Monday, September 30, 2024

ಅಥ್ಲೆಟಿಕ್ ಅಂಧ ಕ್ರೀಡಾಪಟುಗಳಿಗೆ ತರಬೇತಿ : ಸೌಮ್ಯ ಸಾವಂತ್‌ಗೆ ಸನ್ಮಾನ

ಭದ್ರಾವತಿ ಹೊಸಮನೆ ನಿವಾಸಿ ಅಥ್ಲೆಟಿಕ್ ಕ್ರೀಡಾಪಟು ಸೌಮ್ಯ ಸಾವಂತ್ ಕಳೆದ ಕೆಲವು ವರ್ಷಗಳಿಂದ ಅಂತರಾಷ್ಟ್ರೀಯ ತರಬೇತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಬಾರಿ ಒಲಂಪಿಕ್ಸ್ ಮತ್ತು ಪ್ಯಾರಾಒಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾರತೀಯ ಕ್ರೀಡಾಪಟುಗಳು ಹೆಚ್ಚಿನ ಸಾಧನೆ ಮಾಡಲು ಇವರ ಪರಿಶ್ರಮ ಸಹ ಹೆಚ್ಚಿನದಾಗಿದೆ. ಈ ಹಿನ್ನಲೆಯಲ್ಲಿ ಇವರನ್ನು ರಿಲೆಯನ್ಸ್ ಫೌಂಡೇಷನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ : ನಗರದ ಹೊಸಮನೆ ನಿವಾಸಿ ಅಥ್ಲೆಟಿಕ್ ಕ್ರೀಡಾಪಟು ಸೌಮ್ಯ ಸಾವಂತ್ ಕಳೆದ ಕೆಲವು ವರ್ಷಗಳಿಂದ ಅಂತರಾಷ್ಟ್ರೀಯ ತರಬೇತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಬಾರಿ ಒಲಂಪಿಕ್ಸ್ ಮತ್ತು ಪ್ಯಾರಾಒಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾರತೀಯ ಕ್ರೀಡಾಪಟುಗಳು ಹೆಚ್ಚಿನ ಸಾಧನೆ ಮಾಡಲು ಇವರ ಪರಿಶ್ರಮ ಸಹ ಹೆಚ್ಚಿನದಾಗಿದೆ. ಈ ಹಿನ್ನಲೆಯಲ್ಲಿ ಇವರನ್ನು ರಿಲೆಯನ್ಸ್ ಫೌಂಡೇಷನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.  
    ಸೌಮ್ಯ ಸಾವಂತ್ ಈ ಹಿಂದೆ ಅಥ್ಲೆಟಿಕ್ ಕ್ರೀಡಾಪಟು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಲವು ಸಾಧನೆಗಳನ್ನು ಮಾಡುವ ಮೂಲಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಗಮನ ಸೆಳೆದಿದ್ದರು. ನಂತರ ಅಂತರಾಷ್ಟ್ರೀಯ ತರಬೇತಿದಾರರಾಗಿ ಅಂಧ ಕ್ರೀಡಾಪಟುಗಳಿಗೆ ತರಬೇತಿ ನೀಡಿ ಅವರುಗಳು ಸಹ ರಾಜ್ಯ ಮತ್ತು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಬಂಗಾರ ಮತ್ತು ಬೆಳ್ಳಿ ಪದಕಗಳನ್ನು ಗಳಿಸುವಲ್ಲಿ ಕಾರಣಕರ್ತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಸೆ.೨೯ರಂದು ರಿಲೆಯನ್ಸ್ ಫೌಂಡೇಷನ್ ವತಿಯಿಂದ ಮುಂಬೈನಲ್ಲಿ ಏರ್ಪಡಿಸಲಾಗಿದ್ದ ಒಲಿಂಪಿಕ್ಸ್ ಮತ್ತು ಪ್ಯಾರಾಒಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿರುವ ಕ್ರೀಡಾಪಟು ಹಾಗು ತರಬೇತಿದಾರರೊಂದಿಗೆ ಸಂತೋಷ ಕೂಟ ಸಂಭ್ರಮ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.  ಮುಕೇಶ್ ಅಂಬಾನಿ, ನೀತು ಅಂಬಾನಿ, ಅನಂತ್ ಅಂಬಾನಿ, ರಾಧಿಕಾ ಅಂಬಾನಿ ಸೇರಿದಂತೆ ಅಂಬಾನಿ ಕುಟುಂಬ ವರ್ಗದವರು ಹಾಗು ಇನ್ನಿತರ ಗಣ್ಯರು ಉಪಸ್ಥಿತರಿದ್ದರು. 
    ಸೌಮ್ಯ ಸಾವಂತ್ ಹಿರಿಯ ಪತ್ರಕರ್ತ ಯು.ಆರ್ ಸಾವಂತ್-ಅನ್ನಪೂರ್ಣ ಸಾವಂತ್ ದಂಪತಿಯ ಹಿರಿಯ ಪುತ್ರಿಯಾಗಿದ್ದಾರೆ. ಪ್ರಸ್ತುತ ಸೌಮ್ಯ ಸಾವಂತ್ ಬೆಂಗಳೂರಿನಲ್ಲಿ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ಇವರ ಪತಿ ಬಿ.ರಾಹುಲ್ ಸಹ ಅಥ್ಲೆಟಿಕ್ ಕ್ರೀಡಾಪಟುವಾಗಿದ್ದು, ಪ್ರಸ್ತುತ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
 

ಪಡಿತರ ವಿತರಕರ ಸಂಘ : ಅಧ್ಯಕ್ಷರಾಗಿ ಎಸ್.ಆರ್ ನಾಗರಾಜ್

ಎಸ್.ಆರ್ ನಾಗರಾಜ್ 
    ಭದ್ರಾವತಿ: ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ನಗರ ಘಟಕದ ಹಂಗಾಮಿ ಅಧ್ಯಕ್ಷರಾಗಿ ಎಸ್.ಆರ್ ನಾಗರಾಜ್ ಅವರನ್ನು ರಾಜ್ಯಾಧ್ಯಕ್ಷರ ನಿರ್ದೇಶನದ ಮೇರೆಗೆ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. 
    ಹಂಗಾಮಿ ಅಧ್ಯಕ್ಷರ ಆಯ್ಕೆ ಸಂಬಂಧ ಸಿದ್ದಲಿಂಗಯ್ಯ ನೇತೃತ್ವದಲ್ಲಿ ಸಭೆ ನಡೆದಿದ್ದು, ಎಸ್.ಆರ್ ನಾಗರಾಜ್ ಆಯ್ಕೆಯಾಗಿದ್ದಾರೆ. ಸುಮಾರು ೨೫ ಸದಸ್ಯರು ಅಧ್ಯಕ್ಷರ ಆಯ್ಕೆ ಅನುಮೋದಿಸಿದ್ದು, ಈ ನಡುವೆ ಸಿದ್ದಲಿಂಗಯ್ಯ ಸೇರಿದಂತೆ ಪದಾಧಿಕಾರಿಗಳು ಹಂಗಾಮಿ ಅಧ್ಯಕ್ಷರನ್ನು ಅಭಿನಂದಿಸಿದ್ದಾರೆ. 

ವಿನೂ ಮಂಕಡ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಎಸ್. ಲೋಹಿತ್

ಎಸ್. ಲೋಹಿತ್ 
    ಭದ್ರಾವತಿ: ಶಿವಮೊಗ್ಗ ಹರಿಗೆ ನಿವಾಸಿ, ಫ್ರೆಂಡ್ಸ್ ಕ್ರಿಕೆಟ್ ಕ್ಲಬ್‌ನ ಕಿರಿಯ ಆಟಗಾರ ಎಸ್. ಲೋಹಿತ್  ಬಿಸಿಸಿಐ ೧೯ ವರ್ಷದೊಳಗಿನ ವಿನೂ ಮಂಕಡ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. 
    ಒರಿಸ್ಸಾ ಕಟಕ್ ನಗರದಲ್ಲಿ ಅ.೪ ರಿಂದ ೧೨ರವರೆಗೆ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಗೆ ರಾಜ್ಯದಿಂದ ಒಟ್ಟು ೧೫ ಆಟಗಾರರ ತಂಡವನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಎಸ್. ಲೋಹಿತ್ ಸಹ ಒಬ್ಬರಾಗಿದ್ದಾರೆ. ಕೆ.ಬಿ ಪವನ್ ಮುಖ್ಯ ತರಬೇತಿದಾರರಾಗಿದ್ದು, ಎಸ್.ಎಲ್ ಅಕ್ಷಯ್ ಸಹಾಯಕ ತರಬೇತಿದಾರರಾಗಿದ್ದಾರೆ. 
    ಎಸ್. ಲೋಹಿತ್ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಮೂಲಕ ಗುರುತಿಸಿಕೊಂಡಿದ್ದು, ಚಿಕ್ಕ ವಯಸ್ಸಿನಲ್ಲೇ ಉತ್ತಮ ಸಾಧನೆ ಮಾಡಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. 

ಸ್ಪೋಟಕ ಬಳಸಿ ಅಕ್ರಮ ಕಲ್ಲು ಸಾಗಾಣಿಕೆ : ನಾಲ್ವರಿಗೆ ೧ ವರ್ಷ ಸೆರೆವಾಸ, ೨೦ ಸಾವಿರ ರು. ದಂಡ

    ಭದ್ರಾವತಿ: ಯಾವುದೇ ಪರವಾನಗಿ ಪಡೆಯದೆ ಸಿಡಿಮದ್ದು ಬಳಸಿ ಅಕ್ರಮವಾಗಿ ಕಲ್ಲು ಬಂಡೆ ಸ್ಪೋಟಿಸಿ ಕಲ್ಲು ಸಾಗಾಣಿಕೆ  ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ೪ ಮಂದಿಗೆ ೧ ವರ್ಷಗಳ ಕಾಲ ಸಾದಾ ಸೆರೆವಾಸ ಹಾಗು ತಲಾ ೨೦,೦೦೦ ರು. ದಂಡ ವಿಧಿಸಿ ತೀರ್ಪು ನೀಡಿದೆ. 
    ಗುರುಮೂರ್ತಿ, ಧರ್ಮಪ್ಪ, ಸತೀಶ ಮತ್ತು ಹರಿಕೃಷ್ಣ ಶಿಕ್ಷೆಗೊಳಗಾದವರು. ನ್ಯಾಯಾಧೀಶರಾದ ಇಂದಿರ ಮೈಲಸ್ವಾಮಿ ಚೆಟ್ಟಿಯಾರ್ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ರತ್ನಮ್ಮ ವಾದ ಮಂಡಿಸಿದ್ದರು. ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. 
ಪ್ರಕರಣದ ವಿವರ:
    ಈ ನಾಲ್ವರು ಅಪರಾಧಿಗಳು ತಾಲೂಕಿನ ಅತ್ತಿಗುಂದ ಗ್ರಾಮದ ಸರ್ವೆ ನಂ.೭೬ರಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿ ಪಡೆಯದೆ ಕಲ್ಲುಬಂಡೆಗಳನ್ನು ಸ್ಪೋಟಿಸಿ ಕಲ್ಲು ಸಾಗಾಣಿಕೆ ಮಾಡಿ ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಆಧಾರದ ಮೇರೆಗೆ ೧೯-೦೮-೨೦೧೬ರಂದು ದಾಳಿ ನಡೆಸಲಾಗಿತ್ತು. ದಾಳಿ ಸಂದರ್ಭದಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿತ್ತು. ಅಲ್ಲದೆ ಸ್ಪೋಟಕಕ್ಕೆ ಬಳಸಿದ ೫ ಕೇಪುಗಳು, ೨ ತೋಟಗಳು, ಒಂದು ಮೀಟರ್ ಉದ್ದದ ಬತ್ತಿ, ಒಂದು ಹಿಡಿಯಷ್ಟು ಉಪ್ಪು ಹಾಗು ೩ ಸುತ್ತಿಗೆಗಳು, ಮೂರು ಹಾರೆಕೋಲುಗಳು ಹಾಗು ೧ ಟ್ರ್ಯಾಕ್ಟರ್ ಮತ್ತು ೧ ದ್ವಿಚಕ್ರ ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. 
    ಅಂದಿನ ಗ್ರಾಮಾಂತರ ವೃತ್ತ ನಿರೀಕ್ಷಕರಾಗಿದ್ದ ಬಿ. ಅಶೋಕ್ ಕುಮಾರ್ ತನಿಖಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ತನಿಖಾ ತಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ೪ ಅರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು. ಸುಮಾರು ೮ ವರ್ಷಗಳ ವಿಚಾರಣೆ ನಂತರ ಇದೀಗ ತೀರ್ಪು ಹೊರ ಹೊರಬಿದ್ದಿದೆ.