Sunday, October 24, 2021

ಭಾರಿ ಮಳೆ : ಮನೆಗಳಿಗೆ ನುಗ್ಗಿದ ಕೆರೆ ನೀರು

ಭದ್ರಾವತಿ ನಗರಸಭೆ ವಾರ್ಡ್ ನಂ.೨೨ರ ವ್ಯಾಪ್ತಿಯ ಉಜ್ಜನಿಪುರದಲ್ಲಿರುವ ಕೆರೆ ಒತ್ತುವರಿ ಕಾರ್ಯಾಚರಣೆ ಕೈಗೊಳ್ಳದ ಕಾರಣ ಎರಡು ದಿನಗಳಿಂದ ಸಂಜೆ ವೇಳೆ ಸುರಿಯುತ್ತಿರುವ ಭಾರಿ ಮಳೆ ಪರಿಣಾಮ ಕೆರೆ ನೀರು ಸಮೀಪದಲ್ಲಿರುವ ಮನೆಗಳಿಗೆ ನುಗ್ಗುತ್ತಿದ್ದು, ಸ್ಥಳಕ್ಕೆ ಕಂದಾಯಾಧಿಕಾರಿ ಪ್ರಶಾಂತ್, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಆಶಾಲತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಭದ್ರಾವತಿ, ಅ. ೨೪: ನಗರಸಭೆ ವಾರ್ಡ್ ನಂ.೨೨ರ ವ್ಯಾಪ್ತಿಯ ಉಜ್ಜನಿಪುರದಲ್ಲಿರುವ ಕೆರೆ ಒತ್ತುವರಿ ಕಾರ್ಯಾಚರಣೆ ಕೈಗೊಳ್ಳದ ಕಾರಣ ಎರಡು ದಿನಗಳಿಂದ ಸಂಜೆ ವೇಳೆ ಸುರಿಯುತ್ತಿರುವ ಭಾರಿ ಮಳೆ ಪರಿಣಾಮ ಕೆರೆ ನೀರು ಸಮೀಪದಲ್ಲಿರುವ ಮನೆಗಳಿಗೆ ನುಗ್ಗುತ್ತಿದ್ದು, ಇದರಿಂದಾಗಿ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.
    ಉಜ್ಜನಿಪುರ ಸರ್ವೆ ನಂ.೧೩ ಮತ್ತು ೧೫ರ ವ್ಯಾಪ್ತಿಯಲ್ಲಿನ ಕೆರೆ ಒತ್ತುವರಿ ಕಾರ್ಯಾಚರಣೆ ಕೈಗೊಳ್ಳಲು ತಾಲೂಕು ಆಡಳಿತ ಫೆಬ್ರವರಿ ತಿಂಗಳಿನಲ್ಲಿ ಮುಂದಾಗಿತ್ತು. ಈ ಸಂಬಂಧ ತಿಳುವಳಿಕೆ ಪತ್ರ ಸಹ ಹೊರಡಿಸಿತ್ತು. ಆದರೆ ಇದುವರೆಗೂ ಕಾರ್ಯಾಚರಣೆ ಕೈಗೊಂಡಿಲ್ಲ. ಕೆರೆ ನೀರು ಉಜ್ಜನಿಪುರದಲ್ಲಿ ಹಾದು ಹೋಗಿರುವ ಕಾಲುವೆಗೆ ಬಂದು ಸೇರ್ಪಡೆಗೊಳ್ಳುತ್ತಿದೆ. ಒತ್ತುವರಿಯಾಗಿರುವ ಕಾರಣ ನೀರು ಕಾಲುವೆಗೆ ಸರಾಗವಾಗಿ ನೀರು ಬಂದು ಸೇರುತ್ತಿಲ್ಲ. ಇದರಿಂದಾಗಿ ಕೆರೆ ನೀರು ಸಮೀಪದಲ್ಲಿರುವ ೫-೬ ಮನೆಗಳಿಗೆ ನುಗ್ಗುತ್ತಿದ್ದು, ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಮನೆಯಲ್ಲಿ ನೀರು ತುಂಬಿಕೊಳ್ಳುವ ಪರಿಣಾಮ ಇಡೀ ರಾತ್ರಿ ನಿದ್ರೆಯಿಲ್ಲದೆ ಕಾಲ ಕಳೆಯುವಂತಾಗಿದೆ. ಅಲ್ಲದೆ ಮನೆಗಳ ಗೋಡೆಗಳು ಶೀತದಿಂದ ಕುಸಿಯುವ ಭೀತಿ ಎದುರಾಗಿದೆ.
    ಭಾನುವಾರ ಬೆಳಿಗ್ಗೆ ಕಂದಾಯಾಧಿಕಾರಿ ಪ್ರಶಾಂತ್ ಹಾಗು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಆಶಾಲತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ನಗರಸಭೆ ಮಾಜಿ ಸದಸ್ಯ ವೆಂಕಟಯ್ಯ ಉಪಸ್ಥಿತರಿದ್ದರು.

No comments:

Post a Comment