Friday, February 17, 2023

ಚಿನ್ನದ ಪ್ರಭಾವಳಿಯೊಂದಿಗಿನ ಶಿವಲಿಂಗ ಕಲಾಕೃತಿ

ಮಹಾ ಶಿವರಾತ್ರಿ ಪ್ರಯುಕ್ತ ಭದ್ರಾವತಿ ಸೂಕ್ಷ್ಮ ಕೆತ್ತನೆ ಕಲಾಕೃತಿಗಳ ಕಲಾವಿದ, ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪುರಸ್ಕೃತ ಸಚಿನ್ ಎಂ. ವರ್ಣೇಕರ್ ಈ ಬಾರಿ ಮಹಾಶಿವರಾತ್ರಿಗೆ ವಿಶೇಷವಾಗಿ ಚಿನ್ನದ ಪ್ರಭಾವಳಿಯೊಂದಿಗಿನ ಶಿವಲಿಂಗ ಕಲಾಕೃತಿಯನ್ನು ರಚಿಸಿದ್ದಾರೆ.
    ಭದ್ರಾವತಿ, ಫೆ. ೧೭: ಮಹಾ ಶಿವರಾತ್ರಿ ಪ್ರಯುಕ್ತ ಸೂಕ್ಷ್ಮ ಕೆತ್ತನೆ ಕಲಾಕೃತಿಗಳ ಕಲಾವಿದ, ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪುರಸ್ಕೃತ ಸಚಿನ್ ಎಂ. ವರ್ಣೇಕರ್ ಈ ಬಾರಿ ಮಹಾಶಿವರಾತ್ರಿಗೆ ವಿಶೇಷವಾಗಿ ಚಿನ್ನದ ಪ್ರಭಾವಳಿಯೊಂದಿಗಿನ ಶಿವಲಿಂಗ ಕಲಾಕೃತಿಯನ್ನು ರಚಿಸಿದ್ದಾರೆ.
    ಶಿವಲಿಂಗ ೧ ಸೆ.ಮೀ ಎತ್ತರವಿದ್ದು, ಪ್ರಭಾವಳಿ ೨.೫ ಸೆ.ಮೀ ಎತ್ತರ ಮತ್ತು ಅಗಲ ಹೊಂದಿದೆ. ಈ ಕಲಾಕೃತಿ ಹೆಚ್ಚು ಆಕರ್ಷಕವಾಗಿ ಕಂಡು ಬರುತ್ತಿದ್ದು, ಕಳೆದ ವರ್ಷ ಉತ್ತರಾಖಂಡದ ಪ್ರವಿತ್ರ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ ಶ್ರೀ ಕೇದಾರನಾಥೇಶ್ವರ ದೇವಸ್ಥಾನ ಮಾದರಿ ಕಲಾಕೃತಿಯನ್ನು ರಚಿಸಿದ್ದರು. ಇವರ ಕೆಲವು ಕಲಾಕೃತಿಗಳು ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುಷಾ ವಸ್ತು ಸಂಗ್ರಹಾಲಯ ಅಲಂಕರಿಸಿವೆ. ಇವರ ಕಲಾಕೃತಿಗಳಿಗೆ ಪ್ರಶಸ್ತಿಗಳು ಸಹ ಲಭಿಸಿವೆ.

ಜನಪರ, ಜನಸೇವೆ ಬಜೆಟ್ : ಡಾ. ಬಿ.ಜಿ ಧನಂಜಯ

ಡಾ. ಬಿ.ಜಿ ಧನಂಜಯ
    ಭದ್ರಾವತಿ, ಫೆ. ೧೭: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಬಾರಿ ಮಂಡಿಸಿರುವ ಬಜೆಟ್ ಜನಪರ, ಜನಸೇವೆ ಬಜೆಟ್ ಎಂದು ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
    ಬಹಳ ವರ್ಷಗಳ ನಂತರ ಬಸವರಾಜ ಬೊಮ್ಮಾಯಿಯವರು ತಮ್ಮ ರಾಜಕೀಯ ಅನುಭವ ಹಾಗು ಆರ್ಥಿಕ ಜಾಣ್ಮೆ ಪ್ರದರ್ಶಿಸುವ ಮೂಲಕ ಉಳಿತಾಯ ಬಜೆಟ್ ಮಂಡಿಸಿದ್ದಾರೆ. ಶಿಕ್ಷಣ, ಆರೋಗ್ಯ, ಉದ್ಯೋಗಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಶಾಲಾ, ಕಾಲೇಜುಗಳ ಕೊಠಡಿ ನಿರ್ಮಾಣಕ್ಕೆ ಆದ್ಯತೆ, ಪಂಚಾಯತ್‌ರಾಜ್ ವ್ಯವಸ್ಥೆ ಗಟ್ಟಿಗೊಳಿಸುವ ಮೂಲಕ ತಂತ್ರಜ್ಞಾನ ಅಳವಡಿಕೆಗೆ ವಿಶೇಷ ಆದ್ಯತೆ ನೀಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.
    ರೈತ ಶಕ್ತಿ, ಯುವ ಶಕ್ತಿ, ಸ್ತ್ರೀ ಶಕ್ತಿ ಬಳಕೆಗೆ ಉತ್ತಮ ಯೋಜನೆಗಳನ್ನು ರೂಪಿಸಲಾಗಿದೆ. ವಿಶೇಷವಾಗಿ ೧ ಲಕ್ಷ ಮಹಿಳೆಯರಿಗೆ ಉಚಿತ ಕೌಶಲ್ಯ ತರಬೇತಿ ನೀಡಲು ಮುಂದಾಗಿರುವುದು ಅವರು ಸ್ವಾವಲಂಬಿಗಳಾಗಿ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಇದು ಚುನಾವಣೆ ಉದ್ದೇಶದಿಂದ ಮಂಡಿಸಿರುವ ಬಜೆಟ್ ಅಲ್ಲ. ಬದಲಾಗಿ ಜನಪರ, ಜನಸೇವೆ ಬಜೆಟ್ ಆಗಿದೆ.

ಜೆಡಿಎಸ್ ನಗರ ಕಾರ್ಯದರ್ಶಿಯಾಗಿ ಎನ್. ರಾಮಕೃಷ್ಣ ನೇಮಕ

ಎನ್. ರಾಮಕೃಷ್ಣ
    ಭದ್ರಾವತಿ, ಫೆ. ೧೭ : ಜಾತ್ಯತೀತ ಜನತಾದಳ ನಗರ ಘಟಕದ ಕಾರ್ಯದರ್ಶಿಯಾಗಿ ಹುತ್ತಾಕಾಲೋನಿ ನಿವಾಸಿ, ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್. ರಾಮಕೃಷ್ಣ ನೇಮಕಗೊಂಡಿದ್ದಾರೆ.
    ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಎನ್. ರಾಮಕೃಷ್ಣರವರನ್ನು ನಗರ ಘಟಕದ ಕಾರ್ಯದರ್ಶಿಯಾಗಿ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ಧರಾಗಿ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಸಮನ್ವಯತೆ ಕಾಯ್ದುಕೊಂಡು ಪಕ್ಷ ಬಲವರ್ಧನೆಗೆ ಶ್ರಮಿಸುವಂತೆ ಸೂಚಿಸಿದ್ದಾರೆ.
    ನಗರ ಘಟಕದ ಕಾರ್ಯದರ್ಶಿಯಾಗಿ ನೇಮಕಗೊಳ್ಳಲು ಕಾರಣಕರ್ತರಾದ ಪಕ್ಷದ ವರಿಷ್ಠರು, ಮುಖಂಡರು, ಕಾರ್ಯಕರ್ತರಿಗೆ ಎನ್. ರಾಮಕೃಷ್ಣ ಕೃತಜ್ಞತೆ ಸಲ್ಲಿಸಿದ್ದಾರೆ.

ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ಬಿ.ಕೆ ಶಿವಕುಮಾರ್ ಪುತ್ರಿ ಹಿತಾರವರ ಶ್ರೀಮಂತ ಕಾರ್ಯಕ್ರಮ

ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕುಟುಂಬ ವರ್ಗದವರು ಭಾಗಿ

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಸಹೋದರ ಬಿ.ಕೆ ಶಿವಕುಮಾರ್‌ರವರ ಪುತ್ರಿ ಹಿತಾರವರ ಶ್ರೀಮಂತ ಕಾರ್ಯಕ್ರಮ ಶುಕ್ರವಾರ ಶಿವಮೊಗ್ಗ ಲಗಾನ್ ಕಲ್ಯಾಣ ಮಂಟಪದಲ್ಲಿ ನಡೆಯಿತು.
    ಭದ್ರಾವತಿ, ಫೆ. ೧೭ : ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಸಹೋದರ ಬಿ.ಕೆ ಶಿವಕುಮಾರ್‌ರವರ ಪುತ್ರಿ ಹಿತಾರವರ ಶ್ರೀಮಂತ ಕಾರ್ಯಕ್ರಮ ಶುಕ್ರವಾರ ಶಿವಮೊಗ್ಗ ಲಗಾನ್ ಕಲ್ಯಾಣ ಮಂಟಪದಲ್ಲಿ ನಡೆಯಿತು.
    ಹಿತಾರವರು ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ರವರ ಸೊಸೆಯಾಗಿದ್ದು, ಶ್ರೀಮಂತ ಕಾರ್ಯಕ್ರಮದಲ್ಲಿ ಸಹೋದರ, ವಿಧಾನಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಸೇರಿದಂತೆ ಕುಟುಂಬ ವರ್ಗದವರು ಪಾಲ್ಗೊಂಡಿದ್ದರು.
    ಕ್ಷೇತ್ರದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಗಣ್ಯರು, ಹಿತೈಷಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗು ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ವರ್ಗದವರು ಪಾಲ್ಗೊಂಡಿದ್ದರು.

ವಿಐಎಸ್‌ಎಲ್ ಆಸ್ಪತ್ರೆ ನಿವೃತ್ತ ವೈದ್ಯೆ ಡಾ. ಅರುಂಧತಿ ನಿಧನ

ಡಾ. ಅರುಂಧತಿ
ಭದ್ರಾವತಿ, ಫೆ. ೧೭ : ನಗರದ ಜನ್ನಾಪುರ ನಿವಾಸಿ, ವಿಐಎಸ್‌ಎಲ್ ಆಸ್ಪತ್ರೆ ನಿವೃತ್ತ ವೈದ್ಯೆ ಡಾ. ಅರುಂಧತಿ(೮೦) ನಿಧನ ಹೊಂದಿದರು.
ಪತಿ ಡಾ. ಚಂದ್ರಶೇಖರ್ ಹಂಚಾಟೆ, ಪುತ್ರ ಡಾ. ಗಿರೀಶ್, ಪುತ್ರಿ ಮಾಲಿನಿ ಹಾಗು ಸೊಸೆ ಇದ್ದಾರೆ. ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ಶುಕ್ರವಾರ ಸಂಜೆ ಇವರ ಅಂತ್ಯಕ್ರಿಯೆ ನೆರವೇರಿತು.
ಡಾ. ಅರುಂಧತಿಯವರ ನಿಧನಕ್ಕೆ ನಗರದ ವೈದ್ಯರು, ಗಣ್ಯರು, ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.