Wednesday, August 2, 2023

ಮಹಿಳೆಯರ ರಕ್ಷಣೆ ಮುಂದಾಗಿ, ತಪ್ಪಿತಸ್ಥರ ಗಲ್ಲು ಶಿಕ್ಷೆ ವಿಧಿಸಿ

ವಿವಿಧ ಮಹಿಳಾ ಸಂಘಟನೆಗಳಿಂದ ರಾಜ್ಯಪಾಲರಿಗೆ ಮನವಿ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು  ಮಹಿಳೆಯರ ಮಾನ, ಪ್ರಾಣ, ಭದ್ರತೆ ಹಾಗೂ ರಕ್ಷಣೆಗೆ ಹೆಚ್ಚಿನ ಕಾನೂನು ಸುವ್ಯವಸ್ಥೆ ಜಾರಿಗೊಳಿಸುವ ಜೊತೆಗೆ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಬುಧವಾರ  ಭದ್ರಾವತಿಯಲ್ಲಿ ವಿವಿಧ ಮಹಿಳಾ ಸಂಘಟನೆಗಳಿಂದ ತಹಸೀಲ್ದಾರ್‌ ಗ್ರೇಡ್‌-೨ ರಂಗಮ್ಮ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಆ. ೨: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು  ಮಹಿಳೆಯರ ಮಾನ, ಪ್ರಾಣ, ಭದ್ರತೆ ಹಾಗೂ ರಕ್ಷಣೆಗೆ ಹೆಚ್ಚಿನ ಕಾನೂನು ಸುವ್ಯವಸ್ಥೆ ಜಾರಿಗೊಳಿಸುವ ಜೊತೆಗೆ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಬುಧವಾರ  ವಿವಿಧ ಮಹಿಳಾ ಸಂಘಟನೆಗಳಿಂದ ತಹಸೀಲ್ದಾರ್‌ ಗ್ರೇಡ್‌-೨ ರಂಗಮ್ಮ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
    ಮಹಿಳಾ ಪ್ರಮುಖರಾದ ಹೇಮಾವತಿ ವಿಶ್ವನಾಥ್‌, ಡಾ. ವಿಜಯದೇವಿ, ಎಂ.ಎಸ್‌ ಸುಧಾಮಣಿ, ರೂಪರಾವ್‌, ಆರ್.ಎಸ್‌ ಶೋಭಾ,  ರೂಪ ನಾಗರಾಜ್‌ ಸೇರಿದಂತೆ ಇನ್ನಿತರರು ಮಾತನಾಡಿ,  ಮೇ ತಿಂಗಳಿನಲ್ಲಿ ಮಣಿಪುರದಲ್ಲಿ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಹೇಯಕೃತ್ಯ ಮನುಕುಲವನ್ನು ತಲೆ ತಗ್ಗಿಸುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಉಡುಪಿ ಜಿಲ್ಲೆಯಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿಯರ ಮಾನ ಹಾನಿ ಪ್ರಕರಣ, ಮಂಗಳೂರಿನಲ್ಲಿ ದಲಿತ ಹೆಣ್ಣು ಮಗಳಿಗೆ ನಿರಂತರ ೪ ವರ್ಷ ಅತ್ಯಾಚಾರ ನಡೆಸಿರುವ  ಪ್ರಕರಣ ಹಾಗೂ ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಮೇಲೆ  ನಿರಂತರವಾಗಿ ಅತ್ಯಾಚಾರ ಮತ್ತು ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಿವೆ.  ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳು ಅಮಾನವೀಯ ಹಾಗೂ ರಾಕ್ಷಸತನದ ಪರಮಾವಧಿಯ ಹೇಯಕೃತ್ಯಗಳಾಗಿದ್ದು, ಇದನ್ನು ಲಿಂಗ ತಾರತಮ್ಯವಿಲ್ಲದೆ, ಜಾತಿ ಬೇಧವಿಲ್ಲದೆ, ರಾಜಕೀಯ ಬಣ್ಣ ಬಳಿಯದೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಇಡೀ ಮನುಕುಲವನ್ನು ಜಾಗೃತಗೊಳಿಸಬೇಕಾಗಿದೆ. ಇಂತಹ ಘಟನೆಗಳು ದೇಶದಲ್ಲಿ ಮತ್ತೆ ಮರುಕಳುಹಿಸದಂತೆ ಎಚ್ಚರವಹಿಸಬೇಕೆಂದು ಹಾಗು ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು  ಆಗ್ರಹಿಸಿದರು.
    ಹಳೇನಗರದ ಮಹಿಳಾ ಸೇವಾ ಸಮಾಜ, ವೀರಶೈವ ಲಿಂಗಾಯತ ಮಹಿಳಾ ಸಮಾಜ, ನ್ಯೂಟೌನ್‌ ಚುಂಚಾದ್ರಿ ಮಹಿಳಾ ವೇದಿಕೆ, ವಾಸವಿ ಮಹಿಳಾ ಮಂಡಳಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕ, ವಿಶ್ವ ಹಿಂದೂ ಪರಿಷತ್‌ ಮಾತೃಮಂಡಳಿ, ಸಿದ್ಧಾರೂಢನಗರದ ಶಾಶ್ವತಿ ಮಹಿಳಾ ಸಮಾಜ, ಪಂತಜಲಿ ಯೋಗ ಸಮಿತಿ, ದೈವಜ್ಞ ಮಹಿಳಾ ಸಮಾಜ ಸೇರಿದಂತೆ ಇನ್ನಿತರ ಮಹಿಳಾ ಸಂಘಟನೆಗಳು ಪಾಲ್ಗೊಂಡಿದ್ದವು.
    ಪ್ರಮುಖರಾದ ಶೋಭಾ ಗಂಗಾರಾಜ್‌, ಜಯಂತಿ ನಾಗರಾಜ್‌, ಅನ್ನಪೂರ್ಣ ಸತೀಶ್‌, ಯಶೋಧ ವೀರಭದ್ರಪ್ಪ, ಲತಾ ಪ್ರಭಾಕರ್‌, ಅನುಸೂಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ರಂಗಪ್ಪ ವೃತ್ತದಿಂದ ತಾಲೂಕು ಕಛೇರಿವರೆಗೂ ಜಾಗೃತ ಫಲಕಗಳನ್ನು ಹಿಡಿದು ಮೆರವಣಿಗೆ ನಡೆಸಲಾಯಿತು.

ನೂತನ ಅಧ್ಯಕ್ಷ ಎಸ್. ಕುಮಾರ್‌ಗೆ ಕ್ರೈಸ್ತ ಮುಖಂಡರಿಂದ ಅಭಿನಂದನೆ

ಭದ್ರಾವತಿ ತಾಲೂಕು ಬ್ಲಾಕ್ ಕಾಂಗ್ರೆಸ್ ನಗರ ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್. ಕುಮಾರ್ ರವರನ್ನು ಬುಧವಾರ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಸಹಯೋಗದೊಂದಿಗೆ ಕ್ರೈಸ್ತ ಮುಖಂಡರು ಅಭಿನಂದಿಸಿದರು.
    ಭದ್ರಾವತಿ, ಆ. ೨ :  ತಾಲೂಕು ಬ್ಲಾಕ್ ಕಾಂಗ್ರೆಸ್ ನಗರ ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್. ಕುಮಾರ್ ರವರನ್ನು ಬುಧವಾರ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಸಹಯೋಗದೊಂದಿಗೆ ಕ್ರೈಸ್ತ ಮುಖಂಡರು ಅಭಿನಂದಿಸಿದರು.
    ಪಕ್ಷ ಸಂಘಟನೆ ಜೊತೆಗೆ ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಹಾಗು ಅನ್ಯಾಯ, ಶೋಷಣೆ ವಿರುದ್ಧ ಹೋರಾಟ ನಡೆಸುವ ಮೂಲಕ ಜನಸಾಮಾನ್ಯರ ಧ್ವನಿಯಾಗುವಂತೆ ಅಭಿನಂದಿಸಿ ಕ್ರೈಸ್ತ ಸಮುದಾಯದವರು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
    ಸೆಲ್ವಾರಾಜ್, ನಗರ ಸಭೆ ಮಾಜಿ ಸದಸ್ಯ ಫ಼್ರಾನ್ಸಿಸ್, ದಾಸ್, ಐ.ವಿ ಸಂತೋಷ್, ಸಂಪತ್, ಅಂತೋಣಿ ವಿಲ್ಸನ್, ಶಾಮ್, ಲಾರೆನ್ಸ್ ಪೊಲ್ ಸೇರಿದಂತೆ ಕ್ರೈಸ್ತ ಸಮುದಾಯದ ಮುಖಂಡರು  ಉಪಸ್ಥಿತರಿದ್ದರು.

ಯೋಧಯೊಬ್ಬರಿಗೆ ಸೇರಿದ ಜಾಗ ಕಬಳಿಕೆ ಆರೋಪ

ಸೂಕ್ತ ಕ್ರಮಕ್ಕೆ ಆಗ್ರಹಿಸಿ ನಗರಸಭೆ ಮುಂಭಾಗ ಧರಣಿ ಸತ್ಯಾಗ್ರಹ

ಯೋಧಯೊಬ್ಬರಿಗೆ ಸೇರಿದ ಜಾಗವನ್ನು ಅಕ್ರಮವಾಗಿ ಅತಿಕ್ರಮಿಸಿ ಕಬಳಿಸಲು ಯತ್ನಿಸುತ್ತಿರುವುದನ್ನು ವಿರೋಧಿಸಿ ಬುಧವಾರ ಭದ್ರಾವತಿಯಲ್ಲಿ ಸಾರ್ವಜನಿಕ ಕುಂದು ಕೊರತೆ ಹೋರಾಟ ಸಮಿತಿ ವತಿಯಿಂದ ನಗರಸಭೆ ಮುಂಭಾಗ  ಧರಣಿ ಸತ್ಯಾಗ್ರಹ ನಡೆಸಲಾಯಿತು.
    ಭದ್ರಾವತಿ, ಆ. ೨: ಯೋಧಯೊಬ್ಬರಿಗೆ ಸೇರಿದ ಜಾಗವನ್ನು ಅಕ್ರಮವಾಗಿ ಅತಿಕ್ರಮಿಸಿ ಕಬಳಿಸಲು ಯತ್ನಿಸುತ್ತಿರುವುದನ್ನು ವಿರೋಧಿಸಿ ಬುಧವಾರ ನಗರದ ಸಾರ್ವಜನಿಕ ಕುಂದು ಕೊರತೆ ಹೋರಾಟ ಸಮಿತಿ ವತಿಯಿಂದ  ನಗರಸಭೆ ಮುಂಭಾಗ  ಧರಣಿ ಸತ್ಯಾಗ್ರಹ ನಡೆಸಲಾಯಿತು.
    ಬೊಮ್ಮನಕಟ್ಟೆ ವಾರ್ಡ್‌ನಂ.೨೩ರಲ್ಲಿರುವ ಸರ್ವೆ ನಂ.೯೧ರ ಬಡಾವಣೆಯಲ್ಲಿ ವಿ. ಗುರುವಯ್ಯನ ಹೆಸರಿನಲ್ಲಿರುವ ಖಾತೆ ನಂ.೧೨೦೨/೩೮, ಸೈಟ್‌ ನಂ.೩೮ನ್ನು ಅಕ್ರಮವಾಗಿ ಅತಿಕ್ರಮಿಸಿ ಕಬಳಿಸಲು ಯತ್ನಿಸಲಾಗುತ್ತಿದೆ. ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗಹಿಸಲಾಯಿತು.
    ಸೈಟ್‌ ನಂ.೭ರ ಸ್ವತ್ತಿನ ಮಾಲೀಕರು ಸೈಟ್‌ ನಂ.೩೮ರ ಸ್ವತ್ತಿನ ಜಾಗವನ್ನು ಅಕ್ರಮವಾಗಿ ಅತಿಕ್ರಮಿಸಿ ಕಬಳಿಸಲು ಯತ್ನಿಸುತ್ತಿದ್ದಾರೆ. ವಿನಾಕಾರಣ ಯೋಧರ ಕುಟುಂಬಕ್ಕೆ ತೊಂದರೆ ನೀಡುತ್ತಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸ್ವತ್ತಿಗೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲವನ್ನು ತಕ್ಷಣ ಬಗೆಹರಿಸುವ ಮೂಲಕ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಲಾಯಿತು.  
    ಸಾರ್ವಜನಿಕ ಕುಂದು ಕೊರತೆ ಹೋರಾಟ ಸಮಿತಿ ಅಧ್ಯಕ್ಷ ಬಾಲಕೃಷ್ಣ, ಡಿಎಸ್‌ಎಸ್‌ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಪ್ರಗತಿಪರ ಸಂಘಟನೆಗಳ ಮುಖಂಡ ಸುರೇಶ್‌  ಸೇರಿದಂತೆ ಇನ್ನಿತರರು ಧರಣಿ ಸತ್ಯಾಗ್ರಹ ನೇತೃತ್ವ ವಹಿಸಿದ್ದರು.
    ಡಿಎಸ್‌ಎಸ್‌ ಜಿಲ್ಲಾ ಸಂಚಾಲಕ ಚಿನ್ನಯ್ಯ, ಹಾವು ಮಂಜು, ದಾಸ್‌, ಶ್ಯಾಮ್‌, ಜಗದೀಶ್‌, ಚನ್ನಪ್ಪ, ಕಾಣಿಕ್‌ರಾಜ್‌, ಈಶ್ವರಪ್ಪ ಸೇರಿದಂತೆ ಇನ್ನಿತರರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
    ನಗರಸಭೆಯಿಂದ ಪೇಪರ್‌ ಟೌನ್‌ ಪೊಲೀಸ್‌ ಠಾಣೆಗೆ ದೂರು :
    ಸರ್ವೆ ನಂ.೯೧ರ ಸೈಟ್‌ ನಂ.೭ ಮತ್ತು ೩೮ಕ್ಕೆ ಸಂಬಂಧಿಸಿದಂತೆ ನಗರಸಭೆ ವತಿಯಿಂದ ಅಗತ್ಯ ದಾಖಲಾತಿಗಳನ್ನು ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದ್ದು, ಸೈಟ್‌ ನಂ.೭ ಮತ್ತು ೩೮ ಬೇರೆ ಬೇರೆಯಾಗಿರುವುದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಸೂಕ್ತ  ಕ್ರಮ ಕೈಗೊಳ್ಳುವಂತೆ ಪೇಪರ್‌ಟೌನ್‌ ಪೊಲೀಸ್‌ ಠಾಣೆಗೆ ಪೌರಾಯುಕ್ತ ಮನುಕುಮಾರ್‌ ದೂರು ನೀಡಿದ್ದಾರೆ.

ಎಂಪಿಎಂ ಕಾರ್ಖಾನೆ ನಿವೃತ್ತ ನೌಕರ ಜಿ. ರಮೇಶ್‌ ನಿಧನ

ಜಿ. ರಮೇಶ್‌
    ಭದ್ರಾವತಿ, ಆ. ೨ : ನಗರದ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಉದ್ಯೋಗಿ, ಬೊಮ್ಮನಕಟ್ಟೆ ನಿವಾಸಿ ಜಿ. ರಮೇಶ್‌(೫೫) ಮಂಗಳವಾರ ನಿಧನ ಹೊಂದಿದರು.
    ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಇದ್ದರು.  ಅನಾರೋಗ್ಯದಿಂದ ಬಳಲುತ್ತಿದ್ದ  ಇವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
    ಎಂಪಿಎಂ ಕಾರ್ಖಾನೆಯಲ್ಲಿ ಫೋರ್‌ಮೆನ್‌ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು. ಎಂಪಿಎಂ ಜೆಂಟ್ಸ್‌ ಕ್ಲಬ್‌ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಇವರ ನಿಧನಕ್ಕೆ ಎಂಪಿಎಂ ಕಾರ್ಖಾನೆ ನಿವೃತ್ತ ಕಾರ್ಮಿಕರು ಸಂತಾಪ ಸೂಚಿಸಿದ್ದಾರೆ.