Tuesday, December 10, 2024

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಸಂತಾಪ

    

ಭದ್ರಾವತಿ: ಹಿರಿಯ ರಾಜಕೀಯ ಮುತ್ಸದ್ದಿ, ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣರವರ ನಿಧನಕ್ಕೆ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸಂತಾಪ ಸೂಚಿಸಿದ್ದಾರೆ. 
    ಹಿರಿಯ ರಾಜಕೀಯ ಮುತ್ಸದ್ದಿ ಎಸ್.ಎಂ ಕೃಷ್ಣರವರ ನಿಧನ ಮನಸ್ಸಿಗೆ ತುಂಬಾ ನೋವುಂಟು ಮಾಡಿದ್ದು, ಇವರು ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಹಾಗು ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುವ ಮೂಲಕ ರಾಜ್ಯ ಹಾಗು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳ ಪಿತಾಮಹಾರಾಗಿದ್ದು, ಬೆಂಗಳೂರು ನಗರ ವಿಶ್ವಕ್ಕೆ ಪರಿಚಯಿಸಿದ ಹೆಗ್ಗಳಿಕೆ ಇವರದ್ದಾಗಿದೆ. ರಾಜಕಾರಣದಲ್ಲಿ ಹಿರಿಯ ಮುತ್ಸದ್ದಿಗಳಾಗಿ, ಅಜಾತ ಶತೃಗಳಾಗಿದ್ದರು. ಇವರ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಇವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸುವ ಮೂಲಕ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಸಂತಾಪ ಸೂಚಿಸಿದ್ದಾರೆ. 

ಶ್ರೀ ಚೌಡೇಶ್ವರಿ ದೇವಸ್ಥಾನ ಅಭಿವೃದ್ಧಿಗೆ ೧ ಲಕ್ಷ ರು. ಆರ್ಥಿಕ ನೆರವು

ಭದ್ರಾವತಿ ನಗರಸಭೆ ವ್ಯಾಪ್ತಿಯ ಸುರಗಿತೋಪು ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-೧ರ  ವತಿಯಿಂದ ೧ ಲಕ್ಷ ರು. ಆರ್ಥಿಕ ನೆರವಿನ ಚೆಕ್ ಮಂಗಳವಾರ ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್‌ಗೆ ವಿತರಿಸಲಾಯಿತು. 
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಸುರಗಿತೋಪು ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-೧ರ  ವತಿಯಿಂದ ೧ ಲಕ್ಷ ರು. ಆರ್ಥಿಕ ನೆರವಿನ ಚೆಕ್ ಮಂಗಳವಾರ ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್‌ಗೆ ವಿತರಿಸಲಾಯಿತು. 
    ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ಡಾ. ವೀರೇಂದ್ರ ಹೆಗಡೆ ಅವರನ್ನು ಭೇಟಿ ಮಾಡಿ ಚೌಡೇಶ್ವರಿ ಅಮ್ಮನವರ ಗರ್ಭಗುಡಿ ಹಾಗೂ ದೇವಸ್ಥಾನ ಅಭಿವೃದ್ಧಿಗೆ ನೆರವು ನೀಡುವಂತೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿರುವ ಡಾ. ವೀರೇಂದ್ರ ಹೆಗಡೆಯವರು ೧ ಲಕ್ಷ ರು. ಆರ್ಥಿಕ ನೆರವು ನೀಡಿದ್ದಾರೆ. 
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-೧ರ ಯೋಜನಾಧಿಕಾರಿ ಪ್ರಕಾಶ್ ವೈ ನಾಯಕರವರು ದೇವಸ್ಥಾನಕ್ಕೆ ಭೇಟಿ ನೀಡಿ ಟ್ರಸ್ಟ್‌ಗೆ ಚೆಕ್ ವಿತರಿಸಿದರು.  ಯೋಜನೆ ಮೇಲ್ವಿಚಾರಕ ವೀರೇಶ್, ಸೇವಾ ಪ್ರತಿನಿಧಿ ಎಸ್. ಅನಸೂಯ, ನಗರಸಭೆ ಸದಸ್ಯ ಜಯಶೀಲ ಸುರೇಶ್, ದೇವಸ್ಥಾನ ಟ್ರಸ್ಟ್ ಪ್ರಮುಖರಾದ ರಾಮಕೃಷ್ಣ, ಕಾಶಿ, ಉಮೇಶ್, ದೇವಸ್ಥಾನ ಪ್ರಧಾನ ಅರ್ಚಕ ಮುರುಳಿಧರ ಹಾಗು ಸ್ಥಳೀಯರು ಉಪಸ್ಥಿತರಿದ್ದರು.  

ರಾಜ್ಯದ ವಿವಿಧೆಡೆ ರಸ್ತೆ ಸಂಚಾರಿ ನಿಯಮ ಉಲ್ಲಂಘನೆ : ಲಾರಿ ಚಾಲಕನಿಂದ ದಂಡ ವಸೂಲಿ

ರಾಜ್ಯದ ವಿವಿಧೆಡೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಲಾರಿ ಚಾಲಕನಿಂದ ಭದ್ರಾವತಿ ನಗರದ ಸಂಚಾರಿ ಠಾಣೆ ಪೊಲೀಸರು ದಂಡ ವಸೂಲಾತಿ ಮಾಡಿರುವ ಘಟನೆ ನಡೆದಿದೆ. 
    ಭದ್ರಾವತಿ : ರಾಜ್ಯದ ವಿವಿಧೆಡೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಲಾರಿ ಚಾಲಕನಿಂದ ನಗರದ ಸಂಚಾರಿ ಠಾಣೆ ಪೊಲೀಸರು ದಂಡ ವಸೂಲಾತಿ ಮಾಡಿರುವ ಘಟನೆ ನಡೆದಿದೆ. 
    ಸಂಚಾರಿ ಪೊಲೀಸ್ ಠಾಣಾಧಿಕಾರಿ ಶಾಂತಲ ಹಾಗು ಸಿಬ್ಬಂದಿಗಳು ವಾಹನಗಳ ತಪಾಸಣೆ ಕರ್ತವ್ಯ ನಿರ್ವಹಣೆಯಲ್ಲಿದ್ದಾಗ ರಾಜ್ಯದ ವಿವಿಧೆಡೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿರುವ ಲಾರಿ ಚಾಲಕನೋರ್ವ ಸಿಕ್ಕಿಬಿದ್ದಿದ್ದು, ಈ ಚಾಲಕನ ವಿರುದ್ಧ ರಾಜ್ಯದ ವಿವಿಧೆಡೆ ಒಟ್ಟು ೧೦ ಐಎಂವಿ ಪ್ರಕರಣಗಳು ದಾಖಲಾಗಿರುವ ಮಾಹಿತಿ ಬಂದಿದೆ. ತಕ್ಷಣ ಚಾಲಕನಿಂದ ಒಟ್ಟು ೫,೦೦೦ ರು. ದಂಡ ವಸೂಲಾತಿ ಮಾಡಲಾಗಿದೆ. 
    ರಾಜ್ಯದ ಬೇರೆಡೆ ರಸ್ತೆ ಸಂಚಾರಿ ನಿಯಮ ಉಲ್ಲಂಘಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ಸಂಚಾರಿ ಠಾಣೆಯಲ್ಲಿ ದಂಡ ಪಾವತಿಸಬಹುದಾಗಿದೆ. ನಗರದಲ್ಲೂ ಈ ಸೌಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳುವಂತೆ ಠಾಣಾಧಿಕಾರಿ ಶಾಂತಲ ಕೋರಿದ್ದಾರೆ.      

ಬಾರಂದೂರು ಗ್ರಾಮದಲ್ಲಿ ರೋಟರಿ ಸಮುದಾಯ ದಳ ಅಸ್ತಿತ್ವಕ್ಕೆ

ನೂತನ ಅಧ್ಯಕ್ಷರಾಗಿ ಬಿ.ಎ ಪ್ರಸನ್ನಕುಮಾರ್ ನೇಮಕ 

ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮದಲ್ಲಿ ವಂದೇ ಮಾತರಂ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನೂತನ ರೋಟರಿ ಸಮುದಾಯ ದಳ ಉದ್ಘಾಟಿಸಲಾಗಿದ್ದು, ನೂತನ ಅಧ್ಯಕ್ಷರಾಗಿ ವಂದೇ ಮಾತರಂ ಟ್ರಸ್ಟ್‌ನ ಬಿ.ಎ ಪ್ರಸನ್ನ ಕುಮಾರ್ ಅವರನ್ನು ನೇಮಕಗೊಳಿಸಲಾಗಿದೆ. 
    ಭದ್ರಾವತಿ: ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರೋಟರಿ ಕ್ಲಬ್ ಗ್ರಾಮೀಣ ಭಾಗದಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ನೂತನವಾಗಿ ರೋಟರಿ ಸಮುದಾಯ ದಳ ಅಸ್ತಿತ್ವಕ್ಕೆ ತಂದಿದೆ. 
     ತಾಲೂಕಿನ ಬಾರಂದೂರು ಗ್ರಾಮದಲ್ಲಿ ವಂದೇ ಮಾತರಂ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನೂತನ ರೋಟರಿ ಸಮುದಾಯ ದಳ ಉದ್ಘಾಟಿಸಲಾಗಿದ್ದು, ನೂತನ ಅಧ್ಯಕ್ಷರಾಗಿ ವಂದೇ ಮಾತರಂ ಟ್ರಸ್ಟ್‌ನ ಬಿ.ಎ ಪ್ರಸನ್ನ ಕುಮಾರ್ ಅವರನ್ನು ನೇಮಕಗೊಳಿಸಲಾಗಿದೆ. ರೋಟರಿ ಕ್ಲಬ್ ಸಹಾಯಕ ಜಿಲ್ಲಾ ಗೌರ್‍ನರ್ ಎಸ್.ಆರ್ ನಾಗರಾಜ್ ನೂತನ ಅಧ್ಯಕ್ಷರ ನೇಮಕ ಘೋಷಿಸಿ ಅಭಿನಂದಿಸಿದರು.  
    ಈಗಾಗಲೇ ವಂದೇ ಮಾತರಂ ಟ್ರಸ್ಟ್ ಮೂಲಕ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು, ಪ್ರಸನ್ನಕುಮಾರ್‌ರವರು ಈ ಮೂಲಕ ಗುರುತಿಸಿಕೊಂಡು ಹೆಚ್ಚಿನ ಅನುಭವ ಹೊಂದಿದ್ದಾರೆ. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರೋಟರಿ ಸಮುದಾಯ ದಳ ಯಶಸ್ವಿಯಾಗಿ ಸಂಘಟಿಸುವ ಮೂಲಕ ಮುನ್ನಡೆಸಿಕೊಂಡು ಹೋಗುವ ದೃಢ ವಿಶ್ವಾಸ ಹೊಂದಿದ್ದಾರೆ. 
    ರೋಟರಿ ಕ್ಲಬ್ ವತಿಯಿಂದ ಪ್ರಸ್ತುತ ೩ ಗ್ರಾಮಗಳಲ್ಲಿ ರೋಟರಿ ಸಮುದಾಯ ದಳ ಅಸ್ತಿತ್ವಕ್ಕೆ ತರುವ ಗುರಿ ಹೊಂದಿದ್ದು, ಪ್ರಪ್ರಥಮ ಬಾರಿಗೆ ಬಾರಂದೂರು ಗ್ರಾಮದಲ್ಲಿ ಅಸ್ತಿತ್ವಕ್ಕೆ ತರಲಾಗಿದೆ. ರೋಟರಿ ಕ್ಲಬ್ ಅಧ್ಯಕ್ಷ ರಾಘವೇಂದ್ರ ಉಪಾಧ್ಯಾಯ, ರೋಟರಿ ಹಿರಿಯ ಸದಸ್ಯರಾದ ಡಾ. ಆರ್.ಸಿ ಬೆಂಗಳೂರ್, ವಂದೇ ಮಾತರಂ ಟ್ರಸ್ಟ್ ಕಾರ್ಯದರ್ಶಿ ಕಾರ್ತಿಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
 
ಡಿ೧೦-ಬಿಡಿವಿಟಿ

Mob: 9738801478
: 9482007466