Wednesday, October 6, 2021

ವೈದ್ಯ ಸಾಹಿತಿಗೆ ಒಲಿದು ಬಂದ ನಾಡಹಬ್ಬ ದಸರಾ ಉದ್ಘಾಟನೆ ಭಾಗ್ಯ

ಅ.೭ರಂದು ಬೆಳಿಗ್ಗೆ ೧೦.೩೦ಕ್ಕೆ ದಸರಾ ಕಾರ್ಯಕ್ರಮ ಉದ್ಘಾಟಿಸಲಿರುವ ಡಾ. ಕೃಷ್ಣ ಎಸ್ ಭಟ್

ಕೃಷ್ಣ ಎಸ್ ಭಟ್
    ಭದ್ರಾವತಿ, ಅ. ೬: ಈ ಬಾರಿ ನಗರಸಭೆ ವತಿಯಿಂದ ಆಯೋಜಿಸಲಾಗಿರುವ ನಾಡಹಬ್ಬ ದಸರಾ ಉದ್ಘಾಟನೆ ಭಾಗ್ಯ ಸಾಹಿತಿಗಳು, ವೈದ್ಯರು ಆದ ಡಾ. ಕೃಷ್ಣ ಎಸ್ ಭಟ್ ಅವರಿಗೆ ಒಲಿದು ಬಂದಿದೆ.
    ೭೩ರ ವಯೋಮಾನದ ಕೃಷ್ಣ ಎಸ್ ಭಟ್ ಅವರು ನಗರದ ಜನತೆಗೆ ಚಿರಪರಿಚಿತರಾಗಿದ್ದು, ೧೯೭೩ರಲ್ಲಿ ಗ್ರಾಮೀಣ ಸೇವೆಯೊಂದಿಗೆ ವೈದ್ಯಕೀಯ ವೃತ್ತಿ ಜೀವನ ಆರಂಭಿಸಿದರು.  ೧೯೭೬ರಲ್ಲಿ ನಗರದಲ್ಲಿ ವಿವೇಕ್ ಕ್ಲಿನಿಕ್ ಆರಂಭಿಸಿ ಇಲ್ಲಿಯವರೆಗೂ ಕುಟುಂಬ ವೈದ್ಯರಾಗಿ ಗುರುತಿಸಿಕೊಂಡಿದ್ದಾರೆ.
     ಭಟ್‌ರವರು ಸಾಮಾಜಿಕ ಮನೋಭಾವನೆಯೊಂದಿಗೆ ಸಮುದಾಯದ ಆರೋಗ್ಯದ ಬಗ್ಗೆ ಸಹ ಹೆಚ್ಚಿನ ಕಾಳಜಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಸಂಜೀವಿನಿ ಮತ್ತು ಚೇತನ ವೇದಿಕೆಗಳನ್ನು ಹುಟ್ಟು ಹಾಕುವ ಮೂಲಕ ಕಳೆದ ಸುಮಾರು ೩೦ ವರ್ಷಗಳಿಂದ ನಿರಂತರವಾಗಿ ಆರೋಗ್ಯ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
    ವೈದ್ಯ ವೃತ್ತಿ ಜೊತೆಗೆ ವಿಜ್ಞಾನ, ಸಂಗೀತ, ಸಾಹಿತ್ಯ ಕ್ಷೇತ್ರಗಳಲ್ಲೂ ಹೆಚ್ಚಿನ ಆಸಕ್ತಿ ಹೊಂದಿರುವ ಇವರು ವಿಶ್ವೇಶ್ವರ ವಿಜ್ಞಾನ ಕೇಂದ್ರ, ಕನ್ನಡ ಸಾಹಿತ್ಯ ಪರಿಷತ್, ಶಿವಮೊಗ್ಗದ ಕ್ಷೇಮ ಟ್ರಸ್ಟ್, ಭೂಮಿಕಾ, ಸಂಸಾರ, ಸಂಸ್ಕೃತಿ ಸೌರಭ, ಹವ್ಯಕ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಆರೋಗ್ಯ ಜಾಗೃತಿ ಕಾರ್ಯಕ್ರಮಗಳಲ್ಲಿ, ಸಾಹಿತ್ಯ ವೇದಿಕೆಗಳಲ್ಲಿ, ಶಾಲಾ-ಕಾಲೇಜುಗಳ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕ್ರಿಯಾಶೀಲರಾಗಿದ್ದಾರೆ.
    ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಶಿವಮೊಗ್ಗ ಜಿಲ್ಲಾ ಕನ್ನಡ ವೈದ್ಯಕೀಯ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಭಾರತೀಯ ವೈದ್ಯಕೀಯ ಸಂಘದ ತಾಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಭೂಮಿಕಾ ವೇದಿಕೆ ಅಧ್ಯಕ್ಷರಾಗಿದ್ದು, ಕನ್ನಡ ನೆಲ, ಜಲ, ಭಾಷೆ ಉಳಿಸಿ ಬೆಳೆಸುವ ಕಾಯಕದಲ್ಲಿ ನಿರತರಾಗಿದ್ದಾರೆ.
    ಇವರು ಇದುವರೆಗೂ ತಮ್ಮ ೨ ಕೃತಿಗಳನ್ನು ಬಿಡುಗಡೆಗೊಳಿಸಿದ್ದು, ಮೊದಲ ಕೃತಿ 'ಮಕ್ಕಳು-ನಿಮ್ಮ ಆರೋಗ್ಯ', ಎರಡನೇ ಕೃತಿ 'ಮಧುಮೇಹದೊಂದಿಗೆ ಮಧುರ ಬಾಳ್ವೆ' ಓದುಗರ ಮೆಚ್ಚುಗೆಗೆ ಪಾತ್ರವಾಗಿವೆ. ಇವರ ಹಲವಾರು ವೈದ್ಯಕೀಯ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ವೈದ್ಯಕೀಯ ವೃತ್ತಿ ಸೇವೆಗಾಗಿ ಇವರಿಗೆ ೨೦೧೬ರಲ್ಲಿ ಡಾ.ಬಿ.ಸಿ ರಾಯ್ ಪ್ರಶಸ್ತಿ ಲಭಿಸಿದೆ. ಜೊತೆಗೆ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಸನ್ಮಾಸಿ ಗೌರವಿಸಿವೆ. ಇಂತಹ ಅಪರೂಪದ ಸಾಧಕರು ನಾಡಹಬ್ಬ ದಸರಾ ಉದ್ಘಾಟನೆ ನೆರವೇರಿಸುತ್ತಿರುವುದು. ಉಕ್ಕಿನ ನಗರದ ಜನರ ಸೌಭಾಗ್ಯವಾಗಿದೆ ಎಂದರೆ ತಪ್ಪಾಗಲಾರದು.

ಬೀದಿ ನಾಟಕದ ಮೂಲಕ ದುಶ್ಚಟ ನಿರ್ಮೂಲನೆ, ಕೊರೋನಾ ಜಾಗೃತಿ

ಭದ್ರಾವತಿ ಹೊಸೂರು ಗ್ರಾಮದಲ್ಲಿ ಅಂಬೇಡ್ಕರ್ ಕಲಾ ತಂಡದ ಕಲಾವಿಧರು ಕರೋನಾ ಜಾಗೃತಿ ಹಾಗೂ ದುಶ್ಚಟಗಳ ನಿರ್ಮೂಲನೆ ಕುರಿತು ಬೀದಿ ನಾಟಕದ ಮೂಲಕ ಪ್ರದರ್ಶಿಸಿದರು.
    ಭದ್ರಾವತಿ, ಅ. ೬: ರಾಜ್ಯಾದ್ಯಂತ ಗ್ರಾಮಗಳ ಅಭಿವೃದ್ಧಿ ಹಾಗು ದುಶ್ಚಟಗಳ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಇದೀಗ ವಿನೂತನ ಪ್ರಯೋಗಗಳೊಂದಿಗೆ ಗ್ರಾಮೀಣಮಟ್ಟದಲ್ಲಿ ಮತ್ತಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ನಿಟ್ಟಿನಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೀದಿ ನಾಟಕದ ಮೂಲಕ ಕೊರೋನಾ ಜಾಗೃತಿ ಹಾಗೂ ದುಶ್ಚಟಗಳ ನಿರ್ಮೂಲನೆ ಕುರಿತು ಅರಿವು ಮೂಡಿಸಲಾಗುತ್ತಿದೆ.  
    ತಾಲೂಕಿನ ಹೊಳೆಹೊನ್ನೂರು ಭಾಗದ ಆನವೇರಿ ಹಾಗೂ ಹೊಸೂರು ಗ್ರಾಮಗಳಲ್ಲಿ ಅಂಬೇಡ್ಕರ್ ಕಲಾ ತಂಡದ ಕಲಾವಿದರು ತಮ್ಮ ಕಲೆಯ ಮೂಲಕ  ಗ್ರಾಮೀಣ ಜನರಿಗೆ ಮಹಾಮಾರಿ ಕೊರೋನಾ ಸೋಂಕು ಕುರಿತು ಹೆಚ್ಚಿನ ತಿಳುವಳಿಕೆ ಹೊಂದುವ ಜೊತೆಗೆ ಸೋಂಕು ಕಾಣಿಸಿಕೊಳ್ಳದಂತೆ ಎಚ್ಚರ ವಹಿಸುವುದು ಹಾಗು ಲಸಿಕೆಯ ಮಹತ್ವ ಮತ್ತು ಧೂಮಪಾನ, ಮದ್ಯಪಾನ, ತಂಬಾಕು ಪದಾರ್ಥಗಳು ಹಾಗು ಮಾದಕ ವಸ್ತುಗಳ ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸುವ  ಕುರಿತು ಜಾಗೃತಿ ಮೂಡಿಸಿದರು.
      ಹೊಸೂರು ಗ್ರಾಮದಲ್ಲಿ ನಡೆದ ಬೀದಿ ನಾಟಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭಾ ಸದಸ್ಯ ರಿಯಾಜ್‌ಮಹಮದ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನೀಡುತ್ತಿರುವ ಜಾಗೃತಿ ಅರಿವು ಕಾರ್ಯಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
    ಯೋಜನಾಧಿಕಾರಿ ಪ್ರಕಾಶ್, ಮೇಲ್ವಿಚಾರಕ ಪ್ರದೀಪ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಪ್ರೀತಿ, ಪ್ರಭಾ,  ಸೇರಿದಂತೆ ಹಲವರಿದ್ದರು.