Sunday, October 24, 2021

ಭಾರಿ ಮಳೆ : ಮನೆಗಳಿಗೆ ನುಗ್ಗಿದ ಕೆರೆ ನೀರು

ಭದ್ರಾವತಿ ನಗರಸಭೆ ವಾರ್ಡ್ ನಂ.೨೨ರ ವ್ಯಾಪ್ತಿಯ ಉಜ್ಜನಿಪುರದಲ್ಲಿರುವ ಕೆರೆ ಒತ್ತುವರಿ ಕಾರ್ಯಾಚರಣೆ ಕೈಗೊಳ್ಳದ ಕಾರಣ ಎರಡು ದಿನಗಳಿಂದ ಸಂಜೆ ವೇಳೆ ಸುರಿಯುತ್ತಿರುವ ಭಾರಿ ಮಳೆ ಪರಿಣಾಮ ಕೆರೆ ನೀರು ಸಮೀಪದಲ್ಲಿರುವ ಮನೆಗಳಿಗೆ ನುಗ್ಗುತ್ತಿದ್ದು, ಸ್ಥಳಕ್ಕೆ ಕಂದಾಯಾಧಿಕಾರಿ ಪ್ರಶಾಂತ್, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಆಶಾಲತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಭದ್ರಾವತಿ, ಅ. ೨೪: ನಗರಸಭೆ ವಾರ್ಡ್ ನಂ.೨೨ರ ವ್ಯಾಪ್ತಿಯ ಉಜ್ಜನಿಪುರದಲ್ಲಿರುವ ಕೆರೆ ಒತ್ತುವರಿ ಕಾರ್ಯಾಚರಣೆ ಕೈಗೊಳ್ಳದ ಕಾರಣ ಎರಡು ದಿನಗಳಿಂದ ಸಂಜೆ ವೇಳೆ ಸುರಿಯುತ್ತಿರುವ ಭಾರಿ ಮಳೆ ಪರಿಣಾಮ ಕೆರೆ ನೀರು ಸಮೀಪದಲ್ಲಿರುವ ಮನೆಗಳಿಗೆ ನುಗ್ಗುತ್ತಿದ್ದು, ಇದರಿಂದಾಗಿ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.
    ಉಜ್ಜನಿಪುರ ಸರ್ವೆ ನಂ.೧೩ ಮತ್ತು ೧೫ರ ವ್ಯಾಪ್ತಿಯಲ್ಲಿನ ಕೆರೆ ಒತ್ತುವರಿ ಕಾರ್ಯಾಚರಣೆ ಕೈಗೊಳ್ಳಲು ತಾಲೂಕು ಆಡಳಿತ ಫೆಬ್ರವರಿ ತಿಂಗಳಿನಲ್ಲಿ ಮುಂದಾಗಿತ್ತು. ಈ ಸಂಬಂಧ ತಿಳುವಳಿಕೆ ಪತ್ರ ಸಹ ಹೊರಡಿಸಿತ್ತು. ಆದರೆ ಇದುವರೆಗೂ ಕಾರ್ಯಾಚರಣೆ ಕೈಗೊಂಡಿಲ್ಲ. ಕೆರೆ ನೀರು ಉಜ್ಜನಿಪುರದಲ್ಲಿ ಹಾದು ಹೋಗಿರುವ ಕಾಲುವೆಗೆ ಬಂದು ಸೇರ್ಪಡೆಗೊಳ್ಳುತ್ತಿದೆ. ಒತ್ತುವರಿಯಾಗಿರುವ ಕಾರಣ ನೀರು ಕಾಲುವೆಗೆ ಸರಾಗವಾಗಿ ನೀರು ಬಂದು ಸೇರುತ್ತಿಲ್ಲ. ಇದರಿಂದಾಗಿ ಕೆರೆ ನೀರು ಸಮೀಪದಲ್ಲಿರುವ ೫-೬ ಮನೆಗಳಿಗೆ ನುಗ್ಗುತ್ತಿದ್ದು, ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಮನೆಯಲ್ಲಿ ನೀರು ತುಂಬಿಕೊಳ್ಳುವ ಪರಿಣಾಮ ಇಡೀ ರಾತ್ರಿ ನಿದ್ರೆಯಿಲ್ಲದೆ ಕಾಲ ಕಳೆಯುವಂತಾಗಿದೆ. ಅಲ್ಲದೆ ಮನೆಗಳ ಗೋಡೆಗಳು ಶೀತದಿಂದ ಕುಸಿಯುವ ಭೀತಿ ಎದುರಾಗಿದೆ.
    ಭಾನುವಾರ ಬೆಳಿಗ್ಗೆ ಕಂದಾಯಾಧಿಕಾರಿ ಪ್ರಶಾಂತ್ ಹಾಗು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಆಶಾಲತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ನಗರಸಭೆ ಮಾಜಿ ಸದಸ್ಯ ವೆಂಕಟಯ್ಯ ಉಪಸ್ಥಿತರಿದ್ದರು.

ಎಂಪಿಎಂ ಮುಚ್ಚುವಿಕೆ ಆದೇಶದ ವಿರುದ್ಧ ಸಿಡಿದೆದ್ದ ಕಾರ್ಮಿಕರು, ಕುಟುಂಬ ವರ್ಗದವರು

ಕಾರ್ಮಿಕರಿಗೆ ಉದ್ಯೋಗದ ಭದ್ರತೆ : ಸಂಸದ ಬಿ.ವೈ ರಾಘವೇಂದ್ರ ಭರವಸೆ

ರಾಜ್ಯ ಸರ್ಕಾರಿ ಸ್ವಾಮ್ಯದ ಭದ್ರಾವತಿ ಮೈಸೂರು ಕಾಗದ ಕಾರ್ಖಾನೆಯನ್ನು ಕಾರ್ಮಿಕ ಇಲಾಖೆ ಕಾರ್ಯದರ್ಶಿಗಳು ಸಂಪೂರ್ಣವಾಗಿ ಮುಚ್ಚುವ ಸಂಬಂಧ ಹೊರಡಿಸಿರುವ ಆದೇಶ ಹಾಗು ಕಾರ್ಖಾನೆ ಮುಖ್ಯ ಆಡಳಿತಾಧಿಕಾರಿ ಕಾರ್ಮಿಕರನ್ನು ಕರ್ತವ್ಯಕ್ಕೆ ಹಾಜರಾಗದಂತೆ ಸೂಚಿಸಿರುವ ಪತ್ರದ ವಿರುದ್ಧ ಕಾರ್ಮಿಕರು ಹಾಗು ಕುಟುಂಬ ವರ್ಗದವರು ಸಿಡಿದೆದಿದ್ದು, ಭಾನುವಾರ ಶಿವಮೊಗ್ಗದಲ್ಲಿ ಸಂಸದ ಬಿ.ವೈ ರಾಘವೇಂದ್ರ ಅವರನ್ನು ಭೇಟಿಯಾಗಿ ಚರ್ಚಿಸಿದರು.
    ಭದ್ರಾವತಿ, ಅ. ೨೪: ನಗರದ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆಯನ್ನು ಕಾರ್ಮಿಕ ಇಲಾಖೆ ಕಾರ್ಯದರ್ಶಿಗಳು ಸಂಪೂರ್ಣವಾಗಿ ಮುಚ್ಚುವ ಸಂಬಂಧ ಹೊರಡಿಸಿರುವ ಆದೇಶ ಹಾಗು ಕಾರ್ಖಾನೆ ಮುಖ್ಯ ಆಡಳಿತಾಧಿಕಾರಿ ಕಾರ್ಮಿಕರನ್ನು ಕರ್ತವ್ಯಕ್ಕೆ ಹಾಜರಾಗದಂತೆ ಸೂಚಿಸಿರುವ ಪತ್ರದ ವಿರುದ್ಧ ಕಾರ್ಮಿಕರು ಹಾಗು ಕುಟುಂಬ ವರ್ಗದವರು ಸಿಡಿದೆದಿದ್ದು, ಭಾನುವಾರ ಶಿವಮೊಗ್ಗದಲ್ಲಿ ಸಂಸದ ಬಿ.ವೈ ರಾಘವೇಂದ್ರ ಅವರನ್ನು ಭೇಟಿಯಾಗಿ ಚರ್ಚಿಸಿದರು.
    ಕಾರ್ಮಿಕ ಇಲಾಖೆ ಕಾರ್ಯದರ್ಶಿಗಳು ಅ.೭ರಂದು ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚುವ ಸಂಬಂಧ ಆದೇಶ ಹೊರಡಿಸಿದ್ದು, ಇದರಿಂದಾಗಿ ಪ್ರಸ್ತುತ ಕಾರ್ಖಾನೆಯಲ್ಲಿರುವ ೨೧೪ ಕಾರ್ಮಿಕರು ಅತಂತ್ರ ಸ್ಥಿತಿಗೆ ಒಳಗಾಗಿದ್ದಾರೆ. ಯಾವುದೇ ಉದ್ಯೋಗದ ಭದ್ರತೆ ಇಲ್ಲದಂತಾಗಿದೆ. ಸರ್ಕಾರ ೨೧೪ ಕಾರ್ಮಿಕರಿಗೆ ಉದ್ಯೋಗದ ಭರವಸೆ ನೀಡಿದ್ದು, ಈಗಾಗಲೇ ೧೪೨ ಮಂದಿ ವಿವಿಧ ನಿಗಮ ಮಂಡಳಿಗಳಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದ ೭೨ ಮಂದಿಗೆ ಯಾವುದೇ ಉದ್ಯೋಗವಿಲ್ಲದಂತಾಗಿದೆ. ಈ ನಡುವೆ ಮುಖ್ಯ ಆಡಳಿತಾಧಿಕಾರಿಗಳು ಕಾರ್ಮಿಕರಿಗೆ ಕರ್ತವ್ಯಕ್ಕೆ ಹಾಜರಾಗದಂತೆ ಸೂಚನೆ ಹೊರಡಿಸಿದ್ದಾರೆ. ಇದರಿಂದಾಗಿ ಕಾರ್ಮಿಕರು ಮತ್ತು ಕುಟುಂಬ ವರ್ಗದವರು ಅತಂತ್ರಕ್ಕೆ ಒಳಗಾಗಿದ್ದಾರೆಂದು ಅಳಲು ವ್ಯಕ್ತಪಡಿಸಿದರು.
    ಇದಕ್ಕೆ ಸ್ಪಂದಿಸಿದ ಸಂಸದ ಬಿ.ವೈ ರಾಘವೇಂದ್ರರವರು, ವಿವಿಧ ನಿಗಮ ಮಂಡಳಿಗಳಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವವರು ಅಲ್ಲಿಯೇ ಕರ್ತವ್ಯ ಮುಂದುವರೆಸಲು ಸಂಬಂಧಪಟ್ಟ ನಿಗಮ ಮಂಡಳಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮೂಲಕ ಆದೇಶ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಹಾಗು ಯಾವುದೇ ಉದ್ಯೋಗವಿಲ್ಲದೆ ಉಳಿದು ಕೊಂಡಿರುವ ೭೨ ಕಾರ್ಮಿಕರಿಗೆ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
    ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರಾದ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್, ಎರಡು ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಚನ್ನೇಶ್, ಜಿಲ್ಲಾ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ಜಯರಾಂ ಸೇರಿದಂತೆ ಕಾರ್ಮಿಕರು, ಕುಟುಂಬ ವರ್ಗದವರು ಪಾಲ್ಗೊಂಡಿದ್ದರು ಎಂದು ಕಾರ್ಮಿಕ ಮುಖಂಡ ಎಚ್. ತಿಮ್ಮಪ್ಪ ತಿಳಿಸಿದರು.