Sunday, September 18, 2022

ಸೆ.೨೦ರಂದು ಪ್ರತಿಭಾ ಪುರಸ್ಕಾರ, ಸರ್ವ ಸದಸ್ಯರ ಸಭೆ




    ಭದ್ರಾವತಿ, ಸೆ. ೧೮: ಶ್ರೀ ಕನ್ಯಕಾಪರಮೇಶ್ವರಿ ವಿವಿದೋದ್ದೇಶ ಸಹಕಾರ ಸಂಘದ ವತಿಯಿಂದ ಸೆ.೨೦ರಂದು ಬೆಳಿಗ್ಗೆ ೧೦ ಗಂಟೆಗೆ ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ವಾಸವಿ ಮಹಲ್‌ನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸರ್ವ ಸದಸ್ಯರ ಸಭೆ ಮತ್ತು ಬೂಸ್ಟರ್ ಡೋಸ್ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಸಂಘದ ೨೮ನೇ ವರ್ಷದ ಸರ್ವ ಸದಸ್ಯರ ಸಭೆಯ ಅಂಗವಾಗಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ಅತಿ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದ್ದು, ಅಲ್ಲದೆ ಮಹಾಮಾರಿ ಕೊರೋನಾ ಮುನ್ನಚ್ಚರಿಕೆ ಕ್ರಮವಾಗಿ ಬೂಸ್ಟರ್ ಡೋಸ್ ಲಸಿಕೆ ಹಾಕುವ ಕಾರ್ಯಕ್ರಮ ಸಹ ನಡೆಯಲಿದೆ. ಸದಸ್ಯರು ಹೆಚ್ಚಿನ  ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಓಂ ಹಿಂದೂ ಕೋಟೆ ವಿನಾಯಕ ಮೂರ್ತಿ ವಿಸರ್ಜನೆ : ಆಕರ್ಷಕ ಮೂರ್ತಿ ಕಣ್ತುಂಬಿಕೊಂಡ ಭಕ್ತರು

ಮುಸ್ಲಿಂ ಸಮುದಾಯದವರಿಂದ ತಂಪು ಪಾನಿಯ ವಿತರಣೆ

ಭದ್ರಾವತಿ ಹೊಸಮನೆ ಶಿವಾಜಿ ವೃತ್ತದಲ್ಲಿ ಶ್ರೀ ರಾಮಮಂದಿರ, ಬಜರಂಗದಳ ಮತ್ತು ಓಂ ಹಿಂದೂ ಕೋಟೆ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಶ್ರೀ ವಿನಾಯಕ ಸ್ವಾಮಿಯ ವಿಸರ್ಜನೆ ಭಾನುವಾರ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ, ಸೆ. ೧೮: ನಗರದ ಹೊಸಮನೆ ಶಿವಾಜಿ ವೃತ್ತದಲ್ಲಿ ಶ್ರೀ ರಾಮಮಂದಿರ, ಬಜರಂಗದಳ ಮತ್ತು ಓಂ ಹಿಂದೂ ಕೋಟೆ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಶ್ರೀ ವಿನಾಯಕ ಸ್ವಾಮಿಯ ವಿಸರ್ಜನೆ ಭಾನುವಾರ ವಿಜೃಂಭಣೆಯಿಂದ ಜರುಗಿತು.
    ನಗರದ ಪ್ರಮುಖ ವಿನಾಯಕ ಮೂರ್ತಿಗಳಲ್ಲಿ ಇದು ಸಹ ಒಂದಾಗಿದ್ದು, ಪ್ರತಿ ವರ್ಷ ವಿಭಿನ್ನ ಮತ್ತು ಆಕರ್ಷಕವಾಗಿ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿದೆ. ಧಾರ್ಮಿಕ ಆಚರಣೆಗಳೊಂದಿಗೆ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಸಹ ಯಶಸ್ವಿಯಾಗಿ ನೆರವೇರಿಸಿಕೊಂಡು ಬರಲಾಗುತ್ತಿದೆ.
    ಮಧ್ಯಾಹ್ನ ೩.೩೦ಕ್ಕೆ ಕಲಾತಂಡಗಳೊಂದಿಗೆ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಮೆರವಣಿಗೆ ಆರಂಭಗೊಂಡಿತು. ಮೆರವಣಿಗೆ ರಂಗಪ್ಪ ವೃತ್ತ, ಮಾಧವಚಾರ್ ವೃತ್ತ ಮೂಲಕ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದ ವರೆಗೆ ಸಾಗಿ ಪುನಃ ಹಿಂದಿರುಗಿ ನಗರಸಭೆ ಮುಂಭಾಗ ಭದ್ರಾ ನದಿಯಲ್ಲಿ ಮೂರ್ತಿ ವಿಸರ್ಜನೆ ನಡೆಯಿತು.
    ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಈ ಭಾಗದ ಭಕ್ತರು ಮೆರವಣಿಗೆ ಪಾಲ್ಗೊಂಡು ಸಂಭ್ರಮಿಸಿದರು. ಸೇವಾಕರ್ತರಿಂದ ಪಾನಕ, ಮಜ್ಜಿಗೆ, ಪ್ರಸಾದ ವಿತರಣೆ ನಡೆಯಿತು.
    ಮುಸ್ಲಿಂ ಸಮುದಾಯದವರಿಂದ ತಂಪು ಪಾನಿಯ ವಿತರಣೆ :
    ಇಲ್ಲಿ ಪ್ರತಿವರ್ಷ ವಿನಾಯಕ ಮೂರ್ತಿ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಮೆರವಣಿಗೆ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರು ಸಹ ಸೇವಾಕರ್ತರಾಗಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
    ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ ಮೋರ್ಚಾ ಹಾಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಮತ್ತು ಮುಸ್ಲಿಂ ಯುವಕರಿಂದ ತಂಪು ಪಾನಿಯ ವಿತರಿಸಲಾಯಿತು. ಅಮೀರ್ ಪಾಷಾ, ಜಮೀರ್, ಜಬಿಉಲ್ಲಾ, ಕಲಿಮುಲ್ಲಾ ಸೇರಿದಂತೆ ಇನ್ನಿತರರು ಸೇವಾಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಗಮನ ಸೆಳೆದರು. ಅಮೀರ್ ಪಾಷಾ ಅವರು ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರಾಗಿದ್ದು, ಪ್ರತಿವರ್ಷ ತಂಪು ಪಾನಿಯ ವಿತರಿಸುವ ಮೂಲಕ ಸೌಹಾರ್ದತೆ ಕಾಯ್ದುಕೊಂಡು ಬಂದಿದ್ದಾರೆ.
    ಆಕರ್ಷಕ ವಿನಾಯಕ ಮೂರ್ತಿ ಕಣ್ತುಂಬಿಕೊಂಡ ಭಕ್ತರು :
    ಈ ಬಾರಿ ವಿಶೇಷವಾಗಿ ಶ್ರೀರಾಮನ ಪರಮ ಭಕ್ತ, ಹಿಂದುಗಳ ಆರಾಧ್ಯ ದೈವ ಹನುಮನ ತೊಡೆಯ ಮೇಲೆ ಕುಳಿತ ಬಾಲ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು.  ರಾಜಬೀದಿ ಉತ್ಸವ ಮೆರವಣಿಗೆಯಲ್ಲಿ ಆಕರ್ಷಕ ವಿನಾಯಕ ಮೂರ್ತಿ ದರ್ಶನ ಪಡೆಯುವ ಮೂಲಕ ಭಕ್ತರು ಕಣ್ತುಂಬಿಕೊಂಡರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.


ಭದ್ರಾವತಿ ಹೊಸಮನೆ ಶಿವಾಜಿ ವೃತ್ತದಲ್ಲಿ ಶ್ರೀ ರಾಮಮಂದಿರ, ಬಜರಂಗದಳ ಮತ್ತು ಓಂ ಹಿಂದೂ ಕೋಟೆ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಶ್ರೀ ವಿನಾಯಕ ಸ್ವಾಮಿಯ ವಿಸರ್ಜನೆ ಭಾನುವಾರ ವಿಜೃಂಭಣೆಯಿಂದ ಜರುಗಿತು. ಈ ಸಂಬಂಧ ಜರುಗಿದ ರಾಜಬೀದಿ ಉತ್ಸವ ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯದವರು ಭಕ್ತರಿಗೆ ತಂಪು ಪಾನಿಯ ವಿತರಿಸಿ ಗಮನ ಸೆಳೆದರು.

ದುಡಿಯುವ ಎಲ್ಲರನ್ನು ಕಾರ್ಮಿಕರೆಂದು ಗುರುತಿಸಿ ಪ್ರೋತ್ಸಾಹಿಸಿ ; ಎಚ್.ಎಲ್ ವಿಶ್ವನಾಥ್

ಭದ್ರಾವತಿ ಸಿದ್ಧಾರೂಢ ನಗರದ ಧರ್ಮಶ್ರೀ ಸಭಾಭವನದಲ್ಲಿ ಭಾರತೀಯ ಮಜ್ದೂರ್ ಸಂಘ(ಬಿಎಂಎಸ್) ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವಕರ್ಮ ಜಯಂತಿ, ರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಹಾಗು ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಇ-ಶ್ರಮ್ ಕಾರ್ಡ್‌ಗಳನ್ನು ವಿತರಿಸಲಾಯಿತು.
    ಭದ್ರಾವತಿ, ಸೆ. ೧೮: ದುಡಿಯುವ ಪ್ರತಿಯೊಬ್ಬರು ಸಹ ದೇಶದ ಅಭಿವೃದ್ಧಿಗೆ ಕಾರಣಕರ್ತರಾಗಿದ್ದು, ದುಡಿಯುವ ಎಲ್ಲಾ ವರ್ಗದ ಜನರನ್ನು ಕಾರ್ಮಿಕರೆಂದು ಗುರುತಿಸಬೇಕೆಂಬುದು ಭಾರತೀಯ ಮಜ್ದೂರ್ ಸಂಘದ ಆಶಯವಾಗಿದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಎಚ್.ಎಲ್ ವಿಶ್ವನಾಥ್ ಹೇಳಿದರು.
    ಅವರು ಭಾನುವಾರ ಸಿದ್ಧಾರೂಢ ನಗರದ ಧರ್ಮಶ್ರೀ ಸಭಾಭವನದಲ್ಲಿ ಭಾರತೀಯ ಮಜ್ದೂರ್ ಸಂಘ(ಬಿಎಂಎಸ್) ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವಕರ್ಮ ಜಯಂತಿ, ರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಹಾಗು ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ದೇಶದ ಅಭಿವೃದ್ಧಿಯಲ್ಲಿ ಎಲ್ಲಾ ಕಾರ್ಮಿಕರ ಕೊಡುಗೆ ಇದ್ದು, ದುಡಿಯುವ ಎಲ್ಲಾ ವರ್ಗದ ಜನರನ್ನು ಗುರುತಿಸಿ ಅವರ ಪರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಕೇವಲ ಕಾರ್ಖಾನೆಗಳಲ್ಲಿ ದುಡಿಯುವವರು ಮಾತ್ರ ಕಾರ್ಮಿಕರು ಎಂಬ ನಿಲುವು ಬದಲಾಗಬೇಕು. ಮಜ್ದೂರು ಸಂಘ ಈ ದೇಶದ ಇತಿಹಾಸ ಅಧ್ಯಾಯನ ನಡೆಸುವ ಮೂಲಕ ರಾಜಮಹಾರಾಜರ ಕಾಲದಲ್ಲಿನ ಕಾರ್ಮಿಕರ ಸ್ಥಿತಿಗತಿಗಳನ್ನು ಸಹ ಅರಿತುಕೊಂಡಿದೆ. ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುವ ಜೊತೆಗೆ ಎಲ್ಲಾ ಕಾರ್ಮಿಕರ ಹಿತ ಕಾಪಾಡುವುದು ನಮ್ಮ ಉದ್ದೇಶವಾಗಿದೆ ಎಂದರು.
    ಮಜ್ದೂರು ಸಂಘ ಹಲವಾರು ಹೋರಾಟಗಳನ್ನು ಯಶಸ್ವಿಯಾಗಿ ನಡೆಸುವ ಮೂಲಕ ಕಾರ್ಮಿಕರ ಹಲವು ಬೇಡಿಕೆಗಳನ್ನು ಈಡೇರಿಸಿಕೊಟ್ಟಿದೆ. ಯಾವುದೇ ಸರ್ಕಾರವಿರಲಿ ಎಲ್ಲಾ ಕಾರ್ಮಿಕರ ಹಿತಕಾಪಾಡಬೇಕು. ದುಡಿಯುವ ವರ್ಗವನ್ನು ಪ್ರೋತ್ಸಾಹಿಸಬೇಕು. ಮಾನವ ಸಂಪನ್ಮೂಲ ಹೊಂದಿರುವ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿದರು.
    ನ್ಯಾಯವಾದಿ ಮಂಗೋಟೆ ರುದ್ರೇಶ್ ಮಾತನಾಡಿ, ಪ್ರಸ್ತುತ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಎಲ್ಲಾ ಕಾರ್ಮಿಕರನ್ನು ಗುರುತಿಸಿ ಅವರ ಏಳಿಗೆಗೆ ಶ್ರಮಿಸುತ್ತಿವೆ. ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುವ ಮೂಲಕ ಅವರ ಹಿತರಕ್ಷಣೆಗೆ ಮುಂದಾಗಿವೆ. ಈ ನಡುವೆ ಬಿಎಂಎಸ್ ಕಾರ್ಮಿಕರ ಪರವಾಗಿ ಹೋರಾಟ ನಡೆಸುವ ಮೂಲಕ ಅವರ ಬೇಡಿಕೆಗಳನ್ನು ಈಡೇರಿಸಿಕೊಡುವಲ್ಲಿ ಯಶಸ್ವಿಯಾಗಿದೆ ಎಂದರು.
    ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಉದ್ಯಮಿ ನಟರಾಜ್ ಭಾಗವತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ಅಧ್ಯಕ್ಷ ಎಚ್. ಪುರಷೋತ್ತಮ್ ಅಧ್ಯಕ್ಷತೆ ವಹಿಸಿದ್ದರು.
    ವೇದಿಕೆ ಸಭಾ ಕಾರ್ಯಕ್ರಮಕ್ಕೂ ಮೊದಲು ರಂಗಪ್ಪ ವೃತ್ತದಿಂದ ಧರ್ಮಶ್ರೀ ಸಭಾಭವನದವರೆಗೂ ಕಾರ್ಮಿಕರ ಜಾಥಾ ನಡೆಯಿತು.  ಭಾರತೀಯ ಮಜ್ದೂರ್ ಸಂಘದ ಉಪಾಧ್ಯಕ್ಷ ಎಂ. ರಾಘವೇಂದ್ರ, ಕಾರ್ಯಾಧ್ಯಕ್ಷ ರಾಜಣ್ಣ, ಪ್ರಧಾನ ಕಾರ್ಯದರ್ಶಿ ಪಚ್ಚಿಯಪ್ಪ, ಕಾರ್ಯದರ್ಶಿ ಪ್ರವೀಣ್ ಕುಮಾರ್, ಖಜಾಂಚಿ ಪ್ಯಾಟ್ರಿಕ್, ಸಂಘಟನಾ ಕಾರ್ಯದರ್ಶಿಗಳಾದ ಡಿ. ಜಯರಾಮ, ರಂಗಸ್ವಾಮಿ, ಎಚ್. ಜಯರಾಮ, ಪಿ. ಸುಂದರ್, ಬಿ. ನಾಗರಾಜ್, ಸತೀಶ್, ಸುರೇಶ್ ಮೇಸ್ತ್ರಿ, ಮಂಜುನಾಥ್ ಶೇಖರ್, ಅಭಿ ಸೇರಿದಂತೆ ಇನ್ನಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಅರ್ಚಕರು ತಮ್ಮ ವೃತ್ತಿ ಗೌರವ ಉಳಿಸಿಕೊಳ್ಳಲು ಹೆಚ್ಚಿನ ಗಮನ ನೀಡಿ : ವೇದಬ್ರಹ್ಮ ಕೃಷ್ಣಮೂರ್ತಿ ಸೋಮಯಾಜಿ

ಭದ್ರಾವತಿ ಶ್ರೀ ಮಹಾಗಣಪತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಧರ್ಮಜಾಗರಣ ಅರ್ಚಕರ ಮಹಾಸಭಾ ೧೯ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಹಿರಿಯ ನ್ಯಾಯವಾದಿ ವಿ.ಎಚ್ ರಾಘವೇಂದ್ರರಾವ್, ವೇದಬ್ರಹ್ಮ ಕೃಷ್ಣಮೂರ್ತಿ ಸೋಮಯಾಜಿ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ, ಸೆ. ೧೮: ಧರ್ಮದ ಬಗ್ಗೆ ಜಾಗೃತಿ ಮೂಡಿಸುವ, ಎಚ್ಚರಿಸುವ ಜೊತೆಗೆ ಸಮಾಜದಲ್ಲಿ ಎಲ್ಲರ ಒಳಿತಿಗಾಗಿ ದೇವರಲ್ಲಿ ಪ್ರಾರ್ಥಿಸುವ ಅರ್ಚಕರು ತಾವು ಹೊಂದಿರುವ ಗೌರವ ಸ್ಥಾನಮಾನಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಗಮನ ನೀಡಬೇಕೆಂದರು. ಶ್ರೀ ಧರ್ಮಜಾಗರಣ ಅರ್ಚಕರ ಮಹಾಸಭಾ ಗೌರವಾಧ್ಯಕ್ಷ ವೇದಬ್ರಹ್ಮ ಕೃಷ್ಣಮೂರ್ತಿ ಸೋಮಯಾಜಿ ಹೇಳಿದರು.
    ಅವರು ಭಾನುವಾರ ಜನ್ನಾಪುರ ಶ್ರೀ ಮಹಾಗಣಪತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಧರ್ಮಜಾಗರಣ ಅರ್ಚಕರ ಮಹಾಸಭಾ ೧೯ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
    ರ್ಚಕರ ಹುದ್ದೆ ಸಮಾಜದಲ್ಲಿ ಶ್ರೇಷ್ಠವಾದ ಮತ್ತು ಜವಾಬ್ದಾರಿಯುತವಾದ ಹುದ್ದೆಯಾಗಿದೆ. ಅರ್ಚಕರು ತಮ್ಮದೇ ಆದ ವೈಶಿಷ್ಟತೆಯನ್ನು ಹೊಂದಿದ್ದಾರೆ. ದೇವರ ಸಾಮಿಪ್ಯ ಹೊಂದುವಲ್ಲಿ ಅರ್ಚಕರ ಪಾತ್ರ ಪ್ರಮುಖವಾಗಿದೆ. ಪ್ರಸ್ತುತ ಸಮಾಜದಲ್ಲಿ ಅರ್ಚಕರು ಹೊಂದಿರುವ ಗೌರವ ಸ್ಥಾನಮಾನಗಳನ್ನು ಉಳಿಸಿಕೊಳ್ಳುವ ಜೊತೆಗೆ ಮಹಾಸಭಾ ಬೆಳವಣಿಗೆ ಕೈಜೋಡಿಸಬೇಕು. ಮಹಾಸಭಾ ೧೯ ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ೨೦ನೇ ವರ್ಷಕ್ಕೆ ಕಾಲಿಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ. ಕ್ಷೇತ್ರದಲ್ಲಿ ಅರ್ಚಕರ ಸಭಾಭವನ ನಿರ್ಮಾಣವಾಗಬೇಕೆಂಬ ಆಶಯದೊಂದಿಗೆ ಮಹಾಸಭಾ ಮುನ್ನಡೆಯುತ್ತಿದ್ದು, ಈ ಕಾರ್ಯ ಮುಂದಿನ ದಿನಗಳಲ್ಲಿ ಯಶಸ್ವಿಯಾಗುವ ವಿಶ್ವಾಸವಿದೆ ಎಂದರು.
    ಹಿರಿಯ ನ್ಯಾಯವಾದಿ ವಿ.ಎಚ್ ರಾಘವೇಂದ್ರರಾವ್ ಮಾತನಾಡಿ, ಸಮಾಜ ಅರ್ಚಕರನ್ನು ಹೊಂದಿರುವುದು ನಮ್ಮೆಲ್ಲರ ಪುಣ್ಯವಾಗಿದೆ. ಹಿಂದೆ ಋಷಿ-ಮುನಿಗಳು ಈ ನೆಲದಲ್ಲಿ ಕೈಗೊಂಡಿರುವ ತಪಸ್ಸಿನ ಶಕ್ತಿಯಿಂದ ಇಂದು ನಾವೆಲ್ಲರೂ ನೆಮ್ಮದಿಯಾಗಿ ಬದುಕುತ್ತಿದ್ದೇವೆ. ಬಹುತೇಕ ಜನರ ಎರಡು ಆಯ್ಕೆಗಳು ನ್ಯಾಯ ಮತ್ತು ದೇವರು. ನ್ಯಾಯ ಸಿಗದಿದ್ದಲ್ಲಿ ದೇವರ ಮೊರೆ ಹೋಗುತ್ತಾರೆ. ದೇವರು ಮತ್ತು ಭಕ್ತರ ನಡುವಿನ ಕೊಂಡಿಯಾಗಿ ಯಾವುದೇ ಧರ್ಮ, ಜಾತಿ, ಲಿಂಗಭೇದಭಾವ, ವಯಸ್ಸಿನ ಭೇದಭಾವವಿಲ್ಲದೆ ಅರ್ಚಕರು ಕಾರ್ಯ ನಿರ್ವಹಿಸುವ ಮೂಲಕ ಎಲ್ಲಾ ಜನರ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ. ಅಲ್ಲದೆ ಅರ್ಚಕರಿಗೆ ಸಮಜದಲ್ಲಿ ಗೌರವದ ಸ್ಥಾನಮಾನವಿದೆ. ಅರ್ಚಕರು ತಮ್ಮ ವೃತ್ತಿ ಹಾಗು ತಾವು ನಿರ್ವಹಿಸುತ್ತಿರುವ ಸ್ಥಳದ ಪರಂಪರೆ, ಆಚಾರ-ವಿಚಾರ ಎಲ್ಲವನ್ನು ಅರಿತು ಇಂದಿನ ಪೀಳಿಗೆಗೆ ತಿಳಿಸುವ ಹೊಣೆಗಾರಿಕೆ ಹೊಂದಬೇಕಾಗಿದೆ ಎಂದರು.


ಭದ್ರಾವತಿ ಶ್ರೀ ಮಹಾಗಣಪತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಧರ್ಮಜಾಗರಣ ಅರ್ಚಕರ ಮಹಾಸಭಾ ೧೯ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅರ್ಚಕ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
    ಅರಳಿಹಳ್ಳಿ ಶ್ರೀ ಮುನೇಶ್ವರ ದೇವಸ್ಥಾನದ ಅರ್ಚಕ ಏಳುಮಲೈ ದಂಪತಿ, ಬೈಪಾಸ್ ರಸ್ತೆ ಶ್ರೀ ಶನೈಶ್ವರ ದೇವಸ್ಥಾನದ ಅರ್ಚಕ ಲಕ್ಷ್ಮಣ ದಂಪತಿ, ತಾವರಘಟ್ಟ ಶ್ರೀ ರಂಗನಾಥ ದೇವಸ್ಥಾನದ ಅರ್ಚಕ ಕೃಷ್ಣಮೂರ್ತಿ ದಂಪತಿ, ಕಾಗದನಗರದ ಶ್ರೀ ಕ್ವಾಡ್ರಂಗಲ್ ರಾಮಮಂದಿರದ ಎ.ಎನ್ ಸುರೇಶ್ ಹಾಗು ಕಾಗೇಕೋಡಮಗ್ಗಿ ಶ್ರೀ ತಿಮ್ಮಪ್ಪ ದೇವಸ್ಥಾನದ ಶಂಕರ್‌ರಾವ್ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಅತಿ ಹೆಚ್ಚು ಅಂಕ ಪಡೆದ ಅರ್ಚಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
    ಮಹಾಸಭಾ ಅಧ್ಯಕ್ಷ ಎಸ್.ವಿ ರಾಮಾನುಜ ಅಯ್ಯಂಗಾರ್ ಅಧ್ಯಕ್ಷತೆ ವಹಿಸಿದ್ದರು. ಹಿ.ಕೃ ರಂಗನಾಥ್ ಸ್ವರಚಿತ ಕವನ ವಾಚಿಸಿದರು. ಮಹಾಸಭಾ ಪ್ರಧಾನ ಕಾರ್ಯದರ್ಶಿ ಜೆ.ಪಿ ಗಣೇಶ್ ಪ್ರಸಾದ್ ಮತ್ತು ಸಹ ಕಾರ್ಯದರ್ಶಿ ಡಿ. ಸಂಜೀವ ಕುಮಾರ್ ನಿರೂಪಿಸಿದರು. ಎಚ್.ಆರ್ ಶ್ರೀಧರೇಶ್ ಭಾರಧ್ವಾಜ್ ಪ್ರಾರ್ಥಿಸಿದರು.  ಉಪಾಧ್ಯಕ್ಷರಾದ ಎಚ್.ಎಸ್ ಮುರಳೀಧರ ಶರ್ಮ, ಕೆ.ಎನ್ ಕಾಂತಯ್ಯ, ಸಹಕಾರ್ಯದರ್ಶಿ ಎಚ್.ಎಸ್ ಬದರಿನಾರಾಯಣ, ಸಂಘಟನಾ ಕಾರ್ಯದರ್ಶಿಗಳಾದ ಎಂ. ಸತೀಶ್ ಭಟ್ರು, ಎಂ. ಸುರೇಶ್, ಖಜಾಂಚಿ ಡಿ.ಯು ಪ್ರಮೋದ್ ಕುಮಾರ್, ನಿರ್ದೇಶಕರಾದ ರಮೇಶ್ ಭಟ್ ತರಳೀಮಠ, ಎಚ್. ಸತೋಷ್‌ಕುಮಾರ್, ಎಚ್.ವಿ ಮಂಜುನಾಥ್, ಎಂ.ವಿ ನಾರಾಯಣ ಮೂರ್ತಿ, ತಿಮ್ಮಯ್ಯ, ಎಲ್. ಶ್ರೀನಿವಾಸ್, ಶಂಕರ್ ಜೋಯ್ಸ್, ನಾಗರಾಜಾಚಾರ್, ಡಿ. ದಿನೇಶ್, ಎನ್.ಎಂ ರವಿಕುಮಾರ್, ಮಹೇಶ ಶರ್ಮ, ವಿದ್ಯಾಶಂಕರ ಶರ್ಮ ಮತ್ತು ಸಿದ್ದೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಗಣಪತಿ ಹಾಗು ಸತ್ಯನಾರಾಯಣ ಪೂಜೆ ನೆರವೇರಿತು.


ಭದ್ರಾವತಿ ಶ್ರೀ ಮಹಾಗಣಪತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಧರ್ಮಜಾಗರಣ ಅರ್ಚಕರ ಮಹಾಸಭಾ ೧೯ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಾಗದನಗರದ ಶ್ರೀ ಕ್ವಾಡ್ರಂಗಲ್ ರಾಮಮಂದಿರದ ಎ.ಎನ್ ಸುರೇಶ್ ಸನ್ಮಾನಿಸಿ ಗೌರವಿಸಲಾಯಿತು.