Wednesday, July 26, 2023

ಮಕ್ಕಳಿಗೆ ಸೈನಿಕರ ಹೋರಾಟ, ಬದುಕು ತಿಳಿಯಲಿ : ಸುಬೇದಾರ್‌ ಗುಲ್ಗುಲೆ

ಭದ್ರಾವತಿ ಬಾರಂದೂರು  ಹಳ್ಳಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಕಾರ್ಗಿಲ್ ವಿಜಯೋತ್ಸವ ದಿನ ಆಚರಿಸಲಾಯಿತು.
    ಭದ್ರಾವತಿ, ಜು. ೨೬: ಕಾರ್ಗಿಲ್‌ ಯುದ್ಧದಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದ್ದು, ನಮ್ಮ ಮಕ್ಕಳಿಗೆ ಸೈನಿಕರ ಹೋರಾಟ ಮತ್ತು ಬದುಕು ಕುರಿತು ತಿಳಿಸಿಕೊಡುವ ಅಗತ್ಯವಿದೆ ಎಂದು ಸುಬೇದಾರ್ ಗುಲ್ಗುಲೆ ಹೇಳಿದರು.
    ಅವರು ಬುಧವಾರ ಬಾರಂದೂರು  ಹಳ್ಳಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಗಿಲ್ ವಿಜಯೋತ್ಸವ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ನನಗೆ ಕಾರ್ಗಿಲ್‌ ಯುದ್ಧದಲ್ಲಿ ಪಾಲ್ಗೊಳ್ಳಲು ಅವಕಾಶ ಲಭಿಸಿತ್ತು. ಇದು ಹೆಮ್ಮೆ ಪಡುವ ವಿಚಾರವಾಗಿದೆ. ಮೈನಡುಗಿಸುವ ಚಳಿಯಲ್ಲಿ ಮೋಸದಿಂದ ದೇಶದ ಗಡಿ ನುಸುಳಿದಂತಹ ವೈರಿಗಳ ಆಕ್ರಮಣ, ಎದುರಿಸಿದ ಸಂಕಷ್ಟ.  ವೀರ ಯೋಧರ ಸಾಹಸದ ಹೋರಾಟ ಅದ್ಭುತವಾಗಿದೆ ಎಂದರು.     ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿದಂತಹ ಹುತಾತ್ಮ ಯೋಧರನ್ನು ಸ್ಮರಿಸಿ ಗೌರವ ಸಮರ್ಪಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
    ತಾಲೂಕು ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ವೆಂಕಟಗಿರಿ ಮಾತನಾಡಿ,  26 ಜುಲೈ ಎಂದರೆ ಅಖಂಡ ಭಾರತದ ವಿಜಯೋತ್ಸವ.  ನಮ್ಮ ಸೈನಿಕರು ಪ್ರಾಣವನ್ನು ಲೆಕ್ಕಿಸದೆ ಸದಾ ದೇಶಕ್ಕಾಗಿ ಹೋರಾಡಲು  ಸಿದ್ಧರಾಗಿ ಗಡಿ ಕಾಯುತ್ತಿರುವ ಪರಿಣಾಮ  ನಾವೆಲ್ಲ ನೆಮ್ಮದಿಯಾಗಿರುವುದಕ್ಕೆ ಸಾಧ್ಯವಾಗಿದೆ. ಇದೀಗ  ಮಹಿಳೆಯರಿಗೂ ಸೈನ್ಯ ಸೇರುವ ಅವಕಾಶವಿದೆ. ಮಕ್ಕಳು ಬಾಲ್ಯದಿಂದಲೇ ದೇಶ ಭಕ್ತಿ, ಅಭಿಮಾನ, ಶಿಸ್ತು ಮೈಗೂಡಿಸಿಕೊಳ್ಳಬೇಕೆಂದರು.
    ಶಾಲೆಯ ಮುಖ್ಯೋಪಾಧ್ಯಾಯ ಎಚ್. ಶೇಖರಪ್ಪ, ಮಾಜಿ ಸೈನಿಕ ಹರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು ಮಾತನಾಡಿದರು.
    ಸಂಘದ ಖಜಾಂಚಿ ಬೋರೇಗೌಡ, ನಿರ್ದೇಶಕ ಮುದುಗಲ ರಾಮರೆಡ್ಡಿ,  ಸದಸ್ಯರಾದ ಪಿ.ಕೆ ಹರೀಶ್, ಅಭಿಲಾಶ್, ಕೃಷ್ಣೋಜಿ ರಾವ್, ಸುರೇಶ್, ರಾಮಚಂದ್ರ, ಉದಯ್, ದೇವರಾಜ್, ದಿವಾಕರ್, ಸತೀಶ್, ಪ್ರಸಾದ್, ಮಣಿ, ವೆಂಕಟೇಶ್, ಶ್ರೀನಿವಾಸ್,  ಸಮಾಜಸೇವಕರಾದ ಸುಲೋಚನಾ ಪ್ರಕಾಶ್ ಹಾಗೂ ಕವಿತಾ ರಾವ್,  ಜನತಾ ಪ್ರೌಢಶಾಲೆ ಶಿಕ್ಷಕರ ಕಾಂತರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
  ವಿದ್ಯಾರ್ಥಿನಿಯರಾದ ಪ್ರೀತಿ ಹಾಗೂ ಗೌತಮಿ ಸೈನಿಕರ ಕುರಿತು ಮಾತನಾಡಿದರು. ಮಕ್ಕಳಿಂದ ದೇಶಭಕ್ತಿ ಗೀತೆ ಗಾಯನ ನಡೆಯಿತು.  ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ರಾಹುಲ್ ಮತ್ತು  ದೀಪಿಕಾ  ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಶಿಕ್ಷಕಿಯರಾದ ಪಾರ್ವತಿ ಪ್ರಾರ್ಥಿಸಿ, ತನುಜ ಸ್ವಾಗತಿಸಿ, ಪವಿತ್ರ ಅವರು ವಂದಿಸಿದರು.

ಅಣಬೆ ಕಡಿಮೆ ಜಾಗದಲ್ಲಿ ಅಧಿಕ ಲಾಭ ಗಳಿಸುವ ಬೆಳೆ : ರವಿಕುಮಾರ್‌

ಭದ್ರಾವತಿ ನ್ಯೂಟೌನ್‌ ಸೈಂಟ್ ಚಾರ್ಲ್ಸ್ ಸಂಸ್ಥೆ ಆಶ್ರಯದ ಕರುಣಾ ಸೇವಾ ಕೇಂದ್ರದ ವತಿಯಿಂದ ಅಣಬೆ ಉತ್ಪಾದನಾ ತರಬೇತಿ ಮತ್ತು ಚಿಕ್ಕ ಒಕ್ಕೂಟಗಳ ಮಾಹಿತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.  
    ಭದ್ರಾವತಿ, ಜು. ೨೬: ಅಣಬೆ ಸಸ್ಯಹಾರಿಯಾಗಿದ್ದು, ಕಡಿಮೆ ಜಾಗದಲ್ಲಿ ಅಧಿಕ ಲಾಭಗಳಿಸುವ ಬೆಳೆಯಾಗಿದೆ.  ಅಲ್ಲದೆ ಅಣಬೆ ಬೆಳೆಯಲು ಹೆಚ್ಚಿನ ಶ್ರಮವಹಿಸುವ ಅಗತ್ಯವಿಲ್ಲ ಎಂದು ಕೃಷಿ ಇಲಾಖೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ರವಿಕುಮಾರ್‌ ಹೇಳಿದರು.
    ಅವರು ನ್ಯೂಟೌನ್‌ ಸೈಂಟ್ ಚಾರ್ಲ್ಸ್ ಸಂಸ್ಥೆ ಆಶ್ರಯದ ಕರುಣಾ ಸೇವಾ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಅಣಬೆ ಉತ್ಪಾದನಾ ತರಬೇತಿ ಮತ್ತು ಚಿಕ್ಕ ಒಕ್ಕೂಟಗಳ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
    ಅಣಬೆಯಲ್ಲಿ ವಿಟಮಿನ್ ಬಿ ಪ್ರೋಟೀನ್ ಹೇರಳವಾಗಿದ್ದು, ವಯಸ್ಕರಿಗೂ, ಗರ್ಭಿಣಿಯರಿಗೂ, ಮಕ್ಕಳಿಗೂ, ಸಕ್ಕರೆ ಕಾಯಿಲೆಯವರಿಗೆ ದೇಹ ಕರಗಿಸಲು  ಸೂಕ್ತವಾಗಿದೆ.  ಇದು ಮಾಂಸಾಹಾರಿ  ಎಂಬ ತಪ್ಪು ಕಲ್ಪನೆ ಇದ್ದು,  ಅಣಬೆ ಸಸ್ಯಹಾರಿಯಾಗಿದೆ.  ಅಣಬೆ ಬೆಳೆಯುವುದನ್ನು ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.
    ಕರುಣಾ ಸೇವಾ ಕೇಂದ್ರದ ನಿರ್ದೇಶಕಿ ಹೆಲೆನ್ ಮೊರಸ್, ವಿಶೇಷ ಅಗತ್ಯತೆ ಉಳ್ಳ ಮಕ್ಕಳ ಮುಖ್ಯಸ್ಥೆ ಸಿಸ್ಟರ್ ಪ್ರಭ, ಕಾರ್ಯಕರ್ತರಾದ ಗ್ರೇಸಿ, ವಿನ್ನಿ, ಧನಲಕ್ಷ್ಮಿ ಸೇರಿದಂತೆ ಸುಮಾರು 150 ಮಹಿಳೆಯರು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಳಪೆ ಗುಣಮಟ್ಟದ ಹೆಲ್ಮೆಟ್ ಮಾರಾಟ : 4 ಅಂಗಡಿಗಳ ಮೇಲೆ ದಾಳಿ


ಭದ್ರಾವತಿಯಲ್ಲಿ  ಐಎಸ್‌ಐ ಪ್ರಮಾಣಿಕೃತ ಮಾರ್ಕ್ ಹೊಂದಿರದ ಹಾಗು ಕಳಪೆ  ಗುಣಮಟ್ಟದ ಹೆಲ್ಮೆಟ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಮಂಗಳವಾರ ಪೋಲಿಸ್ ನಗರ ವೃತ್ತ ನಿರೀಕ್ಷಕ  ರಾಘವೇಂದ್ರ ಕಾಂಡಿಕೆ ನೇತೃತ್ವದಲ್ಲಿ ಸಂಚಾರಿ ಠಾಣೆ ಪೊಲೀಸರು 4 ಅಂಗಡಿಗಳ ಮೇಲೆ ಕಾರ್ಯಾಚರಣೆ ನಡೆಸಿ 141 ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ.   
    ಭದ್ರಾವತಿ, ಜು. 26:  ಐಎಸ್‌ಐ  ಪ್ರಮಾಣಿಕೃತ ಮಾರ್ಕ್ ಹೊಂದಿರದ ಹಾಗು ಕಳಪೆ  ಗುಣಮಟ್ಟದ ಹೆಲ್ಮೆಟ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಮಂಗಳವಾರ ದಾಳಿ ನಡೆಸಿರುವ ಘಟನೆ ನಡೆದಿದೆ.
       ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ  ಮಿಥುನ್ ಕುಮಾರ್, ಹೆಚ್ಚುವರಿ ವರಿಷ್ಠಾಧಿಕಾರಿ  ಅನಿಲ್ ಕುಮಾರ್ ಭೂಮರೆಡ್ಡಿ ಅವರ ಸೂಚನೆ ಹಿನ್ನೆಲೆಯಲ್ಲಿ     ಹಿರಿಯ ಪೊಲೀಸ್ ಉಪಾಧೀಕ್ಷಕ  ಜತೇಂದ್ರ ಕುಮಾರ್ ದಯಾಮ ಅವರ ಮಾರ್ಗದರ್ಶನದಲ್ಲಿ  ಪೋಲಿಸ್ ನಗರ ವೃತ್ತ ನಿರೀಕ್ಷಕ  ರಾಘವೇಂದ್ರ ಕಾಂಡಿಕೆ ನೇತೃತ್ವದಲ್ಲಿ ಸಂಚಾರಿ ಠಾಣೆ ಪೊಲೀಸರು 4 ಅಂಗಡಿಗಳ ಮೇಲೆ ಕಾರ್ಯಾಚರಣೆ ನಡೆಸಿ 141 ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ.   
   ಇತ್ತೀಚೆಗೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಇದರಲ್ಲಿ ತಲೆಗೆ ಪೆಟ್ಟುಬಿದ್ದು ಮೃತಪಡುತ್ತಿರುವ ಸವಾರರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕಳಪೆ ಹಾಗೂ ಹಾಫ್ ಹೆಲ್ಮೆಟ್  ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ.  ಅಲ್ಲದೆ ಅಂಗಡಿ ಮಾಲೀಕರಿಗೆ ಇನ್ನು ಮುಂದೆ ಐಎಸ್‌ಐ ಮಾರ್ಕ್ ಹೊಂದಿರದ ಕಳಪೆ ಗುಣಮಟ್ಟದ ಹಾಫ್ ಹೆಲ್ಮೆಟ್ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ಮಾರಾಟ ಮಾಡಿದಲ್ಲಿ ದಂಡ ವಿಧಿಸುವುದಾಗಿ ನಗರ ವೃತ್ತ ನಿರೀಕ್ಷಕ  ರಾಘವೇಂದ್ರ ಕಾಂಡಿಕೆ ಎಚ್ಚರಿಸಿದ್ದಾರೆ.     
         ಕಾರ್ಯಾಚರಣೆಯಲ್ಲಿ ಸಂಚಾರಿ ಪೊಲೀಸ್ ಠಾಣಾಧಿಕಾರಿಗಳಾದ ಶಾಂತಲಾ, ಭಾರತಿ, ಹಳೇನಗರ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.