Tuesday, June 9, 2020

ಓ.ಸಿ, ಮಟ್ಕಾ ಜೂಜಾಟ : ಓರ್ವನ ಸೆರೆ

ಭದ್ರಾವತಿ, ಜೂ. ೯: ಓ.ಸಿ, ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನನ್ನು ಹಳೇನಗರ ಠಾಣೆ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ತನ್ನು ಅಲಿಯಾಸ್ ತನ್ವೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಈತ ನಗರಸಭೆ ವ್ಯಾಪ್ತಿಯ ಸೀಗೆಬಾಗಿಯ ಸಮೀವುಲ್ಲಾ ಪಂಕ್ಚರ್ ಶಾಪ್ ಹತ್ತಿರ ಜೂಜಾಟದಲ್ಲಿ ತೊಡಗಿರುವ ಖಚಿತ ಮಾಹಿತಿ ಆಧಾರದ ಮೇರೆಗೆ ದಾಳಿ ನಡೆಸಿ ಹೆಚ್ಚಿನ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆಯಲಾಗಿದೆ.


ಸುರಗಿತೋಪು ನಿವಾಸಿಗಳಿಗೆ ತಕ್ಷಣ ಖಾತೆ ಮಾಡಿ ಕೊಡಿ

ಮಾಜಿ ಶಾಸಕರ ನೇತೃತ್ವದಲ್ಲಿ ಪೌರಾಯುಕ್ತರಿಗೆ ಮನವಿ ಮಾಡಿದ ನಿವಾಸಿಗಳು 

ಭದ್ರಾವತಿ ನಗರಸಭೆ ವ್ಯಾಪ್ತಿಯ ಸುರಗಿತೋಪು ನಿವಾಸಿಗಳು ಹಕ್ಕುಪತ್ರಗಳಿಗೆ ತಕ್ಷಣ ಖಾತೆ ಮಾಡಿಕೊಡುವಂತೆ ನಗರಸಭೆ ಪೌರಾಯುಕ್ತ ಮನೋಹರ್ ಅವರಿಗೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನೇತೃತ್ವದಲ್ಲಿ ಮನವಿ ಮಾಡಿದರು.  
ಭದ್ರಾವತಿ, ಜೂ. ೯: ನಗರಸಭೆ ವ್ಯಾಪ್ತಿಯ ಸುರಗಿತೋಪಿನಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಮೂಲಕ ನಿವಾಸಿಗಳ ಹಕ್ಕುಪತ್ರಗಳಿಗೆ ಖಾತೆ ಮಾಡಿಕೊಡುವಂತೆ ಮಂಗಳವಾರ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನೇತೃತ್ವದಲ್ಲಿ ಅಲ್ಲಿನ ನಿವಾಸಿಗಳು ನಗರಸಭೆ ಪೌರಾಯುಕ್ತರನ್ನು ಭೇಟಿ ಮಾಡಿ ಮನವಿ ಮಾಡಿದರು. 
ಈಗಾಗಲೇ ಹಕ್ಕು ಪತ್ರಗಳನ್ನು ನೀಡಲಾಗಿದ್ದರೂ ಸಹ ಇದುವರೆಗೂ ಖಾತೆ ಮಾಡಿಕೊಡದಿರುವುದು ಸರಿಯಲ್ಲ. ಹಲವಾರು ವರ್ಷಗಳಿಂದ ಸುರಗಿತೋಪು ಪ್ರದೇಶದಲ್ಲಿ ಬಡ ವರ್ಗದವರು ವಾಸಿಸುತ್ತಿದ್ದು, ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಹಾಗೂ ನಿವೇಶನಗಳ ಸಂಪೂರ್ಣ ಹಕ್ಕು ಹೊಂದುವ ಮೂಲಕ  ಹಣಕಾಸು ಸಂಸ್ಥೆಗಳಿಂದ ಸಾಲಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲ ಕಲ್ಪಿಸಿಕೊಡುವಂತೆ ಮನವಿ ಮಾಡಲಾಯಿತು. 
ಪೌರಾಯುಕ್ತ ಮನೋಹರ್ ಖಾತೆ ಮಾಡಿಕೊಡಲು ಎದುರಾಗಿರುವ ತಾಂತ್ರಿಕ ಸಮಸ್ಯೆಗಳನ್ನು ವಿವರಿಸಿ, ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಿದರು. 
ನಗರಸಭೆ ಹಿರಿಯ ಸದಸ್ಯರಾದ ಆರ್. ಕರುಣಾಮೂರ್ತಿ, ಆನಂದ್, ಸುರಗಿತೋಪು ಸಮಗ್ರ ಅಭಿವೃದ್ಧಿ ವೇದಿಕೆಯ ರವಿಕುಮಾರ್, ಧನಲಕ್ಷ್ಮಿ, ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ಪ್ರಮುಖರಾದ ಶಿವರಾಜ್, ಉಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.