ಮಂಗೋಟೆ ರುದ್ರೇಶ್
ಭದ್ರಾವತಿ, ಏ. ೧೧ : ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಸ್ಥಳೀಯರಿಗೆ ಅದರಲ್ಲೂ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡಬೇಕೆಂಬ ಮನವಿಗೆ ಬಿಜೆಪಿ ಪಕ್ಷ ಪೂರಕವಾಗಿ ಸ್ಪಂದಿಸಿದ್ದು, ಯುವ ಮುಖಂಡ ಮಂಗೋಟೆ ರುದ್ರೇಶ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿ ಪರಿಷತ್ ಮೂಲಕ ಬಿಜೆಪಿ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಪ್ರವೇಶಿಸುವ ಮೂಲಕ ಪಕ್ಷದ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಮಂಗೋಟೆ ರುದ್ರೇಶ್ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದು ಎಲ್ಲರನ್ನು ಬೆರಗುಗೊಳಿಸಿದೆ.
ರುದ್ರೇಶ್ ಮೂಲತಃ ವಕೀಲರಾಗಿದ್ದು, ಇವರ ತಂದೆ ಮಂಗೋಟೆ ಮುರುಗೆಪ್ಪ ಸಹ ಪ್ರಸಿದ್ದ ವಕೀಲರಾಗಿದ್ದರು. ಅಲ್ಲದೆ ತಾಲೂಕು ವಕೀಲರ ಸಂಘದ ಮೊದಲ ಅಧ್ಯಕ್ಷರಾಗಿದ್ದರು. ಸಮಾಜವಾದಿ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಮಾಜಿ ಮುಖ್ಯಮಂತ್ರಿ ಜೆ.ಎಚ್ ಪಟೇಲ್ ಅವರೊಂದಿಗೆ ಗುರುತಿಸಿಕೊಂಡಿದ್ದರು.
ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಸುಮಾರು ಒಂದು ವರ್ಷದ ಹಿಂದೆಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಂಸದ ರಾಘವೇಂದ್ರ ಸಹ ಈ ಬಾರಿ ಮಂಗೋಟೆ ರುದ್ರೇಶ್‌ಗೆ ಅವಕಾಶ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದರು.
ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷೆ ಪವಿತ್ರ ರಾಮಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಮುಖಂಡರಾದ ತೀರ್ಥಯ್ಯ, ಕೂಡ್ಲಿಗೆರೆ ಹಾಲೇಶ್, ಉದ್ಯಮಿ ಎಚ್.ಸಿ ರಮೇಶ್, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಸೇರಿದಂತೆ ಇನ್ನಿತರರು ಪೈಪೋಟಿಗೆ ಮುಂದಾಗಿದ್ದರು.
ಮಂಗೋಟೆ ರುದ್ರೇಶ್ ಸುಮಾರು ಒಂದು ವರ್ಷದಿಂದ ಕ್ಷೇತ್ರದಾದ್ಯಂತ ಪ್ರಚಾರ ಕೈಗೊಂಡಿದ್ದರು. ಅಲ್ಲದೆ ವಿಇಎಸ್ ವಿದ್ಯಾಸಂಸ್ಥೆ ಆವರಣದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸುವ ಮೂಲಕ ಗಮನ ಸೆಳೆದಿದ್ದರು.