ ಪ್ರತಿಯೊಬ್ಬರು ವಿದ್ಯಾವಂತರಾಗಬೇಕೆಂಬುದಾಗಿದೆ. ದಲಿತರು ವಾಸಿಸುವ ಸ್ಥಳಗಳಲ್ಲಿ ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಮಠಮಂದಿರಗಳು ತೆರೆಯುವ ಬದಲು ಶಾಲೆಗಳು, ಗ್ರಂಥಾಲಯಗಳು ತೆರೆಯಬೇಕೆಂಬುದಾಗಿದೆ. ಇದನ್ನು ಅರಿತು ದಲಿತರು ಮುನ್ನಡೆಯಬೇಕೆಂದರು.
    ಪ್ರಮುಖರಾದ ದಲಿತ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ. ಜಯಪ್ಪ, ನ್ಯಾಯವಾದಿ ನಾರಾಯಣ್, ತಾಲೂಕು ಅಧ್ಯಕ್ಷೆ ಎಸ್. ಉಮಾ, ರಾಜ್ಯ ಸಂಘಟನಾ ಸಂಚಾಲಕಿ ಶಾಂತಿ, ಅಂಗವಿಕಲರ ವಿಭಾಗದ ಜಿಲ್ಲಾಧ್ಯಕ್ಷ ಕಾಣಿಕ್ ರಾಜ್, ಮಣಿ ಜಿಂಕ್‌ಲೈನ್, ಆರ್. ವರಲಕ್ಷ್ಮೀ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
   ವಾರ್ಡ್ ಸಂಚಾಲಕ ಆರ್. ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಈಶ್ವರಪ್ಪ ನಿರೂಪಿಸಿದರು. ತಾಲೂಕು ಸಂಚಾಲಕ ರಂಗನಾಥ್ ಸ್ವಾಗತಿಸಿದರು. ನಗರ ಸಂಚಾಲಕ ಗೋವಿಂದ ವಂದಿಸಿದರು.