Monday, January 3, 2022

ಯಾವುದೇ ಭಯವಿಲ್ಲದೆ ಕಡ್ಡಾಯವಾಗಿ ಲಸಿಕೆ ಪಡೆಯಿರಿ : ಶಾಸಕ ಬಿ.ಕೆ ಸಂಗಮೇಶ್ವರ್

ಆರೋಗ್ಯ ಇಲಾಖೆ ವತಿಯಿಂದ ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಭದ್ರಾವತಿ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ೧೫ ರಿಂದ ೧೮ ವರ್ಷದೊಳಗಿನ ಮಕ್ಕಳಿಗೆ ಕೋವಿಡ್-೧೯ ಲಸಿಕೆ ಕಾರ್ಯಕ್ರಮಕ್ಕೆ ಸೋಮವಾರ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
    ಭದ್ರಾವತಿ, ಜ. ೩: ಕೋವಿಡ್-೧೯ ಲಸಿಕೆಯಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಮಕ್ಕಳು ಯಾವುದೇ ಭಯವಿಲ್ಲದೆ ಕಡ್ಡಾಯವಾಗಿ ಲಸಿಕೆಯನ್ನು ಪಡೆಯಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ ಮಾಡಿದರು.
    ಅವರು ಸೋಮವಾರ ಆರೋಗ್ಯ ಇಲಾಖೆ ವತಿಯಿಂದ ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ೧೫ ರಿಂದ ೧೮ ವರ್ಷದೊಳಗಿನ ಮಕ್ಕಳಿಗೆ ಕೋವಿಡ್-೧೯ ಲಸಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಪ್ರತಿಯೊಬ್ಬರಿಗೂ ಆರೋಗ್ಯವೇ ಮುಖ್ಯ. ಎಲ್ಲರೂ ತಮ್ಮ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕೆಲವರು ಕೋವಿಡ್ ಲಸಿಕೆ ಕುರಿತು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ಇವುಗಳಿಗೆ ಮಕ್ಕಳು ಕಿವಿ ಕೊಡಬಾರದು. ದೇಶದಲ್ಲಿ ಕೋಟ್ಯಾಂತರ ಜನರು ಲಸಿಕೆ ಪಡೆದುಕೊಂಡಿದ್ದಾರೆ. ಬಹುತೇಕ ಜನರು ಲಸಿಕೆ ಪಡೆದುಕೊಂಡಿರುವ ಪರಿಣಾಮ ಸೋಂಕಿನ ಪರಿಣಾಮ ಇಳಿಮುಖವಾಗಿದೆ. ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡು ಮಕ್ಕಳು ಲಸಿಕೆ ಪಡೆದುಕೊಳ್ಳಬೇಕೆಂದರು.
    ತಹಸೀಲ್ದಾರ್ ಆರ್. ಪ್ರದೀಪ್, ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್, ಸದಸ್ಯೆ ಶಶಿಕಲಾ ನಾರಾಯಣಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟರಮಣಶೇಟ್, ಪ್ರಾಂಶುಪಾಲ ಸಿದ್ದಲಿಂಗಮೂರ್ತಿ, ಉಪ ಪ್ರಾಂಶುಪಾಲರಾದ ಶಾಂತಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಬಸಪ್ಪ ಹಾಗು ಆರೋಗ್ಯ ಇಲಾಖೆಯ ಆರೋಗ್ಯ ಶಿಕ್ಷಣಾಧಿಕಾರಿ ರಾಜೇಗೌಡ, ಹಿರಿಯ ಆರೋಗ್ಯ ಸಹಾಯಕರಾದ ರೇವತಿ, ಆನಂದಮೂರ್ತಿ, ಸಿಬ್ಬಂದಿಗಳಾದ ವಸಂತ, ಗ್ರೇಸಿಯಾ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ನೆಹರುನಗರ ಆರೋಗ್ಯ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ. ಹರ್ಷಿತ್ ನೇತೃತ್ವದಲ್ಲಿ ಶೃತಿ ಮತ್ತು ಚೈತ್ರ ಮಕ್ಕಳಿಗೆ ಲಸಿಕೆ ನೀಡಿದರು. ಶಿಕ್ಷಕ ದಿವಾಕರ್ ಕಾರ್ಯಕ್ರಮ ನಿರೂಪಿಸಿದರು.
    ತಾಲೂಕಿನಲ್ಲಿ ಒಟ್ಟು ೧೦೯ ಶಾಲಾ-ಕಾಲೇಜುಗಳಲ್ಲಿ ೧೫ ರಿಂದ ೧೮ ವರ್ಷದೊಳಗಿನ ಒಟ್ಟು ೧೪,೫೯೧ ಮಕ್ಕಳಿದ್ದು, ಈ ಪೈಕಿ ಸೋಮವಾರ ೨೧೧೧ ಮಕ್ಕಳಿಗೆ ಲಸಿಕೆ ನೀಡಲಾಯಿತು. ಶಾಲಾ-ಕಾಲೇಜುಗಳ ಮಕ್ಕಳಿಗೆ ಲಸಿಕೆ ನೀಡಿಕೆ ನಂತರ ಶಾಲೆಯಿಂದ ಹೊರಗುಳಿದಿರುವ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯ ನಡೆಯಲಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಗ್ರಾಮಾಂತರ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ನೂತನ ಅಧ್ಯಕ್ಷರಾಗಿ ಎಂ.ರಮೇಶ್ ನೇಮಕ

ಭದ್ರಾವತಿ ತಾಲೂಕಿನ ಶಂಕರಘಟ್ಟ ದೀನಬಂಧು ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ರಮೇಶ್ ಬ್ಲಾಕ್ ಕಾಂಗ್ರೆಸ್‍ ಗ್ರಾಮಾಂತರ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದು, ಶಿವಮೊಗ್ಗ ಜಿಲ್ಲಾ ಹಿಂದುಳಿದ ಘಟಕದ ಜಿಲ್ಲಾಧ್ಯಕ್ಷ ರಮೇಶ್ ಇಕ್ಕೇರಿ ನೇಮಕಾತಿ ಪತ್ರ ವಿತರಿಸಿ ಎಂ. ರಮೇಶ್‌ ಅವರನ್ನು ಅಭಿನಂದಿಸಿದರು.  
    ಭದ್ರಾವತಿ ಜ. 3: ತಾಲೂಕಿನ ಶಂಕರಘಟ್ಟ ದೀನಬಂಧು ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ರಮೇಶ್ ಬ್ಲಾಕ್ ಕಾಂಗ್ರೆಸ್‍ ಗ್ರಾಮಾಂತರ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.  
    ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ  ಜಿಲ್ಲಾ ಹಿಂದುಳಿದ ವರ್ಗಗಳ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾ‍ರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಹಿಂದುಳಿದ ಘಟಕದ ಜಿಲ್ಲಾಧ್ಯಕ್ಷ ರಮೇಶ್ ಇಕ್ಕೇರಿ ನೇಮಕಾತಿ ಪತ್ರ ವಿತರಿಸಿ ಎಂ. ರಮೇಶ್‌ ಅವರನ್ನು ಅಭಿನಂದಿಸಿದರು.  
    ಈ ಸಂದರ್ಭದಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್.ಎಸ್‌ ಸುಂದರೇಶ್‌, ಯುವ ಮುಖಂಡ ಡಾ. ಶ್ರೀನಿವಾಸ್‌ ಕರಿಯಣ್ಣ, ಮುಖಂಡರಾದ ಸೇವಾದಳದ ವೈ.ಎಚ್‌ ನಾಗರಾಜ್‌ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗು ಜರ್ನಲಿಸಂ ಪಿಜಿ ಡಿಪ್ಲೋಮಾ ಪದವಿ ಪಡೆದಿರುವ ಎಂ. ರಮೇಶ್‌ರವರು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿದ್ದರು. ಈ ಹಿಂದೆ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದರು. ಅಲ್ಲದೇ ಈ ಹಿಂದಿನ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸ್ರಮ್ಮಿಶ್ರ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷಾಧಿಕಾರಿ ಕರ್ತವ್ಯ ನಿ‍ರ್ವಹಿಸಿದ್ದರು. ಈ ನಡುವೆ ದೀನಬಂಧು ಸೇವಾ ಟ್ರಸ್ಟ್ ಅಧ್ಯಕ್ಷರಾಗಿ ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.
    ಬ್ಲಾಕ್ ಕಾಂಗ್ರೆಸ್‍ ಗ್ರಾಮಾಂತರ ಹಿಂದುಳಿದ ವರ್ಗಗಳ ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಎಂ. ರಮೇಶ್‌ ಅವರಿಗೆ ಶಾಸಕ ಬಿ.ಕೆ ಸಂಗಮೇಶ್ವರ್‌ ಹಾಗು ಬ್ಲಾಕ್‌ ಕಾಂಗ್ರೆಸ್‌ ನಗರ ಮತ್ತು ಗ್ರಾಮಾಂತರ ಘಟಕಗಳ ಅಧ್ಯಕ್ಷರು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಜಯಕರ್ನಾಟಕ ಸಂಘಟನೆ ಜಿಲ್ಲಾ ಉಪಾಧ್ಯಕ್ಷ, ಗೋಣಿಬೀಡಿನ ತ್ಯಾಗರಾಜ್‌ ಸೇರಿದಂತೆ ಇನ್ನಿತರರು ಅಭಿನಂದಿಸಿದ್ದಾರೆ. 




ಶಾಸಕ ಬಿ.ಕೆ.ಸಂಗಮೇಶ್ವರ್ ಸಲಹೆ ಸೂಚನೆ ಮೇರೆಗೆ ನೂತನ ಜವಾಬ್ದಾರಿ ಒಪ್ಪಿಕೊಂಡಿದ್ದು, ಈಗಾಗಲೇ ಶಾಸಕರ ನೇತೃತ್ವದಲ್ಲಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿದೆ. ಹಿಂದುಳಿದ ವರ್ಗಗಳ ಜನರನ್ನು ಕಾಂಗ್ರೆಸ್‌  ಪಕ್ಷದ ಮಖ್ಯವಾಹಿನಿಗೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುವ ಜೊತೆಗೆ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಲು ಪ್ರಯತ್ನಿಸುತ್ತೇನೆ.
 - ಎಂ.ರಮೇಶ್, ಅಧ್ಯಕ್ಷರು, ಬ್ಲಾಕ್‌ ಕಾಂಗ್ರೆಸ್‌ ಗ್ರಾಮಾಂತರ ಹಿಂದುಳಿದ ವರ್ಗಗಳ 



ಚಾರ್ಲ್ಸ್ ಆನಂದರಾಜ್ ನಿಧನ

ಚಾರ್ಲ್ಸ್ ಆನಂದರಾಜ್
    ಭದ್ರಾವತಿ, ಜ. ೩: ನ್ಯೂಟೌನ್ ವೇನ್ಸ್ ಮೆಮೋರಿಯಲ್ ಚರ್ಚ್ ಖಜಾಂಚಿ, ಜನ್ನಾಪುರ ರಾಜಪ್ಪ ಲೇಔಟ್ ನಿವಾಸಿ ಚಾರ್ಲ್ಸ್ ಆನಂದರಾಜ್(೬೪) ಭಾನುವಾರ ನಿಧನ ಹೊಂದಿದರು.
    ಪತ್ನಿ, ೧ ಗಂಡು, ೧ ಹೆಣ್ಣು ಮಕ್ಕಳನ್ನು ಹೊಂದಿದ್ದರು. ಆನಂದರಾಜ್ ಎಂಪಿಎಂ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಇವರ ಅಂತ್ಯಕ್ರಿಯೆ ಬೈಪಾಸ್ ರಸ್ತೆಯಲ್ಲಿರುವ ಸಂಯುಕ್ತ ಕ್ರೈಸ್ತರ ಸಮಾಧಿಯಲ್ಲಿ ಸೋಮವಾರ ನೆರವೇರಿತು.
     ಯಂಗ್ ಕ್ರಿಶ್ಚಿಯನ್ ಅಸೋಸಿಯೇಷನ್ ನೂತನ ಅಧ್ಯಕ್ಷ ಆರ್. ಮೋಸಸ್, ಬಿಪಿಎಲ್ ರವಿಕುಮಾರ್, ಎಎಪಿ ಪಕ್ಷದ ಎಚ್. ರವಿಕುಮಾರ್, ಎಂಪಿಎಂ ನಿವೃತ್ತ ಕಾರ್ಮಿಕರು, ಕ್ರೈಸ ಸಮುದಾಯದ ಪ್ರಮುಖರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.