ಶನಿವಾರ, ಮಾರ್ಚ್ 11, 2023

ಪೈಪೋಟಿ ಪತ್ರಿಕಾ ಕ್ಷೇತ್ರದಲ್ಲಿ ಕ್ರಿಯಾಶೀಲತೆ ಮುಖ್ಯ : ಸಂಸದ ಬಿ.ವೈ.ರಾಘವೇಂದ್ರ

ಭದ್ರಾವತಿ ಹಳೇನಗರದ ಪತ್ರಿಕಾ ಭವನ ಟ್ರಸ್ಟ್ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನವೀಕೃತ ಪತ್ರಿಕಾ ಭವನ ಕಟ್ಟಡ ಶನಿವಾರ ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು.
    ಭದ್ರಾವತಿ, ಮಾ. ೧೧ : ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಪೈಪೋಟಿ ಎದುರಾಗಿದ್ದು, ಇಂತಹ ಸಂದರ್ಭದಲ್ಲಿ ಪತ್ರಕರ್ತರು ಮತ್ತಷ್ಟು ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
    ಅವರು ಶನಿವಾರ ಹಳೇನಗರದ ಪತ್ರಿಕಾ ಭವನ ಟ್ರಸ್ಟ್ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನವೀಕೃತ ಪತ್ರಿಕಾ ಭವನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
    ಪತ್ರಿಕಾ ಕ್ಷೇತ್ರ ಸಹ ಪೈಪೋಟಿ ಎದುರಿಸುತ್ತಿದೆ. ಪತ್ರಕರ್ತರು ಮತ್ತಷ್ಟು ಕ್ರಿಯಾಶೀಲರಾಗಬೇಕು ಹೊರತು ಪ್ರಚಾರದ ದೃಷ್ಟಿಯಿಂದ ವೈಯಕ್ತಿಕ ದ್ವೇಷದ ಸುದ್ದಿ ಬಿಂಬಿಸುವುದು ಸರಿಯಲ್ಲ ಎಂದರು.
ಜನರ ತೆರಿಗೆ ಹಣದಿಂದ ಸಮುದಾಯ ಭವನಗಳಿಗೆ ಅನುದಾನ ನೀಡಿದ್ದೇನೆ. ಕೆಲವು ಭಾಗಗಳಲ್ಲಿ ನಿರ್ಮಾಣಗೊಂಡಿರುವ ಭವನಗಳು ಧೂಳು ಹಿಡಿದಿವೆ. ಇವುಗಳ ನಿರ್ವಹಣೆಗೆ ಯಾರು ಇಲ್ಲದಂತಾಗಿದೆ. ಸಮುದಾಯ ಭವನಗಳು ಸದ್ಬಳಕೆಯಾಗಬೇಕೆಂದರು.
    ನಗರದಲ್ಲಿ ಈಗಾಗಲೇ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಆರ್‌ಎಎಫ್ ಕಾರ್ಯಾರಂಭಗೊಂಡಿದೆ.  ಸೈನಿಕರ ಶಾಲೆ ನಿರ್ಮಾಣಕ್ಕೆ ಭೂಮಿ ನೀಡುವಂತೆ  ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ.  ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಸಾಕಷ್ಟು ಅಭಿವೃದ್ದಿ ಕೆಲಸಗಳು ನಡೆದಿವೆ. ಸುಂದರ ಹಾಗು ಮಾದರಿ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಶ್ರಮಿಸುವುದಾಗಿ ಭರವಸೆ ನೀಡಿದರು.
    ಎಂಪಿಎಂ ಮತ್ತು ವಿಐಎಸ್‌ಎಲ್ ಕಾರ್ಖಾನೆಗಳ ಉಳಿಸುವ ವಿಚಾರದಲ್ಲಿ ನನ್ನ ಕರ್ತವ್ಯ ಮರೆತಿಲ್ಲ. ಕೈಚೆಲ್ಲಿಯೂ ಇಲ್ಲ. ಮಾ. ೩೦ರಂದು ವಿಐಎಸ್‌ಎಲ್ ಸ್ಥಗಿತ ವಿಚಾರ ಗೊತ್ತಾಗಿದೆ. ಹೇಗಾದರೂ ಮಾಡಿ ಉಳಿಸಿಕೊಳ್ಳಲು ಸೋಮವಾರ ಮುಖ್ಯಮಂತ್ರಿಗಳನ್ನು ಭೇಟಿಯಾಗುತ್ತಿದ್ದೇನೆ. ಜನರಿಗೆ ನ್ಯಾಯ ಸಿಗುವ ಕೆಲಸದಲ್ಲಿ ನಾವು ಶಾಸಕರು ಮಾಡುತ್ತಿದ್ದೇವೆ ಎಂದರು.
   ಶಾಸಕ ಬಿ.ಕೆ ಸಂಗಮೇಶ್ವರ್ ಭವನದ ಪದಾಧಿಕಾರಿಗಳ ನಾಮಫಲಕ ಅನಾವರಣ ಮಾಡಿ ಮಾತನಾಡಿ, ಪತ್ರಕರ್ತರು ಸತ್ಯ ಬರೆದು ಘನತೆ ಮತ್ತು ಮೌಲ್ಯ ಹೆಚ್ಚಿಸಿಕೊಳ್ಳಬೇಕು. ಸಾರ್ವಜನಿಕರ ಕುಂದು ಕೊರತೆಗಳಿಗೆ ಬೆಳಕು ಚೆಲ್ಲಬೇಕೆಂದರು.
    ಸಂಘದ ಮಾಜಿ ಅಧ್ಯಕ್ಷ ಎನ್. ಬಾಬು ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಿಕಾ ಭವನಕ್ಕಾಗಿ ಸಾಕಷ್ಟು ಶ್ರಮಿಸಲಾಯಿತು. ಎಲ್ಲರ ಸಹಕಾರದಿಂದ ಬೃಹತ್ ಕಟ್ಟಡ ನಿರ್ಮಾಣಗೊಂಡಿದೆ. ರಾಜ್ಯದಲ್ಲಿಯೇ ಮೊದಲ ಪತ್ರಿಕಾಭವನ ನಮ್ಮದು ಎಂಬ ಹೆಗ್ಗಳಿಕೆ ಇದೆ. ಅಲ್ಲದೆ ನಾವು ರೂಪಿಸಿದ ಹಲವಾರು ಕಾರ್ಯಕ್ರಮಗಳು ಇದೀಗ ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿವೆ ಎಂದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ, ಧರ್ಮ, ಜಾತಿ, ಸಮುದಾಯ ಮೀರಿದ ಭವನ ಇದಾಗಿದೆ. ಈ ಭವನ ನಿರ್ಮಾಣಕ್ಕೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪತ್ರಿಕಾಭವನ ಟ್ರಸ್ಟ್ ಟ್ರಸ್ಟಿಗಳಾದ ಗಣೇಶ್‌ರಾವ್ ಸಿಂಧ್ಯಾ, ಎಚ್.ಕೆ ಶಿವಶಂಕರ್, ಕೆ.ಎನ್ ರವೀಂದ್ರನಾಥ್(ಬ್ರದರ್), ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಉಪಾಧ್ಯಕ್ಷ ಕೂಡ್ಲಿಗೆರೆ ಮಂಜುನಾಥ್, ಖಜಾಂಚಿ ಅನಂತಕುಮಾರ್, ಸಹ ಕಾರ್ಯದರ್ಶಿ ಫಿಲೋಮಿನಾ, ಸದಸ್ಯರಾದ ಟಿ.ಎಸ್ ಆನಂದಕುಮಾರ್, ಸುದರ್ಶನ್, ಶೈಲೇಶ್ ಕೋಠಿ, ಸೈಯೀದ್ ಖಾನ್, ಕೆ.ಆರ್ ಶಂಕರ್, ಪ್ರಶಾಂತ್, ರಾಬರ್ಟ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.
    ಕಲಾವಿದ ಸುಬ್ರಹ್ಮಣ್ಯ ಪ್ರಾರ್ಥಿಸಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ಶ್ರೀಹರ್ಷ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಬಸವರಾಜ್ ವಂದಿಸಿದರು. ಗಂಗಾನಾಯ್ಕ್ ಮತ್ತು ಸುಭಾಷ್‌ರಾವ್ ಸಿಂಧ್ಯಾ ನಿರೂಪಿಸಿದರು.


ಭದ್ರಾವತಿ ಹಳೇನಗರದ ಪತ್ರಿಕಾ ಭವನ ಟ್ರಸ್ಟ್ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನವೀಕೃತ ಪತ್ರಿಕಾ ಭವನ ಕಟ್ಟಡ ಉದ್ಘಾಟನೆ ವೇದಿಕೆ ಕಾರ್ಯಕ್ರಮ ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ.ಸಂಗಮೇಶ್ವರ್, ಕೆ.ಎನ್.ಶ್ರೀಹರ್ಷ, ಕಣ್ಣಪ್ಪ, ಅನುಸುಧಾ ಮೋಹನ್, ಸರ್ವಮಂಗಳ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.              

ಪುರುಷ-ಮಹಿಳೆ ಇಬ್ಬರ ದುಡಿಮೆಯಿಂದ ದೇಶದ ಅಭಿವೃದ್ಧಿ ಸಾಧ್ಯ : ಸಂಸದ ಬಿ.ವೈ ರಾಘವೇಂದ್ರ

ಭದ್ರಾವತಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ನ್ಯೂಟೌನ್ ಸಿಲ್ವರ್ ಜ್ಯೂಬಿಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಾಗು ಹೊಸ ಸೇತುವೆ ರಸ್ತೆ ಸಿದ್ದರೂಢನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಕಾರ್ಯಾಗಾರ, ಸರ್ಕಾರಿ ನೌಕರರ ತಾಲೂಕು ಮಟ್ಟದ ಸಮ್ಮೇಳನ ಮತ್ತು ಮಹಿಳಾ ದಿನಾಚರಣೆ ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ಮಾ. ೧೧ : ಮಹಿಳೆ ಮತ್ತು ಪುರುಷ ಇಬ್ಬರು ಸಹ ಸಮಾನತೆ ಕಾಯ್ದುಕೊಂಡು, ದುಡಿಮೆ ಕೈಗೊಂಡಾಗ ದೇಶದ ಅಭಿವೃದ್ಧಿ ಸಾಧ್ಯ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
    ಅವರು ಶನಿವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ನ್ಯೂಟೌನ್ ಸಿಲ್ವರ್ ಜ್ಯೂಬಿಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಾಗು ಹೊಸ ಸೇತುವೆ ರಸ್ತೆ ಸಿದ್ದರೂಢನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಕಾರ್ಯಾಗಾರ, ಸರ್ಕಾರಿ ನೌಕರರ ತಾಲೂಕು ಮಟ್ಟದ ಸಮ್ಮೇಳನ ಮತ್ತು ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
    ಸರ್ಕಾರಿ ನೌಕರರು ಮಹಿಳಾ ದಿನಾಚರಣೆ ಆಚರಿಸುವ ಮೂಲಕ ಸಮಾಜದಲ್ಲಿ ಸಮಾನ ದುಡಿಮೆ ಪರಿಕಲ್ಪನೆ ಮೂಡಿಸುತ್ತಿರುವುದು ಶ್ಲಾಘನೀಯವಾಗಿದ್ದು, ೧೨ನೇ ಶತಮಾನದಲ್ಲಿಯೇ ಅಕ್ಕ ಮಹಾದೇವಿಯವರು ಸಮಾಜದಲ್ಲಿ ಸ್ತ್ರೀ ಮತ್ತು ಪುರುಷರ ನಡುವಿನ ಸಮಾನತೆಗಾಗಿ ಶ್ರಮಿಸಿದ್ದರು. ಇಂತಹ ಮಹಾನ್ ಆದರ್ಶ ಮಹಿಳೆಯ ಸುಮಾರು ೬೦ ಅಡಿ ಎತ್ತರದ ಪ್ರತಿಮೆಯನ್ನು ಅವರ ಜನ್ಮ ಸ್ಥಳ ಶಿಕಾರಿಪುರ ಉಡುತಡಿಯಲ್ಲಿ ಸುಮಾರು ೧ ಎಕರೆ ಜಾಗದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಮುಂದಿನ ತಿಂಗಳು ೧೭ರಂದು ಇದರ ಲೋಕಾರ್ಪಣೆ ನಡೆಯಲಿದೆ ಎಂದರು.
    ಸರ್ಕಾರಿ ನೌಕರರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಕ್ಷೇತ್ರದ ಬೆಳವಣಿಗೆಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸ್ಪಂದಿಸುವುದಾಗಿ ಭರವಸೆ ನೀಡಿದರು.
    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಮಾತನಾಡಿ, ಸರ್ಕಾರಿ ನೌಕರರ ಬಹಳಷ್ಟು ಬೇಡಿಕೆಗಳು ಈಡೇರುವಲ್ಲಿ  ಮಾಜಿ ಬಿ.ಎಸ್ ಯಡಿಯೂರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರರವರ ಸಹಕಾರ ಹೆಚ್ಚಿನದ್ದಾಗಿದೆ. ಇತ್ತೀಚೆಗೆ ೭ನೇ ವೇತನ ಆಯೋಗ ಜಾರಿಗೆ ಹಾಗು ಎನ್‌ಪಿಎಸ್ ಪಿಂಚಣಿ ರದ್ದುಗೊಳಿಸಲು ಒತ್ತಾಯಿಸಿ ನಡೆಸಿದ ಹೋರಾಟದ ಪರಿಣಾಮವಾಗಿ ಶೇ.೧೭ರಷ್ಟು ವೇತನ ಹೆಚ್ಚಳವಾಗಿದ್ದು, ಅಲ್ಲದೆ ಎನ್‌ಪಿಎಸ್ ರದ್ದುಗೊಳಿಸುವ ನಿಟ್ಟಿನಲ್ಲಿ ಸಮಿತಿ ರಚಿಸಿ ವರದಿ ಪಡೆಯುವುದಾಗಿ ಸರ್ಕಾರ ಭರವಸೆ ನೀಡಿದೆ. ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಇನ್ನಷ್ಟು ಬಲಗೊಳ್ಳಬೇಕೆಂದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಕ್ಷೇತ್ರದ ಶಾಸಕನಾಗಿ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸ್ಪಂದಿಸುವುದಾಗಿ ಭರವಸೆ ನೀಡಿ ಬೆಂಬಲಿಸುವಂತೆ ಮನವಿ ಮಾಡಿದರು.
    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ವಿಇಎಸ್ ವಿದ್ಯಾಸಂಸ್ಥೆ ಆಡಳಿತ ಭವನ ನಿರ್ಮಾಣಕ್ಕೆ ೧ ಕೋ. ರು. ಹಾಗು ಗುರುಭವನ ನಿರ್ಮಾಣಕ್ಕೆ ೨ ಕೋ. ರು. ಮತ್ತು ಸಿಲ್ವರ್ ಜ್ಯೂಬಿಇ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ನೂತನ ಕಟ್ಟಡ ನಿರ್ಮಾಣಕ್ಕೆ ಸುಮಾರು ೩ ಕೋ. ರೂ. ಸೇರಿದಂತೆ ಒಟ್ಟು ೬ ಕೋ.ರು ವೆಚ್ಚದ ಕಾಮಗಾರಿಗಳಿಗೆ ಸರ್ಕಾರದಿಂದ ಅನುದಾನ ಮಂಜೂರಾತಿ ಮಾಡಿಸಿಕೊಡುವಲ್ಲಿ ಸಂಘದ ರಾಜ್ಯಾಧ್ಯಕ್ಷರು, ಸಂಸದರು, ಶಾಸಕರ ಪ್ರಯತ್ನ ಹೆಚ್ಚಿನದ್ದಾಗಿದೆ. ಶಿವಮೊಗ್ಗ ನಗರದಂತೆ ಭದ್ರಾವತಿ ಸಹ ಎಲ್ಲಾ ರೀತಿಯಿಂದಲೂ ಅಭಿವೃದ್ಧಿ ಹೊಂದಬೇಕು. ಈ ನಿಟ್ಟಿನಲ್ಲಿ ಸಂಸದರು ಹೆಚ್ಚಿನ ಗಮನ ನೀಡಬೇಕೆಂದು ಮನವಿ ಮಾಡಿದರು.
    ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ವಿಇಎಸ್ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಪದಾಧಿಕಾರಿಗಳು, ಸರ್ಕಾರಿ ನೌಕರರ ಸಂಘದ ವಿವಿಧ ಸಂಘಟನೆಗಳು ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.