ರಾತ್ರಿ ವೇಳೆ ಆಟೋ ಅಡ್ಡಗಟ್ಟಿ ನಗದು ಹಣ ದರೋಡೆ ಮಾಡಿದ್ದ ೩ ಮಂದಿ ದರೋಡೆಕೋರರನ್ನು ಬಂಧಿಸುವಲ್ಲಿ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆ ಸಿಬ್ಬಂದಿಗಳು ಯಶಸ್ವಿಯಾಗಿರುವುದು.
ಭದ್ರಾವತಿ, ಮೇ. ೧೧: ರಾತ್ರಿ ವೇಳೆ ಆಟೋ ಅಡ್ಡಗಟ್ಟಿ ನಗದು ಹಣ ದರೋಡೆ ಮಾಡಿದ್ದ ೩ ಮಂದಿ ದರೋಡೆಕೋರರನ್ನು ಬಂಧಿಸುವಲ್ಲಿ ಪೇಪರ್ ಟೌನ್ ಪೊಲೀಸ್ ಠಾಣೆ ಸಿಬ್ಬಂದಿಗಳು ಯಶಸ್ವಿಯಾಗಿರುವ ಘಟನೆ ನಡೆದಿದೆ.
ತಾಲೂಕಿನ ಕೆಂಚೇನಹಳ್ಳಿ ನಿವಾಸಿಗಳಾದ ಬಸವರಾಜು ಅಲಿಯಾಸ್ ಟಮಟೋ(೨೪), ಪವನ ಅಲಿಯಾಸ್ ಕಣ್ಣು(೨೬) ಹಾಗು ಶಿವಮೊಗ್ಗ ಯರಗನಾಳ್ ಗ್ರಾಮದ ನಿವಾಸಿ ಜೆ. ಭರತ(೨೪) ಬಂಧಿತ ದರೋಡೆಕೋರರಾಗಿದ್ದಾರೆ.
ದರೋಡೆಕೋರರಿಂದ ೩೭ ಸಾವಿರ ರು. ನಗದು ಹಾಗು ಕೃತ್ಯಕ್ಕೆ ಬಳಸಿದ್ದ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಘಟನೆ ವಿವರ:
ತರೀಕೆರೆಯ ಗೋಪಾಲ ಕಾಲೋನಿ ನಿವಾಸಿ ಎಚ್.ಎಸ್ ಜಯೇಂದ್ರ ಎಂಬುವರು ತಮ್ಮ ಹೊಸ ಮನೆಯ ಗೃಹ ಪ್ರವೇಶ ಕಾರ್ಯಕ್ಕೆ ಸ್ನೇಹಿತರಿಂದ ೧ ಲಕ್ಷ ರು. ನಗದು ಹಣ ಪಡೆದುಕೊಂಡು ತಮ್ಮ ಊರಿನ ನಿವಾಸಿ ತಮ್ಮಯ್ಯ ಅವರೊಂದಿಗೆ ಮೇ.೯ರಂದು ರಾತ್ರಿ ಸುಮಾರು ೧೧.೩೦ರ ಸಮಯದಲ್ಲಿ ಲಗೇಜ್ ಆಟೋದಲ್ಲಿ ತಾಲೂಕಿನ ಬಾರಂದೂರು ಗ್ರಾಮದ ಪೆಟ್ರೋಲ್ ಬಂಕ್‌ನಲ್ಲಿ ಡಿಸೇಲ್ ಹಾಕಿಸಿಕೊಂಡು ಊರಿಗೆ ಹಿಂದಿರುವಾಗ ಕೃಷಿ ತರಬೇತಿ ಕೇಂದ್ರದ ಮುಂಭಾಗ ಈ ಮೂವರು ದರೋಡೆಕೋರರು ಅಡ್ಡಗಟ್ಟಿ ಸುಮಾರು ೫೦ ಸಾವಿರ ರು. ನಗದು ಹಣ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ ಲಕ್ಷ್ಮೀ ಪ್ರಸಾದ್, ಹೆಚ್ಚುವರಿ ರಕ್ಷಣಾಧಿಕಾರಿ ವಿಕ್ರಮ್ ಅಮಟೆ ಹಾಗು ಪೊಲೀಸ್ ಉಪಾಧೀಕ್ಷಕ ಜೀತೆಂದ್ರಕುಮಾರ್ ದಯಾಮಾ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಈ.ಓ ಮಂಜುನಾಥ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಶಿಲ್ಪಾ ನಾಯನೇಗಲಿ, ಸಿಬ್ಬಂದಿಗಳಾದ ಆರ್. ರತ್ನಾಕರ್, ಅರುಣ್, ಚಿನ್ನನಾಯ್ಕ, ಕಾಳಾನಾಯ್ಕ, ಹನಮಂತ ಆವಟಿ ಮತ್ತು ರಾಜೇಶ್ ಪಾಲ್ಗೊಂಡಿದ್ದರು.