ಭದ್ರಾವತಿ ಕಾಗದನಗರ, ಸುರಗಿತೋಪು ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನ.
ಭದ್ರಾವತಿ : ನಗರಸಭೆ ವ್ಯಾಪ್ತಿಯ ಕಾಗದನಗರ ಸುರಗಿತೋಪು ಶ್ರೀ ಚೌಡೇಶ್ವರಿ ದೇವಸ್ಥಾನದ ದೇವಿಯ ಆಲಯ ಪ್ರವೇಶ ಸ್ಥಿರಬಿಂಬ ಪ್ರತಿಷ್ಠಾಪನೆ ಹಾಗು ದೇವಿಯ ಗೋಪುರ ಪ್ರತಿಷ್ಠೆ ಕಳಸಾರೋಹಣ ಹಾಗು ದೀಪ ಸ್ಥಂಭ ಪ್ರತಿಷ್ಠಾಪನೆ ಮೇ.೯ರಂದು ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಗುರುವಾರ ಸಂಜೆ ದೇವಸ್ಥಾನದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ದೇವಸ್ಥಾನ ಟ್ರಸ್ಟ್ ಪ್ರಮುಖರು, ಇಲ್ಲಿನ ನಿವಾಸಿಗಳು ಶ್ರೀ ಚೌಡೇಶ್ವರಿ ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಿಕೊಂಡು ಬರುತ್ತಿದ್ದಾರೆ. ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ಕೈಗೊಳ್ಳಲು ಟ್ರಸ್ಟ್ ರಚಿಸಿಕೊಂಡಿದ್ದು, ಈ ಮೂಲಕ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಇನ್ನೂ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿದ್ದು, ದಾನಿಗಳು, ಭಕ್ತರು ಇನ್ನೂ ಹೆಚ್ಚಿನ ಆರ್ಥಿಕ ನೆರವಿನೊಂದಿಗೆ ಎಲ್ಲಾ ರೀತಿಯ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಈ ನಡುವೆ ಮೇ.೯ರಂದು ದೇವಿಯ ಆಲಯ ಪ್ರವೇಶ ಸ್ಥಿತಬಿಂಬ ಪ್ರತಿಷ್ಠಾಪನೆ ಹಾಗು ದೇವಿಯ ಗೋಪುರ ಪ್ರತಿಷ್ಠೆ ಕಳಸಾರೋಹಣ ಹಾಗು ದೀಪ ಸ್ಥಂಭ ಪ್ರತಿಷ್ಠಾಪನೆ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಗುತ್ತಿದೆ. ಇದರ ಅಂಗವಾಗಿ ಮೇ.೭ರ ಬುಧವಾರ ಸಂಜೆ ೬-೩೦ ಗೋದೋಳಿ ಲಗ್ನದಲ್ಲಿ ಮಹಾಗಣಪತಿ ಪೂಜೆ, ರಕ್ಷಾ ಬಂಧನ, ಮೃತ್ಯುಗ್ರಹಣ, ಅಂಕುರಾರ್ಪಣ, ವಾಸ್ತು ಪೂಜೆ, ವಾಸ್ತು ಹೋಮ, ವಾಸ್ತು ಬಲಿ ಹಾಗು ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಜರುಗಲಿವೆ. ೮ರ ಗುರುವಾರ ಬೆಳಗ್ಗೆ ೮-೩೦ ಕ್ಕೆ ನೈರ್ಮಲ್ಯ ವಿಸರ್ಜನೆ, ಮಹಾಗಣಪತಿ ಹೋಮ, ಅದಿವಾಸಿಗಳು ನವಗ್ರಹ ಪೂಜೆ, ಹೋಮ, ಸಪ್ತದಶ ಕಳಶ ಸ್ಥಾಪನೆ, ಮಹಾಮಂಗಳಾರತಿ ಹಾಗು ತೀರ್ಥ ಪ್ರಸಾದ ವಿನಿಯೋಗ ಮತ್ತು ಸಂಜೆ ೬ಕ್ಕೆ ಗೋದೋಳಿ ಲಗ್ನದಲ್ಲಿ ದ್ವಾರ ತೋರಣ, ಕುಂಭ ಪೂಜೆ, ಪುಷ್ಪಾದಿವಾಸ, ತತ್ವನ್ಯಾಸ, ಪ್ರಾಣ ಪ್ರತಿಷ್ಠಾಪನೆ ಹೋಮ, ಶಯೋ ದಿವಸ ಪಿಂಡಿತಾ ಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿವೆ.
೯ರ ಶುಕ್ರವಾರ ಬ್ರಾಹ್ಮಿ ಮುಹೂರ್ತದಲ್ಲಿ ೪:೩೦ ರಿಂದ ೬:೩೦ ರ ಬೆಳಗ್ಗೆ ಗಂಗಾಪೂಜೆ, ಅಲಯ ಪ್ರವೇಶ, ಪಂಚಾಮೃತ ಅಭಿಷೇಕ, ಅಲಂಕಾರ, ಮೂರ್ತಿ ಕ್ಷೇಮ ಮಹಾ ಪ್ರತಿಷ್ಠೆ ಹಾಗೂ ಮಹಾಪೂರ್ಣಾಹುತಿ ಹಾಗೂ ಅಭಿಜಿತ್ ಲಗ್ನದ ಶುಭಮುಹೂರ್ತದಲ್ಲಿ ಮಧ್ಯಾಹ್ನ ೧೨ ಗಂಟೆಗೆ ಕಳಸಾರೋಣ, ಮತ್ತು ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ ಇರುತ್ತದೆ. ಬೆಳಗ್ಗೆ ೪.೩೦ಕ್ಕೆ ಗಂಗೆ ತರುವ ಕಾರ್ಯಕ್ರಮವಿರುತ್ತದೆ. ಊರಿನ ಸಮಸ್ತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿ ಕೃಪೆಗೆ ಪಾತ್ರರಾಗಬೇಕೆಂದು ಕೋರಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಕೇಂದ್ರ ಉಕ್ಕು ಹಾಗು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ ಕುಮಾರಸ್ವಾಮಿ, ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಬಿ.ಕೆ ಸಂಗಮೇಶ್ವರ್, ಜಿ.ಎಚ್ ಶ್ರೀನಿವಾಸ್, ಡಿ.ಎಸ್ ಅರುಣ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ನಗರಸಭೆ ಸದಸ್ಯೆ ಜಯಶೀಲ ಸುರೇಶ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳುತ್ತಿದ್ದು, ಈ ಧಾರ್ಮಿಕ ಕಾರ್ಯ ವಿಶೇಷವಾಗಿ ನಡೆಯುತ್ತಿರುವುದರಿಂದ ಶಾಂತಿ, ಸಹನೆ, ಸಹಬಾಳ್ವೆಯಿಂದ ಊರಿನ ಸಮಸ್ತರು ವಿಶೇಷವಾಗಿ ಆಚರಿಸುವುದರ ಮೂಲಕ ಪ್ರತಿ ಮನೆಯ ಹಬ್ಬದಂತೆ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಚರಿಸಿ ಸಹಕರಿಸಲು ಮನವಿ ಮಾಡಿದರು.
ನಗರಸಭೆ ಸದಸ್ಯೆ ಜಯಶೀಲ ಸುರೇಶ್, ಟ್ರಸ್ಟ್ ಗೌರವಾಧ್ಯಕ್ಷ ಎಂ. ರಾಮಕೃಷ್ಣಪ್ಪ, ಅಧ್ಯಕ್ಷ ಶಿವರಾಜ್, ಉಪಾಧ್ಯಕ್ಷ ಎನ್. ಉಮೇಶ್, ಪ್ರಧಾನ ಕಾರ್ಯದರ್ಶಿ ಕೆ. ಪರಮೇಶ್, ಖಜಾಂಚಿ ಶ್ಯಾಮ್ ಕುಮಾರ್, ಟ್ರಸ್ಟಿಗಳಾದ ಚೇತನ್ ಕುಮಾರ್, ಚಂದ್ರಶೇಖರ್, ಸಿ. ಕಾಶಿ ಹಾಗು ದೇವಸ್ಥಾನ ಪ್ರಧಾನ ಅರ್ಚಕ ಮುರುಳಿಧರ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.