Tuesday, May 31, 2022

ವಿಜೃಂಭಣೆಯಿಂದ ಜರುಗಿದ ಶ್ರೀ ಮಾತಂಗಮ್ಮ, ಶ್ರೀ ಪ್ಲೇಗ್ ಮಾರಿಯಮ್ಮ ದೇವಿಯರ ರಾಜಬೀದಿ ಉತ್ಸವ ಮೆರವಣಿಗೆ

ಭದ್ರಾವತಿ ಜನ್ನಾಪುರ ಜಯಶ್ರೀ ಕಲ್ಯಾಣ ಮಂಟಪ ಸಮೀಪದಲ್ಲಿರುವ ಶ್ರೀ ಮಾತಂಗಮ್ಮ ದೇವಿ ಮತ್ತು ಶ್ರೀ ಪ್ಲೇಗ್ ಮಾರಿಯಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಅಮ್ಮನವರ ರಾಜಬೀದಿ ಉತ್ಸವ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
    ಭದ್ರಾವತಿ, ಮೇ. ೩೧: ಜನ್ನಾಪುರ ಜಯಶ್ರೀ ಕಲ್ಯಾಣ ಮಂಟಪ ಸಮೀಪದಲ್ಲಿರುವ ಶ್ರೀ ಮಾತಂಗಮ್ಮ ದೇವಿ ಮತ್ತು ಶ್ರೀ ಪ್ಲೇಗ್ ಮಾರಿಯಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಅಮ್ಮನವರ ರಾಜಬೀದಿ ಉತ್ಸವ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
    ಜಾನಪದ ಕಲಾತಂಡಗಳೊಂದಿಗೆ ಕೆ.ಸಿ ಬ್ಲಾಕ್ ಮುಖ್ಯ ರಸ್ತೆಗಳಲ್ಲಿ ಮತ್ತು ಎನ್‌ಟಿಬಿ ರಸ್ತೆ, ಲಿಂಗಾಯಿತರ ಬೀದಿ, ಕುರುಬರ ಬೀದಿ, ರಾಜಪ್ಪ ಲೇಔಟ್ ಸೇರಿದಂತೆ ವಿವಿಧೆಡೆ ಉತ್ಸವ ಮೆರವಣಿಗೆ ನಡೆಯಿತು. ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡಿರುವ ಮೂಲ ವಿಗ್ರಹಗಳಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ಜೂ.೧ರಂದು ಮಧ್ಯಾಹ್ನ ೧೨ ಗಂಟೆಗೆ ತಂಬಿಟ್ಟಿನ ಆರತಿ ತರುವುದು ಹಾಗು ಪಾನಕ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಲಿವೆ.
    ರಾಜಬೀದಿ ಉತ್ಸವದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್, ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ಯುವ ಮುಖಂಡರಾದ ಎಂ.ಎ ಅಜಿತ್, ಬಿ.ಎಸ್ ಗಣೇಶ್, ಗುಣಶೇಖರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್ ಸೇರಿದಂತೆ ಸ್ಥಳೀಯ ಮುಖಂಡರು, ಶ್ರೀ ಮಾರಿಕಾಂಬ ಸೇವಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಗಾಯತ್ರಿ ಕ್ರೆಡಿಟ್ ಕೋ ಆಪರೇಟ್ ಸೊಸೈಟಿ ನೂತನ ಅಧ್ಯಕ್ಷರಾಗಿ ಕೆ. ಮಂಜುನಾಥ್ ಅವಿರೋಧ ಆಯ್ಕೆ

ಭದ್ರಾವತಿ ಜನ್ನಾಪುರದ ಗಾಯತ್ರಿ ಕ್ರೆಡಿಟ್ ಕೋ ಆಪರೇಟ್ ಸೊಸೈಟಿ ನೂತನ ಅಧ್ಯಕ್ಷರಾಗಿ ಕೆ. ಮಂಜುನಾಥ್ ಮಂಗಳವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಭದ್ರಾವತಿ, ಮೇ. ೩೧: ಜನ್ನಾಪುರದ ಗಾಯತ್ರಿ ಕ್ರೆಡಿಟ್ ಕೋ ಆಪರೇಟ್ ಸೊಸೈಟಿ ನೂತನ ಅಧ್ಯಕ್ಷರಾಗಿ ಕೆ. ಮಂಜುನಾಥ್ ಮಂಗಳವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಜೆ.ಎಂ ಆನಂದ್‌ರಾವ್ ರವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಕೆ. ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ಶ್ರೀಧರ್ ಎಂಬುವರು ಸೊಸೈಟಿ ಕಾರ್ಯ ನಿರ್ವಹಿಸಲು ಜನ್ನಾಪುರ ಜಯಶ್ರೀ ಕಲ್ಯಾಣ ಮಂಟಪ ಸಮೀಪದಲ್ಲಿ ಕಟ್ಟಡ ದಾನ ಮಾಡಿದ್ದು, ನೂತನ ಕಟ್ಟಡದಲ್ಲಿ ಸೊಸೈಟಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
    ಎಲ್ಲಾ ನಿರ್ದೇಶಕರು ಒಮ್ಮತದಿಂದ ಕೆ. ಮಂಜುನಾಥ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡವಲ್ಲಿ ಯಶಸ್ವಿಯಾಗಿದ್ದಾರೆ. ಉಪಾಧ್ಯಕ್ಷ ಕೇಶವಮೂರ್ತಿ, ಸಿ.ಕೆ ರಾಮಣ್ಣ,  ಶ್ವೇತಾ, ತಾರಾಮಣಿ, ನೀಲಕಂಠ ಜೊಯ್ಸ್, ಸುಬ್ರಮಣ್ಯ, ರಮಾಕಾಂತ್, ಕಾರ್ಯದರ್ಶಿ ಶಶಿಧರ್, ವಾಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳಿಂದ ದೂರವಿರಿ : ಡಾ. ಎಂ.ವಿ ಅಶೋಕ್


ಭದ್ರಾವತಿ ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಮತ್ತು ವಿಶ್ವ ಋತು ಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮವನ್ನು ತಾಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ, ನ್ಯಾಯಧೀಶ ಆರ್. ಯತೀಶ್ ಉದ್ಘಾಟಿಸಿದರು.
    ಭದ್ರಾವತಿ, ಮೇ. ೩೧: ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳಿಂದ ದೂರವಿರುವ ಮೂಲಕ ಎಚ್ಚರವಹಿಸಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಹೇಳಿದರು.
    ಅವರು ಮಂಗಳವಾರ ನಗರದ ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಮತ್ತು ವಿಶ್ವ ಋತು ಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಪ್ರಸ್ತುತ ತಂಬಾಕು ಪದಾರ್ಥಗಳ ವ್ಯಸನ್ಯಕ್ಕೆ ಬಲಿಯಾಗುತ್ತಿರುವವರ ಪ್ರಮಾಣ ಏರಿಕೆಯಾಗುತ್ತಿದ್ದು, ಈ ಕುರಿತು ಸಮಗ್ರ ಮಾಹಿತಿ ನೀಡುವ ಮೂಲಕ  ಹೆಚ್ಚಿನ ಜಾಗೃತಿ ವಹಿಸುವುದು ಅಗತ್ಯವಾಗಿದೆ ಎಂದರು.
    ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಡಿಜಿಓ ಡಾ. ವರ್ಷ ಋತು ಚಕ್ರ ನೈರ್ಮಲ್ಯ ಕುರಿತು ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು. 
    ತಾಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ, ನ್ಯಾಯಧೀಶ ಆರ್. ಯತೀಶ್ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಶಿಕ್ಷಣ ಆರೋಗ್ಯಾಧಿಕಾರಿ ಕೆ. ಸುಶೀಲಬಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು.
    ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಜಿ ತ್ಯಾಗರಾಜ್, ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಡಿ.ಎಂ ವಿಶ್ವನಾಥ್, ಪ್ರಾಂಶುಪಾಲ ಟಿ.ಎಲ್ ಮಹಾಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು.
    ಡಾ. ತಮ್ಮಣ್ಣ ಸ್ವಾಗತಿಸಿದರು. ಹಿರಿಯ ಆರೋಗ್ಯ ಸಹಾಯಕ ಆನಂದಮೂರ್ತಿ, ವಸಂತ ಹಾಗು ಪಾಲಿಟೆಕ್ನಿಕ್ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.



ಭದ್ರಾವತಿ ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಮತ್ತು ವಿಶ್ವ ಋತು ಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಪಾಲ್ಗೊಂಡು ಮಾತನಾಡಿದರು.