Monday, September 14, 2020

ಎಲ್ಲಾ ಭಾಷೆಗಳಿಗೂ ಅಧಿಕೃತ ಸ್ಥಾನಮಾನ ನೀಡಿ

ಕರಾವೇ ವತಿಯಿಂದ ತಹಸೀಲ್ದಾರ್‌ಗೆ ಮನವಿ

ಸಂವಿಧಾನದ ೮ನೇ ಪರಿಚ್ಛೇದದಲ್ಲಿ ಉಲ್ಲೇಖಿಸಿರುವಂತೆ ಎಲ್ಲಾ ಭಾಷೆಗಳಿಗೂ ಅಧಿಕೃತ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಭದ್ರಾವತಿಯಲ್ಲಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಸೆ. ೧೪: ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ಬಲವಂತವಾಗಿ ಹಿಂದಿಯೇತರ ಭಾಷೆಗಳ ರಾಜ್ಯಗಳ ಮೇಲೆ ಹೇರುತ್ತಿರುವ ಕ್ರಮ ಖಂಡನೀಯವಾಗಿದ್ದು, ಸಂವಿಧಾನದ ೮ನೇ ಪರಿಚ್ಛೇದದಲ್ಲಿ ಉಲ್ಲೇಖಿಸಿರುವಂತೆ ಎಲ್ಲಾ ಭಾಷೆಗಳಿಗೂ ಅಧಿಕೃತ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
      ಸಂವಿಧಾನದಲ್ಲಿ ಎಲ್ಲಿಯೂ ಯಾವ ಭಾಷೆಯನ್ನು ಸಹ ರಾಷ್ಟ್ರ ಭಾಷೆಯನ್ನಾಗಿ ಅನುಮೋದಿಸಿಲ್ಲ. ಆದರೂ ಸಹ ಸ್ವಾತಂತ್ರ್ಯ ಬಂದಾನಿಂದಲೂ ಹಿಂದಿ ಭಾಷೆಯನ್ನು  ನಿರಂತರವಾಗಿ ಹಿಂದಿಯೇತರ ಭಾಷೆಗಳ ರಾಜ್ಯಗಳ ಮೇಲೆ ಹೇರುವ ಪ್ರಯತ್ನ ನಡೆಸಲಾಗುತ್ತಿದೆ. ಭಾರತ ಭಾಷಾವಾರು ಪ್ರಾಂತ್ಯಗಳ ದೇಶವಾಗಿದ್ದು, ಪ್ರತಿಯೊಂದು ಭಾಷೆ ತನ್ನದೇ ಆದ ಪರಂಪರೆಯನ್ನು ಹೊಂದಿವೆ. ಪ್ರಸ್ತುತ ಈ ಭಾಷೆಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿ ಬಂದು ತಲುಪಿವೆ. ಈ ನಡುವೆ ಕೇಂದ್ರ ಸರ್ಕಾರ ಆಡಳಿತ ಭಾಷೆ ಎನ್ನುವ ನೆಪದಲ್ಲಿ ಹಿಂಬಾಗಿಲ ಮೂಲಕ ಹಿಂದಿಯೇತರ ಭಾಷೆಗಳ ರಾಜ್ಯಗಳ ಮೇಲೆ ಹೇರುತ್ತಿರುವುದು ಖಂಡನೀಯ.  ತಕ್ಷಣ 'ಹಿಂದಿ ಸಪ್ತಾಹ' ಆಚರಣೆಯನ್ನು ಕೈ ಬಿಡಬೇಕೆಂದು ಆಗ್ರಹಿಸಿದರು.
        ಹಿಂದಿಯೇತರ ಭಾಷೆಗಳ ಉಳಿವಿಗಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದು ೮ನೇ ಪರಿಚ್ಛೇದದಲ್ಲಿರುವ ಎಲ್ಲಾ ೨೨ ಭಾಷೆಗಳಿಗೂ ಅಧಿಕೃತ ಸ್ಥಾನಮಾನ ಸಿಗುವಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವ ಜೊತೆಗೆ ಸೆ.೧೪ ಭಾರತೀಯ ಭಾಷಾ ದಿನವಾಗಿಸಬೇಕೆಂದು ಒತ್ತಾಯಿಸಲಾಯಿತು.
ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಎಂ. ಪರಮೇಶ್, ಯುವ ಘಟಕದ ಅಧ್ಯಕ್ಷ ಮನು, ಗೌರವಾಧ್ಯಕ್ಷ ವೀರಲಾಲ್, ಸಂಘಟನಾ ಕಾರ್ಯದರ್ಶಿ ರಾಮಕೃಷ್ಣ, ಸದಸ್ಯರಾದ ಪ್ರವೀಣ್ ಕುಮಾರ್, ಪವನ್ ಕುಮಾರ್, ಜೆ. ಯೋಗೇಶ್, ಗೋಪಿನಾಥ್, ದಿಲೀಪ್, ನರಸಿಂಹಮೂರ್ತಿ, ವಡಿವೇಲು, ಕುಮಾರ್ ಮತ್ತು ಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪೌರಾಯುಕ್ತ ಮನೋಹರ್ ಶೀಘ್ರ ಗುಣಮುಖರಾಗಲು ಪ್ರಾರ್ಥಿಸಿ ವಿಶೇಷ ಪೂಜೆ

ಭದ್ರಾವತಿ ನಗರಸಭೆ ಪೌರಾಯುಕ್ತ ಮನೋಹರ್ ಹಾಗು ಕುಟುಂಬ ವರ್ಗ ಕೊರೋನಾ ಸೋಂಕಿನಿಂದ ಶೀಘ್ರವಾಗಿ ಗುಣಮುಖರಾಗಲೆಂದು ಪ್ರಾರ್ಥಿಸಿ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.
ಭದ್ರಾವತಿ, ಸೆ. ೧೪: ಸದಾ ಜನರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವ ಮೂಲಕ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜನರ ಮೆಚ್ಚುಗೆಗೆ ಪಾತ್ರರಾಗಿರುವ ನಗರಸಭೆ ಪೌರಾಯುಕ್ತ ಮನೋಹರ್ ಹಾಗು ಕುಟುಂಬ ವರ್ಗ ಕೊರೋನಾ ಸೋಂಕಿನಿಂದ ಶೀಘ್ರವಾಗಿ ಗುಣಮುಖರಾಗಲೆಂದು ಪ್ರಾರ್ಥಿಸಿ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.
     ನಗರಸಭೆ ಪೌರಾಯುಕ್ತರಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದ್ದು, ನಗರದ ಬೆಳವಣಿಗೆಗೆ ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ಅದರಲ್ಲೂ ಜಿಲ್ಲೆಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಾಗಿನಿಂದಲೂ ಹಗಲಿರುಳು ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದರು.  ಅಲ್ಲದೆ ಇತ್ತೀಚೆಗೆ ತಹಸೀಲ್ದಾರ್ ಎಚ್.ಸಿ ಶಿವಕುಮಾರ್ ಅವರೊಂದಿಗೆ ನಗರಸಭೆ ವ್ಯಾಪ್ತಿಯ ಸುಮಾರು ೭೦ ಕೆರೆಗಳ ಬೌಂಡರಿ ನಿಗದಿಪಡಿಸುವ ಕಾರ್ಯದಲ್ಲೂ ತೊಡಗಿದ್ದರು.
      ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿರುವ ಮನೋಹರ್ ಹಾಗು ಕುಟುಂಬ ವರ್ಗ ಕೊರೋನಾ ಸೋಂಕಿನಿಂದ ಶೀಘ್ರವಾಗಿ ಗುಣಮುಖರಾಗಲಿ ಎಂದು ಜನ್ನಾಪುರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಎನ್.ಎಸ್ ಕೃಷ್ಣಮೂರ್ತಿ ಸೋಮಯಾಜಿ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.
       ಪ್ರಮುಖರಾದ ಟ್ರಸ್ಟ್ ಛೇರ‍್ಮನ್ ಆರ್. ವೇಣುಗೋಪಾಲ್, ರಮಾವೆಂಕಟೇಶ್, ಶೈಲಜ ರಾಮಕೃಷ್ಣ, ದೇವಿಕಾ ನಗರಾಜ್, ಹೇಮಾ ಕೃಷ್ಣಮೂರ್ತಿ, ಶ್ರೀಲಕ್ಷ್ಮಿ ಚಿದಂಬರ, ಗ್ಸೇವಿಯರ್, ಮಹಮ್ಮದ್ ರಫಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೆ.ಎಲ್ ಅಶೋಕ್ ಮೇಲಿನ ದೌರ್ಜನ್ಯ ಪ್ರಕರಣ : ಪೊಲೀಸರ ಅಮಾನತಿಗೆ ಆಗ್ರಹ

ಪ್ರಗತಿಪರ ಸಂಘಟನೆಗಳಿಂದ ತಹಸೀಲ್ದಾರ್‌ಗೆ ಮನವಿ

ಭದ್ರಾವತಿಯಲ್ಲಿ ಸೋಮವಾರ ಸಾಮಾಜಿಕ ಹೋರಾಟಗಾರ  ಕೆ.ಎಲ್ ಅಶೋಕ್‌ರವರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪ ಪೊಲೀಸರನ್ನು ತಕ್ಷಣ ಅಮಾನತುಗೊಳಿಸುವಂತೆ ಆಗ್ರಹಿಸಿ  ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಚ್.ಸಿ ಶಿವಕುಮಾರ್‌ಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಸೆ. ೧೪: ಸಾಮಾಜಿಕ ಹೋರಾಟಗಾರ, ಕೋಮು ಸೌಹಾರ್ದ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್ ಅಶೋಕ್‌ರವರನ್ನು ವಿನಾಕಾರಣ ನಿಂದಿಸಿ ದೌರ್ಜನ್ಯ ನಡೆಸಿರುವ ಕೊಪ್ಪ ಪೊಲೀಸರನ್ನು ತಕ್ಷಣ ಅಮಾನತುಗೊಳಿಸುವಂತೆ ಆಗ್ರಹಿಸಿ ಸೋಮವಾರ ಪ್ರಗತಿಪರ ಸಂಘಟನೆಗಳ ವತಿಯಿಂದ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಚ್.ಸಿ ಶಿವಕುಮಾರ್‌ಗೆ ಮನವಿ ಸಲ್ಲಿಸಲಾಯಿತು.
        ಅಶೋಕ್‌ರವರು ಕುಟುಂಬ ಸಮೇತ ಕೊಪ್ಪ ತಾಲೂಕಿಗೆ ತೆರಳಿದ್ದಾಗ ಅಲ್ಲಿನ ಪೊಲೀಸರು ವಾಹನ ನಿಲುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ವಿನಾಕಾರಣ ನಿಂದಿಸಿ ದೌರ್ಜನ್ಯ ನಡೆಸಿದ್ದಾರೆ. ಅಶೋಕ್‌ರವರು ಯಾರೆಂಬುದು ತಿಳಿದಿದ್ದರೂ ಸಹ ಈ ರೀತಿ ದೌರ್ಜನ್ಯ ನಡೆಸಿರುವುದು ಸರಿಯಲ್ಲ. ಉದ್ದೇಶಪೂರ್ವಕವಾಗಿ ಈ ಘಟನೆ ನಡೆದಿದ್ದು, ಈ ಹಿನ್ನಲೆಯಲ್ಲಿ ಘಟನೆಗೆ ಕಾರಣಕರ್ತರಾದ ಪೊಲೀಸರನ್ನು ತಕ್ಷಣ ಅಮಾನತುಗೊಳಿಸುವಂತೆ ಆಗ್ರಹಿಸಿದರು.
     ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಿ.ಸಿ ಮಾಯಣ್ಣ ನೇತೃತ್ವ ವಹಿಸಿದ್ದರು. ಮುಖಂಡರಾದ ಜಿ. ರಾಜು, ಫೀರ್ ಷರೀಫ್, ಎಚ್. ರವಿಕುಮಾರ್, ಮುನೀರ್ ಅಹಮದ್, ರಾಜೇಂದ್ರ, ನಾಗವೇಣಿ, ಜೆ.ಬಿ.ಟಿ ಬಾಬು, ಇಬ್ರಾಹಿಂ ಖಾನ್, ಲಿಂಗೋಜಿರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಅಪ್ಪಾಜಿ ಹೆಸರಿಡಿ : ವೈ.ಎಸ್.ವಿ ದತ್ತಾ

ಭದ್ರಾವತಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹೆಸರಿಡಲು ಆಗ್ರಹಿಸಿ ಸೋಮವಾರ ಸತ್ಯಾಗ್ರಹ ನಡೆಸುವ ಮೂಲಕ ತಹಸೀಲ್ದಾರ್ ಎಚ್.ಸಿ ಶಿವಕುಮಾರ್‌ಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಸೆ. ೧೪: ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹೆಸರು ನಾಮಕರಣ ಮಾಡಲು ಕ್ಷೇತ್ರದ ಎಲ್ಲರೂ ಸಹಕಾರ ನೀಡಬೇಕೆಂದು ಮಾಜಿ ಶಾಸಕ ವೈಎಸ್‌ವಿ ದತ್ತಾ ಮನವಿ ಮಾಡಿದರು.
       ಅವರು ಸೋಮವಾರ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಮತ್ತು ಎಂ.ಜೆ ಅಪ್ಪಾಜಿ ಅಭಿಮಾನಿಗಳ ಸಂಘದ ವತಿಯಿಂದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹೆಸರು ನಾಮಕರಣಗೊಳಿಸಲು ಆಗ್ರಹಿಸಿ ಹಮ್ಮಿಕೊಳ್ಳಲಾಗಿದ್ದ ಸತ್ಯಾಗ್ರಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
      ಅಪ್ಪಾಜಿ ಅವರೊಂದಿಗೆ ಸುಮಾರು ೨ ದಶಕಗಳಿಗೂ ಹೆಚ್ಚು ಕಾಲದ ಒಡನಾಟ ಹೊಂದಿದ್ದು, ಅಪ್ಪಾಜಿ ಕೇವಲ ರಾಜಕಾರಣಿಯಾಗಿರಲಿಲ್ಲ. ಭದ್ರಾವತಿ ಕ್ಷೇತ್ರದ ಜನನಾಯಕರಾಗಿದ್ದ ಅವರು ಎಂದೆಂದಿಗೂ ಜನರ ಮನಸ್ಸಿನಲ್ಲಿ ಉಳಿದುಕೊಳ್ಳುವ ವ್ಯಕ್ತಿಯಾಗಿದ್ದಾರೆ. ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಅವರ ಶ್ರಮ ಹೆಚ್ಚಿನದ್ದಾಗಿದ್ದು, ಈ ಹಿನ್ನಲೆಯಲ್ಲಿ ಅವರ ಹೆಸರು ನಾಮಕರಣಗೊಳಿಸುವಲ್ಲಿ ಯಾವುದೇ ತಪ್ಪಿಲ್ಲ ಎಂದರು.
     ಪ್ರಸ್ತುತ ನಡೆಯುತ್ತಿರುವ ಹೋರಾಟ ಸದ್ಯಕ್ಕೆ ಯಶಸ್ವಿಯಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ. ಇದೊಂದು ಪಕ್ಷಾತೀತ ಹೋರಾಟವಾಗಿದ್ದು, ಈ ಹೋರಾಟಕ್ಕೆ ಕ್ಷೇತ್ರದ ಎಲ್ಲರೂ ಸಹಕಾರ ನೀಡುತ್ತಾರೆಂಬ ವಿಶ್ವಾಸವಿದೆ. ಒಂದು ವೇಳೆ ಇದು ರಾಜಕೀಯ ತಿರುವು ಪಡೆದುಕೊಂಡಲ್ಲಿ ನಮ್ಮ ಹೋರಾಟ ಸಹ ಬೇರೆ ರೀತಿಯಲ್ಲಿ ಸಾಗಲಿದೆ. ಸರ್ಕಾರ ಸಹ ಈ ನಿಟ್ಟಿನಲ್ಲಿ ಸಹಕಾರ ನೀಡುವ ಜೊತೆಗೆ ಈ ಕ್ಷೇತ್ರದ ಜನರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕೆಂದರು.
       ಅಪ್ಪಾಜಿ ಒಡನಾಡಿ, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ ಮಾತನಾಡಿ, ಅಪ್ಪಾಜಿ ಅಂದು ಈ ಬಸ್ ನಿಲ್ದಾಣ ನಿರ್ಮಾಣಕ್ಕೆ ಕೈಗೊಂಡ ಶ್ರಮ ಯಾರು ಸಹ ಮರೆಯುವಂತಿಲ್ಲ. ಯಾವುದೇ ಸ್ವಾರ್ಥವಿಲ್ಲದೆ, ಜನರ ಕಲ್ಯಾಣಕ್ಕಾಗಿ ಅನೇಕ ಸವಾಲುಗಳನ್ನು ಸ್ವೀಕರಿಸಿ ಬಸ್ ನಿಲ್ದಾಣ ನಿರ್ಮಾಣಗೊಳ್ಳುವಲ್ಲಿ  ಪ್ರಮುಖ ಪಾತ್ರವಹಿಸಿದ್ದರು. ಈ ಹಿನ್ನಲೆಯಲ್ಲಿ ಕೇವಲ ಅಪ್ಪಾಜಿ ಹೆಸರನ್ನು ನಾಮಕರಣಗೊಳಿಸಿದರೆ ಸಾಲದು ಅವರ ಪುತ್ಥಳಿಯನ್ನು ನಿರ್ಮಿಸಬೇಕು. ಆ ಮೂಲಕ ಈ ಬಸ್ ನಿಲ್ದಾಣದ ರೂವಾರಿ ಯಾರು ಎಂಬುದು ಭವಿಷ್ಯದ ಜನರಿಗೆ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದರು.


ಭದ್ರಾವತಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹೆಸರಿಡಲು  ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸತ್ಯಾಗ್ರಹದಲ್ಲಿ ಆಗ್ರಹಿಸಲಾಯಿತು.
       ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಾತನಾಡಿ, ಅಪ್ಪಾಜಿಯವರು ತಮ್ಮ ೩ ದಶಕಗಳ ರಾಜಕೀಯ ಜೀವನದಲ್ಲಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಎಲ್ಲಾ ವರ್ಗದ ಜನರ ಏಳಿಗೆಗೆ ಶ್ರಮಿಸುವ ಮೂಲಕ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ. ನಗರದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ ಮಾಡುವುದು ಅಸಾಧ್ಯವಾಗಿದ್ದ ಸಂದರ್ಭದಲ್ಲಿ ಹಲವು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವ ಮೂಲಕ ಬಸ್ ನಿಲ್ದಾಣ ನಿರ್ಮಿಸಿದ್ದು, ಇದೊಂದು ಸವಾಲಿನ ಕೆಲಸವಾಗಿದೆ. ಈ ಹಿನ್ನಲೆಯಲ್ಲಿ ಅವರ ಸ್ಮರಣಾರ್ಥ, ಅವರಿಗೆ ಗೌರವ ಸಲ್ಲಿಸುವ ಹಿನ್ನಲೆಯಲ್ಲಿ ನಿಲ್ದಾಣಕ್ಕೆ ಅವರ ಹೆಸರನ್ನು ನಾಮಕರಣಗೊಳಿಸಬೇಕು. ಇದಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಸಹ ಹೆಚ್ಚಿನ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
       ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್  ಮುಖಂಡ ಡಾ. ಶ್ರೀನಿವಾಸ್ ಕರಿಯಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್, ಶಿವಮೊಗ್ಗ ಹಾಲು ಒಕ್ಕೂಟ(ಶಿಮೂಲ್) ಅಧ್ಯಕ್ಷ ಆನಂದ್, ಮುಖಂಡರಾದ ಬದರಿನಾರಾಯಣ, ಎಚ್.ಬಿ ರವಿಕುಮಾರ್, ಕರಿಯಪ್ಪ, ಫೀರ್ ಷರೀಫ್, ಎಸ್. ಮಂಜುನಾಥ್, ಜೆ.ಎನ್ ಚಂದ್ರಹಾಸ, ಬಿ.ವಿ ಗಿರೀಶ್, ಸಂದೇಶ್‌ಕುಮಾರ್, ಎನ್. ರಾಮಕೃಷ್ಣ, ಮೋಹನ್ ರಾವ್, ವಿಶಾಲಾಕ್ಷಿ, ಪುಷ್ಪಾವತಿ, ನೀಲಮ್ಮ, ಪಾರ್ವತಮ್ಮ, ಸರಸ್ವತಿ, ಟಿ.ಎನ್ ಲಕ್ಷ್ಮಮ್ಮ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಕೊನೆಯಲ್ಲಿ ತಹಸೀಲ್ದಾರ್ ಎಚ್.ಸಿ ಶಿವಕುಮಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.