ತಹಸೀಲ್ದಾರ್ ಆರ್. ಪ್ರದೀಪ್‌ರನ್ನು ಸೇವೆಯಿಂದ ಅಮಾನತುಗೊಳಿಸಿ, ಸೂಕ್ತ ಕ್ರಮ ಕೈಗೊಳ್ಳಿ
ಶಿವಕುಮಾರ್
ಭದ್ರಾವತಿ : ಈ ಹಿಂದಿನ ತಹಸೀಲ್ದಾರ್ ಆರ್. ಪ್ರದೀಪ್‌ರವರು ನಿಯಮ ಮೀರಿ ಅರಣ್ಯ ಪ್ರದೇಶಕ್ಕೆ ಸಾಗುವಳಿ ಚೀಟಿ, ಪಹಣಿ ನೀಡಿ ಜಮೀನು ಮಂಜೂರಾತಿ ಮಾಡಿದ್ದು, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸುಮಾರು ೬ ತಿಂಗಳ ಹಿಂದೆಯೇ ದೂರು ಸಲ್ಲಿಸಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಾಲೂಕಿನ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಆರೋಪಿಸಿದ್ದಾರೆ.
ತಾಲೂಕು ಹೊಳೆಹೊನ್ನೂರು ಹೋಬಳಿ ಮಲ್ಲಾಪುರ ಗ್ರಾಮದ ಸರ್ವೆ ನಂ. ೮೭ ರಲ್ಲಿ ಮಲ್ಲೇಶಪ್ಪ ಬಿನ್ ಮಲ್ಲಾರಪ್ಪ ಎಂಬುವರಿಗೆ ಸಾಗುವಳಿ ಚೀಟಿ ನೀಡಿ ಪಹಣೆ ಹಾಗೂ ಎಂ.ಆರ್ ಎಚ್ ೨೧/೨೦೨೨-೨೩ ೧೬-೦೨-೨೦೨೩ ರಲ್ಲಿ ೪ ಎಕರೆ ೫ ಗುಂಟೆ ಜಮೀನು ಮಂಜೂರು ಮಾಡಿರುತ್ತಾರೆ. ಮಲ್ಲಾಪುರ ಗ್ರಾಮದ ಸರ್ವೆ ನಂ. ೮೭ ಮೀಸಲು ಅರಣ್ಯ ಪ್ರದೇಶವಾಗಿದ್ದು, ಮಲ್ಲೇಶಪ್ಪ ಅವರು ಅರಣ್ಯಾಧಿಕಾರಿಗಳಿಂದ ಎನ್‌ಓಸಿ ಪಡೆಯಲು ಅರ್ಜಿ ಸಲ್ಲಿಸಿದ್ದರು. ಅದರಂತೆ ವಲಯ ಅರಣ್ಯಾಧಿಕಾರಿ ಶಾಂತಿಸಾಗರ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಚನ್ನಗಿರಿ ಉಪವಿಭಾಗ ಹಾಗು ಉಪ ಅರಣ್ಯ ಸಂರಕ್ಷಣಾಧಿಕಾರಿ ಭದ್ರಾವತಿ ವಿಭಾಗರವರು ಸ್ಥಳ ಪರಿಶೀಲಿಸಿ ೩ ಎಕರೆ ೩೦ ಗುಂಟೆ ಜಮೀನು ಅರಣ್ಯ ಇಲಾಖೆಯ ಮೀಸಲು ಅರಣ್ಯ ಪ್ರದೇಶವೆಂದು ಎನ್‌ಓಸಿ ನೀಡಲು ಬರುವುದಿಲ್ಲವೆಂದು ೨ ಜನವರಿ ೨೦೨೩ ರಲ್ಲಿ ತಿಳಿಸಿರುತ್ತಾರೆ. ಆದರೆ ಇದ್ಯಾವುದನ್ನು ಗಮನಿಸದೇ ತಾಲೂಕ್ ಬಗರ್ ಹುಕುಂ ಕಮಿಟಿಯಲ್ಲಿ ಏಕಪಕ್ಷಿಯವಾಗಿ ಉಳುಮೆ ಮಾಡದ ಹಾಲಿ ಮರ ಗಿಡಗಳಿಂದ ಕೂಡಿರುವ ಅರಣ್ಯಕ್ಕೆ ತಹಸೀಲ್ದಾರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆರ್. ಪ್ರದೀಪ್‌ರವರು ಸಾಗುವಳಿ ಚೀಟಿ, ಪಹಣಿ ನೀಡಿ ಜಮೀನು ಮಂಜೂರಾತಿ ಮಾಡಿದ್ದು, ಅವ್ಯವಹಾರ ನಡೆದಿರುವುದು ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಅಂದಿನ ತಹಸೀಲ್ದಾರ್ ಆರ್. ಪ್ರದೀಪ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಹಾಗು ಅವ್ಯವಹಾರದಲ್ಲಿ ಭಾಗಿಯಾಗಿರುವ ತಾಲೂಕು ಕಛೇರಿಯ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಸಹ ಕ್ರಮ ಕೈಗೊಳ್ಳುವಂತೆ ಶಿವಕುಮಾರ್ ದೂರು ಸಲ್ಲಿಸಿದ್ದರು.
ಜಿಲ್ಲಾಧಿಕಾರಿಗಳು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ನಡುವೆ ತಾಲೂಕು ಕಛೇರಿಯಲ್ಲಿ ಭ್ರಷ್ಟಾಚಾರ ಮತ್ತಷ್ಟು ಹೆಚ್ಚಾಗಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಲಂಚ ಸ್ವೀಕರಿಸದೆ ಯಾವುದೇ ಕೆಲಸ ಮಾಡುವುದಿಲ್ಲ. ಇದರಿಂದಾಗಿ ಸಾರ್ವಜನಿಕರು ತೊಂದರೆ ಎದುರಿಸುವಂತಾಗಿದೆ. ಈ ಹಿನ್ನಲೆಯಲ್ಲಿ ತಪ್ಪಿತಸ್ಥ ಅಧಿಕಾರಿಗಳು ಹಾಗು ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶಿವಕುಮಾರ್ ಮನವಿ ಮಾಡಿದ್ದಾರೆ.