Monday, October 5, 2020

ವಿದ್ಯುತ್ ಕ್ಷೇತ್ರ ಖಾಸಗಿಕರಣ, ಕಾಯ್ದೆ ತಿದ್ದುಪಡಿ ವಿರೋಧಿಸಿ ಸಾಂಕೇತಿಕ ಪ್ರತಿಭಟನೆ

ವಿದ್ಯುತ್ ಕ್ಷೇತ್ರ ಖಾಸಗಿಕರಣ ಹಾಗು ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೋಮವಾರ ಭದ್ರಾವತಿ ಉಂಬ್ಳೆಬೈಲು ರಸ್ತೆಯಲ್ಲಿರುವ ಮೆಸ್ಕಾಂ ಕಛೇರಿ ಮುಂಭಾಗ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ, ಅ. ೫: ವಿದ್ಯುತ್ ಕ್ಷೇತ್ರ ಖಾಸಗಿಕರಣ ಹಾಗು ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೋಮವಾರ ನಗರದ ಉಂಬ್ಳೆಬೈಲು ರಸ್ತೆಯಲ್ಲಿರುವ ಮೆಸ್ಕಾಂ ಕಛೇರಿ ಮುಂಭಾಗ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
     ಕೆಪಿಟಿಸಿಎಲ್ ಎಂಪ್ಲಾಯಿಸ್ ಯೂನಿಯನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಅಧಿಕಾರಿಗಳು, ನೌಕರರು ಕಪ್ಪುಪಟ್ಟಿ ಧರಿಸಿ ಖಾಸಗಿಕರಣ ಹಾಗು ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದರು.
       ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿಜಯ್ ಕುಮಾರ್, ಲೆಕ್ಕಾಧಿಕಾರಿ ರಾಮಾಚಂದ್ರಪ್ಪ, ಯೂನಿಯನ್ ಕೇಂದ್ರ ಸಮಿತಿ ಸದಸ್ಯ ಹೇಮಣ್ಣ ಸೇರಿದಂತೆ ಇನ್ನಿತರರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
      ಯೂನಿಯನ್ ಅಧ್ಯಕ್ಷ  ಆನಂದ್, ಪರಿಶಿಷ್ಟ ಜಾತಿ, ಪಂಗಡ ಕಲ್ಯಾಣ ಸಮಿತಿ ಅಧ್ಯಕ್ಷ ಲೋಕೇಶ್, ಅಬ್ದುಲ್ ಮುನಾಫ್,  ಎಲ್ಲಾ ಕಚೇರಿಗಳ ಸಹಾಯಕ ಇಂಜಿನಿಯರ್‌ಗಳು, ಶಾಖಾಧಿಕಾರಿಗಳು, ನೌಕರರು ಪಾಲ್ಗೊಂಡಿದ್ದರು.


ದ್ವಿಚಕ್ರ ವಾಹನ ಕಾಲುವೆಗೆ ಬಿದ್ದು ಮಹಿಳೆ ಸಾವು

ಭದ್ರಾವತಿ, ಅ. ೫: ದ್ವಿಚಕ್ರ ವಾಹನ ನಿಯಂತ್ರಣ ಕಳೆದುಕೊಂಡು ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
        ತಾಲೂಕಿನ ಎರೆಹಳ್ಳಿ ಗ್ರಾಮದ ಗೀತಾ(೩೩) ಎಂಬುವರು ಮೃತಪಟ್ಟಿದ್ದು, ಅಂತರಗಂಗೆ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಇವರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ಕಳೆದುಕೊಂಡು ಕಾಲುವೆಗೆ ಬಿದ್ದಿದ್ದಾರೆ. ತೀವ್ರ ಗಾಯಗೊಂಡಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಲಾಯಿದ್ದಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಸ್ಥಾಪಕರ ಆಶಯದಂತೆ ಜಯ ಕರ್ನಾಟಕ ಸಂಘಟನೆ ಬಲವರ್ಧನೆ

ಯುವಕರಿಗೆ ಹೆಚ್ಚಿನ ಆದ್ಯತೆ, ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ನೂತನ ಪದಾಧಿಕಾರಿಗಳ ನೇಮಕ : ಜಗದೀಶ್


ರಾಜ್ಯಾಧ್ಯಕ್ಷರಾದ ನಂತರ ಮೊದಲ ಬಾರಿಗೆ ಭದ್ರಾವತಿಗೆ ಆಗಮಿಸಿದ ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಜಗದೀಶ್‌ರವರನ್ನು ಸ್ಥಳೀಯ ಮುಖಂಡರು ಸನ್ಮಾನಿಸಿ, ಅಭಿನಂದಿಸಿದರು.
ಭದ್ರಾವತಿ, ಅ. ೫: ರಾಜ್ಯಾದ್ಯಂತ ಜಯ ಕರ್ನಾಟಕ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಮೂಲಕ ಸಂಘಟನೆಯ ಸಂಸ್ಥಾಪಕರ ಆಶಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಎಲ್ಲರೂ ಮುನ್ನಡೆಯಬೇಕೆಂದು ಸಂಘಟನೆ ರಾಜ್ಯಾಧ್ಯಕ್ಷ ಜಗದೀಶ್ ಕರೆ ನೀಡಿದರು.
      ಅವರು ಅಧ್ಯಕ್ಷರಾದ ನಂತರ ಸೋಮವಾರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿ ಸಂಘಟನೆಯ ಪ್ರಮುಖರು ಹಾಗು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.  ಮುತ್ತಪ್ಪ ರೈರವರು ಸಮಾಜಮುಖಿ ಚಿಂತನೆಗಳೊಂದಿಗೆ, ಜನಪರ ಕಾಳಜಿಯಿಂದ ಸಂಘಟನೆಯನ್ನು ಹುಟ್ಟು ಹಾಕಿದರು. ಇದೀಗ ಅವರು ನಮ್ಮೊಂದಿಗಿಲ್ಲ. ಆದರೆ ಅವರು ಬಿಟ್ಟು ಹೋಗಿರುವ ಸಂಘಟನೆ ನಮ್ಮೊಂದಿಗಿದೆ. ಈ ಹಿನ್ನಲೆಯಲ್ಲಿ ಆ ಮೂಲಕ ಅವರನ್ನು ಕಾಣುವ ಪ್ರಯತ್ನ ಸಂಘಟನೆಯ ಎಲ್ಲರೂ ಮಾಡಬೇಕಾಗಿದೆ.
      ಜಯ ಕರ್ನಾಟಕ ಸಂಘಟನೆ ಕೇವಲ ನೆಲ, ಜಲ, ಭಾಷೆ ಹೋರಾಟಕ್ಕೆ ಸೀಮಿತವಾಗಿರದೆ ಜನರ ಮಾನವೀಯ ಮೌಲ್ಯಗಳಿಗೆ ಸ್ಪಂದಿಸಲಿದೆ ಎಂಬುದನ್ನು ಕಳೆದ ೫-೬ ತಿಂಗಳುಗಳಿಂದ ಕೈಗೊಳ್ಳುತ್ತಿರುವ ಸಮಾಜಮುಖಿ ಸೇವಾ ಕಾರ್ಯಗಳಿಂದ ಎಲ್ಲರೂ ತಿಳಿದುಕೊಳ್ಳಬಹುದಾಗಿದೆ. ಪ್ರಸ್ತುತ ಮಾದಕ ವ್ಯಸನ ವಿರುದ್ಧ ಸಂಘಟನೆ ಹೋರಾಟ ಇಳಿದಿದ್ದು, ಇತ್ತೀಚೆಗೆ ಕೇಂದ್ರ ಸರ್ಕಾರ ರಾಜ್ಯದಲ್ಲಿ ಹಿಂದಿ ಭಾಷೆ ಏರಿಕೆ ಮಾಡಲು ಯತ್ನಿಸಿದ್ದು, ಇದರ ವಿರುದ್ಧ ಸಹ ಹೋರಾಟ ನಡೆಸಿ ಕನ್ನಡ ನೆಲದಲ್ಲಿ ಕನ್ನಡಕ್ಕೆ ಮಾತ್ರ ಮೊದಲ ಆದ್ಯತೆ ಎಂಬುದನ್ನು ತಿಳಿಸಲಾಗಿದೆ. ಇದೆ ರೀತಿ ಹಲವಾರು ಜನಪರ ಹೋರಾಟಗಳಲ್ಲಿ ಸಂಘಟನೆ ಮುಂಚೂಣಿಯಲ್ಲಿದ್ದು, ರಾಜ್ಯಾದ್ಯಂತ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ೩೦ ಮಂದಿ ರಾಜ್ಯ ಪದಾಧಿಕಾರಿಗಳು ಕಾರ್ಯನಿರತರಾಗಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗುತ್ತಿದೆ. ಸಂಘಟನೆಯಲ್ಲಿ ಯುವಕರು ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಅವರಿಗೆ ತರಬೇತಿ ಸಹ ನೀಡಲಾಗುತ್ತಿದೆ. ಎಲ್ಲಾ ಜಿಲ್ಲೆ ಹಾಗು ತಾಲೂಕುಗಳಲ್ಲಿ ನೂತನ ಪದಾಧಿಕಾರಿಗಳನ್ನು ರಚಿಸಲಾಗುತ್ತಿದೆ ಎಂದರು.
      ಇದಕ್ಕೂ ಮೊದಲು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನೂತನ ಅಧ್ಯಕ್ಷರನ್ನು ಸ್ಥಳೀಯ ಮುಖಂಡರು ಸನ್ಮಾನಿಸಿ ಅಭಿನಂದಿಸಿದರು.
        ಪ್ರಧಾನ ಕಾರ್ಯದಶಿ ರಾಮಚಂದ್ರಯ್ಯ, ರಾಜ್ಯ ಉಪಾಧ್ಯಕ್ಷ ಮುನಿಸ್ವಾಮಿ, ಜಿಲ್ಲಾ ಉಸ್ತುವಾರಿ ಹರೀಶ್, ತಾಲೂಕು ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪ್ರಮುಖರಾದ ಪ್ರಾನ್ಸಿಸ್, ಮುಕುಂದಪ್ಪ, ಪ್ರಸನ್ನ, ಜ್ಯೋತಿ ಪ್ರಸಾದ್, ಕಿರಣ್, ರಾಖಿ, ಗಾಂಧಿ ಅಶೋಕ, ಚಂದ್ರು, ದಾಸ್, ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಉತ್ತರ ಪ್ರದೇಶ ಸಾಮೂಹಿಕ ಅತ್ಯಾಚಾರ ಘಟನೆಗೆ ಖಂಡನೆ

ಪ್ರಗತಿಪರ ಸಂಘಟನೆಗಳಿಂದ ಸಿ.ಎಂ ಆದಿತ್ಯನಾಥ ಪ್ರತಿಕೃತಿ ದಹಿಸಿ ಆಕ್ರೋಶ

ಭದ್ರಾವತಿಯಲ್ಲಿ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದಿರುವ ದಲಿತ ಯುವತಿ 'ಮನೀಷಾ ವಾಲ್ಮೀಕಿ' ಮೇಲಿನ ಸಾಮೂಹಿಕ ಅತ್ಯಾಚಾರ ಘಟನೆಯನ್ನು ಪ್ರಗತಿ ಸಂಘಟನೆಗಳ ಒಕ್ಕೂಟ ಖಂಡಿಸಿದ್ದು, ಸೋಮವಾರ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಭದ್ರಾವತಿ, ಅ. ೫: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದಿರುವ ದಲಿತ ಯುವತಿ 'ಮನೀಷಾ ವಾಲ್ಮೀಕಿ' ಮೇಲಿನ ಸಾಮೂಹಿಕ ಅತ್ಯಾಚಾರ ಘಟನೆಯನ್ನು ನಗರದ ಪ್ರಗತಿ ಸಂಘಟನೆಗಳ ಒಕ್ಕೂಟ ಖಂಡಿಸಿದ್ದು, ಸೋಮವಾರ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು.
       ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ರವರ ಪ್ರತಿಕೃತಿ ದಹಿಸುವ ಮೂಲಕ ಸಾಮೂಹಿಕ ಅತ್ಯಾಚಾರ ಘಟನೆಗೆ ಕಾರಣರಾದವರನ್ನು ತಕ್ಷಣ ಬಂಧಿಸುವ ಜೊತೆಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ ಆರೋಪಿಗಳನ್ನು ರಕ್ಷಿಸಲು ಸಾಕ್ಷಿಗಳನ್ನು ನಾಶಮಾಡಿದ ಉತ್ತರ ಪ್ರದೇಶ ಸರ್ಕಾರವನ್ನು ವಜಾ ಮಾಡಬೇಕೆಂದು ಆಗ್ರಹಿಸಲಾಯಿತು.
       ಒಕ್ಕೂಟದ ಅಧ್ಯಕ್ಷ, ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಮುಖರಾದ ನಗರಸಭೆ ಮಾಜಿ ಬಿ.ಕೆ ಮೋಹನ್, ಛಲವಾದಿ ಮಹಾಸಭಾ ಅಧ್ಯಕ್ಷ ಸುರೇಶ್, ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ  ಬಸವರಾಜ್ ಬಿ. ಆನೇಕೊಪ್ಪ, ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್ ಕರುಣಾಮೂರ್ತಿ, ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ಪಕ್ಷದ ಪ್ರಮುಖರಾದ ಪರಮೇಶ್ವರಚಾರ್, ಇಬ್ರಾಹಿಂ ಖಾನ್, ಜೋಸೆಫ್, ಜಾವಿದ್, ಡಿಎಸ್‌ಎಸ್ ಮುಖಂಡರಾದ ಚಿನ್ನಯ್ಯ, ಕುಬೇಂದ್ರಪ್ಪ,  ಜೆಬಿಟಿ ಬಾಬು, ರಾಜೇಂದ್ರ, ಬದರಿನಾರಾಯಣ, ಚನ್ನಪ್ಪ, ಎಂ. ಶಿವಕುಮಾರ್, ಕರಿಯಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.