Sunday, April 17, 2022

ಏ.೧೭ರಂದು ಜನ್ನಾಪುರ ಕೆರೆ ಅಭಿವೃದ್ಧಿಪಡಿಸುವ ಸಂಬಂಧ ಸಭೆ

    ಭದ್ರಾವತಿ, ಏ. ೧೭:  ಕಸಬಾ ಹೋಬಳಿ ಜನ್ನಾಪುರ ಸರ್ವೆ ನಂ.೭೦ರ ೪೫ ಎಕರೆ ೨೦ ಗುಂಟೆ ಸರ್ಕಾರಿ ಕೆರೆ ಅನಧಿಕೃತ ಒತ್ತುವರಿ ತೆರವುಗೊಳಿಸಿ, ಸ್ವಚ್ಛಗೊಳಿಸಿ, ಅಭಿವೃದ್ಧಿಪಡಿಸುವ ಸಂಬಂಧ ಏ.೧೮ರಂದು ಬೆಳಿಗ್ಗೆ ೧೧ ಗಂಟೆಗೆ ನಗರಸಭೆ ಸಭಾಂಗಣದಲ್ಲಿ ಸಭೆ ನಡೆಯಲಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ತಹಸೀಲ್ದಾರ್ ಆರ್. ಪ್ರದೀಪ್, ಉಪಸ್ಥಿತರಿರುವರು. ನಗರಸಭೆ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ, ನೀರಾವರಿ ಇಲಾಖೆ ಬಿಆರ್‌ಎಲ್‌ಬಿಸಿ ಮತ್ತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಶಿವಮೊಗ್ಗ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಕಾರುಣ್ಯ ಚಾರಿಟಬಲ್ ಟ್ರಸ್ಟ್ ಪುನರ್ವಸತಿ ಕೇಂದ್ರದ ಸ್ಥಳಾಂತರಗೊಂಡ ಕಟ್ಟಡದ ಉದ್ಘಾಟನೆ

ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಜನ್ಮದಿನಾಚರಣೆ

ಭದ್ರಾವತಿ ನಗರದ ಕಾರುಣ್ಯ ಚಾರಿಟಬಲ್ ಟ್ರಸ್ಟ್ ಪುನರ್ವಸತಿ ಕೇಂದ್ರದ ವತಿಯಿಂದ ಭಾನುವಾರ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್‌ರವರ ಜನ್ಮದಿನಾಚರಣೆ ಹಾಗು ಸ್ಥಳಾಂತರಗೊಂಡ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
    ಭದ್ರಾವತಿ, ಏ. ೧೭: ನಗರದ ಕಾರುಣ್ಯ ಚಾರಿಟಬಲ್ ಟ್ರಸ್ಟ್ ಪುನರ್ವಸತಿ ಕೇಂದ್ರದ ವತಿಯಿಂದ ಭಾನುವಾರ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್‌ರವರ ಜನ್ಮದಿನಾಚರಣೆ ಹಾಗು ಸ್ಥಳಾಂತರಗೊಂಡ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
    ಹಲವಾರು ವರ್ಷಗಳಿಂದ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕಾರುಣ್ಯ ಚಾರಿಟಬಲ್ ಟ್ರಸ್ಟ್ ಪುನರ್ವಸತಿ ಕೇಂದ್ರವನ್ನು ಇದೀಗ ನಗರಸಭೆ ವ್ಯಾಪ್ತಿ ಜನ್ನಾಪುರ ಜಯಶ್ರೀ ಕಲ್ಯಾಣ ಮಂಟಪ ಸಮೀಪ  ಸ್ಥಳಾಂತರಗೊಳಿಸಿದೆ. 
    ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಸದಸ್ಯರಾದ ಬಿ.ಕೆ ಮೋಹನ್, ಟಿಪ್ಪುಸುಲ್ತಾನ್, ಜಯಶೀಲಾ, ಮಣಿ, ಅನ್ನಪೂರ್ಣ, ಕಾಂತರಾಜು, ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಚಿನ್ನಯ್ಯ, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಸುರೇಶ್, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಿ.ಸಿ ಮಾಯಣ್ಣ, ಬಿಎಸ್‌ಪಿ ತಾಲೂಕು ಅಧ್ಯಕ್ಷ ರಹಮತ್‌ಉಲ್ಲಾಖಾನ್, ರಾಜೇಂದ್ರ. ವಕೀಲರ ಸಂಘದ ಅಧ್ಯಕ್ಷ  ಕೆ.ಎನ್ ಶ್ರಿಹರ್ಷ, ವೈದ್ಯ ಡಾ. ನರೇಂದ್ರ, ಮುಖಂಡರಾದ ಸುರೇಶ್ ಸೇರಿಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


    ಕಾರಣ್ಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜಿ. ರಾಜು, ಉಪಾಧ್ಯಕ್ಷ ಕೆ. ನಾಗರಾಜ್, ಕಾರ್ಯಧ್ಯಕ್ಷರಾದ ಸುರೇಶ್‌ಕುಮಾರ್, ಟಿ. ಬಾಸ್ಕರ್, ಕಾರ್ಯದರ್ಶಿ ಅಂತೋಣಿ ರಾಜ್, ಖಜಾಂಚಿ ಎನ್. ನಾಗವೇಣಿ, ನಿರ್ದೇಶಕರಾದ ಯಶೋದಮ್ಮ, ಮಂಜುಳಾ, ಕಾರ್ತಿಕ್ ಮತ್ತು ಜೆ. ಕಾಂತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಇಬ್ರಾಹಿಂ ಜೆಡಿಎಸ್ ಸೇರ್ಪಡೆ : ಹೆಚ್ಚಾದ ಭಿನ್ನಮತ

ಸಿ.ಎಂ ಇಬ್ರಾಹಿಂ

    * ಅನಂತಕುಮಾರ್
    ಭದ್ರಾವತಿ: ಕೇಂದ್ರ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಜನತಾದಳ (ಜಾತ್ಯಾತೀತ) ಪಕ್ಷಕ್ಕೆ ಸೇರ್ಪಡೆಗೊಂಡು ರಾಜ್ಯಾಧ್ಯಕ್ಷರಾಗಿ ಭಾನುವಾರ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಕ್ಷೇತ್ರದಲ್ಲಿ ರಾಜಕೀಯ ಭಿನ್ನಮತ ಮತ್ತಷ್ಟು ಸ್ಪೋಟಗೊಳ್ಳುತ್ತಿದ್ದು, ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಶಾರದ ಅಪ್ಪಾಜಿಗೆ ಹಿನ್ನಡೆಯಾಗುವುದು ಬಹುತೇಕ ಖಚಿತವಾಗಿದೆ.
    ಈಗಾಗಲೇ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಬಹುತೇಕ ಸ್ಥಳೀಯ ಮುಖಂಡರು ಪಕ್ಷ ತೊರೆದಿದ್ದಾರೆ. ಇನ್ನೂ ಕೆಲವರು ಶಾರದ ಅಪ್ಪಾಜಿಯನ್ನು ಈಗಾಗಲೇ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರೂ ಸಹ ಸ್ವಯಂ ಘೋಷಿತ ಅಭ್ಯರ್ಥಿಗಳಾಗಿ ಗುರುತಿಸಿಕೊಳ್ಳಲು ತೆರೆಮರೆಯಲ್ಲಿ ಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇದರಿಂದಾಗಿ ಶಾರದ ಅಪ್ಪಾಜಿಗೆ ಹಿನ್ನಡೆಯಾಗಲಿದೆ ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ.
    ಅಪ್ಪಾಜಿ ಅಭಿಮಾನಿಗಳು, ಕಾರ್ಯಕರ್ತರಲ್ಲಿ ಅಸಮಾಧಾನ:
    ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಅವರೊಂದಿಗೆ ಬಹಳವರ್ಷಗಳ ಒಡನಾಟ ಹೊಂದಿದ್ದ ಹಾಗು ಆ ಮೂಲಕ ರಾಜಕೀಯದಲ್ಲಿ ನೆಲೆ ಕಂಡುಕೊಂಡಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಹಾಗು ಬೆಂಬಲಿಗರು ಇತ್ತೀಚೆಗೆ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವುದು ಅಪ್ಪಾಜಿ ಅಭಿಮಾನಿಗಳು ಹಾಗು ಕಾರ್ಯಕರ್ತರಲ್ಲಿ ಅಸಮಾಧಾನವನ್ನುಂಟು ಮಾಡಿದೆ. ಈ ನಡುವೆ ಈ ಹಿಂದೆ ಅಪ್ಪಾಜಿ ಎದುರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿ ೩ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ ಸಿ.ಎಂ ಇಬ್ರಾಹಿಂ ಪಕ್ಷದ ರಾಜ್ಯಾಧ್ಯಕ್ಷರಾಗಿರುವುದು ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.
    ಅಪ್ಪಾಜಿ ವರ್ಚಸ್ಸಿಗೆ ಧಕ್ಕೆ :
    ೩ ಬಾರಿ ಶಾಸಕರಾಗಿದ್ದ ಎಂ.ಜೆ ಅಪ್ಪಾಜಿಯವರು ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸನ್ನು, ಅಭಿಮಾನಿ ಹಾಗು ಕಾರ್ಯಕರ್ತರ ಬಳಗವನ್ನು ಹೊಂದಿದ್ದರು. ಸುಮಾರು ೪೦ ರಿಂದ ೫೦ ಸಾವಿರದಷ್ಟು ವರ್ಚಸ್ಸಿನ ಮತಗಳು ಅಪ್ಪಾಜಿ ಪರವಾಗಿದ್ದವು. ಇದೀಗ ಅಪ್ಪಾಜಿ ನಿಧನದಿಂದಾಗಿ ಈ ಮತಗಳ ಮೇಲೆ ಕಣ್ಣಿಟ್ಟಿರುವ ಶಾಸಕ ಬಿ.ಕೆ ಸಂಗಮೇಶ್ವರ್ ಅಪ್ಪಾಜಿಯೊಂದಿಗೆ ಗುರುತಿಸಿಕೊಂಡಿರುವ ಪ್ರಮುಖರನ್ನು ಸೆಳೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದು, ಅಪ್ಪಾಜಿಯವರ ಚುನಾವಣಾ ತಂತ್ರಗಾರಿಕೆ ಬೇಧಿಸಲು ಮುಂದಾಗಿರುವುದು ಗುಟ್ಟಾಗಿ ಉಳಿದಿಲ್ಲ. ಈಗಾಗಲೇ ಅಲ್ಪಸಂಖ್ಯಾತ ಸಮುದಾಯದ ಮುಖಂಡ ಫೀರ್ ಷರೀಫ್, ಛಲವಾದಿ ಸಮಾಜದ ಬದರಿನಾರಾಯಣ, ಶಿವರಾಜ್ ಹಾಗು ಶಿವಮಾದು ಸೇರಿದಂತೆ ಇನ್ನಿತರ ಪ್ರಮುಖರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಕಲ್ಪಿಸಿಕೊಡಲಾಗಿದೆ.   ಈ ನಡುವೆ ಅಪ್ಪಾಜಿ ವರ್ಚಸ್ಸಿಗೆ ಧಕ್ಕೆ ತರುವ ಹುನ್ನಾರಗಳು ಸಹ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.  
    ಸಿ.ಎಂ ಇಬ್ರಾಹಿಂ ಹಿಂದೆ ದುಂಬಾಲು ಬಿದ್ದ ನಾಯಕರು:
    ಕಳೆದ ವರ್ಷ ಅಪ್ಪಾಜಿಯವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮುಂಬರುವ ವಿಧಾನಸಭಾ ಚುನಾವಣೆಗೆ ಶಾರದ ಅಪ್ಪಾಜಿಯನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ. ಆದರೂ ಸಹ ಪಕ್ಷದಲ್ಲಿನ ಕೆಲ ನಾಯಕರು ಮುಂದಿನ ಚುನಾವಣೆಗೆ ತೆರೆಮರೆಯಲ್ಲಿ ಆಕಾಂಕ್ಷಿಗಳಾಗಿರುವುದು ತಿಳಿದು ಬರುತ್ತಿದ್ದು, ಕಳೆದ ಸುಮಾರು ೧ ವರ್ಷದಿಂದ ಸಿ.ಎಂ ಇಬ್ರಾಹಿಂ ಹಿಂದೆ ದುಂಬಾಲು ಬಿದ್ದು ತಿರುಗುತ್ತಿದ್ದಾರೆ. ಇದರಿಂದಾಗಿ ಒಂದೆಡೆ ಶಾರದ ಅಪ್ಪಾಜಿಗೆ ಇರಿಸುಮುರಿಸು ಉಂಟಾಗುತ್ತಿದೆ. ಮತ್ತೊಂದೆಡೆ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡುತ್ತಿದೆ.  
    ಬಿಜೆಪಿ ಪಕ್ಷಕ್ಕೆ ಶಾರದ ಅಪ್ಪಾಜಿ ಸೆಳೆಯಲು ತೆರೆಮರೆಯಲ್ಲಿ ಕಸರತ್ತು :
ಕ್ಷೇತ್ರದಲ್ಲಿ ಅಪ್ಪಾಜಿಯವರ ವರ್ಚಸ್ಸಿನ ಮತಗಳ ಮೇಲೆ ಬಿಜೆಪಿ ಸಹ ಕಣ್ಣಿಟ್ಟಿದ್ದು, ಮುಂಬರುವ ಚುನಾವಣೆಗೆ ಶಾರದ ಅಪ್ಪಾಜಿಯನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಲು ಪಕ್ಷದ ಸ್ಥಳೀಯ ಮುಖಂಡರ ಮೂಲಕ ಸೆಳೆಯಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವ ವಿಚಾರ ಸಹ ಗುಟ್ಟಾಗಿ ಉಳಿದಿಲ್ಲ. ಈಗಾಗಲೇ ಈ ಸಂಬಂಧ ಪ್ರಾಥಮಿಕ ಹಂತದ ಮಾತುಕತೆಗಳು ನಡೆದಿವೆ ಎನ್ನಲಾಗಿದೆ. ಈ ನಡುವೆ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರತಿ ಬಾರಿ ಹೊರಗಿನವರನ್ನು ಅಭ್ಯರ್ಥಿಯನ್ನಾಗಿ ಮಾಡುತ್ತಿದ್ದು, ಪಕ್ಷದ ನಿಷ್ಠಾವಂತ ಮುಖಂಡರು, ಕಾರ್ಯಕರ್ತರನ್ನು ಕಡೆಗಣಿಸುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.