Sunday, February 13, 2022

ಧಾರ್ಮಿಕ ಉಡುಪು ವಿವಾದ : ಶಾಲಾ-ಕಾಲೇಜುಗಳ ಬಳಿ ನಿಷೇದಾಜ್ಞೆ ಜಾರಿ

    ಭದ್ರಾವತಿ, ಫೆ. ೧೩: ವಿದ್ಯಾಸಂಸ್ಥೆಗಳ ಆವರಣದಲ್ಲಿ ಧಾರ್ಮಿಕ ಉಡುಪುಗಳನ್ನು ಧರಿಸುವ ಸಂಬಂಧ ಉಂಟಾಗಿರುವ ವಿವಾದದ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಮುಂಜಾಗ್ರತಾ ಕ್ರಮವಾಗಿ ತಹಸೀಲ್ದಾರ್ ಆರ್. ಪ್ರದೀಪ್‌ರವರು ಫೆ.೧೪ರಂದು ಬೆಳಿಗ್ಗೆ ೬ ಗಂಟೆಯಿಂದ ಫೆ.೧೫ರ ರಾತ್ರಿ ೧೦ ಗಂಟೆವರೆಗೆ ಎಲ್ಲಾ ಶಾಲಾ-ಕಾಲೇಜುಗಳ ಆವರಣದಿಂದ ೨೦೦ ಮೀಟರ್ ಅಂತರದಲ್ಲಿ ಕಲಂ ೧೪೪ರ ಅಡಿ ನಿಷೇದಾಜ್ಞೆ ಜಾರಿಗೊಳಿಸಿ ಭಾನುವಾರ ಆದೇಶ ಹೊರಡಿಸಿದ್ದಾರೆ.
    ವಿದ್ಯಾಸಂಸ್ಥೆಗಳ ಆವರಣದಲ್ಲಿ ಧಾರ್ಮಿಕ ಉಡುಪು(ಹಿಜಾಬ್, ಕೇಸರಿ ಶಾಲು ಇತ್ಯಾದಿ)ಗಳನ್ನು ಧರಿಸುವ ಸಂಬಂಧ ಉಂಟಾಗಿರುವ ವಿವಾದದ ಹಿನ್ನಲೆಯಲ್ಲಿ ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆ ಪ್ರಗತಿಯಲ್ಲಿದ್ದು, ನ್ಯಾಯಾಲಯದ ಮಧ್ಯಂತರ ಆದೇಶದ ನಿರ್ದೇಶನಗಳಂತೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ನಡೆಸಲು ಸರ್ಕಾರ ನಿರ್ಧರಿಸಿದೆ. ಈ ನಡುವೆ ಧಾರ್ಮಿಕ ಉಡುಪು(ಹಿಜಾಬ್, ಕೇಸರಿ ಶಾಲು ಇತ್ಯಾದಿ)ಗಳನ್ನು ಧರಿಸುವ ಸಂಬಂಧ ಬೆಂಬಲಿಸಿ ಅಥವಾ ವಿರೋಧಿಸಿ ಪ್ರತಿಭಟನೆ ಅಥವಾ ಮೆರವಣಿಗೆಗಳು ನಡೆಯುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಮುಂಜಾಗ್ರತಾ ಕ್ರಮವಾಗಿ ಉಪವಿಭಾಗಾಧಿಕಾರಿಗಳ ಉಪಸ್ಥಿತಿಯಲ್ಲಿ ತಾಲೂಕು ಮಟ್ಟದ ಕಂದಾಯ, ಪೊಲೀಸ್ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ನಂತರ ನಿಷೇದಾಜ್ಞೆ ಜಾರಿಗೊಳಿಸಿದ್ದಾರೆ. ತಾಲೂಕಿನಲ್ಲಿ ನಿಷೇದಾಜ್ಞೆ ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಪ್ರತಿಯೊಬ್ಬರು ಶಾಂತಿ ಸುವ್ಯವಸ್ಥೆಗೆ ಸಹಕರಿಸುವಂತೆ ಕೋರಿದ್ದಾರೆ.

ದಲಿತ ಮುಖಂಡ ರಂಗನಾಥ್ ನಿಧನ


ರಂಗನಾಥ್
    ಭದ್ರಾವತಿ, ಫೆ. ೧೩: ನಗರದ ಹೊಸಬುಳ್ಳಾಪುರ ನಿವಾಸಿ, ದಲಿತ ಮುಖಂಡ ರಂಗನಾಥ್(೪೭) ಅನಾರೋಗ್ಯದಿಂದ ನಿಧನ ಹೊಂದಿದರು.
    ಪತ್ನಿ, ಒಂದು ಗಂಡು, ಒಂದು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಮೃತರ ಅಂತ್ಯಕ್ರಿಯೆ ಭಾನುವಾರ ಬೈಪಾಸ್ ರಸ್ತೆಯಲ್ಲಿರುವ  ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ರಂಗನಾಥ್‌ರವರು ಹಲವಾರು ದಲಿತ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಮೃತರ ನಿಧನಕ್ಕೆ ಡಿಎಸ್‌ಎಸ್ ಮುಖಂಡರಾದ ಕಾಣಿಕ್‌ರಾಜ್ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

ಫೆ.೨೮ರಂದು ವಿಇಎಸ್ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸರ್ವ ಸದಸ್ಯರ ಸಭೆ

ಭದ್ರಾವತಿ, ಫೆ. ೧೩: ನಗರದ ಹೊಸಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸರ್ವ ಸದಸ್ಯರ ವಿಶೇಷ ಮಹಾಸಭೆ ಫೆ.೨೮ರಂದು ಸಂಜೆ ೫.೩೦ಕ್ಕೆ ಸಂಸ್ಥೆಯ ಆಡಳಿತ ಕಛೇರಿಯಲ್ಲಿ ನಡೆಯಲಿದೆ.
    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಸಭೆಗೆ  ಆಗಮಿಸಲಿದ್ದು, ವಿದ್ಯಾಸಂಸ್ಥೆ ಛೇರ್‍ಮನ್ ಬಿ.ಎಲ್ ರಂಗಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿದ್ಯಾಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ನಿರ್ದೇಶಕರು ಹಾಗು ಸದಸ್ಯರು ಪಾಲ್ಗೊಳ್ಳುವಂತೆ ಕೋರಲಾಗಿದೆ.

ಶುದ್ಧ ಕುಡಿಯುವ ನೀರಿನ ವ್ಯವಸ್ಥೆ : ಕೃತಜ್ಞತೆ

ಭದ್ರಾವತಿ ತಾಲೂಕಿನ ಬಾರಂದೂರು ಸರ್ಕಾರಿ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಟ್ಟ ಸ್ನೇಹ ಜೀವಿ ಬಳಗಕ್ಕೆ ಶಾಲಾ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸುವ ಜೊತೆಗೆ ಬಳಗದ ಪೊಲೀಸ್ ಉಮೇಶ್ ಅವರನ್ನು ಸನ್ಮಾನಿಸಿ ಗೌರವಿಸಿತು.
    ಭದ್ರಾವತಿ, ಫೆ. ೧೩: ತಾಲೂಕಿನ ಬಾರಂದೂರು ಸರ್ಕಾರಿ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಟ್ಟ ಸ್ನೇಹ ಜೀವಿ ಬಳಗಕ್ಕೆ ಶಾಲಾ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದೆ.
    ಸುಮಾರು ೪೦ ಸಾವಿರ ರು. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಟ್ಟಿರುವ ಸ್ನೇಹ ಜೀವಿ ಬಳಗದ ಸೇವಾ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸುವ ಜೊತೆಗೆ ಬಳಗದ ಪೊಲೀಸ್ ಉಮೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಬಳಗದ ಪ್ರಮುಖರಾದ ಮುಳ್ಕೆರೆ ಲೋಕೇಶ್, ಮೇಘರಾಜ್, ಸುಹಾಸ್, ಕೃಷ್ಣ ಹಾಗು ಶಾಲಾ ಆಡಳಿತ ಮಂಡಳಿ ಪ್ರಮುಖರು, ಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.