Sunday, January 19, 2025

ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಹೋರಾಟ ೩ನೇ ವರ್ಷಕ್ಕೆ

ದ್ವೇಷಪೂರಿತ ಸುದ್ದಿಗಳಿಂದ ಆತಂಕ, ಅಂತರ 

ಕಾರ್ಖಾನೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿಯವರ ಹೇಳಿಕೆಯನ್ನು ಬಳಸಿಕೊಂಡು ದ್ವೇಷಪೂರಿತ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವುದು. 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ಹಿಂಪಡೆಯಬೇಕು, ಅಗತ್ಯ ಬಂಡವಾಳ ತೊಡಗಿಸಿ ಪುನಶ್ಚೇತನಗೊಳಿಸಬೇಕು ಹಾಗು ಗುತ್ತಿಗೆ ಕಾರ್ಮಿಕರಿಗೆ ತಿಂಗಳ ಪೂರ್ತಿ ಕೆಲಸ ಕಲ್ಪಿಸಿಕೊಡಬೇಕು ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟ ಭಾನುವಾರ ೨ ವರ್ಷ ಪೂರೈಸಿದೆ. ಈ ನಡುವೆ ಕಾರ್ಖಾನೆ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜಕೀಯ ದ್ವೇಷಪೂರಿತ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 
    ಕಳೆದ ೨ ವರ್ಷಗಳಿಂದ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟ ಕ್ಷೇತ್ರದ ಇತಿಹಾಸದಲ್ಲಿ ಅತಿ ದೊಡ್ಡ ಹೋರಾಟ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಮತ್ತೊಂದೆಡೆ ಹೋರಾಟ ೩ನೇ ವರ್ಷಕ್ಕೆ ಕಾಲಿಡುತ್ತಿದ್ದು, ಗುತ್ತಿಗೆ ಕಾರ್ಮಿಕರ ಸಂಕಷ್ಟ ಕೇಳುವವರು ಯಾರು ಇಲ್ಲವಾಗಿದೆ. ಯಾವುದೇ ಒಂದು ಹೋರಾಟ ಸುಧೀರ್ಘವಾಗಿ ನಡೆಸಿಕೊಂಡು ಬರುವುದು ಎಂದರೆ ಸುಲಭದ ಕೆಲಸವಲ್ಲ. ಕಾರ್ಮಿಕ ಮುಖಂಡರು ಹಾಗು ಗುತ್ತಿಗೆ ಕಾರ್ಮಿಕರು ಹೋರಾಟದಲ್ಲಿ ಹೊಂದಿರುವ ನಂಬಿಕೆ, ಭರವಸೆ, ವಿಶ್ವಾಸ ಹಾಗು ಎಲ್ಲವನ್ನು ಸಹಿಸಿಕೊಂಡು ಹೋಗುವ ಮನೋಭಾವ ಎಲ್ಲವೂ ಇದರಲ್ಲಿ ಅಡಗಿವೆ. 
    ಕಾರ್ಮಿಕರ ಹೋರಾಟ ಒಂದೆಡೆ ಇರಲಿ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮನಾಳುವ ಸರ್ಕಾರಗಳ ಇಚ್ಛಾಶಕ್ತಿ ಬಹಳ ಮುಖ್ಯವಾಗಿದೆ. ಜನಪ್ರತಿನಿಧಿಗಳ ಬದ್ಧತೆ ಬಹಳ ಮುಖ್ಯವಾಗಿದೆ. ಕಳೆದ ಸುಮಾರು ೩ ದಶಕಗಳಿಂದ ಎಲ್ಲಾ ರಾಜಕೀಯ ಪಕ್ಷಗಳು ಸಹ ಕಾರ್ಖಾನೆ ವಿಚಾರವನ್ನು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಬಂದಿದ್ದಾರೆ ಎಂಬುದು ಯಾರಿಗೂ ತಿಳಿಯದ ವಿಚಾರವಲ್ಲ. ಆದರೂ ಸಹ ನಮ್ಮನಾಳುವ ಸರ್ಕಾರ ಹಾಗು ರಾಜಕೀಯ ಪಕ್ಷಗಳ ಮೇಲೆ ಕಾರ್ಮಿಕರು ನಂಬಿಕೆ, ಭರವಸೆ, ವಿಶ್ವಾಸ ಇಂದಿಗೂ ಹೊಂದಿದ್ದಾರೆ. 

    ಸಾಮಾಜಿಕ ಜಾಲ ತಾಣಗಳಲ್ಲಿ ದ್ವೇಷಪೂರಿತ ಸುದ್ದಿಗಳು: 


ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಪುತ್ರ ಬಿ.ಎಸ್ ಬಸವೇಶ್‌ರವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಎಚ್.ಡಿ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಯಾಗಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದಾರೆ. 
    ಕೆಲವು ದಿನಗಳಿಂದ ವಾಟ್ಸಪ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಖಾನೆ ಅಭಿವೃದ್ಧಿಗೆ ಸಂಬಂಧಿಸಿದಂತೆ ದ್ವೇಷಪೂರಿತ ಸುದ್ದಿಗಳು ಹರಿದಾಡುತ್ತಿವೆ. ಕೇಂದ್ರ ಬೃಹತ್ ಕೈಗಾರಿಕೆ ಹಾಗು ಉಕ್ಕು ಸಚಿವ ಎಚ್.ಡಿ ಕುಮಾರಸ್ವಾಮಿಯವರು ಕಾರ್ಖಾನೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಸಕ ಬಿ.ಕೆ ಸಂಗಮೇಶ್ವರ್ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ ಎನ್ನುವ ವಿಡಿಯೋ ಹಾಗು ಪೋಸ್ಟ್‌ಗಳು ಹರಿದಾಡುತ್ತಿದ್ದು, ಈ ನಡುವೆ ಇದಕ್ಕೆ ಪ್ರತಿಯಾಗಿ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಪುತ್ರ ಬಿ.ಎಸ್ ಬಸವೇಶ್‌ರವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಎಚ್.ಡಿ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಯಾಗಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದಾರೆ. ಎರಡು ಸಹ ದ್ವೇಷಪೂರಿತವಾಗಿ ಕಂಡು ಬರುತ್ತಿವೆ. ಇದರಿಂದಾಗಿ ಗುತ್ತಿಗೆ ಕಾರ್ಮಿಕರಲ್ಲಿ ಆತಂಕ ಆವರಿಸಿಕೊಂಡಿದ್ದು, ಈ ನಡುವೆ ಇಂತಹ ದ್ವೇಷಪೂರಿತ ಸುದ್ದಿಗಳಿಂದ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮುಂದಾಗಿದ್ದಾರೆ. 

ಭದ್ರಾ ನದಿ ತೀರದಲ್ಲಿ ಪುನಃ ಸಾವಿರಾರು ಗೋವುಗಳ ಮೂಳೆ ತ್ಯಾಜ್ಯ ಪತ್ತೆ

ಹಳೇನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು 

ಭದ್ರಾವತಿ ನಗರದಲ್ಲಿ ಪುನಃ ಸಾವಿರಾರು ಗೋವುಗಳ ಮೂಳೆ ತ್ಯಾಜ್ಯ ಭದ್ರಾ ನದಿ ದಡದಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. 
     ಭದ್ರಾವತಿ: ನಗರದಲ್ಲಿ ಪುನಃ ಸಾವಿರಾರು ಗೋವುಗಳ ಮೂಳೆ ತ್ಯಾಜ್ಯ ಭದ್ರಾ ನದಿ ದಡದಲ್ಲಿ ಪತ್ತೆಯಾಗಿರುವ ಘಟನೆ ನಡೆದಿದ್ದು, ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. 
    ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಸಹ ಇಲ್ಲಿ ಮಾತ್ರ ಗೋ ಹತ್ಯೆ ನಿರಂತರವಾಗಿ ನಡೆಯುತ್ತಿದ್ದು, ಗೋ ಹತ್ಯೆ ಮಾಡುವವರನ್ನು ತಡೆಯಲು ಯಾರಿಗೂ ಸಾಧ್ಯವಾಗಿಲ್ಲ ಎಂಬ ಆರೋಪ ಇಲ್ಲಿನ ಹಿಂದೂಪರ ಸಂಘಟನೆಗಳಿಂದ ಕೇಳಿ ಬರುತ್ತಿದೆ. ಇದಕ್ಕೆ ಎಂಬಂತೆ ಹಲವಾರು ಘಟನೆಗಳು ನಡೆದಿದ್ದು, ಅಲ್ಲದೆ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಪೊಲೀಸ್ ವ್ಯವಸ್ಥೆ ವೈಫಲ್ಯವೋ ಅಥವಾ ಆಡಳಿತ ವ್ಯವಸ್ಥೆಯಲ್ಲಿನ ವೈಫಲ್ಯವೋ ಎಂದು ಹಿಂದೂಪರ ಸಂಘಟನೆಗಳ ಮುಖಂಡರು ಪ್ರಶ್ನಿಸಿದ್ದಾರೆ. 
    ಪ್ರಸ್ತುತ ಒಂದೆಡೆ ರಾಜ್ಯದಲ್ಲಿ ಗೋವುಗಳ ಕೆಚ್ಚಲು ಕೊಯ್ದ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಇಂತಹ ಸಂದರ್ಭದಲ್ಲಿ ಇದೀಗ ಹಳೇನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹಳೇ ಸೀಗೇಬಾಗಿ ಭದ್ರಾ ನದಿ ದಡದಲ್ಲಿ ಸಾವಿರಾರು ಗೋವುಗಳ ತಲೆ ಬುರುಡೆಗಳು, ಕೊಂಬುಗಳು ಹಾಗು ಗೋವುಗಳ ದೇಹದ ಇನ್ನಿತರ ಭಾಗದ ಮೂಳೆಗಳು ಪತ್ತೆಯಾಗಿವೆ. 
    ಗೋವುಗಳ ಮೂಳೆಗಳು ಎಲ್ಲಿ, ಯಾವಾಗ ಪತ್ತೆ?
    ಹಿಂದೂಪರ ಸಂಘಟನೆಯ ಮುಖಂಡ ದೇವರಾಜರವರು ಜ.೧೮ರಂದು ಸಂಜೆ ೪ ಗಂಟೆ ಸಮಯದಲ್ಲಿ ಸ್ನೇಹಿತರಾದ ಯೇಸುಕುಮಾರ್ ಮತ್ತು ತೀರ್ಥೇಶ್ ಅವರೊಂದಿಗೆ ಹೊಳೆಹೊನ್ನೂರು ರಸ್ತೆ, ಹಳೇ ಸೀಗೆಬಾಗಿ ಕಡೆಗೆ ಹೋಗುವ ಕ್ರಾಸ್ ಹತ್ತಿರದ ಬಸ್ ನಿಲ್ದಾಣ ಎದುರುಗಡೆ ಅಡಕೆ ತೋಟದ ಹಿಂಭಾಗಕ್ಕೆ ಹೋದಾಗ ಭದ್ರಾ ನದಿ ದಡದಲ್ಲಿ ಸಾವಿರಾರು ಗೋವುಗಳ ಮೂಳೆಗಳು ಪತ್ತೆಯಾಗಿವೆ. ಮೂಳೆಗಳ ರಾಶಿ ಸುತ್ತ ಟಾರ್ಪಲ್‌ನಿಂದ ಮರೆ ಮಾಡಿರುವುದು ಕಂಡು ಬಂದಿದೆ. 
    ಈ ಸಂಬಂಧ ದೇವರಾಜರವರು ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮೂಳೆಗಳ ರಾಶಿಯಿಂದ ದುರ್ವಾಸನೆ ಬರುತ್ತಿದ್ದು, ಅಲ್ಲದೆ ಅಪಾಯಕಾರಿಯಾದ ರೋಗದ ಸೋಂಕುಗಳು ಹರಡುವ ಭೀತಿ ಉಂಟಾಗಿದೆ. ಅಲ್ಲದೆ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ಆದರೂ ಸಹ ಗೋವುಗಳನ್ನು ಹತ್ಯೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಮೂಳೆಗಳನ್ನು ಸಂಗ್ರಹಿಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 
    ಕೆಲವು ತಿಂಗಳುಗಳ ಹಿಂದೆ ನಗರದಲ್ಲಿ ಗೋವಿನ ರಾಶಿ ರಾಶಿ ಮೂಳೆಗಳನ್ನು ಶೆಡ್‌ನಲ್ಲಿ ಸಂಗ್ರಹಿಸಿಡಲಾಗಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಮತ್ತೊಂದು ಪ್ರಕರಣದಲ್ಲಿ ಗೋವಿನ ತ್ಯಾಜ್ಯ ಚೀಲಗಳಲ್ಲಿ ತುಂಬಿ ಭದ್ರಾ ನದಿ ದಡದಲ್ಲಿ ಎಸೆದಿರುವುದು ಪತ್ತೆಯಾಗಿತ್ತು.  ಈ ನಡುವೆ ಗೋವುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿ ಸಿಕ್ಕಿ ಬಿದ್ದಿರುವ ಘಟನೆಗಳು ಸಹ ನಡೆದಿವೆ. 

ಕುವೆಂಪು ವಿ.ವಿ ವಿದ್ಯಾ ವಿಷಯಕ ಪರಿಷತ್‌ಗೆ ಡಾ. ಎಸ್.ಪಿ ರಾಕೇಶ್ ನಾಮನಿರ್ದೇಶನ

ಡಾ.ಎಸ್.ಪಿ ರಾಕೇಶ್ 
    ಭದ್ರಾವತಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತದ ನಗರದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಆಡಳಿತ ಅಧಿಕಾರಿ, ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಪಿ ರಾಕೇಶ್‌ರವರನ್ನು ಎರಡು ವರ್ಷಗಳ ಅವಧಿಗೆ ಕುವೆಂಪು ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್ತಿನ ಸದಸ್ಯರಾಗಿ ನಾಮನಿರ್ದೇಶನಗೊಳಿಸಲಾಗಿದೆ. 
    ರಾಕೇಶ್‌ರವರು ಹಲವಾರು ವರ್ಷಗಳಿಂದ ವಿದ್ಯಾಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕುವೆಂಪು ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿಗೆ ವಿವಿಧ ಕಾಲೇಜುಗಳ ಒಟ್ಟು ೧೦ ಮಂದಿ ಪ್ರಾಂಶುಪಾಲರನ್ನು ೨ ವರ್ಷಗಳ ಅವಧಿಗೆ ಕುಲಪತಿಗಳು ನಾಮನಿರ್ದೇಶನಗೊಳಿಸಿ ಅಧಿಸೂಚನೆ ಹೊರಡಿಸಿದ್ದಾರೆ. 
    ಈ ಪೈಕಿ ಡಾ. ಎಸ್.ಪಿ ರಾಕೇಶ್ ಸಹ ಒಬ್ಬರಾಗಿದ್ದು, ಇವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ, ವಿದ್ಯಾ ಸಂಸ್ಥೆಯ ಪ್ರಧಾನ ಪೋಷಕ ಸಿ.ಎಸ್ ಷಡಕ್ಷರಿ, ಅಧ್ಯಕ್ಷ ಬಿ. ಸಿದ್ದಬಸಪ್ಪ ಹಾಗೂ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಎಲ್ಲಾ ಪದಾಧಿಕಾರಿಗಳು, ನಿರ್ದೇಶಕರು,  ಎಲ್ಲಾ ವಿಭಾಗದ ಮುಖ್ಯಸ್ಥರು ಹಾಗೂ ಬೋಧಕ ಮತ್ತು  ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.