ದ್ವೇಷಪೂರಿತ ಸುದ್ದಿಗಳಿಂದ ಆತಂಕ, ಅಂತರ
ಕಾರ್ಖಾನೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿಯವರ ಹೇಳಿಕೆಯನ್ನು ಬಳಸಿಕೊಂಡು ದ್ವೇಷಪೂರಿತ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವುದು.
ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ಹಿಂಪಡೆಯಬೇಕು, ಅಗತ್ಯ ಬಂಡವಾಳ ತೊಡಗಿಸಿ ಪುನಶ್ಚೇತನಗೊಳಿಸಬೇಕು ಹಾಗು ಗುತ್ತಿಗೆ ಕಾರ್ಮಿಕರಿಗೆ ತಿಂಗಳ ಪೂರ್ತಿ ಕೆಲಸ ಕಲ್ಪಿಸಿಕೊಡಬೇಕು ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟ ಭಾನುವಾರ ೨ ವರ್ಷ ಪೂರೈಸಿದೆ. ಈ ನಡುವೆ ಕಾರ್ಖಾನೆ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜಕೀಯ ದ್ವೇಷಪೂರಿತ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಕಳೆದ ೨ ವರ್ಷಗಳಿಂದ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟ ಕ್ಷೇತ್ರದ ಇತಿಹಾಸದಲ್ಲಿ ಅತಿ ದೊಡ್ಡ ಹೋರಾಟ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಮತ್ತೊಂದೆಡೆ ಹೋರಾಟ ೩ನೇ ವರ್ಷಕ್ಕೆ ಕಾಲಿಡುತ್ತಿದ್ದು, ಗುತ್ತಿಗೆ ಕಾರ್ಮಿಕರ ಸಂಕಷ್ಟ ಕೇಳುವವರು ಯಾರು ಇಲ್ಲವಾಗಿದೆ. ಯಾವುದೇ ಒಂದು ಹೋರಾಟ ಸುಧೀರ್ಘವಾಗಿ ನಡೆಸಿಕೊಂಡು ಬರುವುದು ಎಂದರೆ ಸುಲಭದ ಕೆಲಸವಲ್ಲ. ಕಾರ್ಮಿಕ ಮುಖಂಡರು ಹಾಗು ಗುತ್ತಿಗೆ ಕಾರ್ಮಿಕರು ಹೋರಾಟದಲ್ಲಿ ಹೊಂದಿರುವ ನಂಬಿಕೆ, ಭರವಸೆ, ವಿಶ್ವಾಸ ಹಾಗು ಎಲ್ಲವನ್ನು ಸಹಿಸಿಕೊಂಡು ಹೋಗುವ ಮನೋಭಾವ ಎಲ್ಲವೂ ಇದರಲ್ಲಿ ಅಡಗಿವೆ.
ಕಾರ್ಮಿಕರ ಹೋರಾಟ ಒಂದೆಡೆ ಇರಲಿ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮನಾಳುವ ಸರ್ಕಾರಗಳ ಇಚ್ಛಾಶಕ್ತಿ ಬಹಳ ಮುಖ್ಯವಾಗಿದೆ. ಜನಪ್ರತಿನಿಧಿಗಳ ಬದ್ಧತೆ ಬಹಳ ಮುಖ್ಯವಾಗಿದೆ. ಕಳೆದ ಸುಮಾರು ೩ ದಶಕಗಳಿಂದ ಎಲ್ಲಾ ರಾಜಕೀಯ ಪಕ್ಷಗಳು ಸಹ ಕಾರ್ಖಾನೆ ವಿಚಾರವನ್ನು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಬಂದಿದ್ದಾರೆ ಎಂಬುದು ಯಾರಿಗೂ ತಿಳಿಯದ ವಿಚಾರವಲ್ಲ. ಆದರೂ ಸಹ ನಮ್ಮನಾಳುವ ಸರ್ಕಾರ ಹಾಗು ರಾಜಕೀಯ ಪಕ್ಷಗಳ ಮೇಲೆ ಕಾರ್ಮಿಕರು ನಂಬಿಕೆ, ಭರವಸೆ, ವಿಶ್ವಾಸ ಇಂದಿಗೂ ಹೊಂದಿದ್ದಾರೆ.
ಸಾಮಾಜಿಕ ಜಾಲ ತಾಣಗಳಲ್ಲಿ ದ್ವೇಷಪೂರಿತ ಸುದ್ದಿಗಳು:
ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಪುತ್ರ ಬಿ.ಎಸ್ ಬಸವೇಶ್‌ರವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಎಚ್.ಡಿ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಯಾಗಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದಾರೆ.
ಕೆಲವು ದಿನಗಳಿಂದ ವಾಟ್ಸಪ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಖಾನೆ ಅಭಿವೃದ್ಧಿಗೆ ಸಂಬಂಧಿಸಿದಂತೆ ದ್ವೇಷಪೂರಿತ ಸುದ್ದಿಗಳು ಹರಿದಾಡುತ್ತಿವೆ. ಕೇಂದ್ರ ಬೃಹತ್ ಕೈಗಾರಿಕೆ ಹಾಗು ಉಕ್ಕು ಸಚಿವ ಎಚ್.ಡಿ ಕುಮಾರಸ್ವಾಮಿಯವರು ಕಾರ್ಖಾನೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಸಕ ಬಿ.ಕೆ ಸಂಗಮೇಶ್ವರ್ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ ಎನ್ನುವ ವಿಡಿಯೋ ಹಾಗು ಪೋಸ್ಟ್‌ಗಳು ಹರಿದಾಡುತ್ತಿದ್ದು, ಈ ನಡುವೆ ಇದಕ್ಕೆ ಪ್ರತಿಯಾಗಿ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಪುತ್ರ ಬಿ.ಎಸ್ ಬಸವೇಶ್‌ರವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಎಚ್.ಡಿ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಯಾಗಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದಾರೆ. ಎರಡು ಸಹ ದ್ವೇಷಪೂರಿತವಾಗಿ ಕಂಡು ಬರುತ್ತಿವೆ. ಇದರಿಂದಾಗಿ ಗುತ್ತಿಗೆ ಕಾರ್ಮಿಕರಲ್ಲಿ ಆತಂಕ ಆವರಿಸಿಕೊಂಡಿದ್ದು, ಈ ನಡುವೆ ಇಂತಹ ದ್ವೇಷಪೂರಿತ ಸುದ್ದಿಗಳಿಂದ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮುಂದಾಗಿದ್ದಾರೆ.
No comments:
Post a Comment