Monday, August 30, 2021

ಕಟ್ಟಡ ಕಾರ್ಮಿಕರು ಕಡ್ಡಾಯವಾಗಿ ಗುರುತಿನ ಚೀಟಿ ಪಡೆಯಿರಿ : ಬಿ.ಕೆ ಮೋಹನ್

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದ ಸಮುದಾಯ ಭವನದಲ್ಲಿ ಕರ್ನಾಟಕ ಸ್ಟೇಟ್ ಕನ್ಸ್‌ಸ್ಟ್ರಕ್ಷನ್ ಸೆಂಟ್ರಲ್ ಯೂನಿಯನ್ ವತಿಯಿಂದ ಕೂಡ್ಲಿಗೆರೆ ಹಾಗು ಹರಳಿಹಳ್ಳಿ ಗ್ರಾಮದ ವ್ಯಾಪ್ತಿಯ ಕಟ್ಟಡ ಕಾರ್ಮಿಕರಿಗೆ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  
    ಭದ್ರಾವತಿ, ಆ. ೩೦: ಕಟ್ಟಡ ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಕಡ್ಡಾಯವಾಗಿ ಗುರುತಿನ ಚೀಟಿ ಮಾಡಿಸಿಕೊಳ್ಳಬೇಕೆಂದು ನಗರಸಭಾ ಸದಸ್ಯ ಬಿ.ಕೆ ಮೋಹನ್ ಹೇಳಿದರು.
    ಅವರು ತಾಲೂಕಿನ ಕೂಡ್ಲಿಗೆರೆ ಗ್ರಾಮದ ಸಮುದಾಯ ಭವನದಲ್ಲಿ ಕರ್ನಾಟಕ ಸ್ಟೇಟ್ ಕನ್ಸ್‌ಸ್ಟ್ರಕ್ಷನ್ ಸೆಂಟ್ರಲ್ ಯೂನಿಯನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೂಡ್ಲಿಗೆರೆ ಹಾಗು ಹರಳಿಹಳ್ಳಿ ಗ್ರಾಮದ ವ್ಯಾಪ್ತಿಯ ಕಟ್ಟಡ ಕಾರ್ಮಿಕರಿಗೆ ದಿನಸಿ ಸಾಮಗ್ರಿ ವಿತರಿಸಿ ಮಾತನಾಡಿದರು.
    ಕಟ್ಟಡ ಕಾರ್ಮಿಕರು ಗುರುತಿನ ಚೀಟಿ ಹೊಂದುವುದರಿಂದ ಸಂಕಷ್ಟದ ಸಮಯದಲ್ಲಿ ಸರ್ಕಾರದ ಸೌಲಭ್ಯಗಳನ್ನು ತಕ್ಷಣ ಪಡೆದುಕೊಳ್ಳಬಹುದಾಗಿದೆ. ಅರ್ಹ ಕಾರ್ಮಿಕರು ಸೌಲಭ್ಯಗಳಿಂದ ವಂಚಿತವಾಗಬಾರದು ಎಂದರು.
    ಯೂನಿಯನ್ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಸಂಜಯ್‌ಕುಮಾರ್, ತಾಲೂಕು ಅಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು, ತಾಲೂಕು ಕಾರ್ಯಾಧ್ಯಕ್ಷ ಅಭಿಲಾಷ್, ತಾಂತ್ರಿಕ ಸಲಹೆಗಾರ ಮನೋಹರ್, ಸಂಘಟನಾ ಕಾರ್ಯದರ್ಶಿ ಕುಮಾರ್, ಉಪಾಧ್ಯಕ್ಷ ನಾಗೇಂದ್ರರೆಡ್ಡಿ, ಕೂಡ್ಲಿಗೆರೆ ಭಾಗದ ಅಧ್ಯಕ್ಷ ರುದ್ರಮುನಿ, ತಾಲೂಕು ಗ್ರಾಮಾಂತರ ಅಧ್ಯಕ್ಷ ಹಬೀಬ್, ಶಿವಣ್ಣಗೌಡ ಹಾಗು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.


ನಗರಸಭೆ ವಾರ್ಡ್ ನಂ.೨೯ರ ಚುನಾವಣೆ : ೩ ಪಕ್ಷಗಳಿಂದ ಪ್ರಚಾರದ ಭರಾಟೆ

ಪಕ್ಷಗಳಿಗೆ ಗೆಲ್ಲುವ ಪ್ರತಿಷ್ಠೆ, ಉಳಿಸಿಕೊಳ್ಳುವ ತವಕ, ಅದೃಷ್ಟ ಪರೀಕ್ಷೆ


ಭದ್ರಾವತಿ ನಗರಸಭೆ ವಾಡ್ ನಂ.೨೯ರ ಚುನಾವಣೆ ಹಿನ್ನಲೆಯಲ್ಲಿ ಮತದಾರರನ್ನು ಸೆಳೆಯಲು ಮನೆ ಮನೆಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ ಎಂದು ಆರೋಪಿಸಿ ೩ ಪಕ್ಷಗಳ ನಡುವೆ ಸೋಮವಾರ ಸಂಜೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು.
    ಭದ್ರಾವತಿ, ಆ. ೩೦; ನಗರಸಭೆ ವಾರ್ಡ್ ನಂ.೨೯ರ ಚುನಾವಣೆ ಪ್ರಚಾರದ ಭರಾಟೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ೩ ಪಕ್ಷಗಳು ತೀವ್ರ ಪೈಪೋಟಿಗೆ ಮುಂದಾಗಿವೆ.
    ಸೆ.೩ರಂದು ಮತದಾನ ನಡೆಯಲಿದ್ದು, ಉಳಿದಿರುವ ೨ ದಿನಗಳಲ್ಲಿ ವ್ಯಾಪಕ ಪ್ರಚಾರಕ್ಕೆ ೩ ಪಕ್ಷಗಳು ಸಿದ್ದತೆಗಳನ್ನು ಕೈಗೊಂಡಿವೆ. ಈಗಾಗಲೇ ವಾರ್ಡ್ ವ್ಯಾಪ್ತಿಯಲ್ಲಿ ೩-೪ ಸುತ್ತಿನ ಪ್ರಚಾರ ನಡೆಸಲಾಗಿದೆ.
    ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಗೆಲ್ಲುವುದು ಪ್ರತಿಷ್ಠೆಯಾಗಿದ್ದರೇ, ಜೆಡಿಎಸ್ ಪಕ್ಷಕ್ಕೆ ಉಳಿಸಿಕೊಳ್ಳುವ ತವಕ, ಈ ನಡುವೆ ಬಿಜೆಪಿ ಅದೃಷ್ಟ ಪರೀಕ್ಷೆಗೆ ಎದುರು ನೋಡುತ್ತಿದೆ. ೩ ಪಕ್ಷಗಳ ಅಭ್ಯರ್ಥಿಗಳು ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಕಾರಣ ಚುನಾವಣೆ ಮತ್ತಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
    ಇವೆಲ್ಲದರ ನಡುವೆ ಚುನಾವಣಾ ಅಕ್ರಮಗಳು ಸಹ ಹೆಚ್ಚಾಗುತ್ತಿದ್ದು, ಮತದಾರರನ್ನು ಸೆಳೆಯಲು ನಾನಾ ರೀತಿಯ ಅಕ್ರಮಗಳನ್ನು ನಡೆಸಲಾಗುತ್ತಿದೆ ಎಂಬ ದೂರುಗಳು ಸ್ಥಳೀಯರಿಂದ ಕೇಳಿ ಬರುತ್ತಿವೆ. ಅಕ್ರಮಗಳ ವಿಚಾರಕ್ಕೆ ಸಂಬಂಧಿಸಿದಂತೆ ೩ ಪಕ್ಷಗಳು ಪರಸ್ಪರ ದೋಷಾರೋಪಣೆಗಳನ್ನು ಮಾಡುತ್ತಿವೆ. ಅಲ್ಲದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ೩ ಪಕ್ಷಗಳ ಮುಖಂಡರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮಾಹಿತಿ ಅರಿತು ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು.

ದಲಿತ ಸಂಘರ್ಷ ಸಮಿತಿ ಮುಖಂಡರಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ


ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೦ನೇ ಜನ್ಮದಿನ ಹಾಗು ಪ್ರೊ. ಬಿ. ಕೃಷ್ಣಪ್ಪನವರ ೮೩ನೇ ಜನ್ಮದಿನ  ಅಂಗವಾಗಿ ಸೋಮವಾರ ಶಿವಮೊಗ್ಗ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೊದಲು ನೂರಾರು ದಲಿತ ಮುಖಂಡರು, ಕಾರ್ಯಕರ್ತರು ಭದ್ರಾವತಿ ಬಿ.ಎಚ್ ರಸ್ತೆ, ಅಂಡರ್‌ಬ್ರಿಡ್ಜ್ ಬಳಿ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
    ಭದ್ರಾವತಿ, ಆ. ೩೦: ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೦ನೇ ಜನ್ಮದಿನ ಹಾಗು ಪ್ರೊ. ಬಿ. ಕೃಷ್ಣಪ್ಪನವರ ೮೩ನೇ ಜನ್ಮದಿನ  ಅಂಗವಾಗಿ ಸೋಮವಾರ ಶಿವಮೊಗ್ಗ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೊದಲು ನೂರಾರು ದಲಿತ ಮುಖಂಡರು, ಕಾರ್ಯಕರ್ತರು ನಗರದ ಬಿ.ಎಚ್ ರಸ್ತೆ, ಅಂಡರ್‌ಬ್ರಿಡ್ಜ್ ಬಳಿ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
    ತಾಲೂಕು ಸಂಚಾಲಕ ರವಿನಾಯ್ಕ ಮಾತನಾಡಿ, ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ ಡಾ. ಬಿ.ಆರ್ ಅಂಬೇಡ್ಕರ್ ಹಾಗು ಪ್ರೊ. ಬಿ. ಕೃಷ್ಣಪ್ಪನವರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
    ತಾಲೂಕು ನಗರ ಸಂಚಾಲಕ ತಮ್ಮಯ್ಯ, ಸಂಘಟನಾ ಸಂಚಾಲಕರಾದ ಶಿವಾನಾಯಕ, ಮುತ್ತು, ಅಣ್ಣಪ್ಪ, ಜೀವಾ, ನರಸಿಂಹಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.